ಯಾವ ಸಂಬಂಧವೂ ಪರ್ಫೆಕ್ಟ್ ಅಲ್ಲ. ಇಬ್ಬರ ನಡುವಿನ ಅಪೂರ್ಣತೆಗಳೇ ಅವರನ್ನು ಪೂರ್ಣವಾಗಿಸುವುದು. ನಿಮ್ಮನ್ನು ಪ್ರೀತಿಸುವ, ಕಾಳಜಿ ತೋರಿಸುವ, ರಕ್ಷಣೆ ಒದಗಿಸುವ, ಕಂಫರ್ಟ್ ಆಗಿಡುವ ಪಾರ್ಟ್ನರ್ ಇದ್ದಾಗ ನೀವು ಸಂತೋಷವಾಗಿಯೂ, ಅಭಿವೃದ್ಧಿಮುಖಿಯಾಗಿಯೂ ಇರುತ್ತೀರಿ. ಆದರೆ, ನಿಮ್ಮನ್ನು ನಿಯಂತ್ರಿಸುವ, ಗೌರವಿಸದ, ಬೆಲೆ ಕೊಡದ ಪಾರ್ಟ್ನರ್ ನಿಮ್ಮ ನೆಮ್ಮದಿಗೆಡಿಸಿ, ಅದೋಗತಿಗೆ ಕಾರಣವಾಗುತ್ತಾರೆ. ಇದೇ ಟಾಕ್ಸಿಕ್ ರಿಲೇಶನ್‌ಶಿಪ್. ಆಘಾತಕಾರಿ ವಿಷಯವೆಂದರೆ ಮುಂದುವರಿದ ದೇಶವೆನಿಸಿಕೊಂಡ ಅಮೆರಿಕದಲ್ಲಿ ನಡೆಸಿದ ಅಧ್ಯಯನವೊಂದರ ಪ್ರಕಾರ ಪ್ರತಿ ನೂರರಲ್ಲಿ 56ರಷ್ಟು ಉದ್ಯೋಗಸ್ಥರು ಟಾಕ್ಸಿಕ್ ರಿಲೇಶನ್‌ಶಿಪ್ನಲ್ಲಿರುವುದು ಕಂಡುಬಂದಿದೆ. ಅಷ್ಟೇ ಅಲ್ಲ, ಅವರು ಆ ಸಂಬಂಧದಿಂದ ಹೊರ ಬರುವುದು ಕೂಡಾ ಕಷ್ಟಸಾಧ್ಯವಾದ ಪರಿಸ್ಥಿತಿ ಇರುವುದನ್ನು ತೋಡಿಕೊಂಡಿದ್ದಾರೆ. ಆದರೆ, ಯಾವುದೇ ವಿಷಯದ ಬಗ್ಗೆ ಅರಿವಾದಾಗ ಮಾತ್ರ ಅದಕ್ಕಾಗಿ ಪರಿಹಾರ ಹುಡುಕಲು ಸಾಧ್ಯ. ನಮ್ಮಲ್ಲೇ ಎಷ್ಟೋ ಜನರಿಗೆ ತಾವು ಟಾಕ್ಸಿಕ್ ರಿಲೇಶನ್‌ಶಿಪ್‌ನಲ್ಲಿರುವ ಕುರಿತ ಅರಿವಿರುವುದಿಲ್ಲ. ಟಾಕ್ಸಿಕ್ ಸಂಬಂಧದ ಪ್ರಮುಖ ಲಕ್ಷಣಗಳನ್ನಿಲ್ಲಿ ಕೊಡಲಾಗಿದೆ. ನೀವೂ ಇಂಥ ಸಂಗಾತಿಯಿಂದ ಹಿಂಸೆ ಅನುಭವಿಸುತ್ತಿದ್ದರೆ, ಪರಿಹಾರ ಮಾರ್ಗಗಳತ್ತ ಆದಷ್ಟು ಬೇಗ ಗಮನ ಹರಿಸಿ. 

1. ನಿಮ್ಮ ಸಂಗಾತಿ ನಿಮ್ಮನ್ನು ಹೊರಗಿನಿಂದಲೂ, ಒಳಗಿನಿಂದಲೂ ನಿಯಂತ್ರಿಸುವಾಗ...
ನಿಮ್ಮ ಸಂಬಂಧ ಕೇವಲ ಒಂದು ತಿಂಗಳಿನದಿರಬಹುದು ಅಥವಾ 20 ವರ್ಷಗಳೇ ಕಳೆದಿರಬಹುದು- ಎಲ್ಲರಿಗೂ ಅವರ ಸಂಗಾತಿ ಕಾಳಜಿ ವಹಿಸಿದಾಗ ಖುಷಿಯಾಗಿಯೇ ಆಗುತ್ತದೆ. ಆದರೆ, ಅವರ ಅತಿಯಾದ ಪ್ರೀತಿಯಲ್ಲಿ ನಿಮಗೆ ವೈಯಕ್ತಿಕ ಸ್ಪೇಸ್ ಎನ್ನುವುದೇ ಉಳಿದಿಲ್ಲವೆಂದಾಗ ಪ್ರೀತಿ ಉಸಿರುಗಟ್ಟಿಸತೊಡಗುತ್ತದೆ. ಅಭದ್ರತೆ, ಅತಿಯಾದ ಕಾಳಜಿ, ಹೊಟ್ಟೆಕಿಚ್ಚು ಮತ್ತಿತರ ಕಾರಣಗಳಿಂದ ಅವರು ನಿಮ್ಮ ವೈಯಕ್ತಿಕ ಸ್ವಾತಂತ್ರ್ಯವನ್ನು ನಿಯಂತ್ರಿಸುತ್ತಿರಬಹುದು. ನೀವು ಎಲ್ಲಿ ಹೋಗಬೇಕು, ಏನು ಮಾಡಬೇಕು, ಏನು ತಿನ್ನಬೇಕು ಪ್ರತಿಯೊಂದರಲ್ಲೂ ಮೂಗು ತೂರಿಸಿ ನಿಯಂತ್ರಣ ಹೇರುತ್ತಿರಬಹುದು. ಇದು ಎಷ್ಟು ಅತಿ ಎಂದರೆ ನಿಮ್ಮ ಯೋಚನೆಗಳು ಕೂಡಾ ಹೀಗೆ ಮಾಡಿದರೆ ಅವನೇನು ಅಂದುಕೊಳ್ಳುತ್ತಾನೆ. ಅವನಿಗೆ ಹೇಗೆ ಬೇಕಾಗಿದೆ ಎಂಬುದೇ ಆಗಿರುತ್ತದೆ. ಅಂದರೆ ಒಳಗಿನಿಂದಲೂ ಅವನೇ ನಿಮ್ಮನ್ನು ನಿಯಂತ್ರಿಸುತ್ತಿರುತ್ತಾನೆ. ಇಲ್ಲಿ ಪ್ರೀತಿಗಿಂತ ಭಯ ನಿಮ್ಮಲ್ಲಿ ಹುಟ್ಟಿಕೊಳ್ಳುತ್ತದೆ. ಇಂಥ ಸಂದರ್ಭದಲ್ಲಿ ನೀವು ಎಚ್ಚೆತ್ತುಕೊಳ್ಳಬೇಕು. ಹಾಗಂಥ ನಿಮ್ಮ ಎಕ್ಸ್ ಜೊತೆ ಓಡಾಡಬೇಡ ಎನ್ನುವುದು, ಸುರಕ್ಷಿತವಲ್ಲದ ಸ್ಥಳಕ್ಕೆ ಹೋಗಬೇಡ ಎನ್ನುವುದನ್ನೆಲ್ಲ ಈ ವಲಯಕ್ಕೆ ಸೇರಿಸಬೇಡಿ. 

ಬದಲಾಗಿದೆ ಕಾಲ, ಬೇಡಿಕೆಗಳೂ

2. ಗೌರವವೆಂಬುದು ಲಕ್ಷುರಿಯಾದಾಗ...
ಯಾವುದೇ ಸಂಬಂಧದಲ್ಲಿ ಪರಸ್ಪರ ಗೌರವ ಮಹತ್ತರ ಪಾತ್ರ ವಹಿಸುತ್ತದೆ. ಆದರೆ ನಿಮ್ಮ ಸಂಬಂಧದ ನಡುವೆ ನಿಮಗೆ ಯಾವುದೇ ರೀತಿಯ ಗೌರವ ಸಿಗುತ್ತಿಲ್ಲವೆಂದಾಗ, ಅಪರೂಪಕ್ಕೆ ಗೌರವ ಸಿಕ್ಕರೆ ಅದೇ ದೊಡ್ಡದು ಎಂದುಕೊಂಡು ಅದನ್ನೇ ಒಪ್ಪಿಕೊಂಡು ಬದುಕುವುದನ್ನು ನೀವು ರೂಢಿಸಿಕೊಂಡಿರಬಹುದು. ಆದರೆ, ಇದರಿಂದ ನೀವು ಸಂತೋಷವಾಗಿರಲು ಮಾತ್ರ ಖಂಡಿತಾ ಸಾಧ್ಯವಿಲ್ಲ. 

3. ನಿಮ್ಮ ಯೋಚನೆಗಳನ್ನು ಹಂಚಿಕೊಳ್ಳಲು ನೀವು ಹಿಂದೆ ಬೀಳುವ ಪರಿಸ್ಥಿತಿ
ನಿಮ್ಮಲ್ಲಿ ನೂರಾರು ಕನಸುಗಳಿರಬಹುದು, ಬಯಕೆ, ಗುರಿಗಳಿರಬಹುದು. ಅಥವಾ ಸಡನ್ ಆಗಿ ಯಾವುದೋ ವಿಲಕ್ಷಣ ಯೋಚನೆ ಬರಬಹುದು. ಆದರೆ, ಅದನ್ನು ಸಂಗಾತಿಯೊಡನೆ ಹೇಳಿಕೊಳ್ಳುವಷ್ಟು ಸ್ವಾತಂತ್ರ್ಯ ಇಲ್ಲ, ಸಲುಗೆಯಿಲ್ಲ ಅಥವಾ ಧೈರ್ಯವಿಲ್ಲ ಎಂಬಂಥ ಪರಿಸ್ಥಿತಿ ಇದ್ದರೆ, ಅದೂ ಕೂಡಾ ಟಾಕ್ಸಿಕ್ ರಿಲೇಶನ್‌ಶಿಪ್ ಲಕ್ಷಣವೇ.

ಮಹಿಳೆಯರಿಗೆ ಬೀಳೋ ಸೆಕ್ಸ್ ಕನಸಿಗೇನು ಅರ್ಥ?

4. ಸೆಕ್ಸ್ ಎಂಬುದು ಮೋಸಗೊಳಿಸುವ ಸಾಧನವಾದಾಗ
ನೀವಿಬ್ಬರೂ ಸೆಕ್ಸ್ ಎಂಜಾಯ್ ಮಾಡುತ್ತಿಲ್ಲ. ಆದರೆ, ನಿಮ್ಮ ಸಂಗಾತಿ, ಯಾವುದೋ ಕೆಲಸವಾಗಬೇಕಾದ ಮಾತ್ರ ನಿಮ್ಮೊಂದಿಗೆ ಲೈಂಗಿಕ ಕ್ರಿಯೆ ನಡೆಸುತ್ತಾರೆ ಎಂದಾದರೆ ಇದು ಖಂಡಿತಾ ಉತ್ತಮ ಸಂಬಂಧದ ಲಕ್ಷಣವಂತೂ ಅಲ್ಲ. 

5. ದೌರ್ಜನ್ಯ ಎಂಬುದು ಸಾಮಾನ್ಯವಾಗಿ ಹೋದಾಗ..
ಆಡಿಕೊಂಡು ನಗುವುದು, ವ್ಯಂಗ್ಯವಾಡುವುದು, ಬೈಯ್ಯುವುದು, ಕಡ್ಡಿಯನ್ನು ಗುಡ್ಡ ಮಾಡುವುದು, ಹೊಡೆಯುವುದು ಇವೆಲ್ಲಕ್ಕೂ ನೀವು ಜಡ್ಡುಗಟ್ಟಿ ಹೋಗಿದ್ದೀರಾ ಎಂದರೆ ಇವು ನಿಮ್ಮ ಬದುಕಿನಲ್ಲಿ ಪ್ರತಿದಿನ ನಡೆಯುವಂಥ ವಿಷಯಗಳಾಗಿಬಿಟ್ಟಿವೆ ಎಂದರ್ಥ. ಇದು ಕೂಡಾ ಕೆಟ್ಟ ಸಂಬಂಧದ ಲಕ್ಷಣ.

ಗುದ್ದಾಟಕ್ಕಿಂತ ಮುದ್ದಾಟವಿದ್ದರೆ ಚೆಂದ

6. ನಿಮ್ಮ ಬೆಳವಣಿಗೆಯಿಂದ ಅವರು ಅಭದ್ರತೆ ಅನುಭವಿಸುತ್ತಾರೆಂದರೆ...
ದಾಂಪತ್ಯದಲ್ಲಿ ಒಬ್ಬರು ಬೆಳೆದಂತೆಲ್ಲ ಅದು ತಮ್ಮದೇ ಗೆಲುವೆಂಬಂತೆ ಮತ್ತೊಬ್ಬರಿಗೆ ಖುಷಿಯಾಗುತ್ತದೆ. ಆದರೆ, ನೀವು ಬೆಳೆದದ್ದನ್ನು ನೋಡಿ ನಿಮ್ಮ ಸಂಗಾತಿ ಕರುಬುತ್ತಿದ್ದರೆ, ಅಭದ್ರತೆ ಅನುಭವಿಸುತ್ತಿದ್ದರೆ, ನೀವು ಇನ್ನೂ ಮೇಲೇರದಂತೆ ಅಡ್ಡಗಾಲು ಹಾಕುತ್ತಿದ್ದರೆ  ಇದು ನೀವು ಆ ಸಂಬಂಧದ ಕುರಿತು ಮರುಯೋಚಿಸಬೇಕಾದ ಸಮಯ. 

7. ನಿಮ್ಮ ಪೋಷಕರು ಹಾಗೂ ಕ್ಲೋಸ್ ‌ಫ್ರೆಂಡ್ಸ್‌ಗೆ ನಿಮ್ಮ ಪಾರ್ಟ್ನರ್ ಇಷ್ಟವಿಲ್ಲವೆಂದಾಗ..
ನೀವು ಸಂತೋಷವಾಗಿಲ್ಲ ಎಂಬುದು ನಿಮಗೆ ತಿಳಿಯುವ ಮೊದಲೇ ತಿಳಿದುಕೊಳ್ಳೋ ತಾಕತ್ತಿರುವುದು ನಿಮ್ಮ ಕುಟುಂಬಕ್ಕೆ ಹಾಗೂ ಹತ್ತಿರದ ಗೆಳೆಯರಿಗೆ. ಅವರಿಗೆ ನಿಮ್ಮ ದಾಂಪತ್ಯದಲ್ಲಿ ಏನೋ ಸರಿಯಿಲ್ಲ, ನಿಮ್ಮ ಸಂಗಾತಿಯ ವರ್ತನೆ ಹಿಡಿಸುತ್ತಿಲ್ಲವೆಂದರೆ ಅದನ್ನು ಗಂಭೀರವಾಗಿ ಪರಿಗಣಿಸಿ ವಿಚಾರಿಸಿ.