ಮೊದಲ ರ‍್ಯಾಪಿಡೋ ರೈಡ್‌ನಲ್ಲೇ ಏಕ್ತಾ ಕೌಶಲ್ಯ ಅವರಿಗೆ ಪಾರ್ಥ್ ಚಮಾರಿಯಾ ಪರಿಚಯವಾಗಿದ್ದರು. ರಾಷ್ಟ್ರೀಯ ಮಟ್ಟದ ಕ್ರೀಡಾಪಟುವಾಗಿದ್ದ ಪಾರ್ಥ್ ಆರ್ಥಿಕ ಸಮಸ್ಯೆಯಿಂದ ರ‍್ಯಾಪಿಡೋ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಈ ಪರಿಚಯ ಪ್ರೀತಿಯಾಗಿ ಬದಲಾಗಿದ್ದು, ಇಂದು ಇಬ್ಬರೂ ಪರಸ್ಪರರ ವೃತ್ತಿಜೀವನದ ಕನಸುಗಳಿಗೆ ಬೆಂಬಲವಾಗಿ ನಿಂತಿದ್ದಾರೆ. ಇವರ ಪ್ರೇಮಕಥೆ ಈಗ ವೈರಲ್ ಆಗಿದೆ.

ಮೊದಲ ರ‍್ಯಾಪಿಡೋ ರೈಡ್‌ನಲ್ಲೇ ಸಿಕ್ಕ ಪ್ರೀತಿ: ಬಾಲಿವುಡ್ ನೃತ್ಯ ಸಂಯೋಜಕಿ ಮತ್ತು ರಾಷ್ಟ್ರೀಯ ಕ್ರೀಡಾಪಟುವಿನ ಲವ್ ಸ್ಟೋರಿ!

ಒಂದು ಸಾಮಾನ್ಯ ರೈಡ್‌ನಲ್ಲಿ ಶುರುವಾದ ಪ್ರೇಮಕಥೆ!

ಕೆಲವೊಮ್ಮೆ ಜೀವನದಲ್ಲಿ ನಡೆಯುವ ಸಾಮಾನ್ಯ ಘಟನೆಗಳೇ ಮರೆಯಲಾಗದ ನೆನಪುಗಳಾಗಿ ಉಳಿಯುತ್ತವೆ. ಅದರಲ್ಲೂ ಅನಿರೀಕ್ಷಿತವಾಗಿ ಸಿಗುವ ವ್ಯಕ್ತಿಯೊಬ್ಬರು ನಮ್ಮ ಬದುಕಿನ ಭಾಗವಾಗಬಹುದು. ಇದಕ್ಕೆ ಉತ್ತಮ ಉದಾಹರಣೆ ಏಕ್ತಾ ಕೌಶಲ್ಯ ಮತ್ತು ಪಾರ್ಥ್ ಚಮಾರಿಯಾ ಅವರ ಪ್ರೇಮಕಥೆ. ಮೊದಲ ಬಾರಿಗೆ ರ‍್ಯಾಪಿಡೋ ಬೈಕ್ ಬುಕ್ ಮಾಡಿದ್ದ ಯುವತಿಗೆ ಅದೇ ಪ್ರಯಾಣದಲ್ಲಿ ತನ್ನ ಜೀವನ ಸಂಗಾತಿಯಾಗಲಿರುವ ವ್ಯಕ್ತಿಯ ಪರಿಚಯವಾಗಿತ್ತು. ಇದೀಗ ಈ ಜೋಡಿಯ ಪ್ರೇಮಕಥೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ರ‍್ಯಾಪಿಡೋ ಚಾಲಕನಾಗಿದ್ದ ಪಾರ್ಥ್ ಹಿನ್ನೆಲೆ ಏನು?

ಏಕ್ತಾ ಕೌಶಲ್ಯ ತಮ್ಮ ಮೊದಲ ರ‍್ಯಾಪಿಡೋ ರೈಡ್ ಬುಕ್ ಮಾಡಿದಾಗ ಅವರನ್ನು ಕರೆದುಕೊಂಡು ಹೋಗಲು ಬಂದಿದ್ದು ಪಾರ್ಥ್ ಚಮಾರಿಯಾ. ಆರಂಭದಲ್ಲಿ ಇಬ್ಬರ ನಡುವೆ ಸಾಮಾನ್ಯ ಮಾತುಕತೆ ಶುರುವಾಯಿತು. ಆದರೆ ಮಾತನಾಡುತ್ತಾ ಹೋದಂತೆ ಪಾರ್ಥ್ ಕೇವಲ ರ‍್ಯಾಪಿಡೋ ಚಾಲಕನಲ್ಲ, ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಕ್ರೀಡಾಪಟು ಎಂಬ ವಿಚಾರ ಎಕ್ತಾಗೆ ತಿಳಿಯಿತು.

ಕ್ರೀಡೆಯಲ್ಲಿ ಸಾಧನೆ ಮಾಡುವ ಕನಸು ಹೊಂದಿದ್ದ ಪಾರ್ಥ್ ಆರ್ಥಿಕ ಸಮಸ್ಯೆಗಳಿಂದಾಗಿ ರ‍್ಯಾಪಿಡೋದಲ್ಲಿ ಕೆಲಸ ಮಾಡುತ್ತಿದ್ದರು. ತಮ್ಮ ಕ್ರೀಡಾ ಅಭ್ಯಾಸ ಮತ್ತು ಇತರ ಖರ್ಚುಗಳನ್ನು ನಿಭಾಯಿಸಲು ಈ ಕೆಲಸವನ್ನು ಆಯ್ಕೆ ಮಾಡಿಕೊಂಡಿದ್ದರು. ಅವರ ಪರಿಶ್ರಮ, ಆತ್ಮವಿಶ್ವಾಸ ಮತ್ತು ಕ್ರೀಡೆಯ ಮೇಲಿನ ಆಸಕ್ತಿ ಏಕ್ತಾ ಅವರಿಗೆ ಇಷ್ಟವಾಗಿತ್ತು.

ಮೊದಲ ಭೇಟಿಯ ನಂತರ ಶುರುವಾಯಿತು ಪ್ರೀತಿ!

ಮೊದಲ ಭೇಟಿಯ ನಂತರ ಏಕ್ತಾ ಅವರಿಗೆ ಪಾರ್ಥ್ ನೆನಪು ಕಾಡತೊಡಗಿತು. ಹೀಗಾಗಿ ಅದೇ ರಾತ್ರಿ ಧೈರ್ಯ ಮಾಡಿ ಅವರಿಗೆ ಮೆಸೇಜ್ ಮಾಡಿದರು. ಅಲ್ಲಿಂದ ಇಬ್ಬರ ನಡುವೆ ಮಾತುಕತೆ ಹೆಚ್ಚಾಗಿ, ಭೇಟಿಗಳು ಮುಂದುವರಿದವು. ಪಾರ್ಥ್ ಅವರ ತರಬೇತಿ ಮತ್ತು ಎಕ್ತಾ ಅವರ ನೃತ್ಯ ಅಭ್ಯಾಸದ ನಡುವೆಯೇ ಇಬ್ಬರೂ ಒಬ್ಬರಿಗೊಬ್ಬರು ಸಮಯ ನೀಡುತ್ತಿದ್ದರು.

ಇಬ್ಬರ ಕನಸಿಗೂ ಪರಸ್ಪರ ಬೆಂಬಲ

ಏಕ್ತಾ ಕೌಶಲ್ಯ ನೃತ್ಯ ಸಂಯೋಜಕಿಯಾಗಿ ತಮ್ಮ ವೃತ್ತಿಜೀವನದಲ್ಲಿ ಬೆಳೆಯುತ್ತಿದ್ದರು. ಬಾಲಿವುಡ್ ನಟ ರಣವೀರ್ ಸಿಂಗ್ ಅವರೊಂದಿಗೆ ನೃತ್ಯ ಮಾಡುವ ಅವಕಾಶವೂ ಅವರಿಗೆ ದೊರಕಿತ್ತು. ಮತ್ತೊಂದೆಡೆ, ಪಾರ್ಥ್ ತಮ್ಮ ಕ್ರೀಡಾ ಕನಸನ್ನು ನನಸಾಗಿಸಲು ನಿರಂತರ ಪರಿಶ್ರಮ ಮುಂದುವರಿಸಿದ್ದರು. ಕಳೆದ ವರ್ಷ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ಅವಕಾಶವೂ ಅವರಿಗೆ ಸಿಕ್ಕಿತ್ತು.

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಜೋಡಿ

ಇವರ ಸುಂದರ ಪ್ರೇಮಕಥೆಯನ್ನು 'People of India' ಇನ್‌ಸ್ಟಾಗ್ರಾಂ ಪುಟ ಹಂಚಿಕೊಂಡಿದೆ. ಸಾಮಾನ್ಯ ಬೈಕ್ ಪ್ರಯಾಣದಿಂದ ಆರಂಭವಾದ ಪರಿಚಯ, ಪ್ರೀತಿ ಮತ್ತು ಪರಸ್ಪರ ಬೆಂಬಲದ ಸಂಬಂಧವಾಗಿ ಬೆಳೆದಿರುವುದು ನೆಟ್ಟಿಗರ ಗಮನ ಸೆಳೆದಿದೆ. ಇಬ್ಬರೂ ತಮ್ಮ ಕನಸುಗಳನ್ನು ಬೆನ್ನಟ್ಟುತ್ತಾ ಒಬ್ಬರಿಗೊಬ್ಬರು ಬೆಂಬಲವಾಗಿ ನಿಂತಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

View post on Instagram