'ಪವಿತ್ರ ಬಂಧನ' ಧಾರಾವಾಹಿ ಖ್ಯಾತಿಯ ನಟಿ ಅಮೂಲ್ಯ ಭಾರದ್ವಾಜ್ ಅವರು ಹರ್ಷಿತ್ ಪೋರೆಚಾ ಎಂಬುವವರನ್ನು ಸದ್ದಿಲ್ಲದೆ ವಿವಾಹವಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಮದುವೆಯ ಸುಂದರ ಕ್ಷಣಗಳನ್ನು ಹಂಚಿಕೊಂಡು ಅವರು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದಾರೆ.
ಬೆಂಗಳೂರು: ಕನ್ನಡ ಕಿರುತೆರೆಯ ಜನಪ್ರಿಯ ನಟಿ, 'ಪವಿತ್ರ ಬಂಧನ' (Pavithra Bandhana) ಧಾರಾವಾಹಿ ಖ್ಯಾತಿಯ ಅಮೂಲ್ಯ ಭಾರದ್ವಾಜ್ ಸದ್ದಿಲ್ಲದೆ ದಾಂಪತ್ಯ ಜೀವನಕ್ಕೆ ಕಾಲಿಡುವ ಮೂಲಕ ತಮ್ಮ ಸಹಸ್ರಾರು ಅಭಿಮಾನಿಗಳಿಗೆ ಅಚ್ಚರಿಯ ಶುಭ ಸುದ್ದಿ ನೀಡಿದ್ದಾರೆ.
ತಮ್ಮ ಮುಗ್ಧ ನಟನೆ ಮತ್ತು ಕಣ್ಣೋಟದಲ್ಲೇ ಕನ್ನಡಿಗರ ಮನ ಗೆದ್ದಿರುವ ಮೈಸೂರು ಮೂಲದ ಬೆಡಗಿ ಅಮೂಲ್ಯ ಭಾರದ್ವಾಜ್, ಹರ್ಷಿತ್ ಪೋರೆಚಾ (Harshit Porecha) ಎಂಬುವವರನ್ನು ವರಿಸಿದ್ದಾರೆ. ಅದ್ಧೂರಿಯಾಗಿ ಕುಟುಂಬಸ್ಥರು ಹಾಗೂ ಬಂಧುಗಳಿಗೆ ಸೀಮಿತವಾಗಿ ನಡೆದಿರುವ ಈ ಮದುವೆ ಸಮಾರಂಭದ ಫೋಟೊಗಳನ್ನು ನಟಿ ತಮ್ಮ ಅಧಿಕೃತ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಭಾವನಾತ್ಮಕ ಪೋಸ್ಟ್ ಬರೆದುಕೊಂಡ ನಟಿ:
ಮಾಂಗಲ್ಯ ಧಾರಣೆಯ ನಂತರದ ಕ್ಷಣ ಹಾಗೂ ಪತಿಯೊಂದಿಗಿನ ರೋಮ್ಯಾಂಟಿಕ್ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿರುವ ಅಮೂಲ್ಯ, "ನನ್ನ ಪತಿಯಿಂದಾಗಿಯೇ ನನ್ನ ಜೀವನ ನಾನು ಕಲ್ಪಿಸಿಕೊಂಡಿದ್ದಕ್ಕಿಂತಲೂ ಅತ್ಯಂತ ಸುಂದರ ಹಾಗೂ ಅರ್ಥಪೂರ್ಣವಾಗಿದೆ. ಅವರೊಂದಿಗೆ ಈ ಹೊಸ ಪಯಣವನ್ನು ಸಾಗಿಸುತ್ತಿರುವುದಕ್ಕೆ ನಾನು ಸದಾ ಚಿರಋಣಿ. ನಾನು ಎಂದಿಗೂ ಅವರ ಪ್ರೀತಿಯ ಹೆಂಡತಿಯಾಗಿಯೇ ಇರುತ್ತೇನೆ, (Because of my husband, my life is more beautiful than I ever imagined it could be. I'll forever be grateful that I get to do life with him.❤️ I will always be a "Husband's Girl"💕)" ಎಂದು ಬರೆದುಕೊಂಡು ತಮ್ಮ ಸಂತಸ ಹಂಚಿಕೊಂಡಿದ್ದಾರೆ.

ಧಾರಾವಾಹಿಗಳಲ್ಲಿ ಮಿಂಚಿದ್ದ ಅಮೂಲ್ಯ:
ಬಿಕಾಂ ಪದವೀಧರೆಯಾಗಿರುವ ಮೈಸೂರಿನ ಅಮೂಲ್ಯ ಭಾರದ್ವಾಜ್ ಅವರು ಕಿರುತೆರೆಗೆ ಕಾಲಿಟ್ಟಿದ್ದು 'ಪುರಂದರದಾಸ' ಧಾರಾವಾಹಿಯ ಮೂಲಕ. ಅದರಲ್ಲಿ ಪುರಂದರನ ಪತ್ನಿಯಾಗಿ ನಟಿಸಿ ವೀಕ್ಷಕರ ಗಮನ ಸೆಳೆದಿದ್ದರು. ತದನಂತರ ಕಲರ್ಸ್ ಕನ್ನಡದ 'ಬೃಂದಾವನ' ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸಿ ಸೈ ಎನಿಸಿಕೊಂಡಿದ್ದರು. ಪ್ರಸ್ತುತ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಪವಿತ್ರ ಬಂಧನ' ಧಾರಾವಾಹಿಯಲ್ಲಿ 'ಪವಿತ್ರಾ' ಎಂಬ ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಾ ಮನೆಮಾತಾಗಿದ್ದಾರೆ.
ತಮ್ಮ ಪತಿ ಹರ್ಷಿತ್ ಅವರ ಹಿನ್ನೆಲೆ ಹಾಗೂ ವೃತ್ತಿಯ ಬಗ್ಗೆ ನಟಿ ಅಮೂಲ್ಯ ಯಾವುದೇ ಹೆಚ್ಚಿನ ವಿವರಗಳನ್ನು ಬಿಟ್ಟುಕೊಟ್ಟಿಲ್ಲವಾದರೂ, ಈ ಅನಿರೀಕ್ಷಿತ ಮದುವೆಯ ಸುದ್ದಿಯಿಂದ ಅಭಿಮಾನಿಗಳು ಹಾಗೂ ಕಿರುತೆರೆ ಕಲಾವಿದರು ನವಜೋಡಿಗೆ ಶುಭ ಹಾರೈಸುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅಮೂಲ್ಯ ಅವರ ಮದುವೆಯ ಫೋಟೊಗಳು ಸದ್ಯ ವೈರಲ್ ಆಗುತ್ತಿವೆ.














