ಟರ್ಕಿಯ ಇಸ್ತಾಂಬುಲ್‌ನಲ್ಲಿ ಪ್ರಬಲ ಸುಂಟರಗಾಳಿಗೆ ಸಿಲುಕಿದ ಪೆಗಸಾಸ್ ವಿಮಾನವೊಂದು ಲ್ಯಾಂಡಿಂಗ್ ವೇಳೆ ಅಪಾಯಕ್ಕೆ ಸಿಲುಕಿತ್ತು. ಆದರೆ, ಪೈಲಟ್‌ನ ಚಾಣಾಕ್ಷತನದಿಂದ ವಿಮಾನವು ಕೂದಲೆಳೆ ಅಂತರದಲ್ಲಿ ಅನಾಹುತದಿಂದ ಪಾರಾಗಿ, ಸುರಕ್ಷಿತವಾಗಿ ಮತ್ತೆ ಟೇಕಾಫ್ ಆಗಿದೆ.
ಟರ್ಕಿಯ ಇಸ್ತಾಂಬುಲ್‌ನಲ್ಲಿ ಸಂಭವಿಸಿದ ಭಾರಿ ಸುಂಟರಗಾಳಿಗೆ ವಿಮಾನವೊಂದು ಸಿಲುಕಿ ಸ್ವಲ್ಪದರಲ್ಲೇ ಅನಾಹುತದಿಂದ ಪಾರಾದಂತಹ ಘಟನೆ ನಡೆದಿದ್ದು, ಈ ಆಘಾತಕಾರಿ ಘಟನೆಯ ದೃಶ್ಯಗಳು ಈಗ ಕ್ಯಾಮರಾದಲ್ಲಿ ಸೆರೆಯಾಗಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಟರ್ಕಿಯ ಇಸ್ತಾಂಬುಲ್‌ನಲ್ಲಿ ಕಂಡು ಬಂದು ಈ ಸುಂಟರಗಾಳಿಯಿಂದ ಅಲ್ಲಿನ ಜನಜೀವನ ಏರುಪೇರಾಗಿದೆ. ಗುರುವಾರ ಇಸ್ತಾನ್‌ಬುಲ್‌ಗೆ ಪ್ರಬಲವಾದ ಚಂಡಮಾರುತ ಅಪ್ಪಳಿಸಿತ್ತು. ಇದರಿಂದ ಉಂಟಾದ ಬಲವಾದ ಗಾಳಿ ಹಾಗೂ ಎತ್ತರದ ಅಲೆಗಳು ಸಮುದ್ರ ಸಾರಿಗೆಗೆ ವ್ಯಾಪಕ ಅಡಚಣೆ ಉಂಟು ಮಾಡಿದ್ದಲ್ಲದೇ ಪಶ್ಚಿಮ ಟರ್ಕಿಯಾದ್ಯಂತ ಹಲವಾರು ಪ್ರಾಂತ್ಯಗಳ ಮೇಲೂ ಇದು ಪರಿಣಾಮ ಬೀರಿದೆ.
ಇದನ್ನೂ ಓದಿ: ಸ್ಯಾನಿಟರಿ ಪ್ಯಾಡ್ ಜೊತೆಗೆ ಉಚಿತ ಕಪ್ ನೀಡುವುದಕ್ಕೆ ರಾಜ್ಯ ಸರ್ಕಾರ ನಿರ್ಧಾರ
ಈ ಸುಂಟರಗಾಳಿ ಹಾಗೂ ಚಂಡಮಾರುತಕ್ಕೆ ಸಿಲುಕಿ ಏರುಪೇರಾದಂತಹ ದೃಶ್ಯಗಳ ಹಲವು ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಅಂತಹ ಒಂದು ದೃಶ್ಯಾವಳಿಯಲ್ಲಿ ಪೆಗಸಾಸ್ ವಿಮಾನವೊಂದು ಲ್ಯಾಂಡಿಂಗ್‌ಗೆ ಅಂತ ಕೆಳಗೆವರೆಗೆ ಬಂದರೂ ಈ ಪ್ರಬಲವಾದ ಸುಂಟರಗಾಳಿಗೆ ಸಿಲುಕಿ ಲ್ಯಾಂಡಿಂಗ್ ಮಾಡಲಾಗದೇ ಅತ್ತಿತ್ತ ತರಗೆಲೆಯಂತೆ ವಾಲುತ್ತಲೇ ವಾಪಸ್ ಟೇಕಾಫ್ ಆಗಿ ಮೇಲೇರುತ್ತಿರುವ ದೃಶ್ಯ ಈಗ ಕ್ಯಾಮರಾದಲ್ಲಿ ಸೆರೆಯಾಗಿದ್ದು ನೋಡುಗರನ್ನು ಭಯಭೀತಿಗೊಳಿಸಿದೆ. ವೈರಲ್ ಆದ ವೀಡಿಯೋದಲ್ಲಿ ವಿಮಾನ ಒಂದು ಕ್ಷಣ ಬ್ಯಾಲೆನ್ಸ್ ಕಳೆದುಕೊಂಡಂತೆ ವಾಲುವುದನ್ನು ಕೂಡ ಕಾಣಬಹುದು. ಆದರೆ ಪೈಲಟ್‌ನ ಚಾಣಾಕ್ಷತನದಿಂದಾಗಿ ವಿಮಾನವೂ ಕೂದಲೆಳೆ ಅಂತರದಲ್ಲಿ ಅನಾಹುತದಿಂದ ಪಾರಾಗಿದೆ.
ಇದನ್ನೂ ಓದಿ: ಪತ್ನಿ ಇಬ್ಬರು ಮುದ್ದಾದ ಮಕ್ಕಳಿಗೆ ಗುಂಡಿಕ್ಕಿ ತಾನು ಸಾವಿಗೆ ಶರಣಾದ ಬಿಲ್ಡರ್: ಮನೆಕೆಲಸದಾಕೆ ಬಂದಾಗ ಪ್ರಕರಣ ಬೆಳಕಿಗೆ
ಮತ್ತೊಂದು ವೀಡಿಯೊದಲ್ಲಿ ಬಲವಾದ ಗಾಳಿಯು ಅಲ್ಲಿನ ಸಮುದ್ರ ತೀರದಲ್ಲಿ ಕೋಲಾಹಲವೆಬ್ಬಿಸಿ ದೋಣಿಗಳನ್ನು ತೀವ್ರವಾಗಿ ಅಲುಗಾಡಿಸಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಹವಾಮಾನ ವೈಪರೀತ್ಯಕ್ಕೆ ಸಂಬಂಧಿಸಿದಂತೆ ಟರ್ಕಿಶ್ ರಾಜ್ಯ ಹವಾಮಾನ ಸೇವೆಯು ಎಚ್ಚರಿಕೆ ನೀಡಿತ್ತು. ಹವಾಮಾನ ಇಲಾಖೆಯ ಎಚ್ಚರಿಕೆಯ ಹಿನ್ನೆಲೆ, ಬೆಳಗ್ಗೆ ಇಸ್ತಾಂಬುಲ್‌ನಲ್ಲಿ ಬಿರುಗಾಳಿ ಬೀಸಲು ಪ್ರಾರಂಭಿಸಿತು ಮತ್ತು ಬಾಸ್ಫರಸ್ ಮತ್ತು ಮರ್ಮರ ಸಮುದ್ರದ ಮೇಲೆ ಈ ಗಾಳಿ ತೀವ್ರಗೊಂಡಿತು ಎಂದು ಹುರಿಯತ್ ಡೈಲಿ ನ್ಯೂಸ್ ವರದಿ ಮಾಡಿದೆ. ಟರ್ಕಿಯ ಬೆಸಿಕ್ಟಾಸ್‌ನಲ್ಲಿ ದೊಡ್ಡ ಅಲೆಗಳು ತೀರಕ್ಕೆ ಅಪ್ಪಳಿಸಿ ಕರಾವಳಿಯುದ್ದಕ್ಕೂ ಅಪಾಯಕಾರಿ ಸ್ಥಿತಿಗಳನ್ನು ಸೃಷ್ಟಿಸಿವೆ. ಅಪಾಯಕಾರಿ ಸಮುದ್ರ ಸ್ಥಿತಿಯಿಂದಾಗಿ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದ್ದು, ಸಮುದ್ರ ಕಾರ್ಯಾಚರಣೆಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ.


