ಮದುವೆ ಅಂದ್ರೆ ಖಂಡಿತಾ ಹುಡುಗಾಟವಲ್ಲ.ಹುಡುಗಾಟಿಕೆ ಬುದ್ಧಿ ಬಿಟ್ಟು ಭವಿಷ್ಯದ ಕಡೆಗೆ ಸ್ವಲ್ಪ ಗಂಭೀರವಾಗಿ ಯೋಚಿಸುವಂತೆ ಮಾಡೋದೆ ಈ ಮದುವೆ. ಇದು ಇಬ್ಬರು ವ್ಯಕ್ತಿಗಳ ನಡುವಿನ ಪ್ರತಿಜ್ಞಾವಿಧಿಯಷ್ಟೇ ಅಲ್ಲ, ಜವಾಬ್ದಾರಿಗಳು,ಹವ್ಯಾಸಗಳು,ಆದ್ಯತೆಗಳು ಹಾಗೂ ಹಣಕಾಸಿನ ವಿಷಯಗಳಲ್ಲಿ ಬದಲಾವಣೆಯ ಪರ್ವ.ಬ್ಯಾಚುಲರ್ ಲೈಫ್‌ನಲ್ಲಿಬೇಕಾಬಿಟ್ಟೆ ತಿಂದುಂಡು, ಕಂಡಕಂಡಲ್ಲಿ ಶಾಪಿಂಗ್‌, ಪಾರ್ಟಿ, ಪಿಕ್‌ನಿಕ್‌ ಎಂದು ಸುತ್ತಾಡಿ ತಿಂಗಳ ಕೊನೆಯಲ್ಲಿ ಜೇಬು ಖಾಲಿಯಾಗಿ ಸ್ನೇಹಿತನ ಬಳಿ ಸಾಲ ಪಡೆಯೋ ಅಭ್ಯಾಸ ವಿವಾಹದ ಬಳಿಕವೂ ಮುಂದುವರಿಸಿದ್ರೆ ಭವಿಷ್ಯದಲ್ಲಿ ಸಂಕಷ್ಟ ಕಟ್ಟಿಟ್ಟಬುತ್ತಿ. ಕಾರು ಖರೀದಿ, ಗೃಹ ನಿರ್ಮಾಣ, ಭವಿಷ್ಯದ ಭದ್ರತೆಗಾಗಿ ವಿಮೆ, ಹೂಡಿಕೆ, ಉಳಿತಾಯ, ಮಕ್ಕಳ ಶಿಕ್ಷಣ ವೆಚ್ಚ..ಹೀಗೆ ಸಾಲು, ಸಾಲು ಜವಾಬ್ದಾರಿಗಳು ಹೆಗಲಿಗೇರುತ್ತವೆ. ಇದು ನಿಮ್ಮ ಜೀವನಶೈಲಿಯಲ್ಲಿ ಬದಲಾವಣೆ ತಂದೇತರುತ್ತೆ.ಅದ್ರಲ್ಲೂ ಖರ್ಚು-ವೆಚ್ಚಕ್ಕೆ ಮೂಗುದಾರ ಬೀಳೋದು ಪಕ್ಕಾ. ವ್ಯವಸ್ಥಿತ, ಯೋಜನಾಬದ್ಧ ಆರ್ಥಿಕ ಯೋಜನೆಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡೋದು ಒಳ್ಳೆಯ ನಿರ್ಧಾರ. ಹೊಸದಾಗಿ ವೈವಾಹಿಕ ಬದುಕಿಗೆ ಕಾಲಿಟ್ಟ ದಂಪತಿಗಳಿಗೆ ಹಣಕಾಸಿನ ನಿರ್ವಹಣೆಗೆ ಸಂಬಂಧಿಸಿ ಒಂದಿಷ್ಟು ಸಲಹೆಗಳು ಇಲ್ಲಿವೆ.

ಮದುವೆಗೂ ಮೊದಲು ಕಾಡುವ ಆತಂಕ ನಿವಾರಿಸಿಕೊಳ್ಳಲು ಇಲ್ಲಿವೆ ಸಲಹೆ

ಹಣಕಾಸಿಗೆ ಸಂಬಂಧಿಸಿ ನಿಲುವು ಹಂಚಿಕೊಳ್ಳಿ
ನಿಮ್ಮ ಆರ್ಥಿಕ ಪರಿಸ್ಥಿತಿ, ವೆಚ್ಚಗಳು, ಉಳಿತಾಯ, ಜವಾಬ್ದಾರಿ….ಇವೆಲ್ಲದರ ಬಗ್ಗೆ ಮುಕ್ತವಾಗಿ ನಿಮ್ಮ ಸಂಗಾತಿಯೊಂದಿಗೆ ಚರ್ಚಿಸೋದು ಅಗತ್ಯ. ನಿಮ್ಮ ಕುಟುಂಬದ ಪ್ರಸಕ್ತ ಆರ್ಥಿಕ ಸ್ಥಿತಿ ಕುರಿತು ಅವರಿಗೆ ಮನವರಿಕೆ ಮಾಡಿಸಿ.ಕೆಲವು ಹೆಣ್ಣುಮಕ್ಕಳಿಗೆ ಮದುವೆ ಬಳಿಕ ಕೂಡ ತವರುಮನೆಗೆ ಸಹಾಯ ಮಾಡಲೇಬೇಕಾದ ಅನಿವಾರ್ಯತೆ ಇರುತ್ತೆ.ಇದನ್ನು ಮದುವೆಯಾದ ತಕ್ಷಣವೇ ಪತಿಗೆ ತಿಳಿಸಿ. ತನ್ನ ತಿಂಗಳ ಸಂಬಳದಲ್ಲಿ ಸ್ವಲ್ಪ ಹಣವನ್ನು ಹೆತ್ತವರಿಗೆ ನೀಡುತ್ತೇನೆ ಎಂದು ಮೊದಲೇ ತಿಳಿಸೋದ್ರಿಂದ ನಂತರ ಈ ಕುರಿತು ಇಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡೋದು ತಪ್ಪುತ್ತೆ. ಎಲ್ಲಕ್ಕಿಂತ ಮುಖ್ಯವಾಗಿ ಖರ್ಚಿಗೆ ಸಂಬಂಧಿಸಿ ಇಬ್ಬರೂ ಪಾರದರ್ಶಕವಾಗಿದ್ರೆ ಹಣದ ವಿಚಾರವಾಗಿ ಇಬ್ಬರ ನಡುವೆ ವಾಗ್ವಾದ, ಗಲಾಟೆಗಳು ನಡೆಯೋದಿಲ್ಲ.ಒಂದು ವೇಳೆ ನಿಮ್ಮ ಸಂಗಾತಿ ಹಣದ ಅಪವ್ಯಯ ಮಾಡುತ್ತಿದ್ರೆ ಅವರಿಗೆ ಇದ್ರಿಂದಾಗೋ ಸಮಸ್ಯೆಗಳ ಬಗ್ಗೆ ನಯವಾಗಿಯೇ ಮನವರಿಕೆ ಮಾಡಿಸಿ. 

ಆರ್ಥಿಕ ಗುರಿಗಳನ್ನು ರೂಪಿಸಿ
ಭವಿಷ್ಯಕ್ಕೆ ಸಂಬಂಧಿಸಿ ಆರ್ಥಿಕ ಯೋಜನೆಗಳನ್ನು ಇಬ್ಬರೂ ಜೊತೆಗೂಡಿ ರೂಪಿಸೋದ್ರಿಂದ ಖರ್ಚು ಹಾಗೂ ಉಳಿತಾಯದ ಬಗ್ಗೆ ಪರಸ್ಪರ ಅಭಿಪ್ರಾಯ ತಿಳಿದುಕೊಳ್ಳಲು ಸಾಧ್ಯವಾಗುತ್ತೆ. ಅನಗತ್ಯ ವೆಚ್ಚವನ್ನು ತಗ್ಗಿಸೋ ಬಗ್ಗೆಯೂ ಯೋಜನೆ ರೂಪಿಸಬಹುದು. ಭವಿಷ್ಯದಲ್ಲಿ ಕಾರು, ಮನೆ ಸೇರಿದಂತೆ ವಿವಿಧ ಆರ್ಥಿಕ ಜವಾಬ್ದಾರಿಗಳ ಕುರಿತು ಇಬ್ಬರೂ ಚರ್ಚಿಸಿ ಯೋಜನೆ ರೂಪಿಸಿ. ಅದಕ್ಕೆ ಸಂಬಂಧಿಸಿ ಬಜೆಟ್‌ ಸಿದ್ಧಪಡಿಸಿ. ಅದೇರೀತಿ ತುರ್ತು ಸಂದರ್ಭಗಳ ನಿರ್ವಹಣೆಗೆಂದು ಒಂದಿಷ್ಟು ಹಣವನ್ನು ಇಬ್ಬರೂ ಸೇರಿ ಉಳಿತಾಯ ಮಾಡಲು ಮರೆಯಬೇಡಿ.

ಈ ರೀತಿ ಮಾಡಿದ್ರೆ ನಾದಿನಿ ನಿಮ್ ಬುಟ್ಟಿಗೆ ಬೀಳೋದು ಪಕ್ಕಾ!

ಆಸ್ತಿ,ಸಾಲಗಳ ಮಾಹಿತಿ ಮುಚ್ಚಿಡಬೇಡಿ
ಮದುವೆ ಬಳಿಕ ನೀವು ಮಾಡಿರೋ ಸಾಲಗಳು, ನಿಮ್ಮ ಬಳಿಯಿರೋ ಆಸ್ತಿ, ಉಳಿತಾಯಗಳ ಬಗ್ಗೆ ಪರಸ್ಪರ ಪತಿ ಹಾಗೂ ಪತ್ನಿ ಇಬ್ಬರೂ ಮಾಹಿತಿ ವಿನಿಮಯ ಮಾಡಿಕೊಳ್ಳಿ. ಇಂದು ಮಹಿಳೆ ಕೂಡ ಉದ್ಯೋಗಸ್ಥೆ ಆಗಿರೋ ಕಾರಣ ಅವಳು ಕೂಡ ತನ್ನ ಅಪ್ಪ-ಅಮ್ಮ ಹಾಗೂ ತನಗಾಗಿ ಒಂದಿಷ್ಟು ಸಾಲ ಮಾಡಿರಬಹುದು. ಹಾಗೆಯೇ ಕಾರು, ಒಡವೆ ಸೇರಿದಂತೆ ಒಂದಿಷ್ಟು ಸಂಪತ್ತನ್ನೂ ಗಳಿಸಿರಬಹುದು. ಇದನ್ನು ಆಕೆ ಮದುವೆ ಬಳಿಕ ಪತಿ ಬಳಿ ಹಂಚಿಕೊಳ್ಳೋದು ಉತ್ತಮ. ಹಾಗೆಯೇ ಪತಿ ಕೂಡ ತನ್ನ ಮನೆ ಕಡೆಯ ಆರ್ಥಿಕ ಜವಾಬ್ದಾರಿಗಳು, ಸಾಲ, ಆಸ್ತಿಗಳ ವಿವರವನ್ನು ಪತ್ನಿಗೆ ನೀಡೋದ್ರಿಂದ ವ್ಯವಸ್ಥಿತವಾದ ಆರ್ಥಿಕ ಯೋಜನೆ ರೂಪಿಸಲು ಸಾಧ್ಯವಾಗುತ್ತೆ. ಅಲ್ಲದೆ, ಭವಿಷ್ಯದ ಆರ್ಥಿಕ ಯೋಜನೆಗಳು,ಆದ್ಯತೆಗಳ ಕುರಿತು ನಿರ್ದಿಷ್ಟ ಗುರಿಗಳನ್ನು ಇಬ್ಬರೂ ಚರ್ಚಿಸಿ ನಿರ್ಧರಿಸಬಹುದು.

ಹಣಕಾಸಿನ ಜಂಟಿ ನಿರ್ವಹಣೆ
ಕೆಲವು ದಂಪತಿಗಳು ಮದುವೆ ಬಳಿಕ ತಮ್ಮ ಬ್ಯಾಂಕ್‌ ಖಾತೆಗಳನ್ನು ವಿಲೀನಗೊಳಿಸಲು ಬಯಸಿದ್ರೆ, ಇನ್ನೂ ಕೆಲವರು ಪ್ರತ್ಯೇಕ ಖಾತೆಗಳನ್ನೇ ಮುಂದುವರಿಸುತ್ತಾರೆ. ಬ್ಯಾಂಕ್‌ ಖಾತೆಗಳನ್ನು ವಿಲೀನಗೊಳಿಸೋದು, ಬಿಡೋದು ಅವರವರ ಇಷ್ಟ. ಆದ್ರೆ ಬ್ಯಾಂಕ್‌ ಖಾತೆಗಳು ಹಾಗೂ ಟ್ಯಾಕ್ಸ್‌ ಸ್ಟೇಟ್‌ಮೆಂಟ್‌ಗಳನ್ನು ವಿಲೀನಗೊಳಿಸೋದ್ರಿಂದ ಇಬ್ಬರಿಗೂ ಆದಾಯ, ವೆಚ್ಚ ಹಾಗೂ ಉಳಿತಾಯವನ್ನು ಸರಿದೂಗಿಸಿಕೊಂಡು ಹೋಗೋದು ಸುಲಭವಾಗುತ್ತೆ. ಇಬ್ಬರೂ ಆ ಖಾತೆಗೆ ಸಮಾನವಾಗಿ ಹಣ ಸಂದಾಯ ಮಾಡೋ ಜೊತೆ ಎಲ್ಲ ವೆಚ್ಚಗಳನ್ನು ಕೂಡ ಹಂಚಿಕೊಳ್ಳಬಹುದು. ಇಬ್ಬರೂ ಒಂದೇ ಆರ್ಥಿಕ ಗುರಿಗಾಗಿ ಕಾರ್ಯನಿರ್ವಹಿಸೋ ಕಾರಣ ಯಾವುದೇ ವಂಚನೆಗೆ ಅವಕಾಶವಿರೋದಿಲ್ಲ. ಅಲ್ಲದೆ, ಒಬ್ಬರ ಮೇಲೆ ಹೆಚ್ಚಿನ ಹೊರೆ ಬೀಳೋದಿಲ್ಲ. 

ಮದುವೆಗೆ ಓಕೆ ಅನ್ನೋ ಮುನ್ನ ಹಿಂಗೆಲ್ಲ ಯೋಚಿಸಿದ್ದೀರಾ?

ಬಜೆಟ್‌, ವಿಮೆ ಪ್ಲ್ಯಾನ್
ಪ್ರತಿ ತಿಂಗಳು ಬಜೆಟ್‌ ರೂಪಿಸಿ ಅದಕ್ಕನುಗುಣವಾಗಿ ಖರ್ಚು ಮಾಡೋದ್ರಿಂದ ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಲು ಸಾಧ್ಯವಾಗುತ್ತೆ. ಅಲ್ಲದೆ, ಈ ರೀತಿ ವ್ಯವಸ್ಥಿತವಾಗಿ ಹಣ ವ್ಯಯಿಸೋದ್ರಿಂದ ವೆಚ್ಚ ಹಾಗೂ ಉಳಿತಾಯದ ಮೇಲೆ ಹಿಡಿತ ಸಾಧಿಸಲು ಸಾಧ್ಯವಾಗೋ ಜೊತೆ ಭವಿಷ್ಯದ ಆರ್ಥಿಕ ಗುರಿಗಳನ್ನು ಸುಲಭವಾಗಿ ತಲುಪಬಹುದು. ನೀವು ಹಾಗೂ ನಿಮ್ಮ ಸಂಗಾತಿ ಆರೋಗ್ಯ, ಭವಿಷ್ಯ ಅಥವಾ ನಿವೃತ್ತ ಬದುಕಿಗಾಗಿ ಹೂಡಿಕೆ ಹಾಗೂ ವಿಮೆ ಮಾಡಿಸೋ ಕುರಿತು ಈ ಸಮಯದಲ್ಲೇ ನಿರ್ಧಾರ ಕೈಗೊಳ್ಳೋದು ಕೂಡ ಅಗತ್ಯ.