ವಂದೇ ಮಾತರಂ ಹಾಡದವರನ್ನು ದೇಶ ಬಿಟ್ಟು ಹೋಗಿ ಎನ್ನುವ ಬಿಜೆಪಿಗೆ, ನೋಂದಣಿ ಮಾಡಿಸದ ಆರ್‌ಎಸ್‌ಎಸ್‌ ಪಾಕಿಸ್ತಾನಕ್ಕೆ ಹೋಗಬೇಕೇ ಎಂದು ಸಚಿವ ಶಿವರಾಜ ತಂಗಡಗಿ ಪ್ರಶ್ನಿಸಿದ್ದಾರೆ. ಸಚಿವ ನಾಗೇಂದ್ರ ರಾಜೀನಾಮೆ ವಿಚಾರದಲ್ಲಿ ಬಿಜೆಪಿಗೆ ತಿರುಗೇಟು, ಹೇಳಿದ್ದೇನು?

ಕೊಪ್ಪಳ (ಆ.23): 'ವಂದೇ ಮಾತರಂ'ಹಾಡದವರು ದೇಶ ಬಿಟ್ಟು ಹೋಗಿ ಎಂದು ಬಿಜೆಪಿಯವರು ಹೇಳ್ತಿದ್ದಾರೆ. ಹಾಗಾದ್ರೆ ರಾಷ್ಟ್ರಗೀತೆ ಹಾಡಲಾರದವರು, ರಾಷ್ಟ್ರ ಧ್ವಜ ಹಾರಿಸದವರು, ರಿಜಿಸ್ಟ್ರೇಶನ್ ಮಾಡಿಸಲಾಗದವರು ಪಾಕಿಸ್ತಾನಕ್ಕೆ ಹೋಗಬೇಕಾ? ಎಂದು ಆರೆಸ್ಸೆಸ್ ಬಿಜೆಪಿ ವಿರುದ್ಧ ಸಚಿವ ಶಿವರಾಜ ತಂಗಡಗಿ ವಾಗ್ದಾಳಿ ನಡೆಸಿದರು.

ಇಂದು ಕೊಪ್ಪಳ ಜಿಲ್ಲೆಯ ಕನಕಗಿರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಈ ದೇಶದಲ್ಲಿ ಇಂಥ ವ್ಯವಸ್ಥೆ ಇದೆ ನೋಡಿ, ಪ್ರತಿಯೊಂದು ಸಂಸ್ಥೆ ಕಾನೂನು ಪ್ರಕಾರ ರಿಜಿಸ್ಟ್ರೇಶನ್ ಮಾಡಿಸಬೇಕು. ಆದರೆ ಇವರು ರಿಜಿಸ್ಟ್ರೇಶನ್ ಮಾಡಿಸೊಲ್ಲ ಎಂದು ಈ ದೇಶಭಕ್ತರು ವಾದ ಮಾಡ್ತಾರಲ್ಲ ಇವರು ಎಲ್ಲಿಗೆ ಹೋಗಬೇಕು? ಬೆಂಗಳೂರಲ್ಲಿ ಒಂದು ನಾಯಿ ಸಾಕಲು ರಜಿಸ್ಟ್ರೇಶನ್ ಮಾಡಿಸಬೇಕು. ಹೀಗಿರುವಾಗ ನೂರು ವರ್ಷ ಪೂರೈಸಿದ ಸಂಸ್ಥೆಯೊಂದು ಇನ್ನುವರೆಗೆ ರಿಜಿಸ್ಟ್ರೇಶನ್ ಆಗಿಲ್ಲ, ಮುಂದೆನೂ ಮಾಡಿಸಲ್ಲ ಅಂತಾರೆ ಅಂದ್ರೆ ಏನರ್ಥ? ಎಂದು ಪ್ರಶ್ನಿಸಿದರು.

ಕಾಂಗ್ರೆಸ್ 1937 ರಿಂದ ವಂದೇ ಮಾತರಂ ಹಾಡುತ್ತಿದೆ

1937 ರಿಂದಲೇ ನಾವು ವಂದೇ ಮಾತರಂ ಹಾಡುತ್ತಿದ್ದೇವೆ. ನಾವು ಅಂದಿನಿಂದ ಇಂದಿನವರೆಗೂ ವಂದೇ ಮಾತರಂನ ಎರಡು ಚರಣಗಳನ್ನ ಹಾಡುತ್ತಾ ಬಂದಿದ್ದೇವೆ. ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಎರಡು ಚರಣ ಹಾಡುತ್ತೇವೆ. ಸರ್ಕಾರದ ಕಾರ್ಯಕ್ರಮ ಇದ್ದಾಗ ಸಂಪೂರ್ಣ ಹಾಡ್ತೀವಿ. ಈಗ ವಂದೇ ಮಾತರಂ ಹಾಡುವ ಬಗ್ಗೆ ಕಾನೂನು ಮಾಡುವ ಬಿಜೆಪಿಯವರು

1937 ರಲ್ಲಿ ಇದ್ರಾ? ನಮ್ಮ ರೀತಿ ಇವರು(ಆರ್‌ಎಸ್‌ಎಸ್‌) ಯಾಕೆ ರಿಜಿಸ್ಟ್ರೇಶನ್ ಮಾಡಿಸ್ತೀವಿ ಅಂತಾ ಒಪ್ಪಿಕೊಳ್ಳುತ್ತಿಲ್ಲ? ಎಂದು ಪ್ರಶ್ನಿಸಿದರು.

ಇನ್ನು ನಾಗೇಂದ್ರ ರಾಜೀನಾಮೆಗೆ ಬಿಜೆಪಿ ಪ್ರತಿಭಟನೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ತಂಗಡಗಿ, ಬಿಜೆಪಿಯವರಿಗೆ ಮಾತಾಡೋಕೆ ಯಾವ ವಿಷಯ ಸಿಗ್ತಿಲ್ಲ. ಹೀಗಾಗಿ ನಾಗೇಂದ್ರ ವಿಚಾರ ಇಟ್ಕೊಂಡು ರಾಜಕೀಯ ಮಾಡ್ತಿದ್ದಾರೆ. ಹಾಗೆ ನೋಡಿದ್ರೆ ಕೇಂದ್ರದ 23 ಮಂತ್ರಿಗಳ ಮೇಲೆ ಕೇಸ್ ಇವೆ. ಶುದ್ಧ ಹಸ್ತದ 56 ಇಂಚಿನ ಮೋದಿ ಸಂಪುಟದಲ್ಲಿನ 23 ಜನರ ಮೇಲೆ ಕೇಸ್ ಇವೆ. ಇಂಥವರು ನಾಗೇಂದ್ರ ಬಗ್ಗೆ ಮಾತನಾಡುವ ಯೋಗ್ಯತೆ ಇಲ್ಲ. ನಾಗೇಂದ್ರ ಆರೋಪಿ ಅಷ್ಟೇ, ಅಪರಾಧಿ ಅಲ್ಲ ಎಂದು ಸಮರ್ಥಿಸಿಕೊಂಡರು. ನಾವು ಎಲ್ಲೇ ಹೋದ್ರೂ ಉತ್ತರ ಕೊಡ್ತೇವೆ. ಇದು ಪ್ರಜಾಪ್ರಭುತ್ವ. ಆದರೆ ಈ ದೇಶದ ಪ್ರಧಾನಿ ಯಾಕೆ ಉತ್ತರ ಕೊಡುತ್ತಿಲ್ಲ ಎಂದು ಪ್ರತಿಭಟನಕಾರರ ಮೇಲೆ ಪೆಲ್ಲೆಟ್ ಗನ್ ಪ್ರಕರಣ ಸಂಬಂಧ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.