impact of divorce on children: ಹೆಚ್ಚುತ್ತಿರುವ ವಿಚ್ಛೇದನ ಪ್ರಕರಣಗಳು ಮಕ್ಕಳ ಮೇಲೆ ತೀವ್ರ ಪರಿಣಾಮ ಬೀರುತ್ತಿವೆ. ಪೋಷಕರ ವಿಚ್ಛೇದನದ ನಂತರ, ತಾಯಿಯೊಂದಿಗೆ ಹೋಗಲು ನಿರಾಕರಿಸಿ ಅಪ್ಪನಿಗಾಗಿ ಅಳುತ್ತಿರುವ ಮಗುವಿನ ವೀಡಿಯೋವೊಂದು ವೈರಲ್ ಆಗಿದ್ದು, ಇದು ಮಕ್ಕಳ ಮಾನಸಿಕ ನೋವನ್ನು ಎತ್ತಿ ತೋರಿಸುತ್ತಿದೆ.
ಭಾರತದಲ್ಲಿ ಇತ್ತೀಚೆಗೆ ಪ್ರತಿದಿನವೂ ಸಾವಿರಾರು ಡಿವೋರ್ಸ್ ಪ್ರಕರಣಗಳು ನ್ಯಾಯಾಲಯದ ಮುಂದೆ ಬರುತ್ತಿವೆ. ಡಿವೋರ್ಸ್ ಪಡೆದುಕೊಂಡು ಪರಸ್ಪರ ದೂರಾಗುವ ದಂಪತಿಗಳ ಸಂಖ್ಯೆಯಲ್ಲಿ ನಿರಂತರ ಹೆಚ್ಚಳವಾಗಿದೆ. ಭಾರತ ಹಿಂದೆ ವಿಶ್ವದಲ್ಲೇ ಅತ್ಯಂತ ಕಡಿಮೆ ವಿಚ್ಛೇದನ ಪ್ರಮಾಣವನ್ನು ಹೊಂದಿರುವ ದೇಶಗಳಲ್ಲಿ ಒಂದಾಗಿತ್ತು. ಆದರೆ ಈಗ ಡಿವೋರ್ಸ್ ಪ್ರಕರಣಗಳ ಸಂಖ್ಯೆ ನಿರಂತರವಾಗಿ ಹೆಚ್ಚಾಗಿದೆ. ಸುಶಿಕ್ಷಿತ ಉನ್ನತ ಶಿಕ್ಷಣ ಪಡೆದ ಆರ್ಥಿಕವಾಗಿ ಸ್ವಾವಲಂಬಿಗಳಾಗಿರುವ ಹೆಣ್ಣು ಮಕ್ಕಳೇ ಹೆಚ್ಚಾಗಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸುತ್ತಿದ್ದಾರೆ ಎಂಬುದು ಅಂಕಿ ಅಂಶಗಳಿಂದ ಸಾಬೀತಾಗಿದೆ. ಆದರೆ ಈ ಡಿವೋರ್ಸ್‌ನ ಪರಿಣಾಮವನ್ನು ನಿಜವಾಗಿಯೂ ಅನುಭವಿಸುವವರು ದಂಪತಿಗಳ ಪುಟ್ಟ ಮಕ್ಕಳು.
ಅಪ್ಪನಿಗಾಗಿ ಅತ್ತ ಪುಟ್ಟ ಕಂದ: ಭಾವುಕ ವೀಡಿಯೋ:
ಹೌದು ಮಕ್ಕಳಿಲ್ಲದ ದಂಪತಿ ಮಧ್ಯೆ ವಿಚ್ಛೇದನವಾದರೆ ಅಂತಹ ದೊಡ್ಡ ಪರಿಣಾಮವೇನು ಬೀರುವುದಿಲ್ಲ, ಆದರೆ ಪುಟ್ಟ ಮಕ್ಕಳಿರುವ ದಂಪತಿ ಡಿವೋರ್ಸ್ ಪಡೆಯುವುದರಿಂದ ಇದು ಮಕ್ಕಳ ಮೇಲೆ ಭಾವನಾತ್ಮಕವಾಗಿ ತೀವ್ರ ಪರಿಣಾಮ ಬೀರುತ್ತದೆ. ಅದೇ ರೀತಿ ಇಲ್ಲೊಂದು ಕಡೆ ಪತಿ ಪತ್ನಿಯ ವಿಚ್ಛೇದನದ ನಂತರ ಪುಟ್ಟ ಮಗು ತಾಯಿಯ ಜೊತೆ ಹೋಗುವುದಕ್ಕೆ ಒಪ್ಪದೇ ಅಪ್ಪನನ್ನು ತಬ್ಬಿ ಹಿಡಿದು ಅಳುತ್ತಿರುವ ವೀಡಿಯೋವೊಂದು ವೈರಲ್ ಆಗಿದೆ. ಈ ಘಟನೆ ಎಲ್ಲಿ ಸಂಭವಿಸಿದೆ ಎಂಬ ಬಗ್ಗೆ ಮಾಹಿತಿ ಇಲ್ಲ, ಆದರೆ ಅಂತಿಮ ವಿಚ್ಛೇದನದ ನಂತರ ಮಗು ಮಾತ್ರ ಅಪ್ಪನನ್ನು ಬಿಡದೇ ಹಿಡಿದುಕೊಂಡು ಅಳುತ್ತಿರುವ ವೀಡಿಯೋ ವೈರಲ್ ಆಗಿದ್ದು, ಅಲ್ಲಿದ್ದವರ ಕಣ್ಣುಗಳಲ್ಲಿ ನೀರು ತರಿಸಿದೆ.
ಸಾಮಾಜಿಕ ಜಾಲತಾಣದಲ್ಲಿನ ಮಾಹಿತಿಯ ಪ್ರಕಾರ ಮಗುವಿನ ತಾಯಿ ಸೋಂಪ್ರೀತ್ ಕೌರ್ ಎಂಬುವವರು 8ದಿನಗಳ ಹಿಂದೆ ಅತ್ತೆ-ಮಾವನ ಮನೆಯಿಂದ ನಾಪತ್ತೆಯಾಗಿದ್ದರು. ನಂತರ ಪಂಜಾಬ್‌ನ ಗುರುದ್ವಾರದಲ್ಲಿ ಪತ್ತೆಯಾದ ಅವರು ತಮ್ಮ ಗಂಡನ ಮನೆಯವರ ವಿರುದ್ಧ ಗಂಭೀರ ಕಿರುಕುಳದ ಆರೋಪಗಳನ್ನು ಮಾಡಿದ್ದರು., ತಾನು ವಿಚ್ಛೇದನ ಪಡೆದು ತನ್ನ ಹೆತ್ತವರ ಮನೆಗೆ ಮರಳುವುದಾಗಿ ಆಕೆ ಹೇಳಿದರು. ನಂತರ ಎರಡೂ ಕುಟುಂಬಗಳ ಒಪ್ಪಿಗೆಯೊಂದಿಗೆ ವಿಚ್ಛೇದನವನ್ನು ಅಂತಿಮಗೊಳಿಸಲಾಯ್ತು ಮತ್ತು ಅವರ ಎರಡು ವರ್ಷದ ಮಗುವನ್ನು ತಾಯಿಯ ಜೊತೆ ಕಳುಹಿಸುವುದಕ್ಕೆ ನಿರ್ಧರಿಸಲಾಯ್ತು. ಆದರೆ ಮಗುವನ್ನು ತಂದೆಯ ಮಡಿಲಿನಿಂದ ತಾಯಿಗೆ ಹಸ್ತಾಂತರಿಸಿದ ಕ್ಷಣ ನೋಡುಗರ ಕಣ್ಣಾಲಿಗಳನ್ನು ತೇವಗೊಳಿಸಿತು. ಎರಡು ವರ್ಷದ ಮಗು ತನ್ನ ತಂದೆಯನ್ನು ಬಿಟ್ಟು ಹೋಗುವುದಕ್ಕೆ ಇಷ್ಟಪಡದೇ ಮೊಂಡುತನ ತೋರಿದರೆ ಇತ್ತ ತನ್ನ ಪ್ರೀತಿಯ ಮಗು ತನ್ನಿಂದ ದೂರಾಗುವುದನ್ನು ನೋಡಿ ತಂದೆ ದಿಗ್ಭ್ರಮೆಗೊಂಡು ನೋಡುತ್ತಲೇ ನಿಂತಿದ್ದರು.
ಇದನ್ನೂ ಓದಿ: ವೃದ್ಧನಿಗೆ ತಾನೇ ಆಶೀರ್ವದಿಸಿ ಪುಟ್ಟ ಬಾಲಕಿಯಿಂದ ಆಶೀರ್ವಾದ ಕೇಳಿ ಪಡೆದ ನಾಗಸಾಧು: ವೀಡಿಯೋ ವೈರಲ್
@nandantwts ಎಂಬ ಟ್ವಿಟ್ಟರ್ ಪೇಜ್‌ನಿಂದ ಈ ವೀಡಿಯೋ ಪೋಸ್ಟ್ ಆಗಿದ್ದು, ಪೋಷಕರಿಗೆ ವಿಚ್ಛೇದನ ಸಾಮಾನ್ಯ ಎನಿಸಬಹುದು, ಆದರೆ ಕೊನೆಯಲ್ಲಿ, ಮಗು ಜೀವನದಲ್ಲಿ ಹೆಚ್ಚು ಬಳಲುತ್ತದೆ ಎಂದು ಬರೆದು ವೀಡಿಯೋ ಪೋಸ್ಟ್ ಮಾಡಿದ್ದು, ವಿಡಿಯೋದಲ್ಲಿ ಮಗುವನ್ನು ತಂದೆ ಎತ್ತಿಕೊಂಡಿರುತ್ತಾರೆ. ಡಿವೋರ್ಸ್ ಪ್ರತಿ ಹಸ್ತಾಂತರಿಸಿದ ನಂತರ ಮಗುವನ್ನು ಹಸ್ತಾಂತರಿಸುವ ವೇಳೆ ಮಗು ಅಪ್ಪನನ್ನು ಬಿಟ್ಟು ಹೋಗುವುದಕ್ಕೆ ಒಪ್ಪದೇ ಅಳಲು ಶುರು ಮಾಡಿದೆ. ನಂತರ ತಾಯಿ ಒತ್ತಾಯಪೂರ್ವಕವಾಗಿ ಮಗುವನ್ನು ಅದರ ತಂದೆಯ ತೋಳಿಂದ ತೆಗೆದುಕೊಂಡಿದ್ದಾರೆ. ಈ ವೇಳೆ ಮಗು ತಂದೆಯನ್ನು ಬಿಟ್ಟು ಬರಲೊಪ್ಪದೇ ಅಳುವುದನ್ನು ಕಾಣಬಹುದು.
ಬಹುತೇಕ ಡಿವೋರ್ಸ್ ಪ್ರಕರಣಗಳಲ್ಲಿ 14 ವರ್ಷಕ್ಕಿಂತ ಕೆಳಗಿನ ಅದರಲ್ಲೂ ಬಹಳ ಎಳೆಯ ಮಕ್ಕಳಿದ್ದಾಗ ನ್ಯಾಯಾಲಯವೂ ಮಕ್ಕಳ ಕಸ್ಟಡಿಯನ್ನು ಬಹುತೇಕ ತಾಯಿಯರಿಗೆ ನೀಡುತ್ತಾರೆ. ಮಕ್ಕಳ ಲಾಲನೆ ಪಾಲನೆಗೆ ತಾಯಿ ಅಗತ್ಯವಾಗಿರುವುದರಿಂದ ನ್ಯಾಯಾಲಯ ಈ ನಿಯಮ ತಂದಿದೆ. ಹೀಗಾಗಿ ತಂದೆಗೆ ವಾರದಲ್ಲಿ ಒಮ್ಮೆ ಅಥವಾ ತಿಂಗಳಲ್ಲಿ ಒಮ್ಮೆ ಅನುಕೂಲಕ್ಕೆ ತಕ್ಕಂತೆ ಮಗುವನ್ನು ನೋಡುವುದಕ್ಕೆ ಭೇಟಿ ಮಾಡುವುದಕ್ಕೆ ಅವಕಾಶ ನೀಡಲಾಗುತ್ತದೆ. ಆದರೆ ಇಂತಹ ಘಟನೆಗಳಿಂದ ತಂದೆ ಅಥವಾ ತಾಯಿಯ ಪ್ರೀತಿ ಇಲ್ಲದೇ, ಪ್ರೀತಿಗಾಗಿ ಹಂಬಲಿಸುವ ಮಗುವಿಗೆ ಅದು ಜೀವನಪರ್ಯಂತ ನೋವಾಗಿ ಕಾಡುತ್ತದೆ.
ಇದನ್ನೂ ಓದಿ: ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಗೆ ಕಾರಣವಾಯ್ತು ಗಂಡ ಹೆಂಡತಿ ಜಗಳ: ಮದುವೆ ಪ್ರೀತಿ ಬೇಕಾ ಅಂತ ಕೇಳಿದ ನೆಟ್ಟಿಗರು
ವೀಡಿಯೋ ನೋಡಿದ ಅನೇಕರು ತೀವ್ರ ಬೇಸರ ವ್ಯಕ್ತಪಡಿಸಿದ್ದು, ಪುಟ್ಟ ಮಕ್ಕಳಿರುವ ದಂಪತಿ ದೂರಾಗುವ ನಿರ್ಧಾರ ಮಾಡದಂತೆ ಸಲಹೆ ನೀಡಿದ್ದಾರೆ. ವಿಚ್ಛೇದನವು ಕೇವಲ ಗಂಡು ಹೆಣ್ಣನ್ನು ಮಾತ್ರವಲ್ಲ, ಇಡೀ ಕುಟುಂಬ ವ್ಯವಸ್ಥೆಯನ್ನೇ ಧ್ವಂಸ ಮಾಡುತ್ತಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ನಿರಂತರ ಕೌಟುಂಬಿಕ ಕಲಹದಿಂದ ಮುಕ್ತಿಗಾಗಿ ಮಕ್ಕಳ ಮುಖ ನೋಡಿ ಡಿವೋರ್ಸ್ ಪಡೆಯದೇ ಹೋದರೆ 20 ವರ್ಷದ ನಂತರ ಅದೇ ಮಗು ನೀವು ಹೇಗೆ ಜೊತೆಗೆ ಇದ್ದೀರಿ ಡಿವೋರ್ಸ್ ಪಡೆಯಬೇಕಿತ್ತು ಎಂದು ಹೇಳುತ್ತದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.


