ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿರೋಧಿಸಿ ನಡೆದ ಪ್ರತಿಭಟನೆಗೆ 35 ದಿನಗಳ ಕಾಲ ಉಚಿತ ಊಟ ನೀಡಿದ್ದ ಮೊಹಮ್ಮದ್ ಜುನೈದ್ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರತಿಭಟನಾಕಾರರಿಂದ ಕಡೆಗಣನೆಗೆ ಒಳಗಾಗಿ ಕಣ್ಣೀರು ಹಾಕಿರುವ ಅವರ ವಿರುದ್ಧವೇ ಇದೀಗ ದೇಶದ್ರೋಹದ ಆರೋಪ ಕೇಳಿಬಂದಿದ್ದು, ಅವರ ಹಣದ ಮೂಲದ ಬಗ್ಗೆ ತನಿಖೆಗೆ ಆಗ್ರಹಿಸಲಾಗಿದೆ.

ನೀಟ್​ ಪ್ರಶ್ನೆ ಪತ್ರಿಕೆ ಸೋರಿಕೆ ನೆಪದಲ್ಲಿ ಕಾಕ್ರೋಚ್​ ಜನತಾ ಪಕ್ಷ ನಡೆಸಿರುವ ಪ್ರತಿಭಟನೆಯ ಹಿಂದಿನ ಕೈವಾಡದ ಬಗ್ಗೆ ಹಲವಾರು ಅನುಮಾನಗಳು ಸುಳಿದಾಡುತ್ತಲೇ ಇವೆ. ಪಾಕಿಸ್ತಾನಿಗಳು, ಖಲಿಸ್ತಾನಿಗಳ ಬೆಂಬಲ, ಲಕ್ಷ ಲಕ್ಷ ರೂಪಾಯಿ ಖರ್ಚು, ಶಿಕ್ಷಣ ಸಚಿವರಾಗಿದ್ದ ಧರ್ಮೇಂದ್ರ ಪ್ರಧಾನ್​ ಅವರ ರಾಜೀನಾಮೆ ಬಳಿಕ ಅಷ್ಟೋ ಮಂದಿ ಸ್ಟಾರ್​ ಹೋಟೆಲ್​ನಲ್ಲಿ ಮಾಡಿದ ಪಾರ್ಟಿಗೆ ತಗುಲಿದ ಲಕ್ಷಾಂತರ ರೂಪಾಯಿಗಳ ಖರ್ಚು-ವೆಚ್ಚ... ಹೀಗೆ ಬಗೆಯುತ್ತಾ ಹೋದಂತೆ, ಇದರ ಹಿಂದಿರುವ ವ್ಯವಸ್ಥಿತ ಪಿತೂರಿಯ ಬಗ್ಗೆ ಇದಾಗಲೇ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಯಾಗುತ್ತಿರುವ ನಡುವೆಯೇ, ಪ್ರತಿಭಟನೆಯ ಸಮಯದಲ್ಲಿ ಸತತ 35 ದಿನ, ಪ್ರತಿಭಟನಾಕಾರರಿಗೆ ಊಟವನ್ನು ನೀಡಿದವ ಮೊಹಮ್ಮದ್​ ಜುನೈದ್ ಅವರ ಬಗ್ಗೆ ಇದೀಗ ಕೆಲವು ಮುಸ್ಲಿಂ ಸಮುದಾಯದಿಂದಲೇ ಭಾರಿ ವಿರೋಧ ವ್ಯಕ್ತವಾಗುತ್ತಿದೆ.

​.ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ನಿರಂತರ 35 ದಿನಗಳ ಕಾಲ ಉಚಿತ ಆಹಾರ ಮತ್ತು ನೀರು ಪೂರೈಸಿ ಸುದ್ದಿಯಲಿದ್ದಾರೆ ಗಾಜಿಯಾಬಾದ್​ನ ಮೊಹಮ್ಮದ್​. ಆದರೆ, ಇದೀಗ ಅತ್ತ ಸ್ಟಾರ್​ ಹೋಟೆಲ್​ನಲ್ಲಿ ಭರ್ಜರಿ ಪಾರ್ಟಿ ಮಾಡುತ್ತಿದ್ದರೆ, ಇತ್ತ 35 ದಿನಗಳ ಕಾಲ ಉಚಿತ ಆಹಾರ-ನೀರು ನೀಡಿದ್ದ ಮೊಹಮ್ಮದ್​ ಜುನೈದ್​ ಕಣ್ಣೀರು ಹಾಕಿದ್ದರು. ಮಾಧ್ಯಮಗಳ ಮುಂದೆ ಬಂದಿರುವ ಅವರು, ಅಂದು ನಾನು ಅವರಿಗೆ ಆಹಾರ ನೀಡಿದೆ. ಇಂದು ನನ್ನನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ. ಸಿಜೆಪಿ ಸಂಸ್ಥಾಪಕ ಅಭಿಜೀತ್​ ದೀಪ್ಕೆ, ಪ್ರತಿಭಟನೆ ಮುಗಿದ ಬಳಿಕ ನನ್ನತ್ತ ಕಣ್ಣು ಕೂಡ ಹಾಯಿಸಿಲ್ಲ ಎಂದು ಗಳಗಳನೆ ಅತ್ತಿದ್ದರು.

ದೇಶದ್ರೋಹಿ, ತನಿಖೆ ಆಗಲಿ

ಆದರೆ ಇದೇ ಮೊಹಮ್ಮದ್​ ಜುನೈದ್​ ವಿರುದ್ಧ ಮುಸ್ಲಿಂ ಮುಖಂಡರೊಬ್ಬರು ಭಾರೀ ಆರೋಪ ಮಾಡಿದ್ದಾರೆ. geowiredailyಗೆ ನೀಡಿರುವ ಸಂದರ್ಶನದಲ್ಲಿ ಅವರು, ಜುನೈದ್​ ಒಬ್ಬ ಮುಸ್ಲಿಂ ವಿರೋಧಿ, ದೇಶದ್ರೋಹಿ ಎಂದಿದ್ದಾರೆ. ಅವನಿಗೆ ತಿಂಗಳಿಗೆ 20 ಸಾವಿರ ಸಂಬಳ ಬರುತ್ತದೆ. ಆದರೆ ಅಷ್ಟೂ ಜನರಿಗೆ ಉಚಿತ ಊಟ ಕೊಟ್ಟಿದ್ದಾನೆ. ಅದರ ಖರ್ಚು ಏನಿಲ್ಲವೆಂದರೂ ದಿನಕ್ಕೆ ಹತ್ತಿಪ್ಪತ್ತು ಲಕ್ಷ ಆಗುತ್ತದೆ. ಆತನ ಬಳಿ ಅಷ್ಟು ಹಣ ಬಂದಿದ್ದು ಹೇಗೆ ಎನ್ನುವ ತನಿಖೆ ಆಗಬೇಕಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಗಮನ ಹರಿಸಬೇಕಿದೆ ಎಂದಿದ್ದಾರೆ ಅವರು. ಒಂದು ವೇಳೆ ಆತನ ಬಳಿ ಇಷ್ಟೆಲ್ಲಾ ಹಣ ಇದ್ದಿದ್ದೇ ಹೌದಾದರೆ, ಆತನ ವಿರುದ್ಧ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ತನಿಖೆ ಮಾಡಬೇಕು, ಇಲ್ಲದೇ ಹೋದರೆ ಇದರ ಹಿಂದಿರುವ ಶಕ್ತಿಗಳ ಬಗ್ಗೆಯೂ ತನಿಖೆ ಆಗಬೇಕು ಎಂದಿದ್ದಾರೆ.

ಅಂದು ಹೇಳಿದ್ದೇನು?

ಪ್ರತಿಭಟನಾಕಾರರಿಗೆ ಉಚಿತ ಆಹಾರ ಮತ್ತು ನೀರು ವಿತರಿಸುತ್ತಿದ್ದ ಸಮಯದಲ್ಲಿ, ದೆಹಲಿ ಪೊಲೀಸರು ಎಂದು ಹೇಳಿಕೊಂಡ ಕೆಲವರು ತಮ್ಮ ಕಣ್ಣಿಗೆ ಬಟ್ಟೆ ಕಟ್ಟಿ ರಾತ್ರಿಯಿಡೀ ಅಪಹರಿಸಿ ಕಿರುಕುಳ ನೀಡಿದ್ದಾರೆ ಎಂದು ಇದೇ ಜುನೈದ್​ ಆರೋಪಿಸಿದ್ದರು. ಜುಲೈ 24ರ ರಾತ್ರಿ ಸುಮಾರು 10:50ರ ಸುಮಾರಿಗೆ ನನಗೆ ನಾಯಿ ಕಚ್ಚಿತ್ತು. ಚಿಕಿತ್ಸೆಗಾಗಿ ಆರ್‌ಎಂಎಲ್ ಆಸ್ಪತ್ರೆಗೆ ತೆರಳಿ, ರಾತ್ರಿ 12:10ರ ವೇಳೆಗೆ ವಾಪಸ್ ಆಟೋದಲ್ಲಿ ಹೊರಟಿದ್ದಾಗ ಈ ಘಟನೆ ನಡೆದಿದೆ. ನಾನು 50-60 ಮೀಟರ್ ದೂರ ಹೋಗುತ್ತಿದ್ದಂತೆ ಕೆಲವು ವಾಹನಗಳು ನಮ್ಮನ್ನು ತಡೆದವು. ನಮ್ಮನ್ನು ಕೊಲ್ಲಲು ಬಂದಿದ್ದಾರೆ ಎಂದೇ ನಾವು ಭಯಪಟ್ಟಿದ್ದೆವು. ಆದರೆ ಅವರು ತಾವು ದೆಹಲಿ ಪೊಲೀಸರು ಎಂದು ಹೇಳಿಕೊಂಡರು. ನಂತರ ನಮ್ಮ ಕಣ್ಣಿಗೆ ಬಟ್ಟೆ ಕಟ್ಟಿ ಎಲ್ಲಿಗೋ ಕರೆದುಕೊಂಡು ಹೋದರು. ಇಡೀ ರಾತ್ರಿ ನಮ್ಮನ್ನು ಅಲ್ಲಿಯೇ ಕೂರಿಸಿದ್ದರು ಎಂದು ಜುನೈದ್ ಅಳಲು ತೋಡಿಕೊಂಡಿದ್ದರು. ಅದರ ಬೆನ್ನಲ್ಲೇ ಇದೀಗ ತಾವು ಮಾಡಿರುವುದು ತಪ್ಪೆಂದು ಗೊತ್ತಾಗಿದೆ, ಆಹಾರ ವಿತರಿಸಿದವರೇ ಉಲ್ಟಾ ಹೊಡೆದರು ಎಂದು ಕಣ್ಣೀರು ಹಾಕಿದ್ದಾರೆ.