ಅಧಿಕಾರದ ವ್ಯಾಮೋಹದಿಂದ ದೇಶವನ್ನು ಹಾಳುಗೆಡವುತ್ತಿರುವ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕೋಮು ಭಾವನೆ ಕೆರಳಿಸುವುದನ್ನು ಬಿಟ್ಟು ಯುವಕರ ಶಿಕ್ಷಣ ಮತ್ತು ಉದ್ಯೋಗದತ್ತ ಗಮನ ಹರಿಸದಿದ್ದರೆ, ಯುವ ಸಮೂಹವೇ ಬೆನ್ನಟ್ಟಿ ಹೊಡೆಯಲಿದೆ. ಎಚ್ಚರಿಕೆ

ಕಲಬುರಗಿ (ಆ.23): ಅಧಿಕಾರದ ಮೇಲಿನ ವ್ಯಾಮೋಹದಿಂದಾಗಿ ದೇಶವನ್ನೇ ಹಾಳುಗೆಡವುತ್ತಿರುವ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ ಅವರನ್ನು ಜೆನ್‌ ಝೀಗಳು (ಯುವ ಸಮೂಹ) ಬೆನ್ನಟ್ಟಿ ಹೊಡೆಯಲಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದಾರೆ.

'ಧೀಮಂತ ಧುರಿಣ ಡಾ. ಮಲ್ಲಿಕಾರ್ಜುನ ಖರ್ಗೆ' ಅಭಿನಂದನಾ ಕೃತಿ ಬಿಡುಗಡೆ

ನಗರದಲ್ಲಿ ಶನಿವಾರ ಸುಮೇಧ ಪ್ರಕಾಶನ ಹೊರತಂದಿರುವ ‘ಧೀಮಂತ ಧುರಿಣ ಡಾ.ಮಲ್ಲಿಕಾರ್ಜುನ ಖರ್ಗೆ’ ಅಭಿನಂದನಾ ಕೃತಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿ, ಅಧಿಕಾರದ ಆಸೆಗಾಗಿ ನೀವು (ಬಿಜೆಪಿ ನಾಯಕರು) ದೇಶದುದ್ದಗಲಕ್ಕೂ ಕೋಮು ಭಾವನೆ ಬಿತ್ತುತ್ತಾ ಹೊರಟರೆ ಯುವಕರು ನಿಮ್ಮನ್ನು ಬೆನ್ನಟ್ಟಿ ಹೊಡೀತಾರೆ ಎಂದು ಎಚ್ಚರಿಸಿದರು.

ಅಧಿಕಾರ ಬೇಕು, ದೇಶ ಬೇಡ. ವಂದೇ ಮಾತರಂ 2 ಚರಣ ಹೇಳ್ತೀವಿ ಅಂದ್ರೆ ದೇಶದ್ರೋಹಿ ಎನ್ನೋದು, ಪ್ರಗತಿಪರ ಚಿಂತಕರಿಗೆ ದಿಮಾಗಿ ನಕ್ಸಲ್ ಅನ್ನೋದನ್ನೆಲ್ಲಾ ಬಿಟ್ಟು ಯುವಕರಿಗೆ ಶಿಕ್ಷಣ ಕೊಡಿ, ಪರೀಕ್ಷೆ ಸರಿಯಾಗಿ ನಡೆಸಿ. ಕೋಮು ಭಾವನೆ ಕೆರಳಿಸುವ ನಿಮ್ಮ ಧೋರಣೆಯನ್ನು ಇದೇ ರೀತಿ ಮುಂದುವರಿಸಿದರೆ ಈ ದೇಶದ ಯುವಕರು ನಿಮ್ಮನ್ನು ಹಂಗೇ ಬಿಡೋದಿಲ್ಲ, ಅಟ್ಟಾಡಿಸಿಕೊಡು ಬರ್ತಾರೆ ಎಂದು ಮೋದಿ- ಶಾಗೆ ಚಾಟಿ ಬೀಸಿದರು.

ಮೋದಿ ಮಾತಲ್ಲೇ ಮಾತ್ರ ಬುಲೆಟ್‌:

ದೇಶದ ಶಿಕ್ಷಣ ರಂಗದಲ್ಲಿ ಅರಾಜಕತೆ ಹುಟ್ಟಿಕೊಂಡಿದೆ. ಮೋದಿ ಮನ್‌ ಕೀ ಬಾತ್‌ ಬಿಟ್ಟು ಜನ್‌ ಕೀ ಬಾತ್‌ ಹೇಳಲಿ. ಮೋದಿ ಶಿಕ್ಷಣ, ಉದ್ಯೋಗದಂತಹ ಯುವಜನರ ಸಮಸ್ಯೆಗಳತ್ತ ಗಮನ ಕೊಡುತ್ತಿಲ್ಲ. ದೌರ್ಜನ್ಯ, ಅನ್ಯಾಯ ಹೆಚ್ಚಾಗಿ ಯುವಕರು ದಂಗೆ ಏಳುತ್ತಿದ್ದಾರೆ. ಬುಲೆಟ್‌ ಟ್ರೇನ್ ಕೇವಲ ಮೋದಿ ಮಾತಲ್ಲೇ ಓಡುತ್ತಿದ್ದು, ವಾಸ್ತವದಲ್ಲಿ ಮೋದಿ ಸರ್ಕಾರ ವಿದ್ಯಾರ್ಥಿಗಳ ಮೇಲೆ ಬುಲೆಟ್‌ ಹಾರಿಸುತ್ತಿದೆ ಎಂದು ಖರ್ಗೆ ಟೀಕಿಸಿದರು.