Asianet Suvarna News Asianet Suvarna News

ಮ್ಯಾಜಿಕ್‌ ಮೊಮೆಂಟ್: ಅಮ್ಮನಿಗೆ ಕೊಟ್ಟಮೊದಲ ಉಡುಗೊರೆ!

ನಮಗೆ ಸಿಕ್ಕ ನಾಲ್ಕು ಕಾಸಿನಲ್ಲೇ ಒಂದಷ್ಟುಕೂಡಿಟ್ಟು ಅಮ್ಮನಿಗೆ ಉಡುಗೊರೆ ತಂದುಕೊಡುವುದಿದೆಯಲ್ಲ, ಆ ಖುಷಿ ವಿವರಿಸುವುದು ಅಸಾಧ್ಯ. ಸಂತೋಷ ನೀಡುವ ಒಂದು ಎಮೋಷನಲ್‌ ಬರಹ ಇದು.

students shares happiness of gifting mother
Author
Bangalore, First Published Nov 28, 2019, 3:19 PM IST

20 ವರುಷಗಳ ಕಾಲ ನಾನು ಅಪ್ಪ, ಅಮ್ಮನ ಜೊತೆ ಉಡುಪಿಯಲ್ಲಿ ಬೆಳೆದೆ. ಒಂದು ಕ್ಷಣವು ಅವರನ್ನು ಬಿಟ್ಟಿರಲಿಲ್ಲ. ನನ್ನ ಅಮ್ಮ ತುಂಬಾ ಗಟ್ಟಿಗಿತ್ತಿ. ಅನಿಸಿದ್ದನ್ನ ಎದುರೆದುರೇ ಹೇಳಿಬಿಡುತ್ತಾರೆ. ಆದ್ರೆ ಅದು ನನ್ನ ಮೇಲೆ ಇರುವ ಕಾಳಜಿ, ಪ್ರೀತಿಗೆ. ನಾಳೆ ನನ್ನ ಮಗಳು ಯಾರ ಎದುರು ತಲೆ ತಗ್ಗಿಸಬಾರದು ಎಂಬ ಒಂದೇ ಒಂದು ಉದ್ದೇಶಕ್ಕೆ ತಪ್ಪು ಮಾಡಿದಾಗ ನನ್ನನ್ನ ಕೂರಿಸಿ ನೀನು ಮಾಡುತ್ತಾ ಇರುವುದು ಸರಿಯಾ ಎಂದು ಪ್ರಶ್ನಿಸುತ್ತಾರೆ. ಜೀವನದಲ್ಲಿ ಯಾವತ್ತಿಗೂ ತಲೆತಗ್ಗಿಸುವ ಕೆಲಸ ಮಾಡದಿರು ಎಂದು ಈ ಪ್ರಶ್ನೆಯ ಮೂಲಕ ಎಚ್ಚರಿಸುತ್ತಾಳೆ.

ಲಾಸ್ಟ್‌ಬೆಂಚ್‌ಗೆ ಜೀವ ಬಂದರೆ ಏನೇನು ಹೇಳಬಹುದು?

ನನ್ನ ಅಮ್ಮ ನನ್ನ ಆಪ್ತ ಗೆಳತಿ. ಅವಳ ಬಳಿ ನನ್ನ ಪ್ರೀತಿಪ್ರೇಮದ ವಿಷಯ ಮುಕ್ತವಾಗಿ ಹಂಚಿಕೊಡಿದ್ದೇನೆ. ಹಿಡಿದ ದಾರಿ ತಪ್ಪು ಎಂದು ತಿಳಿದ ನಂತರ ಅದರಿಂದ ನೋವು ಪಟ್ಟಾಗ ಹೋಗಿ ಅವಳ ಕಾಲಲ್ಲಿ ಅತ್ತಿದ್ದೇನೆ. ಮತ್ತೆ ಜೀವನದಲ್ಲಿ ಧೈರ್ಯ ತುಂಬಿದ ಅಮ್ಮನ ಜೊತೆಗೆ ಖುಷಿಯಿಂದ ಕುಣಿದಾಡಿದ್ದೇನೆ.

ಪದವಿಯ ಜೊತೆಗೆ ಸುಮಾರು 8 ವರುಷಗಳ ಕಾಲ ರಂಗಭೂಮಿಯಲ್ಲಿ ತೊಡಗಿಸಿಕೊಂಡೆ. ಪದವಿ ಶಿಕ್ಷಣ ಮುಗಿದ ನಂತರ ನೀನಾಸಂನಲ್ಲಿ ನಟನೆಯ ಇನ್ನಷ್ಟುಅಧ್ಯಯನ ಮಾಡಬೇಕೆಂಬ ಆಸೆ ನನ್ನದಾಗಿತ್ತು. ಆದರೆ ಅಮ್ಮನಿಗೆ ನಾನು ಉನ್ನತ ಶಿಕ್ಷಣ ಮಾಡಬೇಕೆಂಬ ಆಸೆ. ಅಮ್ಮನ ಆಸೆಯಂತೆ ಪತ್ರಿಕೋದ್ಯಮದಲ್ಲಿ ಉನ್ನತ ಶಿಕ್ಷಣ ಮಾಡಬೇಕೆಂಬ ನಿರ್ಧಾರ ಮಾಡಿದೆ. ಕೊನೆಗೆ ಎಸ್‌.ಡಿ.ಎಮ್‌ ಕಾಲೇಜು ಉಜಿರೆಗೆ ಸೇರಿದೆ. ಸೇರುವ ಸಂದರ್ಭ ಅಮ್ಮನ ಕಣ್ಣು ತುಂಬಿತ್ತು. ಅವಳಿಗೆ ನನ್ನ ಬಿಟ್ಟು ಇರಲು ಸಾಧ್ಯವಿಲ್ಲ ಎಂದು ಅವಳ ಕಣ್ಣೀರು ಸೂಚಿಸುತ್ತಿತ್ತು. ಮನಸ್ಸು ಗಟ್ಟಿಮಾಡಿ ಸೇರಿಯೇ ಬಿಟ್ಟೆ.

ಅಜ್ಜ ಹೋದ ನಂತರ ಅಟ್ಟ ಸೇರಿದ ರೇಡಿಯೋ!

ಹಾಸ್ಟೆಲ್‌ನಲ್ಲಿ ಮೊದಲು ಕಷ್ಟಆಯಿತು. ಪ್ರತಿ ಬಾರಿಯೂ ಅಮ್ಮನ ಜೊತೆಯೇ ಇರಬೇಕಿತ್ತಲ್ಲಾ ಎಂದೆನಿಸುತ್ತಿತ್ತು. ಮುಂಜಾನೆ ಅಮ್ಮನ ಬಾಬು ಏಳು ಎಂಬ ಧ್ವನಿ ಕೇಳಿಸದೇ ಬೇಸರವಾಗುತ್ತಿತ್ತು. ಅಮ್ಮ ಜೊತೆಗಿದ್ದಾಗ ರಾತ್ರಿ ಅವಳ ಕೈ ತಲೆದಿಂಬಾಗಿತ್ತು. ಕಾಲೇಜಿನಿಂದ ಬಂದಾಗ, ಆರೋಗ್ಯದಲ್ಲಿ ಸ್ವಲ್ಪ ಏರುಪೇರಾದಾಗ ಅಮ್ಮನಿಗೆ ಆಗುವ ನೋವು, ಅಪ್ಪನ ಕಾಳಜಿ ನನ್ನ ಮೌನಿಯಾಗಿಸುತ್ತಿತ್ತು.

ಕಡೆಗೊಂದು ದಿನ ಊರಿಗೆ ಹೊರಟೆ. ಮುಂದಿನ ವಾರ ಅಮ್ಮನ ಹುಟ್ಟುಹಬ್ಬ ಇತ್ತು. ಅವಳ ಹುಟ್ಟುಹಬ್ಬದಲ್ಲಿ ನಾನು ಭಾಗಿಯಾಗಲು ಸಾಧ್ಯವಿರಲಿಲ್ಲ, ಯಾಕೆಂದರೆ ಕಾಲೇಜಿನಲ್ಲಿ ಕಾರ್ಯಕ್ರಮವಿದೆ ರಜೆ ಹಾಕಲು ಅವಕಾಶವಿರಲಿಲ್ಲ. ಆದಿತ್ಯವಾರವೇ ಅಮ್ಮನ ಹುಟ್ಟುಹಬ್ಬ ಅವಳಿಗೆ ಖುಷಿಯಾಗುವ ರೀತಿ ವಿಭಿನ್ನವಾಗಿ ಸಂಭ್ರಮಿಸಬೇಕೆಂದು ಯೋಚಿಸಿದೆ. ಪತ್ರಿಕೆಗಳಲ್ಲಿ ನನ್ನ ಕೆಲವು ಲೇಖನ ಬಂದಿದ್ದರಿಂದ ಬಂದ ಹಣ ಸ್ವಲ್ಪ ಇತ್ತು. ಆ ಹಣದಲ್ಲಿ ಅಮ್ಮನಿಗೆ ಏನಾದರೂ ಉಡುಗೊರೆ ಕೊಡಬೇಕೆಂದು ಹೊರಟೆ. ಅಮ್ಮನಿಗೆ ಗುಲಾಬಿ ಅಂದ್ರೆ ಇಷ್ಟ. ಹಾಗಾಗಿ ಹೋಗುವ ದಾರಿಯಲ್ಲಿ ಗುಲಾಬಿ ತೆಗೆದುಕೊಳ್ಳುವ ಅಂತ ನಿರ್ಧಾರ ಮಾಡಿ ಬಸ್ಸು ಹತ್ತಿದೆ.

ಅವರು ನನ್ನ ಬರುವಿಕೆಗಾಗಿ ಕಾಯುತ್ತಿದ್ದರು. ಬಸ್ಸಿನಿಂದ ಇಳಿದ ನಾನು ಅಮ್ಮನಿಗೆ ಉಡುಗೊರೆಯ ಬಗ್ಗೆ ಯೋಚಿಸುತ್ತಾ ಕೃಷ್ಣ ಮಠದತ್ತ ಹೋದೆ. ಅಮ್ಮನಿಗೆ ಏನ್ನನ್ನು ಕೊಟ್ಟರೆ ಅವಳಿಗೆ ಸಂತೋಷವಾಗಬಹುದು? ನಾವು ಏನೇ ಕೇಳಿದ್ರು ಹೆತ್ತವರು ಯಾವತ್ತು ಇಲ್ಲ ಎಂದಿಲ್ಲ. ಎಷ್ಟೇ ಕಷ್ಟದ ಪರಿಸ್ಥಿತಿಯಲ್ಲೂ ನಮ್ಮ ಖುಷಿಗಾಗಿ ಎಲ್ಲವನ್ನು ಕೊಡಿಸುತ್ತಾರೆ. ನಮ್ಮ ಖುಷಿಯಲ್ಲಿಯೇ ಅವರ ಖುಷಿ ಕಾಣುತ್ತಾರೆ. ಹಾಗಾಗಿ ಅಮ್ಮನಿಗೆ ಒಪ್ಪುವ ಉಡುಗೊರೆ ಕೊಡಬೇಕೆಂದು ಅಂಗಡಿ ಅಂಗಡಿ ಹುಡುಕಾಡಿದೆ. ದೇವಸ್ಥಾನದ ಎದುರು ಒಬ್ಬರು ಅಜ್ಜಿ ಗಾಜಿನ ಬಳೆಗಳನ್ನು ಮಾರುತ್ತಿದ್ದರು. ಅಮ್ಮನಿಗೆ ಹಸಿರು ಬಳೆ ಹಾಗೂ ನೀಲಿ ಬಳೆಗಳೆಂದರೆ ತುಂಬಾ ಇಷ್ಟ. ಎರಡೂ ಬಣ್ಣದ ಒಂದೊಂದು ಡಜನ್‌ ಬಳೆಗಳನ್ನು ಕೊಡಲು ಹೇಳಿದೆ. ಜೊತೆಗೆ ಗುಲಾಬಿಯನ್ನು ತೆಗೆದುಕೊಂಡು ಮನೆಗೆ ಹೋದೆ.

ಹಾಸ್ಟೆಲ್‌ನಲ್ಲೂ ಇರ್ತಾರೆ ಈ 7 ವಿಧದ ಹುಡುಗಿಯರು!

ಹೋದ ಕೂಡಲೇ ಅಡುಗೆ ಮನೆಗೆ ತೆರಳಿದೆ. ಅಮ್ಮ ....ಹಸಿವು ಎಂದಾಕ್ಷಣ ಅವರ ಕೈಯಾರೆ ತಯಾರಿಸಿದ ನನ್ನ ಇಷ್ಟದ ಎಲ್ಲಾ ತಿಂಡಿಗಳನ್ನು ನನ್ನ ಎದುರಿಗಿಟ್ಟರು. ಆದ್ರೆ ನಾನು ತಂದ ಉಡುಗೊರೆಯನ್ನು ಅಮ್ಮನಿಗೆ ಕೊಡಲು ಏನೋ ಮುಜುಗರವಾಯಿತು, ಹಿಂಜರಿಯುತ್ತಿದ್ದೆ. ಸಣ್ಣ ಉಡುಗೊರೆ, ಅಮ್ಮನಿಗೆ ಇಷ್ಟವಾಗಬಹುದಾ? ನಂತರ ಸ್ವಲ್ಪ ಹೊತ್ತು ಬಿಟ್ಟು ಕೊಟ್ಟೇ ಬಿಟ್ಟೆ. ಅಮ್ಮನಿಗೆ ಗಾಜಿನ ಬಳೆಗಳನ್ನು ನೋಡಿ ಸಂತೋಷವಾಯಿತು.

ಆ ಚಿಕ್ಕ ಉಡುಗೊರೆಯಿಂದ ಅಮ್ಮನಿಗಾದ ಸಂತೋಷವನ್ನು ಹೇಳಲು ಸಾಧ್ಯವಿಲ್ಲ, ಎರಡೂ ಡಜನ್‌ ಬಳೆಗಳನ್ನು ಎರಡೂ ಕೈಗಳಿಗೆ ತೊಟ್ಟರು.

ಕೋಪದಿಂದ ಸಿಡುಕಿ, ಮತ್ತೊಂದು ಕ್ಷಣ ಅಮ್ಮಾ ಅಂದರೆ ಮುಗುಳ್ನಗುತ್ತಾಳೆ!

ನಾವು ಕೊಡುವ ಚಿಕ್ಕ ಉಡುಗೊರೆ ತಾಯಂದಿರಿಗೆ ಎಷ್ಟುಖುಷಿ ನೀಡುತ್ತದೆ. ಅಮ್ಮನಿಗೆ ಬೆಲೆಬಾಳುವ ಸೀರೆ, ಬಂಗಾರ ನೀಡಬೇಕಾಗಿಲ್ಲ ಆಕೆಗೆ ಒಂದು ಗುಲಾಬಿ, ಬಳೆಗಳು, ಒಂದು ಪ್ರೀತಿಯ ಮಾತು ಸಾಕು. ಅಷ್ಟೇ ಸಾಕು ಆಕೆಯ ಕಣ್ಣಲಿ ಸಂತೋಷವನ್ನು ಕಾಣಬಹುದು.

ಚೈತ್ರ

ಪ್ರಥಮ ಎಮ್‌ಸಿಜೆ ವಿಭಾಗ, ಎಸ್‌ಡಿಎಮ್‌ ಕಾಲೇಜು, ಉಜಿರೆ.

Follow Us:
Download App:
  • android
  • ios