ಪತ್ನಿಯೊಬ್ಬಳು ತನ್ನ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು ಪ್ರಿಯಕರ ಮತ್ತು ತಂಗಿಯೊಂದಿಗೆ ಸೇರಿ ಕೊಲೆ ಮಾಡಿದ್ದಾಳೆ. ಎಲೆಕ್ಟ್ರಿಕ್ ಶಾಕ್ ನೀಡಿ, ವಿಷ ಕುಡಿಸಿ ಕ್ರೂರವಾಗಿ ಹತ್ಯೆಗೈದಿದ್ದು, ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಅಕ್ರಮ ಸಂಬಂಧಗಳು (Illicit Relationship) ಎಂತಹ ಭೀಕರ ಅಂತ್ಯಕ್ಕೆ ಕಾರಣವಾಗುತ್ತವೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ. ತನ್ನ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗುತ್ತಿದ್ದ ಪತಿಯನ್ನು ಪತ್ನಿಯೇ (Husband and wife) ತನ್ನ ಪ್ರಿಯಕರ ಮತ್ತು ತಂಗಿಯ ಸಹಾಯದೊಂದಿಗೆ ಅತ್ಯಂತ ಕ್ರೂರವಾಗಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ಘಟನೆಯ ವಿವರ:
ಉತ್ತರ ಪ್ರದೇಶದ ಮೊರಾದಾಬಾದ್ ಜಿಲ್ಲೆಯ ಮಜೋಲಾ ಪೊಲೀಸ್ ಠಾಣಾ (Majola Police Station) ವ್ಯಾಪ್ತಿಯ ಕುಂದನ್‌ಪುರದ ನಿವಾಸಿ ಪವನ್ ಠಾಕೂರ್ (30) ಕೊಲೆಯಾದ ದುರ್ದೈವಿ. ಪವನ್ ಮತ್ತು ಆಂಚಲ್ ಆರು ವರ್ಷಗಳ ಹಿಂದೆ ವಿವಾಹವಾಗಿದ್ದರು. ಈ ದಂಪತಿಗೆ ಎರಡು ವರ್ಷದ ಮುದ್ದಾದ ಹೆಣ್ಣು ಮಗಳಿದ್ದಾಳೆ. ಸಂಸಾರ ಸುಗಮವಾಗಿ ಸಾಗುತ್ತಿದೆ ಎನ್ನುವಷ್ಟರಲ್ಲಿ, ಆಂಚಲ್ ತನ್ನ ಕುಟುಂಬದ ಸಂಬಂಧಿಕನೇ ಎನ್ನಲಾದ ಅಂಕಿತ ಎಂಬಾತನೊಂದಿಗೆ ಕಳೆದ ಎರಡು ವರ್ಷಗಳಿಂದ ಅಕ್ರಮ ಸಂಬಂಧ ಹೊಂದಿದ್ದಳು.
ಕೊಲೆಗೆ ಕಾರಣವಾದ ವಿರೋಧ:
ಪತ್ನಿ ಆಂಚಲ್ ಮತ್ತು ಅಂಕಿತನ ನಡುವಿನ ಸಂಬಂಧದ ಬಗ್ಗೆ ಪವನ್ ಪತ್ತೆ ಹಚ್ಚಿದ್ದರು. ಈ ವಿಷಯವಾಗಿ ದಂಪತಿಗಳ ನಡುವೆ ಆಗಾಗ ಗಲಾಟೆಗಳು ನಡೆಯುತ್ತಿದ್ದವು. ಅಕ್ರಮ ಸಂಬಂಧವನ್ನು ನಿಲ್ಲಿಸುವಂತೆ ಪವನ್ ತನ್ನ ಪತ್ನಿಗೆ ಎಚ್ಚರಿಕೆ ನೀಡಿದ್ದರು. ತನ್ನ ಪ್ರೇಮಕ್ಕೆ ಪತಿ ಮುಳ್ಳಾಗುತ್ತಿದ್ದಾನೆ ಎಂದು ಭಾವಿಸಿದ ಆಂಚಲ್, ಪವನ್‌ನನ್ನು ಹಾದಿಯಿಂದಲೇ ತೆಗೆದುಹಾಕಲು ನಿರ್ಧರಿಸಿದ್ದಳು.
ಸಂಚು ರೂಪಿಸಿದ್ದು ಹೇಗೆ?
ಆಂಚಲ್ ತನ್ನ ತವರು ಮನೆಯಲ್ಲಿ ಈ ಕೊಲೆಗೆ ಸಂಚು ರೂಪಿಸಿದ್ದಳು. ಈ ಪ್ಲಾನ್‌ನಲ್ಲಿ ಆಕೆಯ ಪ್ರಿಯಕರ ಅಂಕಿತ ಮಾತ್ರವಲ್ಲದೆ, ಆಂಚಲ್ ತಂಗಿ ಶಿಖಾ ಮತ್ತು ಶಿಖಾಳ ಗೆಳೆಯ ಅಜಯ್ ದಿವಾಕರ್ ಕೂಡ ಶಾಮೀಲಾಗಿದ್ದರು. ಸಂಚಿನ ಭಾಗವಾಗಿ, ಆಂಚಲ್ ತನ್ನ ಪತಿ ಪವನ್‌ನನ್ನು ತವರು ಮನೆಗೆ ಕರೆಸಿಕೊಂಡಿದ್ದಳು. ಅಲ್ಲಿ ನಾಲ್ವರು ಸೇರಿ ಪವನ್ ಮೇಲೆ ಏಕಾಏಕಿ ದಾಳಿ ನಡೆಸಿದ್ದಾರೆ.

ಅತ್ಯಂತ ಕ್ರೂರವಾಗಿ ಹತ್ಯೆ:
ಆರೋಪಿಗಳು ಪವನ್‌ನನ್ನು ಕಟ್ಟಿಹಾಕಿ ಮೊದಲು ಎಲೆಕ್ಟ್ರಿಕ್ ಶಾಕ್ (Electric Shock) ನೀಡಿದ್ದಾರೆ. ಪವನ್ ಒದ್ದಾಡುತ್ತಿದ್ದರೂ ಬಿಡದ ಖದೀಮರು, ನಂತರ ಆತನಿಗೆ ಬಲವಂತವಾಗಿ ವಿಷವನ್ನು (Poison) ಕುಡಿಸಿದ್ದಾರೆ. ಈ ಭೀಕರ ಕಿರುಕುಳ ತಾಳಲಾರದೆ ಪವನ್ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. ಮೊದಲು ಇದನ್ನು ಸಾಮಾನ್ಯ ಸಾವು ಎಂದು ಬಿಂಬಿಸಲು ಪ್ರಯತ್ನಿಸಲಾಗಿತ್ತು. ಆದರೆ, ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಪವನ್ ದೇಹದ ಮೇಲೆ ಗಾಯದ ಗುರುತುಗಳು ಮತ್ತು ವಿಷದ ಅಂಶ ಪತ್ತೆಯಾಗಿದ್ದರಿಂದ ಪತ್ನಿಯ ನಾಟಕ ಬಯಲಾಗಿದೆ.
ನಾಲ್ವರ ಬಂಧನ:
ಪ್ರಕರಣದ ತನಿಖೆ ನಡೆಸಿದ ಮೊರಾದಾಬಾದ್ ಎಸ್‌ಎಸ್‌ಪಿ ಸತ್ಪಾಲ್ ಆಂಟಿಲ್ ಅವರು, ಪತ್ನಿ ಆಂಚಲ್, ಪ್ರಿಯಕರ ಅಂಕಿತ, ತಂಗಿ ಶಿಖಾ ಮತ್ತು ಅಜಯ್ ದಿವಾಕರ್ ಎಂಬ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಇವರ ವಿರುದ್ಧ ಬಿಎನ್‌ಎಸ್ ಸೆಕ್ಷನ್ 103 (ಕೊಲೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಎರಡು ವರ್ಷದ ಮಗು ಈಗ ತಂದೆಯನ್ನು ಕಳೆದುಕೊಂಡು, ತಾಯಿ ಜೈಲು ಪಾಲಾಗಿ ಅನಾಥವಾಗಿದೆ.


