Asianet Suvarna News Asianet Suvarna News

ಮಗನಿಗೆ ಹುಡುಗಿ ಬೇಕೆಂದರೆ ಬದಲಾಗಿದೆ ಅತ್ತೆ ಮಾವಂದಿರ ಡಿಮ್ಯಾಂಡ್!

ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ. ಅಂದು ಹೆಣ್ಣುಮಕ್ಕಳ ಹೆತ್ತವರು ಮಗು ಹುಟ್ಟಿದಾಗಿನಿಂದಲೇ  ಅದನ್ನು ಗಂಡನ ಮನೆಗಾಗಿ ತಯಾರಿ ಮಾಡಲು ಶುರು ಹಚ್ಚುತ್ತಿದ್ದರು! ಈಗ ಗಂಡಿನ ಪೋಷಕರು ಮಗನನ್ನು ಹೆಣ್ಣು ಸಿಗುವಂತೆ ಸಜ್ಜುಗೊಳಿಸಬೇಕಾಗಿದೆ. ಮನೆಗೆಲಸದಲ್ಲಿ ಸೈ ಅನಿಸಿಕೊಂಡ ಮಗಳು ಉದ್ಯೋಗದಲ್ಲೂ ಮಿಂಚಿ ಗೆದ್ದಾಗಿದೆ. ಆದರೆ, ಹೊರಗಿನ ಕೆಲಸದಲ್ಲಿ ಗೆದ್ದಿರುವ ಮಗ, ಮನೆಗೆಲಸವಿನ್ನೂ ಕಲಿಯಬೇಕಿದೆ. 

concept of marriage among Indians witnesses Paradigm shift
Author
Bangalore, First Published Sep 16, 2019, 2:50 PM IST

20-40 ವರ್ಷದ ಹಿಂದೆ

ಸನ್ನಿವೇಶ: ಹುಡುಗಿ ನೋಡಲು ಬಂದ ವರನ ಕಡೆಯವರು.

ಹುಡುಗಿಯ ತಂದೆತಾಯಿ:

 ನಮ್ಮ ಹುಡುಗಿ ಅಡುಗೆಯಲ್ಲಿ ಎತ್ತಿದ ಕೈ. ಅವಳು ಮಾಡೋ ಬದನೆ ಗೊಜ್ಜು ಇಷ್ಟಪಡದವರೇ ಇಲ್ಲ. ಸಂಗೀತ ಕಲ್ಸಿದೀವಿ. ಹಿರಿಯರೆಂದರೆ ಸಿಕ್ಕಾಪಟ್ಟೆ ಗೌರವ. ತುಂಬಾ ಅಳುಕು ಸ್ವಭಾವ. ಯಾರಿಗೂ ಎದಿರಾಡೋಳಲ್ಲ. ತುಂಬಾ ಚೆನ್ನಾಗಿ ರಂಗೋಲಿನೂ ಹಾಕ್ತಾಳೆ. ಮನೆಗೆಲಸ ಎಲ್ಲ ಬಹಳ ಅಚ್ಚುಕಟ್ಟು. ಓದಿಸಿ ಅಂದ್ಲು. ಹೆಣ್ಣುಮಕ್ಳು ಓದಿ ಏನಾಗ್ಬೇಕಂತ ಕಳಿಸ್ಲಿಲ್ಲ. 

ಯಶಸ್ವೀ ವಿವಾಹ; ಅಜ್ಜಿ ಹೇಳಿದ ಅನುಭವ ಪಾಠಗಳು!

ವರನ ತಂದೆತಾಯಿ:

 ಹೆಣ್ಣುಮಕ್ಳು ಹಾಗೇ ಇರಬೇಕು.  ಅವಳು ತಲೆಯೆತ್ತಿ ಇವರನ್ನು ನೋಡುವಂತಿಲ್ಲ, ಅವಳಾಗೇ ಪ್ರಶ್ನಿಸುವಂತಿಲ್ಲ, ಬೇಕು ಬೇಡ ಆಯ್ಕೆಗಳಿಲ್ಲ. ಹುಡುಗ ಮೂಗನೋ, ಕುಂಟನೋ... ಗಂಡಲ್ಲವೇ?!

ಈಗ, ಅದೇ ಸನ್ನಿವೇಶ

ಹುಡುಗಿಯ ತಂದೆತಾಯಿ:  ನಮ್ಮ ಹುಡುಗಿನ ತುಂಬಾ ಮುದ್ದಾಗಿ ಬೆಳ್ಸಿದೀವಿ. ಅವಳಿಗೆ ಅಡುಗೆ ಮಾಡೋಕೆ ಬರಲ್ಲ.

ವರನ ತಂದೆತಾಯಿ: ಅದಕ್ಕೇನಂತೆ, ನಮ್ಮ ಮಗ ತುಂಬಾ ಚೆನ್ನಾಗಿ ಅಡುಗೆ ಮಾಡ್ತಾನೆ. 

ಹುಡುಗಿಯ ತಂದೆತಾಯಿ: ಅವಳಿಗೆ ಸ್ವಲ್ಪ ಮಂಗೋಪ ಜಾಸ್ತಿ

ವರನ ತಂದೆತಾಯಿ: ನಮ್ಮ ಮಗ ಬಹಳ ಶಾಂತ ಸ್ವಭಾವದವನು. ಯಾರೂ ಅವನ ಬಳಿ ಕೋಪ ಮಾಡೋಕಾಗಲ್ಲ. ಮನೆಗೆಲಸದಲ್ಲೂ ಸಹಾಯ ಮಾಡ್ತಾನೆ. 

ಹುಡುಗಿಯ ತಂದೆತಾಯಿ: ಬೈಕು ಕಾರು ಓಡಿಸ್ಕೊಂಡು ಬಿಂದಾಸಾಗಿ ಇರ್ತಾಳೆ. ಕೂದಲು ಕಟ್ಟೋದಂದ್ರೆ ಆಗಲ್ಲ. ಸೀರೆ ಉಡೋಕೆ ಬರಲ್ಲ. ಅದೇ ನಮಗೆ ಸ್ವಲ್ಪ ಚಿಂತೆ. ಹಾಗಂತ ಹೊರಗಿನ ಕೆಲಸಗಳಲ್ಲಿ ಬಹಳ ಚುರುಕು.

ವರನ ತಂದೆತಾಯಿ: ಈಗಿನ ಹೆಣ್ಣುಮಕ್ಳೇ ಹಾಗಲ್ವಾ? ಅವಳಿಗೆ ಹೇಗೆ ಬೇಕೋ ಹಾಗಿರಲಿ, ನಮ್ಮದೇನೂ ಡಿಮ್ಯಾಂಡ್ ಇಲ್ಲ. 

ಹುಡುಗಿಯ ತಂದೆತಾಯಿ: ಅವಳು ಮದುವೆ ಆದ ಮೇಲೂ ಓದಬೇಕಂತಾಳೆ

ಮುಲಾಜಿಗೆ ಬಿದ್ದು ಮದುವೆ ಆಗಬೇಡಿ! ಮನಸ್ಸಿಟ್ಟು ಆಗಿ...

ವರನ ತಂದೆತಾಯಿ: ಓದ್ಸೋಣ ಬಿಡಿ. ಎಲ್ಲಿವರೆಗೆ ಓದಬೇಕಂತಾಳೋ ಅಲ್ಲೀವರೆಗೂ ನಾವೇ ಖರ್ಚು ಹಾಕಿಕೊಂಡು ಓದಿಸ್ತೀವಿ. ಅಷ್ಟೇ ಅಲ್ಲ, ಮದುವೆ ಖರ್ಚೂ ನಾವೇ ಹಾಕ್ಕೋತೀವಿ. ನೀವು ಹುಡುಗಿಯನ್ನು ಕೊಟ್ರೆ ಅಷ್ಟು ಸಾಕು. 

ಕಾಲಚಕ್ರ ಅನ್ನೋದು ಇದಕ್ಕೇ ಏನೋ... 

ಅಂದು ಹೆಣ್ಣುಮಕ್ಕಳ ಹೆತ್ತವರು ಮಗು ಹುಟ್ಟಿದಾಗಿನಿಂದಲೇ  ಅದನ್ನು ಗಂಡನ ಮನೆಗಾಗಿ ತಯಾರಿ ಮಾಡಲು ಶುರು ಹಚ್ಚುತ್ತಿದ್ದರು! 
ಅಪ್ಪ ಅಮ್ಮಅದರ ಮದುವೆಗಾಗಿ ಕೂಡಿಡುವುದರಿಂದ ಹಿಡಿದು, ನಾಲ್ಕೈದು ವರ್ಷಕ್ಕೆ ಬರುತ್ತಲೇ ತನ್ನ ತಮ್ಮ ತಂಗಿಯ ಸಣ್ಣ ಪುಟ್ಟ ಜವಾಬ್ದಾರಿಗಳನ್ನು ಹೆಗಲಿಗೇರಿಸಿಕೊಂಡು ಸೊಂಟದ ಮೇಲೆ ಹೊರಲಾರದೆ ಹೊತ್ತುಕೊಂಡು ಓಡಾಡುತ್ತಿತ್ತು. 

ಏಳೆಂಟು ವರ್ಷಕ್ಕೆ ಬರುವಷ್ಟರಲ್ಲಿ ನೀರು ತರುವುದು, ಅಡಿಗೆ ಮನೆಯಲ್ಲಿ ಅಮ್ಮನಿಗೆ ಸಹಾಯ ಮಾಡುವುದು, ಪಾತ್ರೆ ತೊಳೆಯುವುದು, ಬಟ್ಟೆ ಒಗೆಯುವುದು, ರಂಗೋಲಿ ಹಾಕುವುದು ಎಲ್ಲವೂ ಆ ಹೆಣ್ಣುಮಗಳಿಗೆ ಸುಲಲಿತ. ಯಾವುದನ್ನೇ ಸರಿಯಾಗಿ ಮಾಡಲಿಲ್ಲವೆಂದರೂ ಆಗಿನಿಂದಲೇ, ಹೀಗಾದರೆ ನಿನ್ನ ಗಂಡನ ಮನೆಯವರು ತವರಿನಲ್ಲಿ ಹೇಳಿಕೊಡಲಿಲ್ಲ ಎಂದಾರು, ಅತ್ತೆ ತಲೆಗೆ ಮೊಟಕುತ್ತಾರೆ ಎಂದೆಲ್ಲ ಬ್ಲ್ಯಾಕ್‌ಮೇಲ್ ಮಾಡುತ್ತಾ, ತಾವೂ ಹೆದರಿಕೆ ಅನುಭವಿಸುತ್ತಾ ಹೊಡೆದು ಬೈದು ಕಲಿಸುತ್ತಿದ್ದರು. 

ಇದರೊಂದಿಗೆ ರಂಗೋಲಿ ಹಾಕುವುದು, ಹಾಡುಗಳನ್ನು ಕಲಿಯುವುದು, ಕೊಟ್ಟಿಗೆ ಕೆಲಸ, ಶಬ್ದ ಮಾಡದೆ ನಡೆಯುವುದು, ಸದಾ ತಲೆಕೂದಲಿಗೆ ಜೆಡೆ ಹಣಿದುಕೊಂಡು ಕೈಗೆ ಬಳೆ, ಹಣೆಗೆ ಕುಂಕುಮ ಇಟ್ಟುಕೊಳ್ಳುವುದು, ತಲೆ ಬಗ್ಗಿಸಿಕೊಂಡು ಓಡಾಡುವುದು, ಎದುರು ಮಾತಾಡದಿರುವುದು... ಒಟ್ಟಿನಲ್ಲಿ ಹುಡುಗಿ ಹುಟ್ಟಿದಾಗಿನಿಂದ ಮದುವೆಯವರೆಗೂ ಆಕೆಯನ್ನು ಮದುವೆಯ ನಂತರದ ಜೀವನಕ್ಕಾಗಿಯೇ ತಯಾರು ಮಾಡಲಾಗುತ್ತಿತ್ತು. 

ಅಷ್ಟಾಗಿಯೂ ಮದುವೆಯಾದ ಬಳಿಕ ಸುಖವಾಗಿ ಬಾಳಿ ಬದುಕಿದ ಹೆಣ್ಣು ಮಕ್ಕಳ ಒಂದಾದರೂ ಕತೆಯನ್ನು ನೀವೆಲ್ಲಾದರೂ ಕೇಳಿದ್ದೀರಾ?

ಆರೇಂಜ್ಡ್ ಮ್ಯಾರೇಜ್? ಮೊದಲ ಭೇಟಿಯಲ್ಲಿ ಏನೇನು ಪ್ರಶ್ನೆ ಕೇಳ್ಬೇಕು!

ಹಳೆಯ ಸಿನಿಮಾಗಳು ಅಂದಿನ ಕಾಲದ ಜೀವನಶೈಲಿಯನ್ನೇ ಪ್ರತಿಬಿಂಬಿಸುತ್ತವೆ. ಒಂದಾದರೂ ಸಿನಿಮಾದಲ್ಲಿ ಹೆಣ್ಣು ಖುಷಿಯಾಗಿರುವ ಕತೆ ಸಿಗಲಿಕ್ಕಿಲ್ಲ. ವರದಕ್ಷಿಣೆ ಕಿರುಕುಳ, ದನದಂತೆ ದುಡಿಮೆ, ಗಂಡ, ಅತ್ತೆಯ ಅಧಿಕಾರ, ಮನೆಯಲ್ಲೇ ಒಂದು ಶಾಲೆ ತೆರೆಯಬಹುದು- ಅಷ್ಟೊಂದು ಮಕ್ಕಳ ಕೆಲಸ... ಅವಳೆಂಬುದು ಇಡೀ ಕುಟುಂಬವನ್ನು ಸುಖವಾಗಿಡಲು ತನ್ನನ್ನೇ ತೇಯ್ದು ಕೊಡುವ ಜೀತದಾಳಷ್ಟೇ. ಗಂಡನಿಗೆ ಚಟಗಳಿದ್ದರೂ, ಬೇರೆ ಸಂಬಂಧವಿದ್ದರೂ... ಅವನು ಗಂಡು... ಬೇಕಾದ್ದು ಮಾಡುತ್ತಾನೆ ಎಂಬ ಆಲಾಪ. ಅವಳ ಕಣ್ಣೀರಿಗೆ ಬೆಲೆಯಿಲ್ಲ, ಇಷ್ಟಕಷ್ಟ ಕೇಳುವವರಿಲ್ಲ... ಹಾಗಾಗಿಯೇ ಜನರು ಹೆಣ್ಣು ಮಗು ಬೇಡಪ್ಪಾ ಬೇಡ ಎನ್ನುತ್ತಿದ್ದುದು. 

ಈಗ ಹೆಣ್ಣು ಹೆತ್ತವರಿಗೇ ಡಿಮ್ಯಾಂಡ್ ಜಾಸ್ತಿ. ಅಪ್ಪ ಅಮ್ಮ ಬಯಸುವುದೇ ಹೆಣ್ಣು ಮಗುವನ್ನು. ಆಕೆಯನ್ನು ಗಂಡನ ಮನೆಗಾಗಿ ಅಲ್ಲ, ಬದುಕಿಗಾಗಿ ತಯಾರು ಮಾಡುತ್ತಾರೆ. ಇಂದಿನ ಹುಡುಗಿಯರು ವಿದ್ಯೆಯಲ್ಲೂ ಒಂದು ಹೆಜ್ಜೆ ಮುಂದೆಯೇ, ಕಾರು, ಬೈಕು ಕಲಿಕೆ, ಈಜು, ಸಂಗೀತ, ಜಿಮ್, ಮನೆಗೆಲಸ, ಯಾರಿಗೂ ಯಾವುದಕ್ಕೂ ಹೆದರದ ಛಾತಿ, ಪ್ರಪಂಚದ ಯಾವುದೇ ಮೂಲೆಯಲ್ಲಿ ಬಿಟ್ಟರೂ ಬದುಕುವ ಆತ್ಮವಿಶ್ವಾಸ- ಪ್ರತಿಯೊಂದೂ ಅವರಿಗೆ ಕರಗತ. ಮಗಳ ಒಳ್ಳೆಯ ಹಾಗೂ ಕೆಟ್ಟ ಗುಣಗಳನ್ನೆಲ್ಲ ಹೆಣ್ಣಿನ ಪೋಷಕರು ಧೈರ್ಯವಾಗಿ ಹೆಮ್ಮೆಯಿಂದಲೇ ಹೇಳಬಲ್ಲರು. ಆದರೆ, ಗಂಡಿನ ಕಡೆಯವರು ಯೋಚಿಸಿ ಮಾತಾಡಬೇಕಾಗಿದೆ. 

ಗಂಡು ಮಗ ಗಂಡು ಮಗ ಎಂದು ಮುದ್ದಾಡಿ ಮೊಂಡಾಗಿಬಿಟ್ಟಿದ್ದಾನೆ. ಗಂಡುಮಕ್ಕಳು ಮನೆಗೆಲಸ ಕಲಿಯುವುದು ಬೇಡ ಎಂದು  ಹಿಂದಿನಿಂದಲೂ ಬಂದ ಆಚರಣೆಯನ್ನೇ ನಂಬಿ ಬೆಳೆಸಿದ ಪೋಷಕರು ಇಂದು ಗೋಳೋ ಎನ್ನಬೇಕಾಗಿದೆ. ಮದುವೆಯಾಗಬೇಕೆಂದರೆ ಹುಡುಗಿಯರ ನೂರೆಂಟು ಡಿಮ್ಯಾಂಡ್‌ಗಳನ್ನು ಪೂರೈಸುವುದೇ ಆತನಿಗೆ ಕಷ್ಟ ಸಾಧ್ಯವಾಗಿದೆ.

ಸಂಗಾತಿಯೊಂದಿಗಿನ ವಯಸ್ಸಿನ ಅಂತರ ಭವಿಷ್ಯದ ಕನಸಿಗೆ ಕುತ್ತು!

ಹಿಂದೆ ಹೆಣ್ಣುಮಕ್ಕಳು ಹಾಗೂ ಅವರ ತಂದೆತಾಯಿಯ ಬಳಿ ಡಿಮ್ಯಾಂಡೋ ಡಿಮ್ಯಾಂಡ್ ಮಾಡುತ್ತಿದ್ದ ತಂದೆತಾಯಿಯರೆಲ್ಲ ಇಂದು ನಾವೇ ಖರ್ಚು ಹಾಕಿಕೊಂಡು ಮದುವೆಯಾಗುತ್ತೇವೆಂದರೂ ಒಪ್ಪದ ಹುಡುಗಿಯರು. ಹುಡುಗನ ಎಷ್ಟೆಲ್ಲ ಕ್ವಾಲಿಟಿಗಳನ್ನು ಅಳೆದು ತೂಗಿ ಹಾಕಿದರೂ, ಹೆಣ್ಣುಮಕ್ಕಳ ಸಮಕ್ಕೆ ತೂಗದ ತಕ್ಕಡಿ. ಒಂದು ವೇಳೆ ಎಲ್ಲ ಓಕೆಯಾಗಿ ಮದುವೆಯಾದರೂ ಇಂದಿನ 'ಸಮಾನತೆ'ಯ ಹೋರಾಟದಲ್ಲಿ ಸೋತು ಸಪ್ಪಗಾಗುವ ಗಂಡ! 

ಹೆಂಡತಿ ಕೂಡಾ ಗಂಡನ ಸಮಕ್ಕೆ ದುಡಿಯುವಾಗ, ಯಾವುದಕ್ಕೂ ಪತಿಯ ಮೇಲೆ ಅವಲಂಬನೆ ಇಲ್ಲದಾಗ, ಮನೆಗೆಲಸಗಳನ್ನೂ ಸಮವಾಗಿ ಹಂಚಿಕೊಳ್ಳಲು ಬಯಸುತ್ತಾಳೆ. ಗಂಡನನ್ನು ಈಗ 'ಪತಿದೇವ'ರಾಗಿ ಅಲ್ಲ, ಬೆಸ್ಟ್ ಫ್ರೆಂಡ್ ಆಗಿ ನೋಡಬಯಸುವ ಹೆಂಡತಿ ಮಗುವಿನ ಡೈಪರ್ ಬದಲಿಸುವುದರಿಂದ ಹಿಡಿದು ಅಡುಗೆ ಮಾಡುವವರೆಗೆ ಎಲ್ಲದರಲ್ಲೂ ಆತನ ಶೇರ್ ಬಯಸುತ್ತಾಳೆ. 
ಹೆಣ್ಣುಮಕ್ಕಳಂತೆ ಎಲ್ಲೇ ಬಿಟ್ಟರೂ ಬದುಕಿಕೊಳ್ಳುವುದು ಆತನಿಗೆ ದುಸ್ತರ.. ಏಕೆಂದರೆ, ಬೇಸಿಕ್ ಎನಿಸಿಕೊಂಡ ಬಟ್ಟೆ ಒಗೆಯುವುದು, ಪಾತ್ರೆ ತೊಳೆಯುವುದು, ಅಡಿಗೆ ಮಾಡಿಕೊಳ್ಳುವುದು, ಮನೆ ಕಚೇರಿ ಎರಡನ್ನೂ ನಿಭಾಯಿಸುವುದು ಆತನಿಗೆ ಬರುವುದಿಲ್ಲ. ಇದಕ್ಕೆಲ್ಲ ಕಾರಣ ಆತ ಗಂಡೆಂದು ಮೆರೆಸಿ ಬೆಳೆಸಿದ ಪೋಷಕರು. 

ಈಗ ಗಂಡನ್ನು ಕೂಡಾ ಸಂಪೂರ್ಣ ಸ್ವಾವಲಂಬಿಯಾಗಿ ಬೆಳೆಸುವ ಅಗತ್ಯವಿದೆ. ಹೆಣ್ಣು ಸಿಗಲೆಂದಲ್ಲ, ಆತ ಬದುಕಲ್ಲಿ ಯಾವುದಕ್ಕೂ ಜಗ್ಗದಿರಲಿ ಎಂದು. ಪುರುಷ ಅಹಂಕಾರವಿಲ್ಲದೆ, ತಮ್ಮ ಕೆಲಸ ತಾವು ಮಾಡಿಕೊಳ್ಳುವುದನ್ನು ಗಂಡು ಮಕ್ಕಳಿಗೆ ಚಿಕ್ಕಂದಿನಿಂದಲೇ ಕಲಿಸಬೇಕಿದೆ. ಕೆಲಸದವರು ಸಿಗದಿರುವ ಈ ದಿನಗಳಲ್ಲಿ, ಕೆಲಸವನ್ನು ಸಮನಾಗಿ ಹಂಚಿಕೊಳ್ಳಬಯಸುವ ಮಹಿಳೆಯರ ಕಾಲದಲ್ಲಿ, ದೇಶವಿದೇಶ ಎಲ್ಲೇ ಹೋಗಲಿ, ಆರಾಮಾಗಿ ಬದುಕಬೇಕೆಂದರೆ ಅಡಿಗೆ, ಮನೆಗೆಲಸದ ಅರಿವು ಬೇಕು. ಇದು ವೈವಾಹಿಕ ಬದುಕನ್ನೂ ಸುಲಲಿತ, ಸುಗಮಗೊಳಿಸುತ್ತದೆ. 

ಸಿಂಗಲ್ ಬೈ ಚಾಯ್ಸ್; ಮದುವೆ ಗೊಡವೆ ಬೇಡ ಎನ್ನುತ್ತಿರುವ ಮಹಿಳೆ

ಹೌದು, ಹೆಣ್ಣು ಮನೆಯೊಳಗೂ ಹೊರಗೂ ಸೈ ಎನಿಸಿಕೊಂಡಿದ್ದಾಳೆ, ಗಂಡು ಮುಂಚಿನಿಂದಲೂ ಹೊರಗೆ ತನ್ನ ಸಾಮರ್ಥ್ಯ ಸಾಬೀತುಪಡಿಸಿದ್ದಾನೆ, ಒಳಗೆ ಕೂಡಾ ಗೆದ್ದು ತೋರಿಸಲು ಆತ ಸಜ್ಜಾಗಬೇಕಿದೆ. 

Follow Us:
Download App:
  • android
  • ios