Expensive birthday gift breakup: ಯುವಕನೊಬ್ಬ ತನ್ನ ಗರ್ಲ್‌ಫ್ರೆಂಡ್‌ಗೆ ಬರೋಬ್ಬರಿ 3 ಲಕ್ಷದ ಗಿಫ್ಟ್ ಕೊಟ್ಟ ಮರುದಿನವೇ ಆಕೆ ಬಿಗ್ ಶಾಕ್ ನೀಡಿದ್ದಾಳೆ. ಗಿಫ್ಟ್ ಕೈ ಸೇರುತ್ತಿದ್ದಂತೆ ಬ್ರೇಕಪ್ ಹೇಳಿ ಜಾಗ ಖಾಲಿ ಮಾಡಿದ ಆ ಕಿಲಾಡಿ ಪ್ರೇಯಸಿಯ ಕಥೆ ಇಲ್ಲಿದೆ.
ನಮಗೆಲ್ಲರಿಗೂ ತಿಳಿದಿರುವಂತೆ ಪ್ರೇಮಿಗಳು ಏನನ್ನು ಬೇಕಾದರೂ ಮಾಡಲು ಸಿದ್ಧರಿರುತ್ತಾರೆ. ಆದರೆ ಇಲ್ಲೋರ್ವ ಯುವಕನೊಬ್ಬ ಸೋಶಿಯಲ್ ಮೀಡಿಯಾದಲ್ಲಿ ಹಾಕಿರುವ ಪೋಸ್ಟ್ ಈಗ ಭಾರಿ ಚರ್ಚೆಗೆ ಕಾರಣವಾಗಿದೆ. ಆತ ತನ್ನ ಗರ್ಲ್‌ಫ್ರೆಂಡ್ ಹುಟ್ಟಹಬ್ಬದ ಸಂದರ್ಭದಲ್ಲಿ ಸುಮಾರು 3 ಲಕ್ಷ ರೂಪಾಯಿ ಮೌಲ್ಯದ ಅತ್ಯಂತ ದುಬಾರಿ ಉಡುಗೊರೆಯನ್ನು ನೀಡಿದ್ದ. ಆದರೆ, ಆ ಗಿಫ್ಟ್ ಕೈ ಸೇರಿದ ಮರುದಿನವೇ ಆಕೆ ಈತನಿಗೆ ಬ್ರೇಕಪ್ ಹೇಳಿ ಕೈಕೊಟ್ಟಿದ್ದಾಳೆ! ಈಗ ಆತ ತಾನು ಕೊಟ್ಟ ಗಿಫ್ಟ್ ಅನ್ನು ಕಾನೂನುಬದ್ಧವಾಗಿ ವಾಪಸ್ ಪಡೆಯಬಹುದೇ ಎಂದು ಸೋಶಿಯಲ್ ಮೀಡಿಯಾದಲ್ಲಿ ಕಾನೂನು ಸಲಹೆ ಕೇಳುತ್ತಿದ್ದಾನೆ.
ಆಗಿದ್ದಿಷ್ಟು...
ಪ್ರೀತಿ ಮತ್ತು ಬಾಂಧವ್ಯದಲ್ಲಿ ನಂಬಿಕೆ ಎಂಬುದು ತುಂಬಾ ಮುಖ್ಯ. ಆದರೆ ಇಂದಿನ ದಿನಗಳಲ್ಲಿ ಕೆಲವರು ಕೇವಲ ಹಣ ಮತ್ತು ದುಬಾರಿ ವಸ್ತುಗಳಿಗಾಗಿಯೇ ಪ್ರೀತಿಸುವಂತೆ ನಟಿಸಿ, ತಮ್ಮ ಸ್ವಾರ್ಥ ತೀರಿದ ತಕ್ಷಣ ಮುಖ ತಿರುಗಿಸಿಕೊಳ್ಳುತ್ತಾರೆ. ಇದೀಗ ಇಂತಹದ್ದೇ ಒಂದು ವಿಚಿತ್ರ ಮತ್ತು ಶಾಕಿಂಗ್ ಘಟನೆ ಯುಕೆಯಲ್ಲಿ (UK) ಬೆಳಕಿಗೆ ಬಂದಿದೆ. ಗರ್ಲ್‌ಫ್ರೆಂಡ್ ಅನ್ನು ನಂಬಿ ಲಕ್ಷಾಂತರ ರೂಪಾಯಿ ಬೆಲೆಯ ಗಿಫ್ಟ್ ಕೊಟ್ಟ ಯುವಕನಿಗೆ ಆಕೆ ಮರುದಿನವೇ ಊಹಿಸಲಾಗದ ಶಾಕ್ ನೀಡಿದ್ದಾಳೆ. ಆ ದುಬಾರಿ ಗಿಫ್ಟ್ ಕೈಗೆ ಸಿಗುತ್ತಿದ್ದಂತೆ ಬ್ರೇಕಪ್ ಹೇಳಿ ಜಾಗ ಖಾಲಿ ಮಾಡಿದ್ದಾಳೆ. ಅಷ್ಟಕ್ಕೂ ಅಲ್ಲಿ ಆಗಿದ್ದೇನು ಅಂದ್ರೆ..
ಪ್ರಸಿದ್ಧ ಸಾಮಾಜಿಕ ಜಾಲತಾಣವಾದ ರೆಡ್ಡಿಟ್‌ನಲ್ಲಿ (Reddit) ಯುವಕನೊಬ್ಬ ತನಗಾದ ಮೋಸದ ಪ್ರೇಮಕಥೆಯನ್ನು ಹಂಚಿಕೊಂಡಿದ್ದಾನೆ. ತನ್ನ ಗರ್ಲ್‌ಫ್ರೆಂಡ್ ಹುಟ್ಟುಹಬ್ಬದ ಪ್ರಯುಕ್ತ ಆಕೆ ಮೊದಲಿನಿಂದಲೂ ಕೇಳುತ್ತಿದ್ದ 2,500 ಪೌಂಡ್ (ಭಾರತೀಯ ಕರೆನ್ಸಿಯಲ್ಲಿ ಸುಮಾರು ರೂ. 3.1 ಲಕ್ಷ) ಮೌಲ್ಯದ ಹೈ-ಎಂಡ್ ಗೇಮಿಂಗ್ ಕಂಪ್ಯೂಟರ್ ಅನ್ನು ಆತ ತುಂಬಾ ಇಷ್ಟಪಟ್ಟು ಕೊಡಿಸಿದ್ದ. ಆದರೆ, ಆತ ಕಲ್ಪನೆಯೂ ಮಾಡಿಕೊಳ್ಳದ ರೀತಿಯಲ್ಲಿ, ಗಿಫ್ಟ್ ಸಿಕ್ಕ ಸರಿಯಾಗಿ ಮರುದಿನವೇ ಆ ಯುವತಿ ಈತನಿಗೆ ಬ್ರೇಕಪ್ ಹೇಳಿದ್ದಾಳೆ.
ಈ ಹಠಾತ್ ಬ್ರೇಕಪ್‌ನಿಂದ ಆಘಾತಕ್ಕೊಳಗಾದ ಯುವಕ, ಅಸಲಿ ವಿಷಯ ಏನೆಂದು ತಿಳಿಯಲು ಪ್ರಯತ್ನಿಸಿದಾಗ ಘೋರವಾದ ಸತ್ಯ ಹೊರಬಂದಿದೆ. ಆಕೆ ಕೆಲವು ತಿಂಗಳುಗಳ ಹಿಂದೆಯೇ ಈತನಿಂದ ದೂರವಾಗಲು ನಿರ್ಧರಿಸಿದ್ದಳಂತೆ! ಆದರೆ, ಹೇಗಾದರೂ ಮಾಡಿ ಆತನಿಂದ ಆ ದುಬಾರಿ ಗೇಮಿಂಗ್ ಪಿಸಿಯನ್ನು ಉಚಿತವಾಗಿ ಪಡೆಯಬೇಕೆಂಬ ದುರಾಸೆಯಿಂದ, ಹುಟ್ಟುಹಬ್ಬದವರೆಗೂ ಪ್ರೀತಿಸುವಂತೆ ನಾಟಕವಾಡಿದ್ದಾಳೆ. ಇದಕ್ಕೆ ಸಂಬಂಧಿಸಿದಂತೆ ಆಕೆ ತನ್ನ ಸ್ನೇಹಿತರೊಂದಿಗೆ ಚಾಟ್ ಮಾಡಿದ್ದ ಕೆಲವು ಸ್ಕ್ರೀನ್‌ಶಾಟ್‌ಗಳೂ ಕೂಡ ಈ ಯುವಕನಿಗೆ ಸಿಕ್ಕಿವೆ.
ತಾನು ಮೋಸ ಹೋಗಿರುವುದನ್ನು ಅರಿತ ಯುವಕ ಆ ಗೇಮಿಂಗ್ ಕಂಪ್ಯೂಟರ್ ಅನ್ನು ವಾಪಸ್ ಪಡೆಯಲು ಅಥವಾ ಅದಕ್ಕಾಗಿ ತಾನು ಖರ್ಚು ಮಾಡಿದ ಹಣವನ್ನು ವಸೂಲಿ ಮಾಡಲು ಕಾನೂನು ಮಾರ್ಗಗಳನ್ನು ಹುಡುಕಲಾರಂಭಿಸಿದ್ದಾನೆ. ಆದರೆ, ಯುಕೆ ಕಾನೂನಿನ ಪ್ರಕಾರ.. ಒಬ್ಬ ವ್ಯಕ್ತಿಗೆ ಸಂಪೂರ್ಣ ಇಷ್ಟಪಟ್ಟು ನೀಡಿದ ಉಡುಗೊರೆಯು (Gift) ಕಾನೂನುಬದ್ಧವಾಗಿ ಅದನ್ನು ಪಡೆದವರ ಆಸ್ತಿಯಾಗುತ್ತದೆ. ಅದನ್ನು ಮತ್ತೆ ಬಲವಂತವಾಗಿ ಕಿತ್ತುಕೊಳ್ಳುವುದು ಕಾನೂನಿನ ಪ್ರಕಾರ ಸಾಧ್ಯವಿಲ್ಲ.
'ಗೋಲ್ಡ್ ಡಿಗ್ಗರ್'
ಈ ವಿಷಯ ತಿಳಿದು ತೀವ್ರ ನಿರಾಶೆಗೊಂಡ ಯುವಕ.. "ಆಕೆ ನನ್ನನ್ನು ವಂಚಿಸಲೆಂದೇ ಪ್ಲಾನ್ ಮಾಡಿದ್ದಳು ಎಂಬುದಕ್ಕೆ ನನ್ನ ಹತ್ತಿರ ಪಕ್ಕಾ ಆಧಾರಗಳಿವೆ. ಇದರ ವಿರುದ್ಧ ನಾನು ಕೋರ್ಟ್‌ಗೆ ಹೋದರೆ ನನಗೆ ನ್ಯಾಯ ಸಿಗುತ್ತದೆಯೇ?" ಎಂದು ನೆಟ್ಟಿಗರ ಬಳಿ ಸಲಹೆ ಕೇಳಿದ್ದಾನೆ. ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ರೇಗಾಡುತ್ತಿದ್ದಾರೆ. ಕೆಲವರು ಆಕೆಯನ್ನು 'ಗೋಲ್ಡ್ ಡಿಗ್ಗರ್' (ಹಣದ ಆಸೆಗಾಗಿ ಪ್ರೀತಿಸುವವಳು) ಎಂದು ಟೀಕಿಸುತ್ತಿದ್ದರೆ, ಇನ್ನು ಕೆಲವರು 'ಸ್ಮಾಲ್ ಕ್ಲೈಮ್ಸ್ ಕೋರ್ಟ್' ಮೆಟ್ಟಿಲೇರಿ ವಂಚನೆ ಪ್ರಕರಣ ದಾಖಲಿಸುವಂತೆ ಸಲಹೆ ನೀಡುತ್ತಿದ್ದಾರೆ. ಈ ಕಾಲದಲ್ಲಿ ಯಾರನ್ನು ನಂಬಿ ಎಷ್ಟು ಖರ್ಚು ಮಾಡಬೇಕು ಎಂಬುದಕ್ಕೆ ಈ ವಿಚಿತ್ರ ಘಟನೆಯೇ ಒಂದು ದೊಡ್ಡ ಪಾಠ.
