Tablet Arif murder case: ಮಂಗಳೂರು ಹೊರವಲಯದ ತೊಕ್ಕೊಟ್ಟು ಫ್ಲೈಓವರ್‌ನಲ್ಲಿ ರೌಡಿಶೀಟರ್ ಆರಿಫ್ ಯಾನೆ ಟಾಬ್ಲೆಟ್ ಆರಿಫ್‌ನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಬೈಕ್‌ನಲ್ಲಿ ಹೋಗುತ್ತಿದ್ದ ಆರಿಫ್‌ಗೆ ಕಾರ್‌ನಿಂದ ಡಿಕ್ಕಿ ಹೊಡೆದು, ಮಾರಕಾಸ್ತ್ರಗಳಿಂದ ಕಡಿದು ಹತ್ಯೆ ಮಾಡಲಾಗಿದೆ.

ಮಂಗಳೂರಿನಲ್ಲಿ ಮತ್ತೆ ಝಳಪಿಸಿದ ಲಾಂಗ್ ಮಚ್ಚು

ಮಂಗಳೂರು: ಕರಾವಳಿಯಲ್ಲಿ ಮತ್ತೆ ಲಾಂಗ್ ಮಚ್ಚುಗಳು ಝಳಪಿಸಿದ್ದು ಬೆಳ್ಳಂಬೆಳಗ್ಗೆ ನೆತ್ತರು ಹರಿದಿದೆ. ಮಂಗಳೂರು ಹೊರವಲಯದ‌ ತೊಕ್ಕೊಟ್ಟು ಬಳಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕಡಿದು ರೌಡಿ ಶೀಟರ್‌ ಒಬ್ಬನನ್ನು ಕೊಲೆ ಮಾಡಿದ್ದಾರೆ. 46 ವರ್ಷದ ರೌಡಿಶೀಟರ್ ಆರಿಫ್ ಯಾನೆ ಟಾಬ್ಲೆಟ್ ಆರಿಫ್ ಕೊಲೆಯಾದ ವ್ಯಕ್ತಿ.

Add Asianetnews Kannada as a Preferred SourcegooglePreferred

ತೊಕ್ಕೊಟ್ಟು ಫ್ಲೈ ಓವರ್ ಬ್ರಿಜ್ ಮೇಲೆಯೇ ರೌಡಿಶೀಟರ್ ಬರ್ಬರ ಹತ್ಯೆ

ಆರಿಫ್ ಯಾನೆ ಟಾಬ್ಲೆಟ್ ಆರಿಫ್, ಮುಳ್ಳುಗುಡ್ಡೆ ಹೌಸ್ ತಲಪಾಡಿ ನಿವಾಸಿಯಾಗಿದ್ದಾನೆ. ಈತ ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿಶೀಟರ್ ಆಗಿದ್ದ. ತೊಕ್ಕೊಟ್ಟು ಫ್ಲೈ ಓವರ್ ಬ್ರಿಜ್ ಮೇಲೆಯೇ ಈ ಭಯಾನಕ ಕೊಲೆ ನಡೆದಿದೆ. ಬೈಕ್‌ನಲ್ಲಿ ತೆರಳುತ್ತಿದ್ದ ಆರಿಫ್‌ಗೆ ದುಷ್ಕರ್ಮಿಗಳ ತಂಡ ಹಿಂಬದಿಂದ ಕಾರ್ ಡಿಕ್ಕಿ ಹೊಡಿಸಿ ಕೆಳಗೆ ಬೀಳಿಸಿದ್ದಾರೆ. ರಸ್ತೆಗೆ ಬಿದ್ದ ಆರಿಫ್‌ನನ್ನು ಮಾರಕಾಸ್ತ್ರಗಳಿಂದ ಕಡಿದು ಕೊಲೆ ಮಾಡಲಾಗಿದೆ. ಕೃತ್ಯ ಎಸಗಿದ ಬಳಿಕ ಕಾರ್‌ನಲ್ಲಿ ಆರೋಪಿಗಳು ಪರಾರಿಯಾಗಿದ್ದಾರೆ.

ಈ ಹಿಂದೆಯೂ ನಡೆದಿತ್ತು ಕೊಲೆಗೆ ಸಂಚು

ಈ ಘಟನೆಗೆ ಗ್ಯಾಂಗ್ ವಾರ್ ಕಾರಣ ಎಂಬ ಶಂಕೆ ಮೂಡಿದೆ. ಕಳೆದ 2022ರ ಮೇ ತಿಂಗಳಲ್ಲಿಯೂ ಇದೇ ರೀತಿ ಆರೀಫ್ ಕೊಲೆಗೆ ಯತ್ನ ನಡೆದಿತ್ತು. ಬೆಳಗ್ಗೆ ಬೈಕಲ್ಲಿ ಧಕ್ಕೆಗೆ ತೆರಳುತ್ತಿದ್ದ ವೇಳೆ ಬಜಾಲಿನ ಟೊಪ್ಪಿ ನೌಫಾಲ್ ಮತ್ತು ತಂಡವು ದಾಳಿ ನಡೆಸಿ ಚೂರಿ ಇರಿದು ಕೊಲೆಗೆ ಯತ್ನಿಸಿತ್ತು.

ಇದನ್ನೂ ಓದಿ: ಇವ ಗೋವಾದ ಪ್ರಜ್ವಲ್ ರೇವಣ್ಣ: 30ಕ್ಕೂ ಹೆಚ್ಚು ಅಪ್ರಾಪ್ತೆಯರ ಮೇಲೆ ಲೈಂಗಿಕ ದೌರ್ಜನ್ಯ

ಪತ್ನಿ ನಾಲ್ವರು ಮಕ್ಕಳನ್ನು ಹೊಂದಿರುವ ಆರೀಫ್

ವಿವಾಹಿತನಾಗಿರುವ ಆರೀಫ್‌ ಪತ್ನಿ ಹಾಗೂ ಮೂರು ಗಂಡು, ಒಂದು ಹೆಣ್ಣು ಒಟ್ಟು ನಾಲ್ವರು ಮಕ್ಕಳನ್ನು ಅಗಲಿದ್ದಾನೆ. ಮೂಲತಃ ಕುದ್ರೋಳಿ ನಿವಾಸಿಯಾಗಿದ್ದು ಕಳೆದ ಆರೇಳು ವರುಷದಿಂದ ಕುಟುಂಬ ಸಮೇತ ಅಜ್ಜಿನಡ್ಕ ಬಳಿಯ ಮುಳ್ಳುಗುಡ್ಡೆ ಎಂಬಲ್ಲಿ ಮನೆ ಮಾಡಿ ವಾಸವಿದ್ದ. ಘಟನಾ ಸ್ಥಳಕ್ಕೆ ಡಿಸಿಪಿ ಮಿಥುನ್, ಸೋಕೋ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ.

ಇದನ್ನೂ ಓದಿ: ಪತ್ನಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ಪತಿ: ತಿಂಗಳ ಬಳಿಕ ಲವರ್ ಜೊತೆ ಸಿಕ್ಕ ಹೆಂಡ್ತಿ