ಪೋಷಕರ ವಿಚ್ಛೇದನದ ಬಳಿಕ 11 ವರ್ಷದ ಬಾಲಕನೊಬ್ಬ ತಾಯಿಯನ್ನು ಬಿಟ್ಟು, ತಂದೆಯೊಂದಿಗೆ ಇರಲು ಗೋಳಾಡಿದ ಹೃದಯವಿದ್ರಾವಕ ವೀಡಿಯೋ ವೈರಲ್ ಆಗಿದೆ. ಈ ಘಟನೆಯು ಪೋಷಕರ ವಿಚ್ಛೇದನದ ನಂತರ ಮಕ್ಕಳ ಕಸ್ಟಡಿ ಹೋರಾಟಗಳ ಸಮಯದಲ್ಲಿ ಮಕ್ಕಳು ಅನುಭವಿಸುವ ನೋವನ್ನು ಎತ್ತಿ ತೋರಿಸುತ್ತದೆ.

ಇತ್ತೀಚೆಗೆ ಗಂಡ ಹೆಂತಿ ಪ್ರತ್ಯೇಕಗೊಂಡುವಿಚ್ಛೇದನ ಪಡೆಯುವುದು ಸಾಮಾನ್ಯ ಎಂಬಂತಾಗಿದೆ. ಆದರೆ ಈ ಪೋಷಕರವಿಚ್ಛೇದನದಿಂದ ನಿಜಕ್ಕೂ ಬಾದೆ ಪಡುವವರು ಮಕ್ಕಳು. ಹೌದು ಅಪ್ಪ ಅಮ್ಮನ ಒಡನಾಟ ಸಿಗದೇ ಮಕ್ಕಳು ನಿಜಕ್ಕೂ ಬಡವಾಗುತ್ತಾರೆ. ವಿಚ್ಛೇದನದ ಸಮಯದಲ್ಲಿ ಪೋಷಕರಿಗೆ ಮಕ್ಕಳ ಕಸ್ಟಡಿಯನ್ನು ನೀಡುವಾಗ 14 ವರ್ಷದೊಳಗಿನ ಮಕ್ಕಳಿದ್ದರೆ ಆ ಮಕ್ಕಳು ತಾಯಿಯ ಕಸ್ಟಡಿಯಲ್ಲಿ ಇರಬೇಕಾಗುತ್ತದೆ. ತಂದೆಗೆ ಮಗುವನ್ನು ಕೇವಲ ಭೇಟಿ ಮಾಡುವ ಅವಕಾಶ ಮಾತ್ರ ಇರುತ್ತದೆ. ಅಂತಹ ಸಂದರ್ಭಗಳಲ್ಲಿ ಮಗುವನ್ನು ಭೇಟಿ ಮಾಡುವುದಕ್ಕೂ ತಾಯಿ ಅವಕಾಶ ನೀಡದೇ ಇರುವಂತಹ ಹಲವು ಘಟನೆಗಳು ನಡೆದಿವೆ. ಈ ವೇಳೆ ಮಕ್ಕಳು ಅಸಹಾಯಕರಾಗುತ್ತಾರೆ.

ಆದರೆ ಇಂತಹ ಕಸ್ಟಡಿ ಸಮಯಲ್ಲಿ ತಾಯಿಯೇ ಮಗುವನ್ನು ಸಾಯಿಸಿದಂತಹ ಹಲವು ಘಟನೆಗಳು ನಡೆದಿದೆ. ಹೀಗಿದ್ದರೂ ನ್ಯಾಯಾಲಯ ಪುಟ್ಟ ಮಕ್ಕಳ ಕಸ್ಟಡಿಯ ಹಕ್ಕನ್ನು ತಾಯಿಗೆ ನೀಡುತ್ತಿದೆ. ಹೀಗಿರುವಾಗ ಇಲ್ಲೊಂದು ಕಡೆ ಪೋಷಕರ ವಿಚ್ಛೇದನದ ನಂತರ 11 ವರ್ಷದ ಬಾಲಕನೋರ್ವ ತನಗೆ ತಂದೆ ಬೇಕು ತಂದೆಯ ಜೊತೆಗೆ ಇರುತ್ತೇನೆ ಎಂದು ಗೋಳಾಡಿ ಆತನ ಹಿಂದೆ ಹೋಗುವುದಕ್ಕೆ ಯತ್ನಿಸಿದ್ದ ವೀಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಪುಟ್ಟ ಬಾಲಕನ ಅಸಹಾಯಕ ಸ್ಥಿತಿ ನೋಡಿ ಅಲ್ಲಿದ್ದ ಜನರು ಭಾವುಕರಾಗಿದ್ದಾರೆ.

ತಾಯಿಯಿಂದ ಪ್ರತ್ಯೇಕಗೊಂಡು ಬರುವ ಮಗು ಅಪ್ಪನನ್ನು ತಬ್ಬಿ ಹಿಡಿದು ತಾನು ನಿನ್ನನ್ನು ಬಿಟ್ಟು ಹೋಗುವುದಿಲ್ಲ ಎಂದು ಅಳುತ್ತಿರುವ ದೃಶ್ಯ ಎಂತಹವರ ಮನವನ್ನು ಕಲಕುವಂತೆ ಮಾಡಿದೆ. ಅಂದಹಾಗೆ ಈ ದೃಶ್ಯ ಸೆರೆ ಆಗಿರುವುದು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಗೊಜಿರಾದಲ್ಲಿ. ಈ ದೃಶ್ಯ ಒಂದು ಉದಾಹರಣೆಯಷ್ಟೇ. ಇಂತಹ ಅನೇಕ ದೃಶ್ಯಗಳು ಪ್ರತಿದಿನವೂ ಭಾರತದ ಹಲವು ಕೌಟುಂಬಿಕ ನ್ಯಾಯಾಲಯಗಳಲ್ಲಿ ಕಾಣುವುದಕ್ಕೆ ಸಿಗುತ್ತದೆ. ವೈರಲ್ ಆದ ವೀಡಿಯೋದಲ್ಲಿ ಅಮ್ಮನ ಪಕ್ಕ ಕುಳಿತಿದ್ದ ಈ ಪುಟ್ಟ ಬಾಲಕ ತನಗೆ ಅಪ್ಪ ಬೇಕು ನಾನು ಆತನ ಜೊತೆಗೆ ವಾಸ ಮಾಡುತ್ತೇನೆ ಎಂದು ಅಪ್ಪನ ಬಳಿಗೆ ಓಡಿ ಆತನನ್ನು ಗಟ್ಟಿಯಾಗಿ ತಬ್ಬಿ ಹಿಡಿದುಕೊಳ್ಳುವುದನ್ನು ನೋಡಬಹುದು.

ಇದನ್ನು ಓದಿ: ಅಮ್ಮ ಮಾಡಿದ 12 ಲಕ್ಷ ಸಾಲವನ್ನು ತೀರಿಸಿದ 17ರ ಹರೆಯದ ಮಗ

Social Keeda ಎಂಬ ಇನ್ಸ್ಟಾ ಪೇಜ್‌ನಿಂದ ಈ ವೀಡಿಯೋವನ್ನು ಪೋಸ್ಟ್ ಮಾಡಲಾಗಿದ್ದು, ಗೋಜ್ರಾ ನ್ಯಾಯಾಲಯದ ಹೊರಗೆ 11 ವರ್ಷದ ಮಗುವೊಂದು ತನ್ನ ಹೆತ್ತವರ ವಿಚ್ಛೇದನದ ನಂತರ ತನ್ನ ತಂದೆಯೊಂದಿಗೆ ಇರಲು ಅಳುತ್ತಾ ಬೇಡಿಕೊಂಡಾಗ ಹೃದಯವಿದ್ರಾವಕ ಕ್ಷಣವೊಂದು ನಡೆಯಿತು. ಭಾವನಾತ್ಮಕ ದೃಶ್ಯವು ನೋಡುಗರನ್ನು ಬೆಚ್ಚಿಬೀಳಿಸಿತು. ಕಸ್ಟಡಿ ಹೋರಾಟಗಳು ಮತ್ತು ಕುಟುಂಬಗಳ ಬೇರ್ಪಡುವಿಕೆಗಳ ಸಮಯದಲ್ಲಿ ಮಕ್ಕಳು ಅನುಭವಿಸುವ ನೋವನ್ನು ಈ ವೀಡಿಯೋ ಎತ್ತಿ ತೋರಿಸಿದೆ ಎಂದು ಬರೆಯಲಾಗಿದೆ.

ಇದನ್ನು ಓದಿ: ಕನ್ನಡ ಮನೆಯಲ್ಲಿ ಮಾತಾಡಿ ಎಂದ ವಾರ್ಡನ್‌ನ ಮನೆಗೆ ಕಳುಹಿಸಿದ ಬೆಂಗಳೂರಿನ ಕಾಲೇಜು

ಈ ವೀಡಿಯೋ ನೋಡಿದ ಅನೇಕರು ಹಲವು ಕಾಮೆಂಟ್ ಮಾಡಿದ್ದಾರೆ. ಯಾರ ಜೊತೆ ಇರಲು ಬಯಸುತ್ತಾನೆ. ಯಾರ ಜೊತೆ ಹೋಗುವುದಕ್ಕೆ ಬಯಸುತ್ತಾನೆ ಎಂಬ ವಿಚಾರವನ್ನು ಬಾಲಕನನ್ನು ಕೇಳಿ ಅವರೊಂದಿಗೆ ಆತನನ್ನು ಹೋಗುವುದಕ್ಕೆ ಬಿಡಿ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮಕ್ಕಳ ಕಾರಣಕ್ಕಾದರೂ ನೀವು ಮತ್ತೆ ಒಂದಾಗಿ ಎಂದು ಒಬ್ಬರು ವೀಡಿಯೋ ನೋಡಿ ಕಾಮೆಂಟ್ ಮಾಡಿದ್ದಾರೆ. ಮಗು ತಂದೆಯೊಂದಿಗೆ ಖುಷಿಯಾಗಿರುವುದಕ್ಕೆ ಬಯಸಿದ್ದಲ್ಲಿ ಆತನನ್ನು ತಂದೆಯ ಜೊತೆಗೆ ಇರುವುದಕ್ಕೆ ಬಿಡಿ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಈ ವೀಡಿಯೋ ಅನೇಕರನ್ನು ಭಾವುಕಗೊಳಿಸಿದ್ದು, ವಿಚ್ಛೇದಿತ ದಂಪತಿಯ ಮಕ್ಕಳು ಅನುಭವಿಸುತ್ತಿರುವ ಮಾನಸಿಕ ತುಮುಲವನ್ನು ಎತ್ತಿ ತೋರಿಸುತ್ತಿದೆ.

ವೀಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ: