ಟರ್ಕಿಯಲ್ಲಿ ನಡೆದ ಮದುವೆಯೊಂದರಲ್ಲಿ, ವರನು ಮದುವೆ ಕೇಕ್‌ನ ರುಚಿ ನೋಡಿದ್ದಕ್ಕೆ ವಧು ಆಕ್ಷೇಪ ವ್ಯಕ್ತಪಡಿಸಿದ್ದಾಳೆ. ಇದರಿಂದ ಕೋಪಗೊಂಡ ವರ, ಕೇಕ್ ಅನ್ನು ಎತ್ತಿ ಎಸೆದಿದ್ದು, ಈ ಘಟನೆಯಿಂದ ಆಘಾತಗೊಂಡ ವಧು ಮದುವೆಯಿಂದ ಹೊರನಡೆದಿದ್ದಾಳೆ. ಈ ನಾಟಕೀಯ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇತ್ತೀಚೆಗೆ ಮದುವೆಗಳಲ್ಲಿ ನಡೆಯುವ ನಾಟಕೀಯ ಬೆಳವಣಿಗೆಗಳು ಆಗಾಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುತ್ತವೆ. ಕೆಲವೊಮ್ಮೆ ಈ ಗಲಾಟೆಗಳಿಗೆ ವಧುವರರ ಸಂಬಂಧಿಕರು ಕಾರಣರಾದರೆ ಮತ್ತೆ ಕೆಲವೊಮ್ಮೆ ಅವರೇ ಕಾರಣರಾಗಿರುತ್ತಾರೆ. ಭಾರತೀಯ ಮದುವೆಗಳಲ್ಲಿ ಊಟ ಚೆನ್ನಾಗಿಲ್ಲ, ರಸಗುಲ್ಲಾ ಸಿಕ್ಕಿಲ್ಲ, ಐಸ್‌ಕ್ರೀಂ ಕೊಟ್ಟಿಲ್ಲ ಎಂಬೆಲ್ಲಾ ಕಾರಣಕ್ಕೆ ಮದುವೆ ಮನೆಯಲ್ಲಿ ವಧುವರರ ಸಂಬಂಧಿಕರು ಹೊಡೆದಾಡಿಕೊಳ್ಳುತ್ತಾರೆ. ಹಾಗೆಯೇ ಕೆಲವೊಂದು ಮದುವೆಗಳು ಅರ್ಧದಲ್ಲೇ ನಿಂತು ಹೋಗುವುದುಂಟು. ವರ ಮದುವೆ ಮನೆಗೆ ಕುಡಿದು ಬಂದ ಲೇಟಾಗಿ ಬಂದ ಅಥವಾ ಹಾರವನ್ನು ವಧುನಿನ ಬದಲು ಇನ್ಯಾರಿಗೋ ಹಾಕಿದ ಎಂಬ ಕಾರಣಕ್ಕೆ ಮದುವೆಗಳು ನಿಂತು ಹೋಗಿವೆ. ಹಾಗೆಯೇ ವಧು ಕೊನೆಕ್ಷಣದಲ್ಲಿ ಮದುವೆ ಬೇಡ ಎಂದಿದ್ದಕ್ಕೆ ಮದುವೆಗಳು ನಿಂತು ಹೋಗಿವೆ. ಆದರೆ ಇಲ್ಲೊಂದು ಕಡೆ ವಿದೇಶದಲ್ಲಿ ವರ ಮದುವೆಗೆ ತಂದ ಕೇಕ್‌ನ ರುಚಿ ನೋಡಿದ ಕಾರಣಕ್ಕೆ ಮದುವೆ ನಿಂತು ಹೋಗಿದೆ.

ಹೌದು ಪಾಶ್ಚಿಮಾತ್ಯ ದೇಶಗಳಲ್ಲಿ ಮದುವೆಗಳಲ್ಲಿ ಕೇಕ್ ವೈನ್ ಮುಂತಾದವುಗಳು ಸಾಮಾನ್ಯವಾಗಿವೆ. ಮದುವೆಗಾಗಿಯೇ ದೊಡ್ಡದಾದ ಕೇಕ್‌ಗಳನ್ನು ತಯಾರಿಸುತ್ತಾರೆ. ಅದೇ ರೀತಿ ಇಲ್ಲೊಂದು ಕಡೆ ಮದುವೆಗಾಗಿ ಸಿದ್ಧಪಡಿಸಿದ ಕೇಕ್‌ ಅನ್ನು ವರನೋರ್ವ ಸಣ್ಣ ಮಕ್ಕಳಂತೆ ಟೇಸ್ಟ್ ನೋಡುವುದಕ್ಕೆ ಹೋಗಿದ್ದಾನೆ. ಒಂದು ಬೆರಳಿನಿಂದ ಕೇಕ್‌ನ್ನು ಒಂದು ಸೈಡ್‌ನಿಂದ ತೆಗೆದುಕೊಂಡು ಬಾಯಿಗೆ ಇಟ್ಟು ರುಚಿ ನೋಡಿದ್ದಾನೆ. ಇದು ವಧುವಿಗೆ ತೀವ್ರ ಮುಜುಗರದ ಜೊತೆ ಇರಿಸುಮುರಿಸು ಉಂಟು ಮಾಡಿದ್ದು, ಆತನ ವರ್ತನೆಗೆ ವಧು ಆಕ್ಷೇಪ ವ್ಯಕ್ತಪಡಿಸಿದ್ದಾಳೆ. ಇದರಿಂದ ಸಿಟ್ಟಿಗೆದ್ದ ವರ ಅಲ್ಲಿದ್ದ ಮದುವೆ ಕೇಕ್‌ ಅನ್ನು ಎತ್ತಿ ದೂರ ಎಸೆದು ಇಡೀ ಕಾರ್ಯಕ್ರಮವನ್ನೇ ತಲೆಕೆಳಗಾಗುವಂತೆ ಮಾಡಿದ್ದಾನೆ. ಈತನ ವರ್ತನೆಯಿಂದ ಆಘಾತಗೊಂಡ ವಧು ಅಲ್ಲಿಂದ ಹೊರಟು ಹೋಗುವುದನ್ನು ವೀಡಿಯೋದಲ್ಲಿ ನೋಡಬಹುದಾಗಿದೆ. ಈ ಘಟನೆ ನಡೆದಿರುವುದು ಟರ್ಕಿಯಲ್ಲಿ.

View post on Instagram

ವೈರಲ್ ಆದ ವೀಡಿಯೋದಲ್ಲಿ ಇಬ್ಬರು ಖುಷಿ ಖುಷಿಯಿಂದ ಡಾನ್ಸ್ ಮಾಡುತ್ತಲೇ ಕೇಕ್ ಮೇಲೆ ಏನನ್ನೋ ಸುರಿಯುತ್ತಾರೆ. ಆದರೆ ಇದಾದ ನಂತರ ವರ ಕೇಕ್‌ನ ಟೇಸ್ಟ್ ನೋಡಿದ್ದು, ಇದಕ್ಕೆ ವಧು ಆಕ್ಷೇಪ ವ್ಯಕ್ತಪಡಿಸಿದ್ದಾಳೆ. ಜಸ್ಟ್ ಏನಿದು ಎಂದು ಆಕೆ ಕೇಳಿದ್ದಷ್ಟೇ, ಅಷ್ಟಕ್ಕೆ ಸಿಟ್ಟುಗೊಂಡ ವರ ಕೇಕ್‌ನ್ನೇ ಎತ್ತಿ ಎಸೆದಿದ್ದು ಮದುವೆ ಸಂಭ್ರಮವನ್ನು ಕೆಲ ನಿಮಿಷದಲ್ಲಿ ಹಾಳು ಮಾಡಿದ್ದಾನೆ.. ಆತನ ವರ್ತನೆಗೆ ಸ್ವತಃ ವಧು ಕೂಡ ಆಘಾತಗೊಂಡಿದ್ದು, ಅಲ್ಲಿಂದ ಹೊರಟು ಹೋಗಿದ್ದಾಳೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದ್ದು, ವೀಡಿಯೋ ನೋಡಿದ ಅನೇಕರು ಆಘಾತ ವ್ಯಕ್ತಪಡಿಸಿ ಹಲವು ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ಯುಗ ಯುಗಗಳೇ ಸಾಗಲಿ ನಮ್ಮ ಪ್ರೇಮ ಶಾಶ್ವತ: ಕೇಕ್ ಜೊತೆ ಮೇಕಪ್ ಸೆಟ್ ನೀಡಿ ಪತ್ನಿಗೆ ಸರ್‌ಫ್ರೈಸ್ ನೀಡಿದ ವೃದ್ಧ

Little Letters Linked ಎಂಬ ಇನ್ಸ್ಟಾಗ್ರಾಮ್ ಪೇಜ್‌ನಿಂದ ಈ ವೀಡಿಯೋ ಪೋಸ್ಟ್ ಮಾಡಲಾಗಿದೆ. ಆಕೆ ಯುವಕನನ್ನು ಅಲ್ಲ 6 ವರ್ಷದ ಬಾಲಕನನ್ನು ಮದುವೆಯಾಗಿದ್ದಾಳೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಅನೇಕರು ಜಸ್ಟ್ ಒಂದು ಮಾತು ಹೇಳಿದ್ದಕ್ಕೆ ಆತ ಕೇಕ್‌ನ್ನು ಮೇಜಿನ ಮೇಲಿಂದ ದೂರ ತಳ್ಳಿ ಎಸೆದಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬಹುಶಃ ಇದು ಅತ್ಯಂತ ಕಡಿಮೆ ಅವಧಿಗೆ ಬಾಳಿದ ಮದುವೆ ಅಂತ ಗಿನ್ನೆಸ್ ಪುಟ ಸೇರಲಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಇದೇ ಕಾರಣಕ್ಕೆ ನನಗೆ ಮದುವೆ ಎಂದರೆ ಭಯ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ಸುಂಟರಗಾಳಿಗೆ ಸಿಲುಕಿದ ವಿಮಾನ: ಸ್ವಲ್ಪದರಲ್ಲಿ ತಪ್ಪಿದ ಅನಾಹುತ: ಭಯಾನಕ ವೀಡಿಯೋ ವೈರಲ್