ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (NHAI) ಟೋಲ್ ಬೂತ್‌ಗಳಲ್ಲಿ ನಡೆದಿದೆ ಎನ್ನಲಾದ ಕೋಟ್ಯಂತರ ರೂಪಾಯಿ ವಂಚನೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ.ಡಿ) ದೇಶಾದ್ಯಂತ ದಾಳಿ ನಡೆಸಿದೆ. ನಕಲಿ ಸಾಫ್ಟ್‌ವೇರ್ ಬಳಸಿ ಟೋಲ್ ಹಣವನ್ನು ಖಾಸಗಿ ಖಾತೆಗಳಿಗೆ ವರ್ಗಾಯಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ದೆಹಲಿ (ಸೆ.2): ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (NHAI) ಟೋಲ್ ಬೂತ್‌ಗಳನ್ನು ಗುರಿಯಾಗಿಸಿಕೊಂಡು ನಡೆದ ಕೋಟ್ಯಂತರ ರೂಪಾಯಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ದೇಶಾದ್ಯಂತ ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ.

ದೇಶದಾದ್ಯಂತ 14 ಪ್ರಮುಖ ಸ್ಥಳಗಳ ಮೇಲೆ ಇಡಿ ದಾಳಿ

ಉತ್ತರ ಪ್ರದೇಶ, ರಾಜಸ್ಥಾನ, ಮಹಾರಾಷ್ಟ್ರ, ಜಮ್ಮು, ಮಧ್ಯಪ್ರದೇಶ, ಕೋಲ್ಕತ್ತಾ ಮತ್ತು ದೆಹಲಿ ಸೇರಿದಂತೆ 14 ಪ್ರಮುಖ ಸ್ಥಳಗಳಲ್ಲಿ ಏಕಕಾಲಕ್ಕೆ ಈ ದಾಳಿಗಳು ನಡೆದಿವೆ. ಇ.ಡಿಯ ಲಖನೌ ವಲಯ ಕಚೇರಿಯ ನೇತೃತ್ವದಲ್ಲಿ ಈ ಎಲ್ಲಾ ತನಿಖಾ ಪ್ರಕ್ರಿಯೆಗಳು ನಡೆಯುತ್ತಿವೆ.

ಟೋಲ್ ರಸೀದಿಗಳನ್ನ ಸೃಷ್ಟಿಸಿ ವಂಚನೆ

ಆರೋಪಿಗಳು ಅಕ್ರಮವಾಗಿ ಸಿದ್ಧಪಡಿಸಿದ ವಿಶೇಷ ಸಾಫ್ಟ್‌ವೇರ್ ಬಳಸಿ ನಕಲಿ ಟೋಲ್ ರಸೀದಿಗಳನ್ನು ಸೃಷ್ಟಿಸಿ ಈ ದಂಧೆ ನಡೆಸಿದ್ದಾರೆ. ಟೋಲ್ ಪ್ಲಾಜಾಗಳಲ್ಲಿ ಸಂಗ್ರಹವಾದ ಹಣವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕೃತ ಖಾತೆಗೆ ಜಮಾ ಮಾಡದೆ, ಖಾಸಗಿ ವ್ಯಕ್ತಿಗಳು ಮತ್ತು ಕಂಪನಿಗಳ ಖಾತೆಗಳಿಗೆ ಅಕ್ರಮವಾಗಿ ವರ್ಗಾಯಿಸಿರುವುದನ್ನು ಇ.ಡಿ ಪತ್ತೆ ಹಚ್ಚಿದೆ. ಎನ್‌ಎಚ್‌ಎಐ ದಾಖಲೆಗಳು ಮತ್ತು ಡಿಜಿಟಲ್ ಸಾಕ್ಷ್ಯಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಒಳಪಡಿಸಿದಾಗ, ಈ ನಕಲಿ ಸಾಫ್ಟ್‌ವೇರ್ ಬಳಕೆಯಾಗಿರುವುದು ಖಚಿತವಾಗಿದೆ. ಈ ಹಗರಣದ ಹಿಂದೆ ದೊಡ್ಡ ಜಾಲವೇ ಕಾರ್ಯನಿರ್ವಹಿಸಿದ್ದು, ಇದರಲ್ಲಿ ಟೋಲ್ ಗುತ್ತಿಗೆದಾರರ ಪಾತ್ರದ ಬಗ್ಗೆಯೂ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಇ.ಡಿ ಮೂಲಗಳು ತಿಳಿಸಿವೆ.