ಮಕ್ಕಳಿಗೆ ಶಿಸ್ತಿನ ಪಾಠ ಮಾಡದಿದ್ದರೆ ನಷ್ಟ ಯಾರಿಗೆ?

ಸೋಫಾ ತುಂಬಾ ಹರಡಿರುವ ಆಟಿಕೆಗಳು, ನೆಲದ ಮೇಲೆಲ್ಲ ಕಾಗದದ ಚೂರುಗಳು, ಅರ್ಧತಿಂದು ಎಸೆದ ಬಿಸ್ಕೆಟ್ಟುಗಳು, ಹಣ್ಣಿನ ಚೂರುಗಳು. ಸ್ವಲ್ಪ ಮುಂದೆ ಹೋದರೆ ದಿವಾನ್ ಕಾಟ್ ಮೇಲೆ ಸ್ಕೂಲ್ ಬ್ಯಾಗ್ , ಅದರ ಪಕ್ಕದಲ್ಲೇ ಅನಾಥವಾಗಿ ಬಿದ್ದಿರುವ ಪುಸ್ತಕಗಳು, ಪೆನ್ನು, ಪೆನ್ಸಿಲ್ಗಳು. ಇಷ್ಟು ಚಿತ್ರಣ ಕೊಟ್ಟರೆ ಸಾಕು,ಅದು ಮಕ್ಕಳಿರುವ ಮನೆ ಎಂಬುದು ಎಂಥವರಿಗೂ ತಿಳಿಯುತ್ತದೆ. ಮಕ್ಕಳಿರುವ ಮನೆಯಲ್ಲಿ ಇಂಥ ಅಸ್ತವ್ಯಸ್ತ ಚಿತ್ರಣಗಳು ಸರ್ವೇಸಾಮಾನ್ಯ. ಮನೆಯ ಹೆಂಗಸರು ಅದೆಷ್ಟೇ ಶಿಸ್ತಿನ ಸಿಪಾಯಿಗಳಾಗಿದ್ದರೂ ಮಕ್ಕಳ ಇಂಥ ಮಂಗನಾಟಕ್ಕೆ ಸುಸ್ತು ಸುಣ್ಣವಾಗಿರುತ್ತಾರೆ. ಮಕ್ಕಳು ಸ್ಕೂಲ್ಗೆ ಹೋದ ಬಳಿಕ ತಮ್ಮದ್ದಲ್ಲದ ಸ್ಥಳಗಳಲ್ಲಿ ಬಿದ್ದಿರುವ ವಸ್ತುಗಳನ್ನು ಮರಳಿ ಸ್ವಸ್ಥಾನಕ್ಕೆ ಸೇರಿಸಿ, ಕಸ ಗುಡಿಸಿ, ಒರಸಿ ಮನೆಯನ್ನು ಅಂದಗೊಳಿಸಿ ಸಂಭ್ರಮಿಸುವ ತಾಯಂದಿರ ಈ ಖುಷಿ ಮಕ್ಕಳು ಬಂದ ತಕ್ಷಣ ಕರಗಿ ಹೋಗುತ್ತದೆ. ಅಷ್ಟೊತ್ತಿನ ಶ್ರಮವೆಲ್ಲವೂ ನೀರಿನಲ್ಲಿ ಹೋಮ ಮಾಡಿದಂತೆ ಕೆಲವೇ ನಿಮಿಷಗಳಲ್ಲಿ ವ್ಯರ್ಥವಾಗಿ ಬಿಡುತ್ತದೆ. ಇಡೀ ಮನೆಯ ಚಿತ್ರಣ ಮತ್ತೆ ಬದಲು!

Manners every kid should be taught at home not in classroom

ಅಶಿಸ್ತಿಗೆ ಸುಮ್ಮನಿದ್ದರೆ ನಷ್ಟ ನಿಮಗೇ: ಮಕ್ಕಳೆಂದ ಮೇಲೆ ಇದೆಲ್ಲ ಇದ್ದಿದ್ದೆ ಎಂದು ಮನೆಗೆ ಅಪರೂಪಕ್ಕೊಮ್ಮೆ ಬಂದು ಹೋಗುವವರು ಹೇಳಬಹುದು. ಆದರೆ, ನಿತ್ಯದ ಗೋಳು ಅನುಭವಿಸಿದವರಿಗಷ್ಟೇ ಗೊತ್ತು. ಅದರಲ್ಲೂ ಕೆಲಸಕ್ಕೆ ಹೋಗುವ ಮಹಿಳೆಯರಿಗಂತೂ ಮಕ್ಕಳ ಈ ನಡವಳಿಕೆ ಮನೆಗೆ ಬಂದ ತಕ್ಷಣ ಅರೆಕ್ಷಣವೂ ಬಿಡುವಿಲ್ಲದಂತಹ ಪರಿಸ್ಥಿತಿಯನ್ನು ಸೃಷ್ಟಿಸಿಬಿಡುತ್ತದೆ. ಇಷ್ಟೆಲ್ಲ ಆವಾಂತರಗಳನ್ನು ನಿತ್ಯ ಅನುಭವಿಸಿದರೂ ನನ್ನ ಮಗ ಅಥವಾ ಮಗಳು ಇನ್ನೂ ಚಿಕ್ಕವರು, ಈಗಲೇ ಶಿಸ್ತಿನ ಪಾಠ ಮಾಡಿದರೆ ಅರ್ಥವಾಗದು ಎಂದು ಪೋಷಕರು ಸುಮ್ಮನಿದ್ದು ಬಿಟ್ಟರೆ, ಮುಂದೆ ಇನ್ನಷ್ಟು ತೊಂದರೆಗಳು ಕಟ್ಟಿಟ್ಟ ಬುತ್ತಿ.

ನಿಮ್ಮ ಮಗು ತಿರುಗಿ ಹೇಳುತ್ತದೆಯೇ? ಹೀಗ್ ಮಾಡಿ!

ಮದುವೆಯಾದ ಮೇಲೂ ಅವರು ಇದೇ ಚಾಳಿ ಮುಂದುವರಿಸಿ ಪತಿ ಅಥವಾ ಪತ್ನಿಯಿಂದ ಬೈಯಿಸಿಕೊಳ್ಳುವ ಸಾಧ್ಯತೆಯೂ ಇದೆ! ಹಾಗಾದ್ರೆ ಮಕ್ಕಳಿರುವ ಮನೆಯಲ್ಲಿನ ವಸ್ತುಗಳು ಸ್ವಸ್ಥಾನದಲ್ಲಿರಬೇಕೆಂದರೆ ಏನು ಮಾಡಬೇಕು? ಮಕ್ಕಳಿಗೆ ಬಾಲ್ಯದಲ್ಲೇ ಶಿಸ್ತಿನ ಪಾಠ ಕಲಿಸಬೇಕು. ಹೌದು, ಅವರ ವಸ್ತುಗಳನ್ನು ನಿಗದಿತ ಜಾಗದಲ್ಲಿ ಜೋಪಾನವಾಗಿಟ್ಟುಕೊಳ್ಳುವ ಪಾಠವನ್ನು ಎಳೆವೆಯಲ್ಲೇ ಮಕ್ಕಳಿಗೆ ಕಲಿಸಬೇಕಾದದ್ದು ಪ್ರತಿ ಪೋಷಕರ ಜವಾಬ್ದಾರಿ. 

ದೊಡ್ಡವರೇ ಮಾದರಿಯಾಗಬೇಕು: ಒಂದೂವರೆ ವರ್ಷದ ಮಗುವಿನ ಬಳಿ ಬಾಳೆಹಣ್ಣು ತಿಂದ ಬಳಿಕ ಸಿಪ್ಪೆಯನ್ನು ಕಸದಬುಟ್ಟೆಯಲ್ಲೇ ಎಸೆಯಬೇಕು ಎಂಬುದನ್ನು ಒಮ್ಮೆ ತೋರಿಸಿ ಕೊಡಿ. ಆ ಮಗು ತದನಂತರ ಪ್ರತಿ ಬಾರಿ ಬಾಳೆಹಣ್ಣು ತಿಂದ ಬಳಿಕ ಸಿಪ್ಪೆಯನ್ನು ಕಸದಬುಟ್ಟೆಯಲ್ಲೇ ಎಸೆದು ಬರುತ್ತದೆ. ಅಂದರೆ ಮಕ್ಕಳಿಗೆ ನಾವು ಏನನ್ನು ಕಲಿಸುತ್ತೇವೆಯೋ ಅದನ್ನೇ ಅವರು ರೂಢಿಸಿಕೊಳ್ಳುತ್ತಾರೆ. ಮನೆಯ ಹಿರಿಯ ಸದಸ್ಯರು ಪ್ರತಿ ವಸ್ತುವನ್ನು ಉಪಯೋಗಿಸಿದ ಬಳಿಕ ಅದರ ಸ್ವಸ್ಥಾನದಲ್ಲಿಡುವ ಅಭ್ಯಾಸವನ್ನು ಹೊಂದಿದ್ದರೆ ಮಕ್ಕಳು ಕೂಡ ಅದನ್ನೇ ಅನುಸರಿಸುತ್ತಾರೆ. 

ಆರೋಗ್ಯಕರವಾಗಿರಲಿ ಮಕ್ಕಳ ಡಯಟ್‌, ದೂರವಿರಲಿ ಬ್ರೆಡ್ ಬಿಸ್ಕೇಟ್ ಡೋನಟ್!

ಶಿಸ್ತಿನ ಪಾಠ ಮಾಡಿ ನೋಡಿ: ಸ್ಕೂಲ್ನಿಂದ ಬಂದ ಬಳಿಕ ಶೂ ಮತ್ತು ಸಾಕ್ಸ್ ಅನ್ನು ಚಪ್ಪಲಿ ಸ್ಟ್ಯಾಂಡ್ನಲ್ಲೇ ನೀಟಾಗಿ ಜೋಡಿಸಿಡಬೇಕು, ಬ್ಯಾಗ್ ಇಲ್ಲೇ ಇಡಬೇಕು, ಬಳಸಿದ ಬಟ್ಟೆಯನ್ನು ಲಾಂಡ್ರಿ ಬ್ಯಾಗ್ವೊಳಗೇ ಹಾಕಬೇಕು, ಆಟವಾಡಿದ ಬಳಿಕ ಎಲ್ಲ ಸಾಮಾಗ್ರಿಗಳನ್ನು ಪುನಃ ಬಾಸ್ಕೆಟೊಳಗೇ ಹಾಕಿಡಬೇಕು ಎಂಬ ಸಣ್ಣ ಸಣ್ಣ ಸಂಗತಿಗಳನ್ನು ಹೇಳಿಕೊಡುವುದರಿಂದ ಮಕ್ಕಳು ಕ್ರಮೇಣ ಶಿಸ್ತಿನ ಅಭ್ಯಾಸಗಳನ್ನು ರೂಢಿಸಿಕೊಳ್ಳುತ್ತ ಸಾಗುತ್ತಾರೆ. ಇದರಿಂದ ನಿಮ್ಮ ಕೆಲಸದ ಹೊರೆಯೂ ತಗ್ಗುತ್ತದೆ. ಜತೆಗೆ ಇಂಥ ಚಿಕ್ಕ ಚಿಕ್ಕ ಶಿಸ್ತಿನ ಪಾಠಗಳೇ ದೊಡ್ಡವರಾದ ಬಳಿಕ ವೈಯಕ್ತಿಕ ಹಾಗೂ ವೃತ್ತಿ ಬದುಕಿನಲ್ಲಿ ಯಶಸ್ಸು ಕಾಣಲು ಮಕ್ಕಳಿಗೆ ಪ್ರೇರಣೆಯಾಗುತ್ತದೆ.

ಮಕ್ಕಳಿಗೆ ಕತೆ ಹೇಳೋದ್ರಿಂದ ಏನೆಲ್ಲ ಲಾಭ ಗೊತ್ತಾ?

Latest Videos
Follow Us:
Download App:
  • android
  • ios