Elderly parents abandoned by sons: ಉತ್ತರ ಪ್ರದೇಶದ ಇತ್ತಾಹ್‌ನಲ್ಲಿ, ಇಬ್ಬರು ಗಂಡು ಮಕ್ಕಳು ತಮ್ಮ ವೃದ್ಧ ಪೋಷಕರನ್ನು ಜಗಳವಾಡಿ ಮನೆಯಿಂದ ಹೊರಹಾಕಿದ್ದಾರೆ. ನಾಲ್ಕು ದಿನಗಳ ಕಾಲ ಬೀದಿಯಲ್ಲಿ ಹಸಿವಿನಿಂದ ಬಳಲುತ್ತಿದ್ದ ದಂಪತಿಯನ್ನು ಗಮನಿಸಿದ ಪೊಲೀಸರು, ಅವರಿಗೆ ಸಹಾಯ ಮಾಡಿ ಮನೆಗೆ ಸೇರಿಸಿದ್ದಾರೆ.
ಮುದ್ದು ಮಾಡಿ ಬೆಳೆಸಿದ ಮಕ್ಕಳೇ ಮನೆಯಿಂದ ಹೊರ ಹಾಕಿದರು
ಆರ್ಥಿಕ ಸ್ಥಿತಿ ಚೆನ್ನಾಗಿಲ್ಲದೇ ಹೋದರೆ, ಜೊತೆಗೆ ಕೈ ಕೊಡುವ ಆರೋಗ್ಯ ಪ್ರೀತಿ ಮಾಡದ ಮಕ್ಕಳು ಜೊತೆಗಿದ್ದರೆ ವೃದ್ಧಾಪ್ಯವೊಂದು ಶಾಪ. ಅದೇ ರೀತಿ ಇಲ್ಲೊಂದು ವೃದ್ಧ ಪೋಷಕರಿಗೂ ಆಗಿದೆ. ತಾವು ಮುದ್ದು ಮಾಡಿ ಬೆಳೆಸಿ ದೊಡ್ಡವರನ್ನಾಗಿಸಿದ ಮಕ್ಕಳೇ ಇಂದು ಪೋಷಕರ ವಿರುದ್ಧ ತಿರುಗಿ ಬಿದ್ದು, ಅವರನ್ನು ಬೀದಿಗೆ ಅಟ್ಟಿದ್ದಾರೆ. ಮಕ್ಕಳ ವರ್ತನೆಯಿಂದ ಮನನೊಂದ ಪೊಷಕರು ಸ್ವಾಭಿಮಾನಕ್ಕೆ ಅಂಜಿ ಹಾಗೂ ನಾವು ಮಕ್ಕಳ ಬಗ್ಗೆ ದೂರು ಹೇಳಿದರೆ ಎಲ್ಲಿ ಅವರಿಗೆ ಅವಮಾನವಾಗುವುದೋ ಎಂಬ ಭಯದಿಂದ ಈ ವಿಚಾರವನ್ನು ಅಕ್ಕಪಕ್ಕದ ಮನೆಗೂ ತಿಳಿಸಿರಲಿಲ್ಲ, ಆದರೆ 3 -4 ದಿನಗಳ ಕಾಲ ಬೀದಿಯಲ್ಲಿ ಸುತ್ತಾಡಿದ ದಂಪತಿಯನ್ನು ಠಾಣೆಯೊಂದರ ಇನ್ಸ್‌ಪೆಕ್ಟರ್ ಗಮನಿಸಿದ್ದು, ಬಳಿಕ ಅವರನ್ನು ವಿಚಾರಿಸಿದಾಗ ತಮಗೇ ತಮ್ಮ ಮಕ್ಕಳೇ ತಂದ ಸಂಕಟದ ಬಗ್ಗೆ ಹೇಳಿಕೊಂಡಿದ್ದು, ಕಣ್ಣೀರಾಕಿದ್ದಾರೆ. ಇಂತಹ ಮನಕಲುಕುವ ಘಟನೆ ನಡೆದಿದ್ದು, ಉತ್ತರ ಪ್ರದೇಶದ ಇತ್ತಾಹ್‌ನ ಜಲೇಸಾರ್‌ನಲ್ಲಿ.
ಹಸಿವಿನಿಂದ ಅಲೆಯುತ್ತಿದ್ದ ವೃದ್ಧ ದಂಪತಿಗೆ ಪೊಲೀಸರ ನೆರವು
ದಿನವೂ ಈ ದಂಪತಿಯ ಇಬ್ಬರು ಗಂಡು ಮಕ್ಕಳು ತಮ್ಮ ವೃದ್ಧ ಪೋಷಕರ ಜೊತೆ ಜಗಳ ಮಾಡುತ್ತಿದ್ದರು. ಮಕ್ಕಳ ಕಿರಿಕಿರಿ ಹೆಚ್ಚಾಗಿದ್ದರೂ ಅವರಿಗೆ ಅಲ್ಲೇ ಇರುವಂತಹ ಅನಿವಾರ್ಯತೆ ಇತ್ತು. ಈ ಮಧ್ಯೆ 4 ದಿನದ ಮೊದಲು ಈ ದಂಪತಿಯ ಮಕ್ಕಳು ಪೊಷಕರೊಂದಿಗೆ ಜಗಳ ಮಾಡಿ ಅವರನ್ನು ಹೊರಗೆ ಹಾಕಿ ಮನೆಯ ಬಾಗಿಲು ಹಾಕಿ ಹೊರಟು ಹೋಗಿದ್ದು, ಮತ್ತೆ ಮನೆಗೆ ಬಂದಿಲ್ಲ. ಹೀಗಾಗಿ ದಂಪತಿ 4 ದಿನಗಳಿಂದಲೂ ಹಸಿವು ಅವಮಾನದ ನೋವಿನಿಂದ ಬಳಲುತ್ತಿದ್ದರು. ಇದಾದ ನಂತರ ಈ ವಿಚಾರ ಪೊಲೀಸರ ಗಮನಕ್ಕೆ ಬಂದಿದ್ದು, ಪೊಲೀಸರು ಅವರನ್ನು ಮನೆಗೆ ಕರೆದೊಯ್ದು ಬೀಗ ಒಡೆದು ಅವರನ್ನು ಮನೆಯೊಳಗೆ ಕೂರಿಸಿದ್ದಾರೆ. ಜೊತೆಗೆ ಅವರಿಗೆ ಆಹಾರವನ್ನು ತಂದು ನೀಡಿದ್ದಾರೆ.
ಸ್ವಾಭಿಮಾನಕ್ಕೆ ಅಂಜಿ ಅಕ್ಕಪಕ್ಕದ ಮನೆಗೂ ವಿಚಾರ ತಿಳಿಸದ ದಂಪತಿ:
72 ವರ್ಷದ ಹರಿಶಂಕರ್ ಹಾಗೂ 68 ವರ್ಷದ ಕಟೋರಿ ದೇವಿ ಹೀಗೆ ಮಕ್ಕಳಿಂದಲೇ ಸಂಕಷ್ಟಕ್ಕೊಳಗಾದ ದಂಪತಿ. ಜಲೇಸರ್ ಪಟ್ಟಣದ ಮೊಹಲ್ಲಾ ಗಂಜ್‌ನ ನಿವಾಸಿ. ಈ ದಂಪತಿಗೆ ಮೂವರು ಮಕ್ಕಳಿದ್ದಾರೆ. ಸಂಜು, ವಿಷ್ಣು ಹಾಗೂ ಮತ್ತೊಬ್ಬ ಮಗ, ಇವರಲ್ಲಿ ಓರ್ವ ಮಗ ಹಲವು ವರ್ಷಗಳ ಹಿಂದೆಯೇ ಹೆಂಡತಿ ಜೊತೆ ಫಿರೋಜಾಬಾದ್‌ಗೆ ತೆರಳಿ ಪತ್ನಿ ಜೊತೆ ವಾಸ ಮಾಡುತ್ತಿದ್ದ ಇನ್ನಿಬ್ಬರು ಗಂಡು ಮಕ್ಕಳಾದ ಸಂಜು ಹಾಗೂ ವಿಷ್ಣು ಜೊತೆ ಈ ದಂಪತಿ ವಾಸ ಮಾಡ್ತಿದ್ದಾರೆ. ನವೆಂಬರ್ 1 ರಂದು ವಿಷ್ಣು ಹಾಗೂಸಂಜು ಪೋಷಕರೊಂದಿಗೆ ಜಗಳ ಮಾಡಿದ್ದು, ಮನೆಯ ಅಡುಗೆ ಮನೆಗೆ ಹಾಗೂ ಆಹಾರ ಸಾಮಗ್ರಿಗಳಿರುವ ಕೋಣೆಗೆ ಬೀಗ ಹಾಕಿದ್ದಾರೆ. ನಂತರ ಪೋಷಕರನ್ನು ಮನೆಯಿಂದ ಹೊರಗೆ ಹಾಕಿ ಬೀಗ ಹಾಕಿದ್ದಾರೆ.
ಮನೆಯ ಹೊರಗೆ ಯಾವುದೇ ಸೌಲಭ್ಯಗಳಿಲ್ಲದ ಕೋಣೆಯಲ್ಲಿ ದಂಪತಿ ವಾಸ ಮಾಡುತ್ತಿದ್ದರು. ಆದರೆ ಮನಗೆ ಹೀಗೆ ಬೀಗ ಹಾಕಿ ಹೋದ ಮಕ್ಕಳು ಮರಳಿ ಬರುತ್ತಾರೆ ಎಂದು ದಂಪತಿ ಕಾಯುತ್ತಲೇ ಇದ್ದರು. ಆದರೆ ಮಕ್ಕಳು ಹಲವು ದಿನಗಳು ಕಳೆದರು ಅಲ್ಲಿಗೆ ಬರಲಿಲ್ಲ. ಯಾರಿಗಾದರೂ ಹೇಳಿದರೆ ಮಕ್ಕಳಿಗೆ ಅಪಮಾನವಾಗುತ್ತದೆ ಎಂದು ಭಾವಿಸಿ ಪೋಷಕರು ಅಕ್ಕಪಕ್ಕದ ಮನೆಯವರಿಗೂ ಈ ವಿಚಾರ ತಿಳಿಸಿರಲಿಲ್ಲ. ಹಲವು ದಿನಗಳನ್ನು ಹಸಿವಿನಲ್ಲೇ ಕಳೆದ ದಂಪತಿಯನ್ನು ನಂತರ ಪೊಲೀಸರು ಗಮನಿಸಿ ನೆರವು ನೀಡಿದ್ದಾರೆ. ಈಗ ಪೊಲೀಸರೇ ದಂಪತಿಗೆ ಎಲ್ಲಾ ನೆರವು ನೀಡಿದ್ದು, ಕಿರುಕುಳ ನೀಡಿದರೆ ತಮಗೆ ಮಾಹಿತಿ ನೀಡುವಂತೆ ಹೇಳಿದ್ದಾರೆ.
ಇದನ್ನೂ ಓದಿ: ನಿಗೂಢವಾಗಿ ಕಣ್ಮರೆಯಾಗಿದ್ದಳು ಅನುಮಾನವಿತ್ತು: ಟೆರರಿಸ್ಟ್ ವೈದ್ಯೆ ಡಾ. ಶಾಹೀನಾ ಮಾಜಿ ಪತಿ ಹೇಳಿದ್ದೇನು?
ಇದನ್ನೂ ಓದಿ: ಸಿಕ್ ಲೀವ್ ಪಡೆದಿದ್ದಕ್ಕೆ ಕೆಲಸದಿಂದ ವಜಾ: ಕಂಪನಿ ವಿರುದ್ಧ ಕೇಸ್ ದಾಖಲಿಸಿ ಗೆದ್ದ ಉದ್ಯೋಗಿ
