Jamnagar widow murder case: ತನಗೆ ಪ್ರತಿವರ್ಷ ರಾಖಿ ಕಟ್ಟುತ್ತಿದ್ದ ವಿಧವೆ ಮಹಿಳೆಯನ್ನೇ ಯುವಕನೊಬ್ಬ ಕೊಲೆ ಮಾಡಿದ್ದಾನೆ. ಕೊಲೆಯ ನಂತರ, ಆತ ಆಕೆಯ ಕುಟುಂಬದೊಂದಿಗೆ ಸೇರಿ ಹುಡುಕಾಟದ ನಾಟಕವಾಡಿದ್ದು, ಪೊಲೀಸರ ತನಿಖೆಯ ವೇಳೆ ಆತನ ಮನೆಯಲ್ಲೇ ಶವ ಪತ್ತೆಯಾಗಿದೆ.
ರಾಖಿ ಕಟ್ಟುತ್ತಿದ್ದ ವಿಧವೆಗೆ ಮಸಣ ತೋರಿಸಿದ ಪಾಪಿ
ಭಾರತದಲ್ಲಿ ಅಣ್ಣ ತಂಗಿ ಅಕ್ಕ ತಮ್ಮ ಎಂಬ ಸೋದರ ಸಂಬಂಧಕ್ಕೆ ಸಾಕಷ್ಟು ಮೌಲ್ಯವಿದ್ದು, ಪ್ರತಿವರ್ಷವೂ ಅಕ್ಕ ತಮ್ಮ ಅಣ್ಣ ತಂಗಿಯ ಸಂಬಂಧವನ್ನು ಸಂಭ್ರಮಿಸುವ ರಾಖಿ ಹಬ್ಬವನ್ನು ಭಾರತದಲ್ಲೆಡೆ ಆಚರಿಸಲಾಗುತ್ತದೆ. ರಕ್ತ ಸಂಬಂಧಿಯ್ಲಲದವರು ಕೂಡ ತಮಗೆ ಸೋದರನಂತೆ ಅಥವಾ ಸೋದರಿಯಂತೆ ಮನಸ್ಸಿಗೆ ಹತ್ತಿರವಾಗಿರುವವರಿಗೆ ಈ ರಾಖಿಯನ್ನು ಕಟ್ಟುವ ಮೂಲಕ ರಕ್ಷಿಸು ಹಾಗೂ ರಕ್ಷಣೆ ಮಾಡು ಎಂಬ ಭರವಸೆ ಪಡೆದುಕೊಳ್ಳುತ್ತಾರೆ. ಆದರೆ ಇಲ್ಲೊಂದು ಕಡೆ ಮಹಿಳೆಯೊಬ್ಬರು ರಕ್ಷಣೆಯ ಭರವಸೆಯೊಂದಿಗೆ ರಾಖಿ ಕಟ್ಟುತ್ತಿದ್ದ ಕೈಗಳೇ ಅವಳನ್ನು ಬಾರದ ಲೋಕಕ್ಕೆ ಕಳುಹಿಸಿವೆ. ಹೌದು ತನ್ನನ್ನೇ ಸೋದರನೆಂದು ಭಾವಿಸಿ ತನಗೆ ಪ್ರತಿವರ್ಷ ರಾಖಿ ಕಟ್ಟುತ್ತಿದ್ದ ವಿಧವೆ ಮಹಿಳೆಯೊಬ್ಬರನ್ನು ರಾಖಿ ಕಟ್ಟಿಸಿಕೊಳ್ಳುತ್ತಿದ್ದ ಯುವಕನೇ ಪರಲೋಕಕ್ಕೆ ಅಟ್ಟಿದ್ದಾನೆ. ಇಂತಹದೊಂದು ಭಯಾನಕ ನಂಬಿಕೆದ್ರೋಹದ ಜೊತೆಗೆ ಕೊಲೆಯ ಘಟನೆ ನಡೆದಿರೋದು ಗುಜರಾತ್‌ನ ಜಾಮ್‌ನಗರದ ಡಿಫೆನ್ಸ್ ಕಾಲೋನಿಯಲ್ಲಿ.
ನೆರೆಮನೆಯಲ್ಲೇ ಪತ್ತೆಯಾಯ್ತು ಶವ
ಇಲ್ಲಿ ವಿಧವೆಯೊಬ್ಬರು ನಾಪತ್ತೆಯಾಗಿದ್ದರು. ಈ ಬಗ್ಗೆ ಅವರ ಪುತ್ರರು ದೂರು ನೀಡಿದ ನಂತರ ತನಿಖೆ ನಡೆಸಿ ಪೊಲೀಸರು ಹುಡುಕಾಟ ನಡೆಸಿದಾಗ ನೆರೆಮನೆಯಲ್ಲೇ ಅವರ ಶವ ಪತ್ತೆಯಾಗಿದೆ. ಆರೋಪಿ ಕೊಲೆ ಮಾಡಿದ್ದಲ್ಲದೇ ನಂತರ ಕೊಲೆಯಾದ ಮಹಿಳೆಯ ಪುತ್ರರು ಹಾಗೂ ಮನೆಯವರ ಜೊತೆ ಸೇರಿ ಹುಡುಕುವಂತೆ ನಾಟಕ ಮಾಡಿದ್ದ. ಉತ್ತರ ಪ್ರದೇಶದ ಮಥುರಾ ಮೂಲದ ರಿಂಕಿದೇವಿ ಬಂಟು ಸಿಂಗ್ ಕಥೇರಿಯಾ ತಮ್ಮ ಪತಿ 021 ರಲ್ಲಿ ಹೃದಯಾಘಾತದಿಂದ ನಿಧನರಾದ ನಂತರ ಗುಜರಾತ್‌ನ ಜಾಮ್‌ನಗರದಲ್ಲಿ ತಮ್ಮ ಮೂವರು ಮಕ್ಕಳೊಂದಿಗೆ ವಾಸ ಮಾಡುತ್ತಿದ್ದರು. ನಘೇಡಿ ಗ್ರಾಮದ ಔಷಧ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ರಿಂಕುದೇವಿ ಅವರಿಗೆ ರೋಹಿತ್ (19), ನಿತಿನ್ (17) ಮತ್ತು ಅಂಜಲಿ (6) ಎಂಬ ಮೂವರು ಮಕ್ಕಳಿದ್ದು, ಅವರ ಪಾಲಿನ ಏಕೈಕ ಜೀವನಾಧಾರ ರಿಂಕುದೇವಿ ಆಗಿದ್ದರು.
ಎರಡು ದಿನಗಳ ಹಿಂದೆ ಕೆಲಸಕ್ಕೆ ಹೋಗಿದ್ದ ಆಕೆ ಮನೆಗೆ ವಾಪಸ್ ಬಂದಿರಲಿಲ್ಲ, ಹೀಗಾಗಿ ಆಕೆಯ ಹಿರಿಯ ಮಗ ರೋಹಿತ್ ಸ್ಥಳೀಯ ಪೊಲೀಸರಿಗೆ ಅಮ್ಮ ನಾಪತ್ತೆಯಾದ ಬಗ್ಗೆ ದೂರು ನೀಡಿದ್ದ ಇದಾದ ನಂತರ ಪೊಲೀಸರು ಸೇರಿದಂತೆ ನೆರೆಹೊರೆಯ ಮನೆಯವರೂ ಆಕೆಗಾಗಿ ಹುಡುಕಾಟ ನಡೆಸಿದ್ದರು. ತನಿಖೆಯ ಸಮಯದಲ್ಲಿ, ಪೊಲೀಸರಿಗೆ ರಿಂಕಿದೇವಿಯ ಕೊನೆಯದಾಗಿ ಕಥೇರಿಯಾಸ್ ಕೆಳಗಿನ ಮನೆಯಲ್ಲಿ ವಾಸಿಸುತ್ತಿದ್ದ ವಿಜಯ್ ಓಡಿಚ್ ಅವರ ನಿವಾಸದಲ್ಲಿ ಇದ್ದರು ಎಂಬುದನ್ನು ಪತ್ತೆ ಮಾಡಿದರು.. ರಿಂಕಿದೇವಿ, ವಿಜಯ್ ಓಡಿಚ್ ಅವರೊಂದಿಗೆ ಆಳವಾದ ಬಾಂಧವ್ಯವನ್ನು ಹೊಂದಿದ್ದರು, ತಮ್ಮ ಒಡಹುಟ್ಟಿದ ಸೋದರನಂತೆ ಅವರನ್ನು ಭಾವಿಸಿ ಅವರಿಗೆ ಪ್ರತಿವರ್ಷ ರಾಖಿ ಕಟ್ಟುತ್ತಿದ್ದರು.
ಇದನ್ನೂ ಓದಿ: 5 ದಿನಗಳ ಹಿಂದಷ್ಟೇ ಮಗುವಿಗೆ ಜನ್ಮ ನೀಡಿದ್ದ ಬಾಣಂತಿ ಆಸ್ಪತ್ರೆ ಮೇಲಿಂದ ಬಿದ್ದು ಸಾವು
ಆದರೆ ಆರೋಪಿ ಆಕೆಯನ್ನೇ ಕೊಲೆ ಮಾಡಿ ಶವವನ್ನು ತನ್ನ ಮನೆಯಲ್ಲೇ ಅಡಗಿಸಿಟ್ಟಿದ್ದ ಅದು ಸಾಲದೆಂಬಂತೆ ಆತ ಮನೆಯವರ ಜೊತೆ ಸೇರಿ ಹುಡುಕಾಟವನ್ನು ನಡೆಸಿದ್ದ. ವಿಜಯ್ ಒಡಿಚ್ ಅವರು ನಮ್ಮನ್ನು ಅವರ ಸೋದರಳಿಯನಂತೆ ನೋಡಿಕೊಳ್ಳುತ್ತಿದ್ದರು. ನಾವು ಅವರನ್ನು ಮಾವನಂತೆ ನೋಡಿದ್ದೆವು. ಆದರೆ ನಮ್ಮ ತಾಯಿಯನ್ನು ಹುಡುಕಲು ಸಹಾಯ ಮಾಡಿದ ಅವರೇ ನಮ್ಮಿಂದ ನಮ್ಮ ತಾಯಿಯನ್ನು ಕಸಿದುಕೊಂಡಿದ್ದಾನೆ ಎಂಬುದನ್ನು ನಂಬಲು ಸಾಧ್ಯವಾಗ್ತಿಲ್ಲ ಎಂದು ಆ ಮಹಿಳೆಯ ಪುತ್ರ ಆಘಾತದಿಂದ ಹೇಳಿದ್ದಾನೆ.
ಇದನ್ನೂ ಓದಿ: ಯಾದಗಿರಿ: ರಸ್ತೆಬದಿ ನವಜಾತ ಗಂಡು ಶಿಶು ಶವಪತ್ತೆ
ಶವ ಪತ್ತೆಯಾದ ತಕ್ಷಣ, ಜಾಮ್‌ನಗರ ಪೊಲೀಸರು ತಕ್ಷಣ ಸ್ಥಳಕ್ಕೆ ಭದ್ರತೆ ಒದಗಿಸಿ, ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು. ಆರಂಭಿಕ ತನಿಖೆಯಲ್ಲಿ ಸಾವಿಗೆ ಕತ್ತು ಹಿಸುಕುವಿಕೆ ಕಾರಣ ಎಂದು ತಿಳಿದು ಬಂದಿದೆ. ವಿಜಯ್ ಒಡಿಚ್‌ನನ್ನು ಬಂಧಿಸಲಾಗಿದೆ. ಕೊಲೆಯ ಹಿಂದಿನ ಉದ್ದೇಶದ ಬಗ್ಗೆ ತನಿಖೆ ಮಾಡುತ್ತಿದ್ದೇವೆ ಎಂದು ಜಾಮ್‌ನಗರದ ಉಪ ಪೊಲೀಸ್ ವರಿಷ್ಠಾಧಿಕಾರಿ ಜಯವೀರ್‌ಸಿನ್ಹ್ ಝಾಲಾ ಹೇಳಿದ್ದಾರೆ.


