ನಟಿ ಹಾಗೂ ನೂತನ ನಿರ್ದೇಶಕಿ ವರಲಕ್ಷ್ಮಿ ಶರತ್‌ಕುಮಾರ್, ತಮ್ಮ 'ಎಸ್.ಸರಸ್ವತಿ' ಚಿತ್ರದ ಪ್ರಚಾರದ ವೇಳೆ ಜನಸಂಖ್ಯೆ ಮತ್ತು ಮಕ್ಕಳ ಪಾಲನೆ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಆರ್ಥಿಕ ಶಕ್ತಿಯಿಲ್ಲದೆ ಮಕ್ಕಳನ್ನು ಹೆರುವುದು ತಪ್ಪು ಎಂದಿದ್ದಾರೆ.
ಚೆನ್ನೈ/ಹೈದರಾಬಾದ್ (ಮಾ.14): ಬಹುಭಾಷಾ ನಟಿ ವರಲಕ್ಷ್ಮಿ ಶರತ್‌ಕುಮಾರ್ ಈಗ 'ಎಸ್.ಸರಸ್ವತಿ' ಚಿತ್ರದ ಮೂಲಕ ನಿರ್ದೇಶಕಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಸದ್ಯ ಚಿತ್ರದ ಪ್ರಚಾರ ಕಾರ್ಯಗಳಲ್ಲಿ ಬ್ಯುಸಿಯಾಗಿರುವ ಅವರು, ಸಂದರ್ಶನವೊಂದರಲ್ಲಿ ದೇಶದ ಜನಸಂಖ್ಯೆ ಮತ್ತು ಮಕ್ಕಳ ಪಾಲನೆಗೆ ಸಂಬಂಧಿಸಿದಂತೆ ನೀಡಿರುವ ಹೇಳಿಕೆಗಳು ಸಂಚಲನ ಮೂಡಿಸಿವೆ. ತಾವೇ ನಟಿಸಿ, ನಿರ್ದೇಶಿಸಿ, ನಿರ್ಮಾಣ ಮಾಡಿರುವ ಎಸ್.ಸರಸ್ವತಿ ಸಿನಿಮಾ ಮಾರ್ಚ್ 6 ರಂದು ಬಿಡುಗಡೆಯಾಗಿದೆ.
ಸಂದರ್ಶನದಲ್ಲಿ ಮಾತನಾಡಿದ ವರಲಕ್ಷ್ಮಿ, "ಭಾರತದಲ್ಲಿ ಜನ ಲೈಂಗಿಕತೆ (Sex) ಬಗ್ಗೆ ಮಾತನಾಡಲು ಮುಜುಗರ ಪಡುತ್ತಾರೆ, ಆದರೆ ಫ್ಯಾಕ್ಟರಿಯಂತೆ ಹತ್ತು ಮಕ್ಕಳನ್ನು ಮಾಡಿಕೊಳ್ಳುತ್ತಾರೆ. ಆರ್ಥಿಕವಾಗಿ ಸದೃಢರಾಗುವ ಮುನ್ನವೇ ಮಕ್ಕಳನ್ನು ಮಾಡಿಕೊಂಡು, ನಂತರ ಅವರನ್ನು ಸಾಕಲು ಕಷ್ಟಪಡುತ್ತಾರೆ. ಮಗು ಮಾಡಿಕೊಂಡ ಮೇಲೆ ಜೀವನ ಸಾಗಿಸಲು ಸಾಧ್ಯವೇ ಎಂದು ಮೊದಲೇ ಪ್ಲ್ಯಾನ್ ಮಾಡಬೇಕು. ಮಕ್ಕಳನ್ನು ಹುಟ್ಟಿಸಿ ಬೇರೆಯವರ ಬಳಿ ಭಿಕ್ಷೆ ಬೇಡಬಾರದು" ಎಂದು ನೇರವಾಗಿ ಹೇಳಿದ್ದಾರೆ.
ಸಹಾಯ ಕೇಳುವವರಿಗೆ ವರಲಕ್ಷ್ಮಿ ಪ್ರಶ್ನೆ
ತಮ್ಮ ಬಳಿ ಸಹಾಯ ಕೇಳಿ ಬರುವವರ ಬಗ್ಗೆ ಪ್ರತಿಕ್ರಿಯಿಸಿದ ಅವರು, "ಕೆಲವರು ಚಿಕ್ಕ ಮಗುವನ್ನು ಹಿಡಿದುಕೊಂಡು ಬಂದು ಸಹಾಯ ಮಾಡಿ ಎನ್ನುತ್ತಾರೆ. ಆಗ ನಾನು ಕೇಳುವುದು ಒಂದೇ ಪ್ರಶ್ನೆ- 'ಈ ಮಗುವನ್ನು ನಾನು ಹುಟ್ಟಿಸಿದ್ದಾ? ಇಲ್ಲ ತಾನೇ? ನೀವು ಮಾಡಿಕೊಂಡ ಮಗುವಿಗೆ ನಾನು ಯಾಕೆ ಹೊಣೆಯಾಗಲಿ?' ಎಂದು ಕೇಳುತ್ತೇನೆ. ನನ್ನ ಸಿಬ್ಬಂದಿಗೂ ನಾನು ಇದನ್ನೇ ಹೇಳುತ್ತೇನೆ. ಮದುವೆಯಾಗಿ, ಆದರೆ ಮಕ್ಕಳನ್ನು ಸಾಕುವ ಶಕ್ತಿ ಇದ್ದರೆ ಮಾತ್ರ ಮಗು ಮಾಡಿಕೊಳ್ಳಿ ಎಂದು ಎಚ್ಚರಿಸುತ್ತೇನೆ" ಎಂದಿದ್ದಾರೆ.
ಎಮೋಷನಲ್ ಬ್ಲ್ಯಾಕ್‌ಮೇಲ್‌ಗೆ ಬಲಿಯಾಗಬೇಡಿ
ಕುಟುಂಬದ ಹಿರಿಯರ ಒತ್ತಾಯಕ್ಕೆ ಮಣಿದು ಮಗು ಮಾಡಿಕೊಳ್ಳುವವರ ಬಗ್ಗೆಯೂ ವರಲಕ್ಷ್ಮಿ ಮಾತನಾಡಿದ್ದಾರೆ. "ಅಜ್ಜಿ ಸಾಯುತ್ತಾರೆ, ತಾತ ಮೊಮ್ಮಗನನ್ನು ನೋಡಬೇಕು ಎನ್ನುವ ಕಾರಣಕ್ಕೆ ಮಗು ಮಾಡಿಕೊಳ್ಳುವುದು ತಪ್ಪು. ಪ್ರತಿಯೊಬ್ಬರೂ ಒಂದು ದಿನ ಸಾಯಲೇಬೇಕು. ಎಮೋಷನಲ್ ಬ್ಲ್ಯಾಕ್‌ಮೇಲ್‌ಗೆ ಮಣಿಯದೆ, ಜೀವನದ ಬಗ್ಗೆ ಸರಿಯಾದ ನಿರ್ಧಾರ ತೆಗೆದುಕೊಳ್ಳುವುದು ನಿಮ್ಮ ಕೈಯಲ್ಲಿದೆ" ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಕನ್ನಡದಲ್ಲಿ ಸುದೀಪ್ ಅಭಿನಯದ 'ಮಾಣಿಕ್ಯ' ಮತ್ತು 'ಮ್ಯಾಕ್ಸ್' ಚಿತ್ರಗಳಲ್ಲಿ ನಟಿಸಿರುವ ವರಲಕ್ಷ್ಮಿ, ಎರಡು ವರ್ಷಗಳ ಹಿಂದೆ ನಿಕೊಲೈ ಸಚ್‌ದೇವ್ ಅವರನ್ನು ವಿವಾಹವಾಗಿದ್ದರು. ಇದೀಗ ಇವರ ಈ ವೈಚಾರಿಕ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಚರ್ಚೆಗಳು ನಡೆಯುತ್ತಿವೆ.


