ಪತ್ನಿಯ ಓದಿನ ಕನಸಿಗಾಗಿ ಕೂಲಿ ಮಾಡಿ, ಜಮೀನು ಮಾರಿ ತ್ಯಾಗ ಮಾಡಿದ ಗಂಡ ಅಮನ್ ಕುಮಾರ್. ಆದರೆ, ಉನ್ನತ ಉದ್ಯೋಗ ಸಿಕ್ಕ ಬಳಿಕ ಪತ್ನಿ ಗುಂಜನ್ ಕುಮಾರಿ, ಗಂಡನನ್ನೇ ತಿರಸ್ಕರಿಸಿ ಬೇರೊಬ್ಬನೊಂದಿಗೆ ಅಕ್ರಮ ಸಂಬಂಧ ಬೆಳೆಸಿಕೊಂಡಳು. ಪತ್ನಿಯ ವಂಚನೆಯನ್ನು ಕಣ್ಣಾರೆ ಕಂಡ ಪತಿ ಇದೀಗ ನ್ಯಾಯಕ್ಕಾಗಿ ಹೋರಾಡುತ್ತಿದ್ದಾನೆ.

ಆಕೆಯ ಹೆಸರು ಗುಂಜನ್ ಕುಮಾರಿ. ಅವಳಿಗೆ ಓದುವ ಹಂಬಲ. ಆದರೂ ಅಪ್ಪ ಒತ್ತಾಯ ಮಾಡಿಸಿ ಮದುವೆ ಮಾಡಿಸಿದರು. ಆದರೆ ಆಕೆಯ ಓದುವ ಕೆಲಸಕ್ಕೆ ನೀರೆರೆದು ಪೋಷಿಸಿದ್ದು ಗಂಡ ಅಮನ್ ಕುಮಾರ್. ತನಗೆ ಒಳ್ಳೆಯ ಮಾರ್ಕ್ಸ್​ ಬಂದಿದ್ದರೂ ಮನೆಯಲ್ಲಿ ಮುಂದೆ ಓದಲು ಕಳುಹಿಸಲಿಲ್ಲ ಎಂದು ಗಂಡನ ಬಳಿ ಅಳಲು ತೋಡಿಕೊಂಡಿದ್ದರೆ, ತನ್ನ ಪತ್ನಿ ಓದಿ, ಅವಳ ಕನಸನ್ನು ನನಸು ಮಾಡಿಕೊಳ್ಳಲಿ ಎನ್ನೋದು ಒಂದೇ ಒಂದು ಆಸೆ ಈ ಗಂಡನದ್ದಾಗಿತ್ತು. ಪತ್ನಿಯ ಓದಿಗೆ ಬೇಕಾಗುವಷ್ಟು ಹಣ ಕೈಯಲ್ಲಿ ಇರಲಿಲ್ಲ. ಅದಕ್ಕಾಗಿ ಎಲ್ಲೆಲ್ಲೋ ಕೆಲಸ ಮಾಡಿದ. ಕೊನೆಗೆ ಇನ್ನೂ ದುಡ್ಡು ಸಾಲದಾಗ ಕೂಲಿಯನ್ನು ಮಾಡಿದ. ಆಗಲೂ ಹಣ ಹೊಂದಿಕೆಯಾಗಿಲ್ಲದಾಗ ಇದ್ದ ಚಿಕ್ಕ ಜಮೀನನ್ನೂ ಮಾರಿದರು ಅಮನ್ ಕುಮಾರ್. ಎಲ್ಲವೂ ಪತ್ನಿಗಾಗಿ, ಪತ್ನಿಯ ಓದಿನ ಕನಸನ್ನು ನನಸು ಮಾಡುವುದಕ್ಕಾಗಿ.

ಈ ನಡುವೆ ಒಂದು ಮಗು ಕೂಡ ಆಯಿತು. ಮದುವೆಯಾಗಿ 10 ವರ್ಷವೂ ಆಯಿತು. ಪತಿಯ ಶ್ರಮ ಸಾರ್ಥಕವಾಯಿತು. 2013ರಲ್ಲಿ ಮದುವೆಯಾಗಿತ್ತು ಈ ಜೋಡಿ, ಅಲ್ಲಿಂದ ಓದಿಗೆಂದು ಪತಿ ಮಾಡಿದ ತ್ಯಾಗ ಅಷ್ಟಿಷ್ಟಲ್ಲ. ಅದರ ಪರಿಣಾಮವಾಗಿ 2024ರಲ್ಲಿ ಪತ್ನಿಗೆ ಉತ್ತಮ ಉದ್ಯೋಗ ದೊರೆಯಿತು. ಕೆಲಸಕ್ಕೆ ಹೋಗಲು ಶುರು ಮಾಡಿದಳು. ಅಲ್ಲಿ ಯಾರ್ಯಾರದ್ದೋ ಪರಿಚಯವಾಯಿತು. ದೊಡ್ಡ ಹುದ್ದೆ, ದೊಡ್ಡ ಅಹಂಕಾರ. ಮನೆಯಲ್ಲಿ ಕೂಲಿ ಮಾಡುವ ಗಂಡ ಬೇಡವಾಯ್ತು. ತನ್ನ ಗಂಡನದ್ದು ಇಷ್ಟು ಚಿಕ್ಕ ಕೆಲಸ ಎಂದು ಹೇಳಿಕೊಳ್ಳಲು ಅವಳಿಂದ ಸಾಧ್ಯವಾಗಲಿಲ್ಲ. ಮನೆಯಲ್ಲಿ ಸುಮಾರು 10 ವರ್ಷದ ಮಗು ಇದ್ದರೂ, ಕಚೇರಿಯಲ್ಲಿಯೇ ಮತ್ತೊಬ್ಬನ ಜೊತೆ ಅಫೇರ್​ ಶುರು ಮಾಡಿಕೊಂಡಳು. ಬಹುಶಃ ತಾನು ಮದುವೆಯಾಗಿದ್ದ ಸುದ್ದಿಯನ್ನೂ ಆಕೆ ಹೇಳಿರಲಿಲ್ಲವೇನೋ.

ನೋಡಬಾರದ್ದನ್ನು ನೋಡಿದ

ಅವರಿಬ್ಬರ ಸಂಬಂಧ ಎಲ್ಲಿಯವರೆಗೆ ಮುಂದುವರೆಯಿತು ಎಂದರೆ ಲಿವ್​ ಇನ್​ನಲ್ಲಿ ಒಟ್ಟಿಗೇ ವಾಸ ಮಾಡತೊಡಗಿದರು. ತನ್ನ ಪತ್ನಿಯಲ್ಲಿ ಆಗಿರುವ ಬದಲಾವಣೆ ಕಂಡರೂ ಪಾಪ ಈ ಗಂಡನಿಗೆ ಪತ್ನಿ ಅಂಥ ವಂಚಕಿ ಎಂದು ತಿಳಿಯುವುದಾದರೂ ಹೇಗೆ? ನಂತರ ಯಾರೋ ಈ ವಿಷಯವನ್ನು ಅಮನ್ ಕುಮಾರ್ ಅವರಿಗೆ ಮುಟ್ಟಿಸಿದಾಗ ಆರಂಭದಲ್ಲಿ ಅದನ್ನು ನಂಬಲೇ ಇಲ್ಲ. ಕೊನೆಗೆ ಪತ್ನಿ ಎಲ್ಲಿ ಇದ್ದಾಳೆ ಎನ್ನುವುದನ್ನು ಪತ್ತೆ ಹಚ್ಚಿ, ಅಲ್ಲಿಗೆ ಹೋದಾಗ ಅಲ್ಲೊಂದು ಕಾರು ನಿಂತಿತ್ತು. ಆ ಕಾರಿನ ವಿಡಿಯೋ ಮಾಡಿದ ಅಮನ್​ ಕುಮಾರ್​ ಗೇಟ್​ ತೆರೆದು ನೋಡಿದಾಗ, ಅಲ್ಲಿನ ಘಟನೆ ಕಂಡು ಕುಸಿದು ಹೋದರು. ಅಲ್ಲಿ ಪತ್ನಿ ಮತ್ತು ಆ ಮನುಷ್ಯನನ್ನು ನೋಡಬಾರದ ಸ್ಥಿತಿಯಲ್ಲಿ ನೋಡಿದರು!

ಹೊಡೆಯಲು ಚಪ್ಪಲಿ ತಂದ ಪತ್ನಿ

ಏನು ಮಾಡಬೇಕೆಂದು ತಿಳಿಯದೇ ಅಮನ್​ ಕುಮಾರ್​, ಆ ವ್ಯಕ್ತಿಗಾಗಿ ಆತನ ಕಾರಿನ ಬಳಿ ಕಾಯುತ್ತಾ ನಿಂತರು. ಅವನು ತನ್ನ ಕೆಲಸ ಮುಗಿಸಿ ಕಾರಿನ ಬಳಿ ಬಂದಾಗ ತಡೆದು ನಿಲ್ಲಿಸಿದರು. ಅದಾಗಲೇ ಆ ವ್ಯಕ್ತಿಗೂ ಗುಂಜನ್ ಕುಮಾರಿಗೆ ಮದುವೆಯಾಗಿರುವ ವಿಷಯ ತಿಳಿದಿತ್ತು. ಇವನೇ ಅವಳ ಗಂಡ ಎಂದು ತಿಳಿದ ತಕ್ಷಣ ದಾಳಿ ಮಾಡಲು ಬಂದ. ಗದ್ದಲ ಕೇಳಿ ಗಂಡ ಬಂದಿರುವುದನ್ನು ನೋಡಿದ ಗುಂಜನ್ ಕುಮಾರಿ, ಮನೆಯೊಳಗಿನಿಂದ ಗಂಡನಿಗೆ ಹೊಡೆಯಲು ಚಪ್ಪಲಿ ತಂದಳು. ಈಗ ಅಮನ್​ ಕುಮಾರ್​ ಅವರು ಕೋರ್ಟ್​ನಲ್ಲಿ ಕೇಸು ದಾಖಲು ಮಾಡಿದ್ದಾರೆ. ಪತ್ನಿಯಿಂದ ಬೇರೆಯಾಗುವ ನಿರ್ಧಾರಕ್ಕೆ ಬಂದಿದ್ದಾರೆ. ಅದಕ್ಕೂ ಮುನ್ನ ಪತ್ನಿಯ ಎಲ್ಲಾ ಮಹಿಮೆಗಳನ್ನು ಮಾಧ್ಯಮದವರ ಮುಂದೆ ಹೇಳಿಕೊಂಡು ನೋವು ತೋಡಿಕೊಂಡಿದ್ದಾರೆ.