ಅಪ್ಪ ಅಮ್ಮನ ಡಿವೋರ್ಸ್ ಗಲಾಟೆ ಮಧ್ಯೆ ಅಪ್ಪ ದಳಪತಿ ವಿಜಯ್ ಅನ್‌ಫಾಲೋ ಮಾಡಿದ ಮಗ
ನಟ ವಿಜಯ್ ಪತ್ನಿ ಸಂಗೀತಾ ಸೊರ್ನಲಿಂಗಮ್ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು, ಈ ಬೆಳವಣಿಗೆಯ ಬೆನ್ನಲ್ಲೇ ಅವರ ಪುತ್ರ ಜೇಸನ್ ಸಂಜಯ್ ಕೂಡ ಸಾಮಾಜಿಕ ಜಾಲತಾಣದಲ್ಲಿ ತಂದೆಯನ್ನು ಅನ್‌ಫಾಲೋ ಮಾಡಿದ್ದಾರೆ ಎಂದು ವರದಿಯಾಗಿದೆ. ವಿಜಯ್ ಅವರ ವಿವಾಹೇತರ ಸಂಬಂಧವೇ ಈ ಬಿರುಕಿಗೆ ಕಾರಣ ಎಂದು ಸಂಗೀತಾ ಆರೋಪಿಸಿದ್ದಾರೆ.

ನಟ ದಳಪತಿ ವಿಜಯ್ ಹಾಗೂ ಪತ್ನಿ ಸಂಗೀತಾ ವಿಚ್ಛೇದನ ಪ್ರಕರಣ
ನಟನಾಗಿ ಕೋಟ್ಯಾಂತರ ಜನರ ಹೃದಯ ಗೆದ್ದಿರುವ ತಮಿಳು ನಟ ವಿಜಯ್ ಅವರು ಹೊಸ ಪಕ್ಷ ಕಟ್ಟಿ ರಾಜಕಾರಣಿಯಾಗಿ ಬದಲಾಗುತ್ತಿರುವ ಸಮಯದಲ್ಲೇ ಅವರ ಪತ್ನಿ ಸಂಗೀತಾ ಸೊರ್ನಲಿಂಗಮ್ ಅವರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ನಂತರ ನಟ ದಳಪತಿ ವಿಜಯ್ ಅವರ ವೈಯಕ್ತಿಕ ಜೀವನ ಸಾಕಷ್ಟು ಸದ್ದು ಮಾಡುತ್ತಿದೆ. ವಿಜಯ್‌ನಿಂದ ವಿಚ್ಛೇದನಕ್ಕಾಗಿ ಪತ್ನಿ ಸಂಗೀತಾ ಸೊರ್ನಲಿಂಗಮ್ ಅರ್ಜಿ ಸಲ್ಲಿಸಿದ ನಂತರ ನಟನ ಪುತ್ರ ಸಿನಿಮಾ ನಿರ್ದೇಶಕ ಜೇಸನ್ ಸಂಜಯ್ ಕೂಡ ತನ್ನ ತಂದೆ ವಿಜಯ್ ಅವರನ್ನು ಸೋಶಿಯಲ್ ಮೀಡಿಯಾಗಳಲ್ಲಿ ಅನ್‌ಫಾಲೋ ಮಾಡಿದ್ದಾರೆ ಎಂದು ವರದಿಯಾಗಿದೆ.
ತಂದೆಯನ್ನೇ ಅನ್‌ಫಾಲೋ ಮಾಡಿದ ಪುತ್ರ ಜೇಸನ್
ವಿಜಯ್ ಮತ್ತು ಪತ್ನಿ ಸಂಗೀತಾ ಸೊರ್ನಲಿಂಗಂ ಅವರ ವಿವಾಹ ವಿಚ್ಛೇದನ ಪ್ರಕ್ರಿಯೆಯ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ವರದಿಗಳು ವೈರಲ್ ಆದ ಕೂಡಲೇ, ಅವರ ಕುಟುಂಬದ ಮೇಳೆ ಹದ್ದಿನ ಕಣ್ಣಿಟ್ಟಿರುವ ನೆಟ್ಟಿಗರು ಜೇಸನ್ ಸಂಜಯ್ ತನ್ನ ತಂದೆಯನ್ನು ಫಾಲೋ ಮಾಡುವುದನ್ನು ನಿಲ್ಲಿಸಿರುವುದನ್ನು ಗಮನಿಸಿದ್ದಾರೆ. ಅನುರಾಗ್ ಕಶ್ಯಪ್ ಮತ್ತು ಫರ್ಹಾನ್ ಅಖ್ತರ್ ಅವರಂತಹ ಪ್ರಸಿದ್ಧ ಭಾರತೀಯ ಚಲನಚಿತ್ರ ನಿರ್ಮಾಪಕರು ಸೇರಿದಂತೆ ಇನ್ಸ್ಟಾಗ್ರಾಮ್ನಲ್ಲಿ ಜೇಸನ್ ಸಂಜಯ್ 38 ಜನರನ್ನು ಫಾಲೋ ಮಾಡ್ತಿದ್ದಾರೆ. ಆದರೆ ಈ ಲಿಸ್ಟ್‌ನಲ್ಲಿ ಅವರ ಸ್ವಂತ ತಂದೆ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿರುವ ವಿಜಯ್ ಇಲ್ಲ.
ಸಾಮಾಜಿಕ ಜಾಲತಾಣದಲ್ಲಿ ಊಹಾಪೋಹಾ
ಜೇಸನ್ ಸಂಜಯ್ ಅವರ ಈ ನಡೆ ಕೌಟುಂಬಿಕ ಉದ್ವಿಗ್ನತೆಯ ಬಗ್ಗೆ ಸಾಕಷ್ಟು ಊಹಾಪೋಹಾಗಳನ್ನು ಹುಟ್ಟುಹಾಕಿದೆ. ಕೆಲವು ಅಭಿಮಾನಿಗಳು ಜೇಸನ್ ಸಂಜಯ್ ಅವರ ಈ ನಡೆಯು ಈ ಸಮಯದಲ್ಲಿ ತನ್ನ ತಾಯಿಗೆ ಬೆಂಬಲ ನೀಡುವ ಸಂಕೇತವಾಗಿರಬಹುದು ಎಂದು ಬಣ್ಣಿಸಿದ್ದಾರೆ. ಮತ್ತೊಂದೆಡೆ ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ವಿಜಯ್ ಅವರ 25 ವರ್ಷದ ಮಗ ಮೊದಲಿನಿಂದಲೂ ವಿಜಯ್ ಅವರನ್ನು ಫಾಲೋ ಮಾಡದೇ ಇದ್ದಿರಬಹುದು ಎಂದು ವಾದಿಸಿದ್ದಾರೆ. ಈ ನಡುವೆ ವಿಜಯ್ ಮಾತ್ರ ಇನ್ಸ್ಟಾಗ್ರಾಮ್‌ನಲ್ಲಿ ಯಾರೊಬ್ಬರನ್ನು ಫಾಲೋ ಮಾಡುತ್ತಿಲ್ಲ.
ಪತ್ನಿಯ ವಿಚ್ಛೇದನ ಅರ್ಜಿ ಬಳಿಕ ವಿಜಯ್‌ಗೆ ಕೋರ್ಟ್ ನೊಟೀಸ್
ಪಿಟಿಐ ವರದಿಗಳ ಪ್ರಕಾರ, ವಿಜಯ್ ಅವರು ನಟಿಯೊಂದಿಗೆ ಹೊಂದಿರುವ ವಿವಾಹೇತರ ಸಂಬಂಧದ ಆರೋಪಗಳನ್ನು ಉಲ್ಲೇಖಿಸಿ ಪತ್ನಿ ಸಂಗೀತಾ ಚೆಂಗಲ್ಪಟ್ಟು ಕುಟುಂಬ ನ್ಯಾಯಾಲಯದಲ್ಲಿ ವಿಚ್ಛೇದನ ಅರ್ಜಿಯನ್ನು ಸಲ್ಲಿಸಿದ ಕೆಲವು ದಿನಗಳ ನಂತರ ಈ ಬೆಳವಣಿಗೆ ನಡೆದಿದೆ. ಇದರ ನಂತರ, ನ್ಯಾಯಾಲಯವು ನಟ ವಿಜಯ್‌ಗೆ ನೋಟಿಸ್ ಜಾರಿ ಮಾಡಿ, ಏಪ್ರಿಲ್ 20 ರಂದು ಖುದ್ದಾಗಿ ಹಾಜರಾಗುವಂತೆ ನಿರ್ದೇಶಿಸಿದೆ.
ಇದನ್ನೂ ಓದಿ: ಅಬುಧಾಬಿಯಲ್ಲಿ ಫ್ರಾನ್ಸ್‌ನ ನೌಕಾನೆಲೆ ಮೇಲೆ ಇರಾನ್ ಡ್ರೋನ್ ದಾಳಿ: ಇರಾನ್ ಆಕ್ರಮಣದ ವಿರುದ್ಧ ಒಟ್ಟಾದ ಗಲ್ಫ್ ರಾಷ್ಟ್ರಗಳು
ನಟಿ ಜೊತೆ ವಿವಾಹೇತರ ಸಂಬಂಧ ಹೊಂದಿರುವ ಆರೋಪ
ಸಂಗೀತಾ ತಮಿಳುನಾಡು ಮೂಲದ ಕೈಗಾರಿಕೋದ್ಯಮಿಯೊಬ್ಬರ ಪುತ್ರಿಯಾಗಿದ್ದಾರೆ. ವಿಚ್ಛೇದನ ಅರ್ಜಿಯಲ್ಲಿ ವಿಜಯ್ ವಿವಾಹೇತರ ಸಂಬಂಧದಲ್ಲಿ ಭಾಗಿಯಾಗಿದ್ದಾರೆಂಬುದನ್ನು ಏಪ್ರಿಲ್ 2021 ರಲ್ಲಿ ಕಂಡುಹಿಡಿದಿದ್ದಾಗಿ ಹೇಳಿದ್ದಾರೆ. ಈ ವಿಚಾರ ತನಗೆ ಆಳವಾದ ಭಾವನಾತ್ಮಕ ನೋವು ಮತ್ತು ಮಾನಸಿಕ ನೋವನ್ನುಂಟು ಮಾಡಿದೆ, ಇದು ದ್ರೋಹ ಮತ್ತು ವೈವಾಹಿಕ ನಂಬಿಕೆಯ ಉಲ್ಲಂಘನೆಗೆ ಸಮಾನವಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ. ನಟಿಯೊಂದಿಗಿನ ಈ ಸಂಬಂಧ ಕೊನೆಗೊಳ್ಳುತ್ತದೆ ಎಂದು ವಿಜಯ್ ಆರಂಭದಲ್ಲಿ ಭರವಸೆ ನೀಡಿದ್ದರು ಅವರ ನಡುವಿನ ಒಡನಾಟ ಮುಂದುವರೆದಿದೆ ಎಂದು ಅವರು ಆರೋಪಿಸಿದ್ದಾರೆ. ಇದು ಮಾನಸಿಕ ಕ್ರೌರ್ಯ, ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಿಂದ ಉಂಟಾಗುವ ಸಾರ್ವಜನಿಕ ಅವಮಾನ, ಭಾವನಾತ್ಮಕ ನಿರ್ಲಕ್ಷ್ಯ ಮತ್ತು ರಚನಾತ್ಮಕ ಬೇರ್ಪಡುವಿಕೆಗೆ ಕಾರಣವಾಯಿತು ಎಂದು ಅವರು ದೂರಿದ್ದಾರೆ.
ಇದನ್ನೂ ಓದಿ: ಅಮೆರಿಕಾದ ಎಫ್-15 ಫೈಟರ್ ಜೆಟ್ ಹೊಡೆದುರುಳಿಸಿದಾಗಿ ಹೇಳಿದ ಇರಾನ್: ಪೈಲಟ್ ಹೊರಗೆ ಹಾರಿದ ದೃಶ್ಯ ವೀಡಿಯೋದಲ್ಲಿ ಸೆರೆ
ವಿಚ್ಚೇದನದ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡದ ವಿಜಯ್ ಸಂಗೀತಾ
ಇಲ್ಲಿಯವರೆಗೆ ನಟ ವಿಜಯ್ ಆಗಲಿ ಅಥವಾ ನಟಿ ಸಂಗೀತಾ ಆಗಲಿ ವಿಚ್ಛೇದನದ ಹೇಳಿಕೆಗಳನ್ನು ದೃಢೀಕರಿಸಿಯೂ ಇಲ್ಲ ನಿರಾಕರಿಸಿಯೂ ಇಲ್ಲ. ಹೀಗಾಗಿ ಈ ವಿಚಾರದಲ್ಲಿ ಅವರ ಅಭಿಮಾನಿಗಳಲ್ಲಿ ಗೊಂದಲವಿದೆ. 1999ರ ಆಗಸ್ಟ್‌ನಲ್ಲಿ ವಿವಾಹವಾದ ವಿಜಯ್ ಹಾಗೂ ಸಂಗೀತಾ ದಂಪತಿಗೆ ಜೇಸನ್ ಸಂಜಯ್ ಮತ್ತು ದಿವ್ಯಾ ಶಶಾ ಎಂಬ ಇಬ್ಬರು ಮಕ್ಕಳಿದ್ದಾರೆ. ಜೇಸನ್ ಇಲ್ಲಿಯವರೆಗೆ ಪುಲ್ ದಿ ಟ್ರಿಗ್ಗರ್ ಮತ್ತು ಅವರ ತಂದೆಯ 2009 ರ ಆಕ್ಷನ್ ಥ್ರಿಲ್ಲರ್ ಸಿನಿಮಾ ವೆಟ್ಟೈಕಾರನ್ ಸೇರಿದಂತೆ ಎರಡು ಚಲನಚಿತ್ರಗಳಲ್ಲಿ ನಟಿಸಿದ್ದಾರೆ ಹಾಗೆಯೇ ಪುತ್ರ ದಿವ್ಯಾ ಶಶಾ, ವಿಜಯ್ ಅವರ 2016 ರ ಆಕ್ಷನ್ ಥ್ರಿಲ್ಲರ್ ಥೇರಿಯಲ್ಲಿ ಕಾಣಿಸಿಕೊಂಡಿದ್ದಾರೆ ಎಂಬ ಮಾಹಿತಿ ಇದೆ.
ಇದನ್ನೂ ಓದಿ: ಖಮೇನಿ ಸಾವಿನ ಬಳಿಕ ಮತ್ತೆ ಸುದ್ದಿಯಾಗುತ್ತಿದೆ ಇರಾನ್ ನಾಯಕನಿಗೆ ಇದ್ದ ಭಾರತದ ಕನೆಕ್ಷನ್
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

