ಮನೆಯಲ್ಲಿ ಜಾಗವಿಲ್ಲ ಎಂಬ ಕಾರಣ ನೀಡಿ ಮಗಳೊಬ್ಬಳು ತನ್ನ ವೃದ್ಧ ತಾಯಿಯನ್ನು ವೃದ್ಧಾಶ್ರಮಕ್ಕೆ ಸೇರಿಸಲು ಕರೆತಂದಿದ್ದಾಳೆ. ಈ ಸಂದರ್ಭದಲ್ಲಿ, ಅಪರಿಚಿತರೊಬ್ಬರು ಪ್ರಶ್ನಿಸಿದಾಗ ಆ ತಾಯಿ ಕಣ್ಣೀರಿಟ್ಟಿದ್ದು, ಈ ಭಾವುಕ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ.
ಕಾಲದ ಹೊಡೆತಕ್ಕೆ ಸಿಲುಕಿ ಭಾರತದ ಕುಟುಂಬ ವ್ಯವಸ್ಥೆ ಅಡಿಪಾಯ ಕಳಚಿ ಬೀಳುತ್ತಿರುವುದು ಗೊತ್ತೆ ಇದೆ. ಗಂಡ ಹೆಂಡತಿಯ ವಿಚ್ಛೇದನ ಪ್ರಕರಣಗಳು ಹೆಚ್ಚುತ್ತಿರುವುದರ ನಡುವೆ ಪೋಷಕರನ್ನು ವೃದ್ಧಾಶ್ರಮಕ್ಕೆ ಸೇರಿಸುವ ಪ್ರವೃತ್ತಿಗಳು ಹೆಚ್ಚುತ್ತಿವೆ. ಮಕ್ಕಳನ್ನು ಕಷ್ಟಪಟ್ಟು ಬೆಳೆಸಿದ ಪೋಷಕರು , ಮಕ್ಕಳಿಗೆ ಉನ್ನತ ವ್ಯಾಸಂಗಕ್ಕೆ ಅವಕಾಶ ನೀಡಿ ಅವರಿಗೆ ದೊಡ್ಡ ದೊಡ್ಡ ಮಲ್ಟಿನ್ಯಾಷನಲ್ ಕಂಪನಿಗಳಲ್ಲಿ ಕೆಲಸ ಸಿಕ್ಕಾಗ ಊರು ತುಂಬಾ ಹೇಳಿಕೊಂಡು ಖುಷಿಪಟ್ಟ ಪೋಷಕರು ಇಂದು ಆ ಮಕ್ಕಳಿಂದಲೇ ವೃದ್ಧಾಶ್ರಮ ಸೇರುವಂತಾಗಿದೆ. ಇದು ವೃದ್ಧ ಪೋಷಕರಿಗೆ ಹೇಳಿಕೊಳ್ಳಲಾಗದ ನೋವು ನೀಡುತ್ತಿದೆ.
ವೃದ್ಧಾಪ್ಯದ ವೇಳೆ ಬಹುತೇಕರು ಆರ್ಥಿಕವಾಗಿ ಮಾನಸಿಕವಾಗಿ ಮಕ್ಕಳಿಗೆ ಅವಲಂಬಿತರಾಗಿರುತ್ತಾರೆ. ಆರೋಗ್ಯವೂ ಕೈ ಕೊಟ್ಟಿರುತ್ತದೆ. ಈ ಸಮಯದಲ್ಲಿ ಏನೂ ಮಾಡಲಾಗದ ಮರು ಮಾತನಾಡಲಾಗದ ಅಸಹಾಯಕ ಸ್ಥಿತಿಯಲ್ಲಿ ಅವರಿರುತ್ತಾರೆ. ಇಂತಹ ಸ್ಥಿತಿಯಲ್ಲಿ ಮಕ್ಕಳು ಅವರನ್ನು ವೃದ್ಧಾಶ್ರಮಕ್ಕೆ ಬಿಡುತ್ತೇವೆ ನಿಮ್ಮನ್ನು ನಮಗೆ ನೋಡಲಾಗದು ಎಂದರೆ ಆ ವೃದ್ಧ ಜೀವಗಳು ಕಣ್ಣೀರಿಡೆ ಬೇರೇನೂ ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ. ಅದೇ ರೀತಿ ಇಲ್ಲೊಂದು ಕಡೆ ಮಗಳೊಬ್ಬಳು ತನ್ನ ತಾಯಿಯನ್ನು ವೃದ್ಧಾಶ್ರಮಕ್ಕೆ ಸೇರಿಸುವುದಕ್ಕೆ ಬಂದಿದ್ದು, ಆ ಕ್ಷಣ ಕ್ಯಾಮರಾದಲ್ಲಿ ಸೆರೆಯಾದ ದೃಶ್ಯ ಅನೇಕರನ್ನು ಭಾವುಕರನ್ನಾಗಿಸಿದೆ.
thetrue.indians ಎಂಬ ಇನ್ಸ್ಟಾ ಪೇಜ್‌ನಿಂದ ಈ ವೀಡಿಯೋವನ್ನು ಪೋಸ್ಟ್ ಮಾಡಲಾಗಿದ್ದು, ವೀಡಿಯೋದಲ್ಲಿ, ಒಬ್ಬ ಮಹಿಳೆ ತನ್ನ ವೃದ್ಧಾಶ್ರಮಕ್ಕೆ ತನ್ನ ತಾಯಿಯನ್ನು ಕರೆದುಕೊಂಡು ಹೋಗುತ್ತಿರುವ ದೃಶ್ಯವು ಆಳವಾದ ಭಾವನಾತ್ಮಕ ಕ್ಷಣವನ್ನು ತೋರಿಸಿತು. ಆ ಮಗಳು ತನ್ನ ಮನೆಯಲ್ಲಿ ತಾಯಿಯನ್ನು ಇಟ್ಟುಕೊಳ್ಳುವುದಕ್ಕೆ ಜಾಗವಿಲ್ಲ ಎಂದು ಹೇಳುತ್ತಿರುವುದನ್ನು ವೀಡಿಯೋದಲ್ಲಿ ಕೇಳಬಹುದು. ದಾರಿಯಲ್ಲಿ ಹೋಗುತ್ತಿದ್ದವರೊಬ್ಬರು ಆಕೆಗೆ, ತನ್ನ ತಾಯಿಯನ್ನು ವೃದ್ಧಾಶ್ರಮದಲ್ಲಿ ಬಿಡುತ್ತಿರುವುದರ ಬಗ್ಗೆ ಆಕೆಯನ್ನು ಪ್ರಶ್ನಿಸಿದಾಗ ಮನೆಯಲ್ಲಿ ಜಾಗವಿಲ್ಲ ಏನು ಮಾಡಲಿ ಎಂದು ಹೇಳುತ್ತಾಳೆ. ಅಷ್ಟರವರೆಗೆ ಮನಸ್ಸನ್ನು ಕಲ್ಲು ಮಾಡಿಕೊಂಡು ಗಟ್ಟಿಯಾಗಿ ನಿಂತಿದ್ದ ಆ ವೃದ್ಧ ತಾಯಿಗೆ ಅಪರಿಚಿತನಿಗೆ ತನ್ನ ಮೇಲೆ ಇರುವ ಕಾಳಜಿ ಹೆತ್ತು ಹೊತ್ತು ಸಾಕಿ ಬೆಳೆಸಿದ ಮಗಳಿಗೆ ಇಲ್ಲವಲ್ಲ ಎಂದೆನಿಸಿತೋ ಏನೂ ಅವರ ಕನ್ನಡಕದ ಒಳಗಿನಿಂದ ಕಣ್ಣ ಹಾನಿಗಳು ಒಂದೇ ಸಮನೆ ಒಸರಲು ಶುರುವಾಗಿದೆ. ಅಲ್ಲಿದ್ದ ಆ ಅಪರಿಚಿತರು ಅಳುವನ್ನು ನಿಲ್ಲಿಸುವಂತೆ ಅವರಿಗೆ ಹೇಳುತ್ತಿದ್ದರು ಮನಸ್ಸು ನಿಯಂತ್ರಣಕ್ಕೆ ಬರುತ್ತಿಲ್ಲ. ಕಾಲದ ಹೊಡೆತಕ್ಕೆ ಸಿಕ್ಕ ಆ ತಾಯಿಯ ಕಣ್ಣೀರು ನದಿಯಂತೆ ಕೆಳಗಿಳಿಯುತ್ತಲೇ ಇತ್ತು.
ಇದನ್ನೂ ಓದಿ: ದುರಸ್ಥಿ ವೇಳೆ ಒಎನ್‌ಜಿಸಿ ತೈಲ ಬಾವಿಗೆ ಬೆಂಕಿ: ಬಾನ್ನೆತ್ತರಕ್ಕೆ ಅಗ್ನಿ ಜ್ವಾಲೆ: ಸ್ಥಳೀಯರ ಸ್ಥಳಾಂತರ
ಆ ಅಪರಿಚಿತ ಆ ತಾಯಿ ಅಳುತ್ತಿದ್ದಾರೆ ಎಂದು ಆ ನಿರ್ದಯಿ ಮಗಳಿಗೆ ಹೇಳಿದರೆ ಆಕೆ ಹೌದು ಅಳುತ್ತಾರೆ ಅಳಲಿ ಎಂದು ಹೇಳುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಈ ವೀಡಿಯೋ ನಮ್ಮ ನಡುವೆ ಸತ್ತು ಹೋಗಿರುವ ಮಾನವೀಯತೆಗೆ ಉದಾಹರಣೆಯಾಗಿದೆ. ಹೆತ್ತು ಹೊತ್ತು ಸಾಕಿ ಬೆಳೆಸಿದ ಜೀವಕ್ಕೊಂದು ಇಳಿವಯಸ್ಸಿನಲ್ಲಿ ಗೌರವದ ಬದುಕು ನೀಡಲು ಸಾಧ್ಯವಾಗದೇ ಹೋದರೆ ಮಕ್ಕಳಾಗಿ ಅದಕ್ಕಿಂತ ದೊಡ್ಡ ದುರಂತ ಬೇರೆ ಏನಿದೆ. ಆ ತಾಯಿಗೆ ಬೇಕಾಗಿದ್ದಿದ್ದು, ಮಲಗುವುದಕ್ಕೆ ಕೆಲ ಅಡಿಗಳ ಜಾಗ ಮೂರು ಹೊತ್ತು ಊಟ. ಆದರೆ ಮನೆ ತುಂಬಾ ಬೇಕಾದ ಬೇಡವಾದ ವಸ್ತುಗಳನ್ನು ಇಟ್ಟುಕೊಳ್ಳುವ ಈ ಮಹಿಳೆಗೆ ಹೆತ್ತು ಹೊತ್ತು ಸಾಕಿದ ತಾಯಿ ಭಾರವಾದಳೇ.. ಎಲ್ಲದಕ್ಕೂ ಕಾಲವೇ ಉತ್ತರ ಹೇಳುತ್ತದೆ. ಕಾಲಚಕ್ರ ತಿರುಗುವಾಗ ತಲೆಗೆ ಸುರಿದ ನೀರು ಕಾಲಿಗೆ ಬೀಳದೇ...
ಇದನ್ನೂ ಓದಿ: ನನಗೆ ಅಪ್ಪ ಬೇಕು, ಅಪ್ಪನ ಜೊತೆ ಇರುವೆ: ಪೋಷಕರ ವಿಚ್ಚೇದನದ ನಂತರ ಗೋಳಾಡಿದ 11 ವರ್ಷದ ಬಾಲಕ
ವೀಡಿಯೋ ನೋಡಿದ ಅನೇಕರು ಭಾವುಕರಾಗಿದ್ದು, ಆಕೆಗಾಗಿ ಪೋಷಕರು ಮಾಡಿದ್ದೆಲ್ಲವನ್ನೂ ಆಕೆಯಿಂದ ವಾಪಸ್ ಪಡೆಯುವಂತೆ ಆಗ್ರಹಿಸಿದ್ದಾರೆ. ಇಂತಹ ಮಗಳು ಯಾರಿಗೂ ಸಿಗದಿರಲಿ ಎಂದು ಇನ್ನೂ ಅನೇಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.


