ಅಪ್ಪ ಅಂದ್ರೆ ಆಕಾಶ, ಹಾಗಾದ್ರೆ ಅಣ್ಣ ಅಂದ್ರೆ? ಅಣ್ಣ ಅಂದ್ರೆ ಸದಾ ತಂಗಿಯ ಕಾವಲಿಗೆ ನಿಲ್ಲುವ ಆರಕ್ಷಕ, ಅಣ್ಣ ಅಂದ್ರೆ ಬೊಗಸೆ ಬೊಗಸೆ ಖುಷಿಯನ್ನು ತಂಗಿಗಾಗಿ ಹೊತ್ತು ತರೋ ಅಚ್ಚರಿ, ಅಣ್ಣ ಅಂದ್ರೆ ನಮ್ಮೆಲ್ಲ ಸೀಕ್ರೆಟ್‌ಗಳನ್ನು ಹೇಳಿಕೊಳ್ಳಬಲ್ಲಂಥ ಆತ್ಮೀಯ, ಅಣ್ಣ ಅಂದ್ರೆ ತಂಗಿಯ ಕನಸುಗಳಿಗೆ ಒತ್ತಾಸೆಯಾಗಿ ನಿಲ್ಲೋ ಅಶ್ವತ್ಥ ಮರ, ಅಣ್ಣ ಅಂದ್ರೆ ತಂಗಿಯ ಬಾಲ್ಯದ ನೆನಪಿನ ಬುತ್ತಿಯನ್ನು ಬಗೆಬಗೆ ಭಕ್ಷ್ಯದಿಂದ ತುಂಬಿದ ಅಕ್ಕರೆಯ ಬಾಣಸಿಗ, ಅಣ್ಣ ಅಂದ್ರೆ ಸ್ವಲ್ಪ ಖಾರ, ಸ್ವಲ್ಪ ಹುಳಿ, ಸ್ವಲ್ಪ ಸಿಹಿಯ ಕುಟ್ಟುಂಡಿ... ಇಂಥ ಅಣ್ಣನೊಬ್ಬ ಇದ್ದ ತಂಗಿಯರಿಗೆಲ್ಲರಿಗೂ ಕೆಲವಷ್ಟು ಅನುಭವಗಳು ಒಂದೇ ಇರುತ್ತವೆ.

ಮೊದಲ ಬಾರಿ ತೃತೀಯ ಲಿಂಗಿ ಜಾನಪದ ಅಕಾಡೆಮಿ ಅಧ್ಯಕ್ಷೆ; ಮಂಜಮ್ಮ ಜೋಗತಿ ಪರಿಚಯ!

ಅಣ್ಣನ ಹೆಸರಿಲ್ಲದೆ ಹೇಳಲು ಅವರಲ್ಲಿ ಕತೆಗಳೇ ಇರುವುದಿಲ್ಲ- ಆ ಮಟ್ಟಿಗೆ ಅಣ್ಣ ಅವರ ಬದುಕನ್ನು ಆವರಿಸಿರುತ್ತಾನೆ. ನಿಮ್ಮನ್ನು ನೂರು ಬಾರಿ ಅಳಿಸಿರಬಹುದು, ಆದರೂ ಅಣ್ಣನೆಂಬವ ನಿಮ್ಮ ಬದುಕಿನಲ್ಲಿ ಆಶೀರ್ವಾದ ಎನಿಸುವಂಥ ಒಂದಿಷ್ಟು ಸಂಗತಿಗಳಿವೆ...

- ನಿಮ್ಮನ್ನು ಜೀವನಕ್ಕೆ ಸಜ್ಜಾಗಿಸುತ್ತಾನೆ

ಜೀವನವನ್ನು ಎಲ್ಲಿ ಗಂಭೀರವಾಗಿ ಪರಿಗಣಿಸಬೇಕು, ಎಲ್ಲಿ ಜೋಕ್ ಎಂಬಂತೆ ನೋಡಬೇಕು ಎಂಬುದನ್ನು ಅಣ್ಣ ಬಹಳ ಚೆನ್ನಾಗಿ ತಂಗಿಗೆ ಹೇಳಿಕೊಡುತ್ತಾನೆ. ನಿಮ್ಮ ಹಾಸ್ಯಪ್ರಜ್ಞೆ ಬೆಳೆವುದೇ ಅಣ್ಣನಿಂದ. ಹುಡುಗರು ಒಟ್ಟು ಸೇರಿದಾಗ ತಮಾಷೆ, ಪ್ರ್ಯಾಂಕ್‌ಗಳು ಹೆಚ್ಚು. ಈ ಅಣ್ಣನಿಂದಾಗಿ ಆತನ ಗೆಳೆಯರ ಬಳಗದ ತಮಾಷೆಗೆಲ್ಲ ನೀವು ನಗೆಯಾಗಲು ಸಾಧ್ಯವಾಗುತ್ತದೆ. 

- ಮಳ್ ಹರಿಯೋಕೆ ಸದಾ ಜೊತೆಗೊಬ್ಬ ಇರ್ತಾನೆ!

ಮದುವೆಮನೆ, ಉಪನಯನ- ಯಾವುದೇ ಕಾರ್ಯಕ್ರಮ ಇರಬಹುದು, ಅಣ್ಣನಿಲ್ಲದಿದ್ದರೆ ಅದು ನಿಮಗೆ ನಿಜವಾಗಿಯೂ ಬೋರಿಂಗ್. ಅಲ್ಲಿ ಸುಮ್ಮನಿರಬೇಕಾದಲ್ಲೆಲ್ಲ ಒಳ್ಳೊಳ್ಳೆ ಕಾಮೆಂಟ್ ಪಾಸ್ ಮಾಡುತ್ತಾ, ಫನ್ನಿಯಾಗಿ ಉತ್ತರ ನೀಡುತ್ತಾ, ಯಾವುದೋ ಹುಡುಗಿಗೆ ಲೈನ್ ಹೊಡೆಯುತ್ತಾ, ಅದಕ್ಕೆ ನಿಮ್ಮಿಂದ ಸಹಾಯ ಪಡೆಯುತ್ತಾ, ನಗಿಸುತ್ತಾ ಫಂಕ್ಷನನ್ನು ಫುಲ್ ಎಂಜಾಯ್ ಮಾಡುವಂತೆ ಮಾಡುತ್ತಾನೆ ಅಣ್ಣ.

ಮೌನಿ ಹುಡುಗನ ಗೆಳೆತನದ ದಿನಗಳು!

- ಗೆಳತಿಯರಿಂದ ಸ್ಪೆಶಲ್ ಟ್ರೀಟ್‌ಮೆಂಟ್

ಹದಿವಯಸ್ಸಿಗೆ ಕಾಲಿಟ್ಟ ಬಳಿಕ ಈ ಅಣ್ಣನ ಮೇಲೆ ಕ್ರಶ್ಶಾಗಿರುವ ಹುಡುಗಿಯರೆಲ್ಲ ತಂಗಿಯ ಗೆಳೆತನಕ್ಕಾಗಿ ಹಾತೊರೆಯುತ್ತಾರೆ. ಅಷ್ಟೇ ಅಲ್ಲ, ಇವರಿಂದ ನಿಮಗೆ ಸ್ಪೆಶಲ್ ಟ್ರೀಟ್‌ಮೆಂಟ್ ಸಿಗುತ್ತಿರುತ್ತದೆ. ಇದನ್ನೆಲ್ಲ ಎಂಜಾಯ್ ಮಾಡುತ್ತಾ, ಅಣ್ಣನಿಗೆ ಇನ್ನೊಂದಷ್ಟು ಬಿಲ್ಡಪ್ ಕೊಡುತ್ತಾ, ಅವನೊಬ್ಬನೇ ಇದ್ದಾಗ ರೇಗಿಸುತ್ತಾ ಕಾಲ ಕಳೆವ ಮಜ ನಿಮಗಷ್ಟೇ ಗೊತ್ತು. 

- ಫುಲ್‌ಟೈಂ ಬಾಡಿಗಾರ್ಡ್

ಹುಟ್ಟಿದಾಗಿನಿಂದ ಮದುವೆವರೆಗೂ ಅಣ್ಣನೆಂಬವ ತಂಗಿಗೆ ಫುಲ್ ಟೈಂ ಬಾಡಿಗಾರ್ಡ್. ನೀವು ಆ ಸುರಕ್ಷತಾ ಭಾವದಿಂದಲೇ ಬೆಳೆದಿರುತ್ತೀರಿ. ಯಾರೂ ನಿಮ್ಮೊಂದಿಗೆ ಜಗಳವಾಡುವ ಧೈರ್ಯ ಮಾಡುವುದಿಲ್ಲ. ಮಾಡಿದರೆ, ಕೂಗಳತೆಯಲ್ಲೇ ಅಣ್ಣ ಪ್ರತ್ಯಕ್ಷ. ಹಾಗೊಂದು ವೇಳೆ ಯಾವನಾದರೂ ನಿಮ್ಮ ತಂಟೆಗೆ ಬಂದರೆ, ''ಬೇಡ ನೋಡು, ಅಣ್ಣಂಗೆ ಹೇಳಿದ್ರೆ ಅಷ್ಟೇ ನಿನ್ ಕತೆ'' ಅಂಥ ಹೆದರಿಸುವ ಈ ವಾಕ್ಯ ನಿಮ್ಮ ಪಾಲಿನ ಪಾಶುಪತಾಸ್ತ್ರದಂತೆ ಕೆಲಸ ಮಾಡುತ್ತಿರುತ್ತದೆ.

- ಪ್ರಾಮಾಣಿಕ ಫೀಡ್‌ಬ್ಯಾಕ್ ಸಿಗುವುದು ಅವನೊಬ್ಬನಿಂದ ಮಾತ್ರ!

ನೀವು ಚೆನ್ನಾಗಿ ರೆಡಿಯಾಗಿ ಹೇಗೆ ಕಾಣ್ತಿದೀನಿ ಎಂದರೆ ಎಲ್ಲರೂ ಚೆನ್ನಾಗಿ ಕಾಣ್ತಾ ಇದೀಯಾ ಎಂದೇ ಹೇಳುತ್ತಾರೆ. ಆದರೆ ಈ ಅಣ್ಣ ಮಾತ್ರ ಆನೆಗೆ ಲಿಪ್‌ಸ್ಟಿಕ್ ಹಚ್ಚಿದಂಗೆ ಕಾಣ್ತಿದೀಯಾ ಎಂದೋ, ಕಪಿಗೆ ಜುಟ್ಟು ಹಾಕಿದಂಗಾಗಿದೆ ಎಂದೋ ಹೇಳುತ್ತಿದ್ದಾನೆ ಎಂದರೆ ಅವನು ಪ್ರಾಮಾಣಿಕವಾಗಿಯೇ ಉತ್ತರಿಸುತ್ತಿದ್ದಾನೆ ಎಂದು ತಿಳಿಯಬೇಕು! ಏಕೆಂದರೆ, ಸುಳ್ಳು ಹೇಳಿ ನಿಮ್ಮನ್ನು ಮೆಚ್ಚಿಸುವ ಅಗತ್ಯ ಅಣ್ಣನಿಗಿಲ್ಲ. 

ಕೋಪದಿಂದ ಸಿಡುಕಿ, ಮತ್ತೊಂದು ಕ್ಷಣ ಅಮ್ಮಾ ಅಂದರೆ ಮುಗುಳ್ನಗುತ್ತಾಳೆ!

- ಅಮ್ಮನಿಂದ ರಕ್ಷಣೆ

ಅಣ್ಣನೊಂದಿಗೆ ಬೆಳೆಯುವುದು ಎಂದರೆ ಸುಮ್ಮನೇ ಅವನಿಗೆ ಬೋರಾಯಿತೆಂದು ನೀವು ಒಂದಿಷ್ಟು ಸಮಸ್ಯೆ ಎದುರಿಸಬೇಕಾಗುತ್ತದೆ. ಆದರೆ, ಅಪ್ಪಅಮ್ಮನಿಂದ ಟ್ರಬಲ್‌ನಲ್ಲಿದ್ದೀರಿ ಎಂದಾಗ ಮಾತ್ರ ನಿಮ್ಮ ರಕ್ಷಣೆಗೆ ಕೇಳದೆಯೇ ಬರುವುದು ಅಣ್ಣನೇ. ನೀವು ಹೊರ ಹೋಗಿ ತಡವಾಗಿ ಬಂದಾಗ, ನಿಮ್ಮ ಸ್ನೇಹಿತರ ಗುಂಪಿನಲ್ಲಿ ಹುಡುಗರಿದ್ದಾರೆಂದು ಅಮ್ಮ ವರಾತ ತೆಗೆದಾಗ, ನಿಮ್ಮ ಸ್ಟೈಲ್, ಸ್ಲೀವ್‌ಲೆಸ್ ಬಗ್ಗೆ ಆಕ್ಷೇಪವೆತ್ತಿದಾಗ ಮೊದಲು ಸಹಾಯಕ್ಕೆ ಬರೋದು ಅಣ್ಣ. ಅದಲ್ಲದೆ, ನೀವು ಪ್ರವಾಸ ಹೋಗಬೇಕೆಂದಾಗ, ಮೂವಿಗೆ ಹೋಗಬೇಕೆಂದಾಗ ಅಪ್ಪಅಮ್ಮನ ಬಾಯಿ ಮುಚ್ಚಿಸಿ ನಿಮ್ಮನ್ನು ಕಳುಹಿಸಿಕೊಡುವುದು ಕೂಡಾ ಅಣ್ಣನೇ. 

-  ನಿಮ್ಮ ಭಾಷೆ ಅರ್ಥ ಮಾಡಿಕೊಳ್ಳುವ ಏಕೈಕ ವ್ಯಕ್ತಿ

ಕೇವಲ ಒಂದು ನೋಟದಲ್ಲಿ ಮಾತನಾಡಿಕೊಳ್ಳಬಲ್ಲ ಸಾಮರ್ಥ್ಯ ಅಣ್ಣ ತಂಗಿಯ ಮಧ್ಯೆ ಇರುತ್ತದೆ. ಬರೀ ಒಂದು ನೋಟದಲ್ಲಿ ಕುಹಕ, ನಗು, ಜೋಕ್ಸ್ ಎಲ್ಲವೂ ವಿನಿಮಯವಾಗುತ್ತವೆ. ನಿಮ್ಮಿಬ್ಬರ ಮಧ್ಯೆ ಒಂದು ಖಾಸಗಿ ಭಾಷೆ ಇರುತ್ತದೆ. ಮನೆಗೆ ನೆಂಟರು ಬಂದಾಗ, ಅಪ್ಪಅಮ್ಮ ಬೈದಾಗ, ಮೊಬೈಲ್‌ಗೆ ಮೆಸೇಜ್ ಬಂದಾಗ- ಹೀಗೆ ಅನೇಕ ಸಂದರ್ಭಗಳಲ್ಲಿ ಕಣ್ಣಿನಲ್ಲಿಯೇ ಅವನ್ನು ಮಾತನಾಡಿಕೊಳ್ಳಬಲ್ಲರಿ. 

ಗುದ್ದಾಟಕ್ಕಿಂತ ಹೆಚ್ಚು ಮುದ್ದಾಟವಿದ್ದರೆ ಸಂಬಂಧ ಚೆಂದ!

- ನಿಮ್ಮನ್ನು ಎಲ್ಲಿಂದ ಬೇಕಾದರೂ ಮನೆಗೆ ಕರೆದೊಯ್ಯಬಲ್ಲ

ಗೆಳೆತನದಂತೆ ಅಣ್ಣನೊಂದಿಗಿನ ಸಂಬಂಧ ಉಳಿಸಿಕೊಳ್ಳಲು ಸುಮ್ಮನೆ ಮಾತನಾಡಬೇಕಿಲ್ಲ. ಯಾವುದೇ ಎಕ್ಸ್ಟ್ರಾ ಪ್ರಯತ್ನ ಹಾಕಬೇಕಿಲ್ಲ. ನೀವು ಎಲ್ಲಾದರೂ ಅರ್ಧ ದಾರಿಯಲ್ಲಿ ಇಳಿದುಕೊಂಡರೆ ಅಣ್ಣನಿಗೊಂದು ಫೋನ್ ಸಾಕು, ಅವನೊಂದಿಗೆ ಮಾತನಾಡಿ ತಿಂಗಳೇ ಆಗಿರಲಿ, ಆತ ಬಂದು ನಿಮ್ಮನ್ನು ಕರೆದುಕೊಂಡು ಹೋಗುತ್ತಾನೆ. ಅಷ್ಟೇ ಅಲ್ಲ, ಹಾಸ್ಟೆಲ್ ಬದಲಿಸಬೇಕು, ಎಲ್ಲಿಯೋ ಹೋಗಬೇಕೆಂದರೆ ನೀವು ಕಷ್ಟ ಪಡುವ ಅಗತ್ಯವೇ ಇಲ್ಲ. ಅಣ್ಣನೇ ಎಲ್ಲ ಲಗೇಜನ್ನು ಸಲೀಸಾಗಿ ಹೊತ್ತು ಬರುತ್ತಾನೆ.

- ಪ್ರೈಮರಿಯಲ್ಲೇ ಹೈಸ್ಕೂಲ್ ಲಾಂಗ್ವೇಜ್ ಮಾತನಾಡಬಲ್ಲಿರಿ

ಅಣ್ಣನೊಬ್ಬ ಇದ್ದಾನೆ ಎಂದರೆ ಅಂಥ ತಂಗಿಯರು ಪ್ರೈಮರಿ ಶಾಲೆಯಲ್ಲಿರುವಾಗಲೇ ಹೈಸ್ಕೂಲಿನ ಮಚ್ಚಾ, ಮಗಾ ಭಾಷೆಗಳನ್ನು ಮಾತನಾಡಲಾರಂಭಿಸಿರುತ್ತಾರೆ. ಹುಡುಗರ ಜಗತ್ತು ಕೂಡಾ ನಿಮಗೆ ಹೊಸತಲ್ಲ. ಹುಡುಗರಂತೆಯೇ ಭಾವನೆಗಳನ್ನು ನಿಭಾಯಿಸಬಲ್ಲಿರಿ.