ವಾಲ್ಮೀಕಿ ನಿಗಮದ ಹಗರಣವನ್ನು ವಿರೋಧಿಸಿ, ರಾಜ್ಯ ಬಿಜೆಪಿ ಲಿಂಗಸುಗೂರಿನಿಂದ 'ಬಳ್ಳಾರಿ ಚಲೋ' ಪಾದಯಾತ್ರೆಗೆ ಅದ್ಧೂರಿ ಚಾಲನೆ ನೀಡಿದೆ. ಸಚಿವ ನಾಗೇಂದ್ರ ರಾಜೀನಾಮೆ ನೀಡಿದರೂ, ದುರ್ಬಳಕೆಯಾದ 187 ಕೋಟಿ ರೂ. ವಾಪಸ್ ನೀಡುವವರೆಗೂ ಹೋರಾಟ ನಿಲ್ಲದು ಎಂದು ಬಿಜೆಪಿ ನಾಯಕರು ಘೋಷಿಸಿದ್ದಾರೆ.
ರಾಮಕೃಷ್ಣ ದಾಸರಿ
ರಾಯಚೂರು: ವಾಲ್ಮೀಕಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಸಚಿವ ಸ್ಥಾನಕ್ಕೆ ಬಿ.ನಾಗೇಂದ್ರ ರಾಜೀನಾಮೆ ನೀಡಿದ್ದರೂ ದುರ್ಬಳಕೆ ಆದ 187 ಕೋಟಿ ರು. ಹಣ ವಾಪಸ್ ಆ ನಿಗಮಕ್ಕೆ ಜಮಾ ಆಗಬೇಕು ಎಂಬ ಆಗ್ರಹ ಸೇರಿದಂತೆ ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯಗಳನ್ನು ಪ್ರಸ್ತಾಪಿಸಿ ರಾಜ್ಯ ಬಿಜೆಪಿ ಹಮ್ಮಿಕೊಂಡಿರುವ ‘ಬಳ್ಳಾರಿ ಚಲೋ’ ಗೆ ರಾಯಚೂರು ಜಿಲ್ಲೆ ಲಿಂಗಸುಗೂರಿನಲ್ಲಿ ಮಂಗಳವಾರ ಅದ್ಧೂರಿ ಚಾಲನೆ ದೊರೆಯಿತು.
ಡಿಕೆಶಿ ಸರ್ಕಾರದ ವಿರುದ್ಧ ರಣಕಹಳೆ
ಸಮಾವೇಶದಲ್ಲಿ ಮಾತನಾಡಿದ ಬಿಜೆಪಿ ನಾಯಕರು, ರಾಜ್ಯದಲ್ಲಿರುವುದು ‘ಭ್ರಷ್ಟರಿಂದ, ಭ್ರಷ್ಟರಿಗಾಗಿ, ಭ್ರಷ್ಟರಿಗೋಸ್ಕರ’ ಇರುವ ಭ್ರಷ್ಟ ಸರ್ಕಾರವಾಗಿದ್ದು, ನಿಗಮದ 187 ಕೋಟಿ ರು.ಗಳನ್ನು ವಾಪಸ್ ತರುವವರೆಗೂ ಹೋರಾಟ ನಿಲ್ಲದು ಎಂದು ಘೋಷಿಸುವ ಮೂಲಕ ಡಿಕೆಶಿ ಸರ್ಕಾರದ ವಿರುದ್ಧ ರಣಕಹಳೆ ಮೊಳಗಿಸಿದರು.
ಪಾದಯಾತ್ರೆಗೂ ಮುನ್ನ ಪಟ್ಟಣದ ಬೆಂಗಳೂರು ಬೈಪಾಸ್ ರಸ್ತೆಯ ಜಿ.ಕೆ. ರೆಸಿಡೆನ್ಸಿ ಮುಂಭಾಗದ ಮೈದಾನದಲ್ಲಿ ಆಯೋಜಿಸಲಾಗಿದ್ದ ಸಮಾವೇಶವನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉದ್ಘಾಟಿಸಿದರು. ಬಳಿಕ, ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಲಿಂಗಸುಗೂರಿನಿಂದ ಆರಂಭವಾಗಿರುವ ಈ ಐತಿಹಾಸಿಕ ಪಾದಯಾತ್ರೆ ಕರ್ನಾಟಕದ ರಾಜಕೀಯ ದಿಕ್ಕನ್ನೇ ಬದಲಿಸುವ ಶಕ್ತಿ ಹೊಂದಿದೆ. ವಾಲ್ಮೀಕಿ ನಿಗಮದ 187 ಕೋಟಿ ರು.ಗಳನ್ನು ವಾಪಸ್ ತರುವವರೆಗೂ ನಮ್ಮ ಹೋರಾಟ ನಿಲ್ಲದು ಎಂದು ಘೋಷಿಸಿದರು. 2028ಕ್ಕೆ ರಾಜ್ಯದಲ್ಲಿ ಬಿಜೆಪಿಯೇ ಅಧಿಕಾರಕ್ಕೆ ಬರಲಿದ್ದು, ಇದು ಕಾಂಗ್ರೆಸ್‌ನ 6ನೇ ಗ್ಯಾರಂಟಿ ಎಂದರು.
ಉದ್ಘಾಟನಾ ಭಾಷಣ ಮುಗಿಯುತ್ತಿದ್ದಂತೆ, ಮಧ್ಯಾಹ್ನ 1 ಗಂಟೆ ವೇಳೆಗೆ ಪಾದಯಾತ್ರೆ ಆರಂಭಗೊಂಡಿತು. ಬಿಜೆಪಿ ನಾಯಕರು ವೇದಿಕೆ ಮೇಲೆ ಏಕಕಾಲದಲ್ಲಿ ಕಹಳೆ ಊದಿ, ತಮಟೆ ಬಾರಿಸುವ ಮೂಲಕ ‘ಬಳ್ಳಾರಿ ಚಲೋ ಯಾತ್ರೆ’ಗೆ ಚಾಲನೆ ನೀಡಿದರು. ಪಟ್ಟಣದ ಬೆಂಗಳೂರು ಬೈಪಾಸ್ ರಸ್ತೆ ಮುಖಾಂತರ ಸಾಗಿದ ಯಾತ್ರೆ, 175 ಕಿ.ಮೀ. ಉದ್ದದ ಪಾದಯಾತ್ರೆ ಪೈಕಿ ಮೊದಲ ದಿನ ಸುಮಾರು 10 ಕಿ.ಮೀ. ಕ್ರಮಿಸಿ, ಸಂಜೆ ವೇಳೆಗೆ ಮಸ್ಕಿ ತಾಲೂಕಿನ ಸಂತೆಕೆಲ್ಲೂರು ಗ್ರಾಮಕ್ಕೆ ಬಂದು ತಲುಪಿತು. ಗ್ರಾಮದ ಐತಿಹಾಸಿಕ ಶ್ರೀಘನಮಟೇಶ್ವರ ಮಠದಲ್ಲಿ ನಾಯಕರು ರಾತ್ರಿ ವಾಸ್ತವ್ಯ ಹೂಡಿದ್ದಾರೆ. ಪಾದಯಾತ್ರೆಯ ಎರಡನೇ ದಿನವಾದ ಬುಧವಾರ ಮಸ್ಕಿ ಮಾರ್ಗವಾಗಿ ಸಿಂಧನೂರು ತಲುಪಲಿರುವ ಪಾದಯಾತ್ರೆ, ಸುಮಾರು 30 ಕಿ.ಮೀ. ಸಾಗಲಿದೆ.
ಜನಸ್ತೋಮ, ಕಲಾತಂಡಗಳ ಮೆರಗು:
ಪಾದಯಾತ್ರೆಗೆ ಜನಸ್ತೋಮವೇ ಹರಿದು ಬಂತು. ವಿಧಾನಸಭೆಯ ವಿಪಕ್ಷ ನಾಯಕ ಆರ್. ಅಶೋಕ್, ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಸಿಎಂಗಳು, ಕೋರ್ ಕಮಿಟಿ ಸದಸ್ಯರು, ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ರಾಜ್ಯ ಪದಾಧಿಕಾರಿಗಳು, ಜಿಲ್ಲಾ ಅಧ್ಯಕ್ಷರು, ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರ, ಪಕ್ಕದ ಜಿಲ್ಲೆಗಳಿಂದ ಆಗಮಿಸಿದ್ದ ಪಕ್ಷದ ಸಾವಿರಾರು ಕಾರ್ಯಕರ್ತರು, ಸಾರ್ವಜನಿಕರು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರೊಂದಿಗೆ ಹೆಜ್ಜೆ ಹಾಕಿದರು. ಲಿಂಗಸುಗೂರು-ಮಸ್ಕಿ ಮಾರ್ಗದ ರಾಷ್ಟ್ರೀಯ ಹೆದ್ದಾರಿ 150 (ಎ)ಯಲ್ಲಿ ಸಾಗಿದ ಯಾತ್ರೆ, ಸುಮಾರು ಮೂರು ಕಿ.ಮೀ.ವರೆಗೆ ಹಬ್ಬಿತ್ತು.
ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ವಿವಿಧ ಕಲಾತಂಡಗಳ ಪ್ರದರ್ಶನ, ಯಾತ್ರೆಗೆ ಮೆರಗು ನೀಡುವುದರ ಜೊತೆಗೆ ಯಾತ್ರೆ ಕಳೆಕಟ್ಟುವಂತೆ ಮಾಡಿತು. ಡೊಳ್ಳು ಕುಣಿತ, ಕಹಳೆ ಸೇರಿ ವಿವಿಧ ಕಲಾ ಪ್ರಕಾರದ ತಂಡಗಳು ಪಾದಯಾತ್ರೆಯುದ್ದಕ್ಕೂ ಪ್ರದರ್ಶನ ನೀಡಿದವು.
ಸಹಜವಾಗಿ ಬಿಜೆಪಿಯ ಸಭೆ-ಸಮಾರಂಭಗಳಲ್ಲಿ ಪಕ್ಷದ ಬಾವುಟವಾದ ಕೇಸರಿ ಬಣ್ಣ ಕಂಗೊಳಿಸುವುದು ಸಹಜ. ಆದರೆ, ‘ಬಳ್ಳಾರಿ ಚಲೋ’ದಲ್ಲಿ ಕೇಸರಿ ಜೊತೆಗೆ ನೀಲಿ ಬಣ್ಣದ ಶಾಲುಗಳನ್ನು ಮುಖಂಡರು ಹಾಕಿಕೊಂಡು ಗಮನ ಸೆಳೆದರು.


