ಅಮ್ಮನ ಬೈಗುಳ ಇಷ್ಟವಾಗಬೇಕೆಂದರೆ ಮದುವೆಯಾಗಬೇಕು!
ಮದುವೆಗೆ ಮುನ್ನ ಅಮ್ಮನ ಬೈಗುಳಕ್ಕೆ ಸಿಟ್ಟಾಗುವ ಮಗಳು, ಮದುವೆ ಬಳಿಕ ಅವುಗಳನ್ನು ಮಿಸ್ ಮಾಡಿಕೊಳ್ಳಲಾರಂಭಿಸುತ್ತಾಳೆ. ಪ್ರತಿ ಕೆಲಸ ಮಾಡುವಾಗಲೂ ಅಮ್ಮನ ಮಾತನ್ನು ಮೆಲುಕು ಹಾಕುತ್ತ ತಾನೇ ಅಮ್ಮನಾಗುತ್ತಾಳೆ. ಸಂಸಾರದ ಜವಾಬ್ದಾರಿಗಳಿಗೆ ಹೆಗಲಾಗುತ್ತಾಳೆ.
ಮದುವೆ ಎಂಬ ಮೂರಕ್ಷರ ಹೆಣ್ಣಿನ ಬದುಕನ್ನು ಅದೆಷ್ಟು ಬದಲಿಸಿಬಿಡುತ್ತದೆ ಅಲ್ಲವೆ? ಇದು ನಾನೇನಾ ಎಂಬ ಪ್ರಶ್ನೆಯನ್ನು ನನಗೆ ನಾನೇ ಅದೆಷ್ಟು ಬಾರಿ ಕೇಳಿಕೊಂಡಿದ್ದೆನೋ ಗೊತ್ತಿಲ್ಲ. ಅಲಾರಂ ಸದ್ದಿಗೆ ಭಾರವಾದ ಕಣ್ರೆಪ್ಪೆಗಳನ್ನು ಕಷ್ಟಪಟ್ಟು ಬಿಡಿಸಿಕೊಂಡು ಗಡಿಬಿಡಿಯಿಂದ ದಿನಚರಿ ಪ್ರಾರಂಭಿಸುವಾಗ ಅಮ್ಮನ ನೆನಪಾಗದೇ ಇರದು. ಮದುವೆಗೂ ಮುನ್ನ ಬೆಳಗ್ಗೆ ಸೂರ್ಯ ನೆತ್ತಿ ಮೇಲೆ ಬಂದರೂ ಅದೆಷ್ಟು ಸುಖವಾಗಿ ನಿದ್ರಿಸುತ್ತಿದ್ದೆ ನಾನು.
ಅಮ್ಮ ಅದೆಷ್ಟೇ ಕೂಗಿ ಕರೆದರೂ, ಬೈದರೂ ಅದಕ್ಕೂ ನನಗೂ ಸಂಬಂಧವೇ ಇಲ್ಲ ಎಂಬಂತೆ ಹೊದಿಕೆಯನ್ನು ಇನ್ನಷ್ಟು ಬಿಗಿಯಾಗಿ ಹೊದ್ದು ಮಲಗುತ್ತಿದ್ದ ನಾನು, ಇಂದು ಅದೆಷ್ಟು ಕೆಲಸಗಳ ಹೊರೆಯನ್ನು ಹೆಗಲ ಮೇಲೇರಿಸಿಕೊಂಡಿದ್ದೇನೆ ಎಂದು ಯೋಚಿಸಿದರೆ ಅಚ್ಚರಿಯಾಗುತ್ತದೆ. ‘ಸೂರ್ಯ ನೆತ್ತಿಮೇಲೆ ಬರುವ ತನಕ ಮಲಗಿರುತ್ತೀಯ. ಗಂಡನ ಮನೆಗೆ ಹೋದ ಮೇಲೆನೇ ನಿನಗೆ ಬುದ್ಧಿ ಬರುವುದು’ ಎಂಬ ಅಮ್ಮನ ಬೈಗುಳದ ಹಿಂದಿನ ಕಾಳಜಿ ಅಂದು ಅರ್ಥವಾಗಿರಲಿಲ್ಲ. ಆದರೆ, ಈಗ ಅರ್ಥವಾಗುತ್ತಿದೆ.
ಮಕ್ಕಳಿಗೆ ಶಿಸ್ತಿನ ಪಾಠ ಮಾಡದಿದ್ದರೆ ನಷ್ಟ ಯಾರಿಗೆ?
ಇನ್ನು ಮದುವೆ ಗೊತ್ತಾದ ತಕ್ಷಣ ಅಮ್ಮ ಸಂಸಾರ, ಹೊಂದಾಣಿಕೆ ಎಂದು ಅದೆಷ್ಟು ವಿಚಾರಗಳ ಬಗ್ಗೆ ಗಿಳಿ ಪಾಠ ಮಾಡಿಲ್ಲ? ಆದರೆ, ಮದುವೆಯಾಗುವ ಸಂಭ್ರಮದಲ್ಲಿ ಆ ಮಾತುಗಳೆಲ್ಲ ನನ್ನ ಕಿವಿಯೊಳಗಿಳಿದು ಮನಸ್ಸನ್ನು ತಲುಪೇ ಇಲ್ಲ. ‘ಅಯ್ಯೋ ಅಮ್ಮ, ಇದೆಲ್ಲ ನಿನ್ನ ಕಾಲದಲ್ಲಾಯಿತು. ಈಗ ಎಲ್ಲ ಬದಲಾಗಿದೆ. ನೀನು ಅಪ್ಪ ಹೇಳಿದ ಎಲ್ಲ ಮಾತಿಗೆ ತಲೆಯಾಡಿಸುವಂತೆ ನಾನು ಮಾಡಲ್ಲಪ್ಪ’ ಎಂದು ಜಂಭದಿಂದಲೇ ಜವಾಬು ಕೊಟ್ಟಿದ್ದೆ.
ನಿಮಗೆ ಅಣ್ಣ ಇದ್ರೆ ಖಂಡಿತಾ ಈ ಅನುಭವಗಳಾಗಿರುತ್ತವೆ
ಆದರೆ, ‘ನಾನು ನಿನ್ನಂತೆ ಆಗಲ್ಲ’ ಎಂಬ ಮಾತು ಮಾತ್ರ ನಿಜವಾಗಲೇ ಇಲ್ಲ ನೋಡಿ. ಅಮ್ಮನಂತೆ ಅಪ್ಪ ಹೇಳಿದ ತಕ್ಷಣ ತಲೆಯಾಡಿಸದಿದ್ದರೂ ಒಂದಿಷ್ಟು ಜಗಳ,ಕಿತ್ತಾಟ ಮಾಡಿಯಾದ ಬಳಿಕ ಗಂಡ ಹೇಳಿದ ಹಾದಿಯಲ್ಲೇ ಅಮ್ಮನಂತೆ ನಾನೂ ನಡೆಯುತ್ತೇನೆ ಅಮ್ಮ ಅಡುಗೆಮನೆಯಲ್ಲಿ ಸೀರೆ ಸೆರಗಿನಿಂದ ಕಣ್ಣು, ಮೂಗು ಒರೆಸಿಕೊಳ್ಳುತ್ತಿರುವಾಗ ಅದೆಷ್ಟು ಬಾರಿ ಅವಳನ್ನು ನೋಡಿ ಮುಸಿ ಮುಸಿ ನಕ್ಕಿದ್ದೇನೋ ಗೊತ್ತಿಲ್ಲ. ಅಪ್ಪ ಹೇಳಿದ ಚಿಕ್ಕಪುಟ್ಟ ಮಾತಿಗೆ ಅಮ್ಮ ಅದೇಕೆ ಇಷ್ಟೊಂದು ಬೇಜಾರು ಮಾಡಿಕೊಳ್ಳತ್ತಲ್ಲಪ್ಪ ಎಂದು ಅಮ್ಮನನ್ನೇ ವಿಚಿತ್ರವಾಗಿ ನೋಡುತ್ತಿದ್ದ ನಾನು, ಇಂದು ನನ್ನ ಮನೆಯ ಅಡುಗೆಮನೆಯಲ್ಲೂ ಆಗಾಗ ಕಣ್ಣೊರೆಸಿಕೊಳ್ಳುತ್ತೇನೆ. ಸೀರೆಯ ಸೆರಗಿನಿಂದಲ್ಲ, ಟಿಶ್ಯೂನಿಂದ ಅಷ್ಟೆ. ಅಂದು ಅರ್ಥವಾಗದ ಅಮ್ಮನ ಕಣ್ಣ ಹನಿಗಳ ಬೆಲೆ ಇಂದು ಅರ್ಥವಾಗುತ್ತಿದೆ. ಎಷ್ಟಾದರೂ ಹೆಣ್ಣು ಸಂಸಾರದ ಕಣ್ಣಲ್ಲವೆ? ಹೀಗಾಗಿಯೇ ಇರಬೇಕು ಆಕೆ ಅದೆಷ್ಟೇ ವಿದ್ಯಾವಂತಳಾಗಿದ್ದರೂ ಉನ್ನತ ಹುದ್ದೆಯಲ್ಲಿದ್ದರೂ ಸಂಸಾರದಲ್ಲಿ ಏನೇ ಏರುಪೇರಾದರೂ ಅವಳ ಕಣ್ಣುಗಳಿಂದಲೇ ಹನಿಗಳು ಉದುರುತ್ತವೆ.
ಮ್ಯಾಜಿಕ್ ಮೊಮೆಂಟ್: ಅಮ್ಮನಿಗೆ ಕೊಟ್ಟಮೊದಲ ಉಡುಗೊರೆ!
ಕಾಲೇಜಿಗೆ ಹೋಗುವ ದಿನಗಳಲ್ಲಿ ಸಂಜೆ ಬೇಗ ಮನೆಗೆ ಬಾ, ಸ್ನೇಹಿತರೊಂದಿಗೆ ಅಲ್ಲಿಗೆ ಹೋಗಬೇಡ, ಇಲ್ಲಿಗೆ ಹೊಗಬೇಡ ಎಂದೆಲ್ಲ ಅಮ್ಮ ಬುದ್ಧಿಮಾತು ಹೇಳುವಾಗ ಪಿತ್ತ ನೆತ್ತಿಗೇರುತ್ತಿತ್ತು. ಆದರೆ, ಇಂದು ನನ್ನದೇ 4 ವರ್ಷದ ಮಗಳನ್ನು ಸ್ಕೂಲಿಗೆ ಕಲಿಸುವಾಗ ನನ್ನೆದೆಯಲ್ಲಿ ಅದೆಷ್ಟು ತಳಮಳ. ಅಂದು ಅಮ್ಮನೂ ಅದೇ ತಳಮಳದಲ್ಲಿ ನನಗೆ ಬುದ್ಧಿಮಾತು ಹೇಳುತ್ತಿದ್ದಳು ಎಂಬುದು ಈಗ ಅರ್ಥವಾಗುತ್ತಿದೆ. ಹೀಗೆ ಪ್ರತಿ ಕೆಲಸ ಮಾಡುವಾಗಲೂ, ಮನಸ್ಸಿಗೆ ಬೇಸರವಾದಾಗ ಖುಷಿಯಾದಾಗ, ಕೋಪ ಬಂದಾಗ ಅಮ್ಮ ನೆನಪಾಗುತ್ತಾಳೆ. ಮಗಳು ಅಮ್ಮನಾಗುವುದು ಹೀಗೇ ಅಲ್ಲವೆ?