ಠಾಣೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ 'ವಂದೇ ಮಾತರಂ'ನ ಅನಧಿಕೃತ ಆವೃತ್ತಿ ಪ್ರಸಾರವಾಗಿದ್ದು, ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ವೇದಿಕೆಯಲ್ಲೇ ಆಯೋಜಕರಿಗೆ ಎಚ್ಚರಿಕೆ ನೀಡಿದ್ದಾರೆ.

ಮುಂಬೈ (ಆ.18): ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ರಾಷ್ಟ್ರೀಯ ಗೀತೆ 'ವಂದೇ ಮಾತರಂ'ನ ಅಧಿಕೃತ ಆವೃತ್ತಿಯ ಬದಲಿಗೆ ದಿವಂಗತ ಗಾಯಕಿ ಲತಾ ಮಂಗೇಷ್ಕರ್ ಅವರು ಹಾಡಿದ್ದ ಖಾಸಗಿ ಆಲ್ಬಮ್‌ನ ಆವೃತ್ತಿಯನ್ನು ಪ್ರಸಾರ ಮಾಡಿದ ಘಟನೆ ಮಹಾರಾಷ್ಟ್ರದ ಠಾಣೆಯಲ್ಲಿ ನಡೆದಿದೆ. ಈ ಎಡವಟ್ಟಿಗೆ ವೇದಿಕೆಯಲ್ಲೇ ಅಸಮಾಧಾನ ವ್ಯಕ್ತಪಡಿಸಿರುವ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ, ಅಧಿಕೃತ ಗೀತೆಯನ್ನು ಮಾತ್ರವೇ ಪ್ರಸಾರ ಮಾಡುವಂತೆ ಆಯೋಜಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಆಟೋ ರಕ್ಷಾ ಮತ್ತು ಕ್ಯಾಬ್ ಚಾಲಕರಿಗಾಗಿ ಆಯೋಜಿಸಲಾಗಿದ್ದ ಮರಾಠಿ ಭಾಷಾ ತರಬೇತಿ ಶಿಬಿರದ ಸಮಾರೋಪ ಹಾಗೂ ಪ್ರಮಾಣಪತ್ರ ವಿತರಣಾ ಸಮಾರಂಭದಲ್ಲಿ ಈ ಘಟನೆ ನಡೆದಿದ್ದು, ಇದರ ವಿಡಿಯೋ ಪ್ರಸ್ತುತ ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.

ಆಯೋಜಕರ ಎಡವಟ್ಟು, ಶಿಂಧೆ ಎಚ್ಚರಿಕೆ

ಕಾರ್ಯಕ್ರಮದ ಸಮಾರೋಪದ ವೇಳೆ ಮಾತನಾಡಿದ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ, ಸಂಸತ್ತು ಅನುಮೋದಿಸಿರುವ 'ವಂದೇ ಮಾತರಂ' ರಾಷ್ಟ್ರೀಯ ಗೀತೆಯ ಅಧಿಕೃತ ಶೈಲಿ ಹಾಗೂ ಆವೃತ್ತಿಯನ್ನು ಮಾತ್ರವೇ ಪ್ರತಿಯೊಂದು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಬಳಸುವುದು ಕಡ್ಡಾಯ. ಇಂದಿನ ಕಾರ್ಯಕ್ರಮದಲ್ಲಿ ಪ್ರಸಾರವಾದ ಆವೃತ್ತಿಯು ಅನುಮೋದಿತ ಶೈಲಿಯಲ್ಲಿರಲಿಲ್ಲ ಎಂದು ಸಭೆಯಲ್ಲೇ ಬಹಿರಂಗವಾಗಿ ಆಯೋಜಕರ ಗಮನಕ್ಕೆ ತಂದರು.

ಅಲ್ಲದೆ, ರಾಷ್ಟ್ರೀಯ ಗೀತೆಯ ಪವಿತ್ರತೆಯನ್ನು ಪ್ರತಿಯೊಬ್ಬರೂ ಕಾಪಾಡಿಕೊಳ್ಳಬೇಕು ಎಂದು ಬಲವಾಗಿ ಪ್ರತಿಪಾದಿಸಿದ ಶಿಂಧೆ, ಭವಿಷ್ಯದಲ್ಲಿ ಇಂತಹ ತಪ್ಪುಗಳು ಮರುಕಳಿಸದಂತೆ ಆಯೋಜಕರು ಸದಾ ಜಾಗರೂಕರಾಗಿರಬೇಕು ಎಂದು ಕಿವಿಮಾತು ಹೇಳಿದರು.

'ವಂದೇ ಮಾತರಂ' ಸುತ್ತ ಹೆಚ್ಚಿದ ರಾಜಕೀಯ ಕಾವು

ಠಾಣೆ ಕಾರ್ಯಕ್ರಮದಲ್ಲಿ ನಡೆದ ಈ ಎಡವಟ್ಟು, ಮಹಾರಾಷ್ಟ್ರ ಹಾಗೂ ದೇಶಾದ್ಯಂತ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ನಡುವೆ 'ವಂದೇ ಮಾತರಂ' ವಿಚಾರವಾಗಿ ರಾಜಕೀಯ ಆರೋಪ-ಪ್ರತ್ಯಾರೋಪಗಳು ತೀವ್ರಗೊಂಡಿರುವ ಸಮಯದಲ್ಲೇ ಸಂಭವಿಸಿದೆ.

ಸೋನಿಯಾ ಗಾಂಧಿ ವಿಡಿಯೋ ವಿವಾದ: ಸ್ವಾತಂತ್ರ್ಯ ದಿನಾಚರಣೆಯಂದು ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ 'ವಂದೇ ಮಾತರಂ' ಗೀತೆ ಪ್ರಸಾರವಾಗುತ್ತಿದ್ದಾಗ ಸೋನಿಯಾ ಗಾಂಧಿ ಸಂಪೂರ್ಣ ಗೀತೆಯನ್ನು ಹಾಡದಂತೆ ಸನ್ನೆ ಮಾಡಿ ತಡೆದಿದ್ದಾರೆ ಎಂದು ಆರೋಪಿಸಿ ವಿಡಿಯೋವೊಂದನ್ನು ವಿರೋಧ ಪಕ್ಷಗಳು ವೈರಲ್ ಮಾಡಿದ್ದವು.

ಖರ್ಗೆ ಮೇಲಿನ ಬಿಜೆಪಿ ಆರೋಪ: ದಕ್ಷಿಣ ಗೋವಾದಲ್ಲಿ ನಡೆದ ಸಾರ್ವಜನಿಕ ಸಭೆಯೊಂದರಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ರಾಷ್ಟ್ರೀಯ ಗೀತೆಯ ಅಪೂರ್ಣ ಆವೃತ್ತಿಯನ್ನು ಹಾಡುವ ಮೂಲಕ ದೇಶದ ರಾಷ್ಟ್ರೀಯ ಗೀತೆಗೆ ಅಪಮಾನ ಮಾಡಿದ್ದಾರೆ ಎಂದು ಬಿಜೆಪಿ ಗಂಭೀರ ಆರೋಪ ಮಾಡಿತ್ತು.

ಬಿಜೆಪಿ ಆರೋಪಕ್ಕೆ ಮಲ್ಲಿಕಾರ್ಜುನ ಖರ್ಗೆ ತಿರುಗೇಟು

ಬಿಜೆಪಿಯ ಈ ಆರೋಪಗಳಿಗೆ ತೀವ್ರವಾಗಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರೂ, ಸರ್ದಾರ್ ವಲ್ಲಭಭಾಯಿ ಪಟೇಲ್ ಮತ್ತು ಅಟಲ್ ಬಿಹಾರಿ ವಾಜಪೇಯಿ ಅವರು ಯಾವ 'ವಂದೇ ಮಾತರಂ' ಗೀತೆಯನ್ನು ಹಾಡಿದ್ದರೊ, ಅದನ್ನೇ ನಾನೂ ಹಾಡಿದ್ದೇನೆ. ಅದೊಂದು ಅಪರಾಧ ಅಂತಿದ್ದರೆ ಗಾಂಧೀಜಿ, ನೆಹರೂ ಮತ್ತು ಪಟೇಲರ ಮೇಲೆಯೇ ಮೊದಲು ಪ್ರಕರಣ ದಾಖಲಿಸಿ ಎಂದು ಸವಾಲು ಎಸೆದಿದ್ದಾರೆ.

"ಸ್ವಾತಂತ್ರ್ಯ ಪೂರ್ವದಲ್ಲೇ ಕಾಂಗ್ರೆಸ್ ಪಕ್ಷವು ರಾಷ್ಟ್ರೀಯ ಗೀತೆ ಮತ್ತು ರಾಷ್ಟ್ರಗೀತೆಯ ಕುರಿತು ಕ್ರಾಂತಿಕಾರಿ ನಿರ್ಣಯಗಳನ್ನು ತೆಗೆದುಕೊಂಡಿತ್ತು ಎಂಬ ಇತಿಹಾಸ ಬಿಜೆಪಿ ನಾಯಕರಿಗೆ ತಿಳಿದಿಲ್ಲ. ದಶಕಗಳಿಂದ ಕಾಂಗ್ರೆಸ್‌ನಲ್ಲಿ ಹಾಡಿಕೊಂಡು ಬರಲಾಗುತ್ತಿರುವ ಅದೇ ಸಾಂಪ್ರದಾಯಿಕ ಹಾಗೂ ಅಧಿಕೃತ ಆವೃತ್ತಿಯನ್ನೇ ನಾನು ಅನುಸರಿಸಿದ್ದೇನೆ" ಎಂದು ಖರ್ಗೆ ಸ್ಪಷ್ಟಪಡಿಸಿದ್ದಾರೆ.

Scroll to load tweet…