ಬೆಂಗಳೂರು(ಮೇ  27)  ಸಿಡಿಯಲ್ಲಿ ಇರುವುದು ನಾನೇ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ ಎನ್ನುವುದು ವರದಿಯಾದ ನಂತರ ಪ್ರಕರಣದ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿದ್ದಾರೆ. ಜತೆಗೆ ಅನೇಕ ಪ್ರಶ್ನೆಗಳನ್ನು ಮುಂದೆ ಇಟ್ಟಿದ್ದಾರೆ.

ರಮೇಶ್ ಜಾರಕಿಹೊಳಿ ಲೈಂಗಿಕ ಹಗರಣ ಬೆಳಕಿಗೆ ಬಂದು ಮೂರು ತಿಂಗಳು ಆಗುತ್ತಾ ಬಂದಿದೆ. ದಿನೇಶ್ ಕಲ್ಲಹಳ್ಳಿ ಮೂರು ತಿಂಗಳ ಹಿಂದೆ ಕಮೀಷನರ್ ಭೇಟಿ ಮಾಡಿ ದೂರು ನೀಡುತ್ತಾರೆ. ಆದರೆ ದೂರು ಸ್ವೀಕಾರ ಮಾಡದೇ, ಕಬ್ಬನ್ ಪಾರ್ಕ್ ಸ್ಟೇಷನ್‌ ಗೆ ಕಳಿಸುತ್ತಾರೆ. ಅಲ್ಲಿ  ಕೂಡಾ ಎಫ್ ಐ ಆರ್ ಮಾಡಲ್ಲ. ಇದೆಲ್ಲಾ ಮಾಧ್ಯಮ ಗಳಲ್ಲಿ ಬಂದ ಬಳಿಕ ರಮೇಶ್ ಜಾರಕಿಹೊಳಿ ಹೇಳಿಕೆ ನೀಡಿದ್ರು. ಇದೆಲ್ಲಾ ಒಂದು ಷಡ್ಯಂತ್ರ, ನಕಲಿ ಸಿಡಿ ಎಂದು ಹೇಳಿದ್ದರು.  ಮಾರನೇ ದಿನವೇ ಅವರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ. ಅದಾದ ಮೂರು ದಿನಗಳಿಗೆ ಆರು ಜನ ಸಚಿವರು ಕೋರ್ಟ್ ಗೆ ಹೋಗಿ ತಡೆಯಾಜ್ಞೆ ತರುತ್ತಾರೆ. ಏಳನೇ ತಾರೀಖು ದಿನೇಶ್ ಕಲ್ಲಹಳ್ಳಿ  ದೂರನ್ನು ವಾಪಸ್ ಪಡೆಯಲು ಮುಂದಾಗ್ತಾರೆ. ಒಂಭತ್ತನೇ ತಾರೀಖು ರಮೇಶ್ ಜಾರಕಿಹೊಳಿ ರಾಜ್ಯದ ಗೃಹ ಸಚಿವರಿಗೆ ಪತ್ರ ಬರೆಯತ್ತಾರೆ. ನನ್ನ ವಿರುದ್ದ ಷಡ್ಯಂತ್ರ ನಡೆಯುತ್ತಿದೆ, ಸಿಡಿಯಲ್ಲಿ ಇರೋದು ನಾನಲ್ಲ ಎಂದು ಹೇಳುತ್ತಾರೆ ಹೀಗೆ ಸಿಡಿ ಕತೆಯನ್ನು ಸಿದ್ದರಾಮಯ್ಯ ಹೇಳುತ್ತಾ ಹೋದರು.

ಸಿಡಿಯಲ್ಲಿರುವುದು ನಾನೇ; ಒಪ್ಪಿಕೊಂಡ ರಮೇಶ್ ಜಾರಕಿಹೊಳಿ

ಹದಿಮೂರನೇ ತಾರೀಖು ರಮೇಶ್ ಜಾರಕಿಹೊಳಿ, ನಾಗರಾಜ್ ಎಂಬ ಮಾಜಿ ಶಾಸಕನ ಮೂಲಕ ಸದಾಶಿವನಗರ ಪೋಲೀಸ್ ಸ್ಟೇಷನ್ ನಲ್ಲಿ ಒಂದು ದೂರು ನೀಡುತ್ತಾರೆ. ಅದರಲ್ಲಿ ಯಾರ ಹೆಸರನ್ನು ಕೂಡಾ ನಮೂದು ಮಾಡಿರಲ್ಲ ಎಸ್ ಐಟಿ ಯವರು ಶ್ರವಣ್ ಮತ್ತು ನರೇಶ್ ಮನೆ ಮೇಲೆ ದಾಳಿ ಮಾಡುತ್ತಾರೆ. ನಂತರ ಸಂತ್ರಸ್ತ ಯುವತಿ ಒಂದು ವಿಡಿಯೋ ಬಿಡುಗಡೆ ಮಾಡಿ ರಮೇಶ್ ಜಾರಕಿಹೊಳಿ ಮೇಲೆ ಆರೋಪ ಮಾಡುತ್ತಾರೆ. ಇಂತಹ ಪ್ರಕರಣಗಳಲ್ಲಿ  ಕಾನೂನು ಪ್ರಕಾರ ಅರವತ್ತು ದಿನಗಳಲ್ಲಿ ತನಿಖೆ ಮುಗಿಯಬೇಕು. ಆದರೆ ಈ ಪ್ರಕರಣದಲ್ಲಿ ತನಿಖೆ ಸರಿಯಾದ ದಿಕ್ಕಿನಲ್ಲಿ ನಡೆಯಲಿಲ್ಲ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಇಷ್ಟೆಲ್ಲಾ ನಡೆದ ನಂತರ ರಮೇಶ್ ಜಾರಕಿಹೊಳಿ ಬಂಧನ ಆಗಬೇಕಿತ್ತು. ದೇಶದ ಇತಿಹಾಸದಲ್ಲಿ ಆರೋಪಿ ಬಂಧನ ಆಗದೇ ಇರೋದು ಇದೇ ಪ್ರಕರಣದಲ್ಲಿ. ಸರ್ಕಾರ ರಮೇಶ್ ಜಾರಕಿಹೊಳಿ ರಕ್ಷಣೆಗೆ ನಿಂತು ಬಿಡ್ತು. ಇಂದೂ ಅವರು ಬೇರೆ ಬೇರೆ ಕಡೆ ಓಡಾಡಿಕೊಂಡಿದ್ದಾರೆ. ಪೊಲೀಸ್ ಮೇಲೆ ಸರ್ಕಾರ ಒತ್ತಡ ಹಾಕಿದೆ. ರಮೇಶ್ ಜಾರಕಿಹೊಳಿ ಬಂಧಿಸದಂತೆ ಸರ್ಕಾರ ಪೋಲೀಸ್ ಇಲಾಖೆಗೆ ಸೂಚಿಸಿದೆ ಎಂದು ಆರೋಪಿಸಿದರು.

ಕಳೆದ ಶನಿವಾರ  ರಮೇಶ್ ಜಾರಕಿಹೊಳಿ ಗೃಹ ಮಂತ್ರಿ ಗಳನ್ನು ಭೇಟಿ ಮಾಡಿದ್ದಾರೆ. ಎರಡು ಗಂಟೆ ಕಾಲ ಮಾತನಾಡಿದ್ದಾರೆ. ಇದೆಲ್ಲಾ ನೋಡಿದ್ರೆ ಸರ್ಕಾರ ಆರೋಪಿಯನ್ನು ರಕ್ಷಣೆ ಮಾಡ್ತಿರೋದು ಗೊತ್ತಾಗ್ತಿದೆ. ಒಬ್ಬ ಅತ್ಯಾಚಾರ ಆರೋಪಿ ಗೃಹ ಸಚಿವರ ಭೇಟಿ ಮಾಡಿದ್ದು ಇದೇ ಮೊದಲು.  ಇಲ್ಲಿತನಕ  ಜಾರಕಿಹೊಳಿ ಸಿಡಿಯಲ್ಲಿ ಇರುವುದು ನಾನಲ್ಲ ಅಂತಿದ್ರು. ಆದರೆ ಈಗ ಸಿಡಿಯಲ್ಲಿ ಇರೋದು ನಾನೇ ಅಂತಿದಾರೆ. ನಾನು ನಾನೇ,, ಅವಳು ಅವಳೇ ಅಂತಿದ್ದಾರೆ ಎಂದರು.

ಸಂತ್ರಸ್ತೆ ಹೇಳಿಕೆ ಪ್ರಕಾರ ಲೈಂಗಿಕವಾಗಿ ದುರುಪಯೋಗ ಪಡಿಸಿಕೊಂಡ್ರು ಅಂತ ಹೇಳ್ತಾಳೆ. ಆದರೆ ಜಾರಕಿಹೊಳಿ  ಆಕೆಯ ಒಪ್ಪಿಗೆ ಮೇಲೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದೆವು ಅಂತಾರೆ. ಗೃಹ ಸಚಿವರ ಭೇಟಿ ಮಾಡಿದ್ದನ್ನು ರಮೇಶ್ ಜಾರಕಿಹೊಳಿ ಎಲ್ಲೂ ಹೇಳಿಲ್ಲ. ರಾಮನ ಬಗ್ಗೆ  ಮಾತನಾಡುವ ಪಕ್ಷದವರು  ಇವರು. ಈ ಪ್ರಕರಣದಲ್ಲಿ ಯಾಕೆ ಜಾರಕಿಹೊಳಿ ಪರ ನಿಂತಿದ್ದಾರೆ. ಯಾಕೆಂದರೆ ರಮೇಶ್ ಜಾರಕಿಹೊಳಿ ಸರ್ಕಾರ ಮಾಡಲು ಸಹಾಯ ಮಾಡಿದ್ದಾರೆ. ಗೃಹ ಸಚಿವನಾಗಿ ಮುಂದುವರಿಯುವ ಹಕ್ಕು ಬಸವರಾಜ್ ಬೊಮ್ಮಾಯಿಗಿಲ್ಲ. ಬೊಮ್ಮಾಯಿ ರಾಜೀನಾಮೆ ಕೊಡಬೇಕು. ಕಾನೂನು ಪ್ರಕಾರ ಪ್ರಕರಣದ ಆರೋಪಿಯನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದರು.

ಪ್ರಕರಣದ ಆರೋಪಿ ಬಂಧನ ಆಗದೇ ಇದ್ದರೆ ಸಾಕ್ಷ್ಯ ನಾಶ ಆಗುವ ಸಾದ್ಯತೆ ಇದೆ. ಯಾಕೆಂದರೆ ಆತನೊಬ್ಬ ಪ್ರಭಾವಿ. ಈ ಸರ್ಕಾರದಲ್ಲಿ ಮಹಿಳೆಯರಿಗೆ  ರಕ್ಷಣೆ ಇಲ್ಲ. ಸ್ವಾತಂತ್ರ ಸಂಸ್ಥೆ ಯಿಂದ ಈ ಪ್ರಕರಣದ ತನಿಖೆ ಆಗಬೇಕು ಅಂತಾ ಒತ್ತಾಯ ಮಾಡ್ತೇನೆ ಎಂದರು.

ಸಂತ್ರಸ್ತೆಯ ಬಗ್ಗೆ ಮತ್ತಷ್ಟು ಸ್ಫೋಟಕ ವಿಚಾರ ಬಹಿರಂಗ

ಇದೇ ವೇಳೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಇದು ಕರ್ನಾಟಕ ರಾಜ್ಯದ ಪೊಲೀಸ್ ಗೌರವದ ವಿಚಾರ. ಮುಂದೆ ಯಾವ ಪೋಲೀಸ್ ಆಫೀಸರ್ ಗಳೂ ಕೆಲಸ ಮಾಡಲು ಸಾದ್ಯವಿಲ್ಲದಂತ ಪರಿಸ್ಥಿತಿ ಆಗ್ತಿದೆ. ನಿಮ್ಮ ಕಾಲದಲ್ಲಿ ಈ ರೀತಿ ಆದರೆ ಮುಂದೆ ಎಲ್ಲಾ ಇದನ್ನೇ ಬೆರಳು ಮಾಡಿ ತೋರಿಸುವಂತಾಗುತ್ತದೆ. ಅಧಿಕಾರಿಗಳು ಇನ್ನೂ ಹತ್ತಾರು ವರ್ಷ ಇಲಾಖೆಯಲ್ಲಿ ಇರಬೇಕಾಗುತ್ತದೆ. ರಾಜಕಾರಣಿಗಳು ಬರ್ತಾರೆ  , ಹೋಗ್ತಾರೆ. ರಾಜ್ಯದ ಜನ ನಿಮ್ಮನ್ನು ನೊಡ್ತಾ ಇದಾರೆ. ಅವರೇನಾದ್ರೂ ದೂರು ಕೊಟ್ಟರೆ ಕ್ರಮ ತೆಗೆದುಕೊಳ್ತೀವಿ ಅಂತಾ ಸದನದಲ್ಲಿ ಗೃಹ ಸಚಿವರು ಹೇಳಿದ್ದರು. ಆದರೆ ಯಾಕೆ ಅರೆಸ್ಟ್ ಮಾಡಿಲ್ಲ ಎಂದು ಪ್ರಶ್ನೆ ಮಾಡಿದರು.

ಸಂತ್ರಸ್ತ ಯುವತಿಯ ತಂದೆತಾಯಿಗಳಿಗೆ ತೊಂದರೆ ಕೊಡಲಾಗ್ತಿದೆ. ನನ್ನ ಬಗ್ಗೆ ಕೂಡಾ ಯುವತಿಯ ಕುಟುಂಬದವರು ಏನೇನೋ ಮಾತಾಡಿದ್ರು. ಒತ್ತಡದಲ್ಲಿ ಏನೋ ಮಾತಾಡಿದ್ದಾರೆ. ಆದರೆ ಕಾನೂನು ಏನು ಹೇಳುತ್ತೆ ಅದರ ಪ್ರಕಾರ ನಡೆದುಕೊಳ್ಳಬೇಕು. ಕೊರೋನ ಅಂತಾ ಹೋಗಿ ಅಡ್ಮಿಟ್ ಆಗ್ತಾರೆ. ಕೊರೋನ ಬಂದರೆ  ಎಲ್ಲಾ ಬೆಂಗಳೂರಿನ ಆಸ್ಪತ್ರೆ ಹುಡುಕಿ ಬರ್ತಾರೆ ಆದರೆ ಇವರು ಗೋಕಾಕ್ ಆಸ್ಪತ್ರೆ ಯಲ್ಲಿ ಹೋಗಿ ಪಿಪಿಇ ಕಿಟ್ ಹಾಕಿಕೊಂಡು ಮಲಗ್ತಾರೆ. ಗೋಕಾಕ್ ಆಸ್ಪತ್ರೆ ಯಲ್ಲಿ ಅಂತದ್ದೇನು ಸ್ಪೆಷಲ್ ಇತ್ತೋ ಎಂದು ಜಾರಕಿಹೊಳಿ ಬಗ್ಗೆ ಡಿಕೆಶಿ ವ್ಯಂಗ್ಯವಾಡಿದರು.