ವಂದೇ ಮಾತರಂ ಗೀತೆಯನ್ನು ಪೂರ್ಣವಾಗಿ ಹಾಡುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಕಾಂಗ್ರೆಸ್ ಸರ್ಕಾರದ ನಡೆಯನ್ನು ಶಾಸಕ ಜನಾರ್ದನ ರೆಡ್ಡಿ ತೀವ್ರವಾಗಿ ಖಂಡಿಸಿದ್ದಾರೆ. ಕೇವಲ ವೋಟ್ ಬ್ಯಾಂಕ್‌ಗಾಗಿ ಕಾಂಗ್ರೆಸ್ ದೇಶವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಕೊಪ್ಪಳ (ಸೆ.19): ಬಿಜೆಪಿಯವರಿಗೆ ದೇಶಭಕ್ತಿ ಕಲಿಬೇಕಿಲ್ಲ ಅಂತಾ ಹೇಳ್ತಾರೆ. ಆದ್ರೆ ದೇಶದ ಮೇಲಿನ ಭಕ್ತಿಗೆ ಮೂರು ನಿಮಿಷ ಮೀಸಲಿಡೋಕೆ ಆಗೋಲ್ವ? ಕಾಂಗ್ರೆಸ್ ವಿರುದ್ಧ ಬಿಜೆಪಿ ಶಾಸಕ ಗಾಲಿ ಜನಾರ್ದನ ರೆಡ್ಡಿ ವಾಗ್ದಾಳಿ ನಡೆಸಿದರು.
ದೇಶಕ್ಕಾಗಿ ಮೂರು ನಿಮಿಷ ಮೀಸಲಿಡಲು ಆಗಲ್ವ?
ವಂದೇ ಮಾತರಂ ಪೂರ್ಣ ಹಾಡುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂಬ ಸಚಿವ ತಂಗಡಗಿ ಹೇಳಿಕೆಗೆ ಇಂದು ಕೊಪ್ಪಳದ ಗಂಗಾವತಿಯಲ್ಲಿ ಪ್ರತಿಕ್ರಿಯಿಸಿದ ಶಾಸಕ ಜನಾರ್ದನ ರೆಡ್ಡಿ ಅವರು, ಶಿವರಾಜ ತಂಗಡಗಿ ಇಂದು ಕಾಂಗ್ರೆಸ್‌ನಲ್ಲಿದ್ದಿರಬಹುದು. ಆದರೆ ಹಿಂದೆ ಬಿಜೆಪಿಯಲ್ಲಿದ್ದವರು ಅವರು. ಹಿಂದೆ ನಾಡಗೀತೆಯಲ್ಲಿ ಎರಡು ಮೂರು ಬಾರಿ ಬದಲಾವಣೆ ಮಾಡಿ ಈಗ ನಾಡಗೀತೆ ಮೂರು ನಿಮಿಷ ಹಾಡಲಾಗುತ್ತೆ. ಎರಡು ಚರಣದಲ್ಲಿ ಇಡೀ ದೇಶದ ಬಗ್ಗೆ ಹಾಡೋಕೆ ಆಗೋಲ್ಲ. ಹೀಗಾಗಿ ಮೂರು ನಿಮಿಷ ಹಾಡಲಾಗುತ್ತೆ. ಭಾರತ ಮಾತೆಗೆ ಗೌರವ ಕೊಡೋಕೆ ಮೂರು ನಿಮಿಷ ಹಾಡಲಾಗುತ್ತೆ ಹೊರತು ಇಲ್ಲಿ ಯಾರದ್ದೋ ಲಾಭ, ವೈಯಕ್ತಿಕ ಪ್ರತಿಷ್ಠೆ ಇಲ್ಲ. ದೇಶಕ್ಕಾಗಿ ಮೂರು ನಿಮಿಷ ಹಾಡಲು ಕಾನೂನು ಮಾಡಿದ್ರೆ ಇವರು ಅದಕ್ಕೆ ಪ್ರತಿಯಾಗಿ ಎರಡು ಚರಣ ಹಾಡುವಂತೆ ಅಧಿಕಾರಿಗಳಿಗೆ ಸುತ್ತೋಲೆ ಹೊರಡಿಸಿ ಬೆದರಿಸಿದ್ರೆ ಏನರ್ಥ? ದೇಶದ ಕಾನೂನು ವಿರೋಧಿಸಿದಂತೆ ಅಲ್ಲವೇ?
ಕಾಂಗ್ರೆಸ್‌ನ ಈ ದೇಶ ವಿರೋಧಿ, ಕಾನೂನು ವಿರೋಧಿ ನಡೆಯಿಂದ ನಾಗರಿಕರು ಸಿಟ್ಟಿಗೆದ್ದಿರೋದು ಸಹಜವಾಗಿದೆ. ಪೂರ್ತಿ ಚರಣ ಹಾಡಿದ ಅಧಿಕಾರಿಗಳಿಗೆ ಸಚಿವರೇ ಕಾನೂನು ಕ್ರಮದ ಬೆದರಿಕೆ ಹಾಕಿದ್ದಾರೆ. ಅಧಿಕಾರಿಗಳಿಗೆ ಕೆಲವರು ಫೋನ್ ಮಾಡಿ ಪ್ರಶ್ನೆ ಮಾಡಿದ್ದಾರೆ. ಈ ಸರ್ಕಾರ ದೇಶಭಕ್ತಿ ಗೀತೆ ಪೂರ್ಣ ಹಾಡಿದವರ ಮೇಲೆ ಕ್ರಮದ ಬೆದರಿಕೆ ಹಾಕುತ್ತೆ. ಆದರೆ ವಿಧಾನಸೌಧದಲ್ಲಿ ಪಾಕಿಸ್ತಾನಕ್ಕೆ ಜಿಂದಾಬಾದ್ ಅಂದವರನ್ನ ಸು್ಮ್ಮನೆ ಬಿಟ್ಟುಕಳಿಸುತ್ತೆ. ಕಾಂಗ್ರೆಸ್ ಕೇವಲ ವೋಟ್‌ಬ್ಯಾಂಕ್‌ಗಾಗಿ ದೇಶಕ್ಕೆ ಕಂಟಕವಾಗಿ ಪರಿಣಮಿಸುತ್ತಿದೆ. ಕಾಂಗ್ರೆಸ್ ನಡೆ ದೇಶದ ಭದ್ರತೆ ಅಪಾಯಕಾರಿ ಎಂದು ಕಿಡಿಕಾರಿದರು.
ವಂದೇ ಮಾತರಂ ಗೀತೆಯಲ್ಲಿ ಹಿಂದೂ ದೇವತೆಗಳ ಹೆಸರಿವೆ. ಮಕ್ಕಳಿಗೆ ಒಳ್ಳೆ ವಿದ್ಯೆ ಬುದ್ಧಿ ಕೊಡು ತಾಯಿ ಅಂತಾ ಬೇಡಿಕೊಳ್ಳೋದನ್ನು ಹಾಡಲು ಬಿಡ್ತಾ ಇಲ್ಲ. ಒಂದೇ ಮಾತರಂ ಹುಟ್ಟಿದ್ದು ಕಾಂಗ್ರೆಸ್ ಕಚೇರಿಯಲ್ಲಿ ಅಂತಾರೆ. ಕಾಂಗ್ರೆಸ್ ಕಚೇರಿಯಲ್ಲೇ ಹುಟ್ಟಿದ್ದು ಹಾಡಿದ್ದು ಅಂತಾದರೆ ಮೂರು ನಿಮಿಷ ಮೀಸಲಿಡೋಕೆ ಏನು ಸಮಸ್ಯೆ? ಇನ್ನೊಂದು ನಿಮಿಷ ಹಾಡಿದ್ರೆ ಮುಗಿದೇಹೋಯ್ತಲ್ಲ? ವಾಸ್ತವವಾಗಿ ಅಂದಿನ ಕಾಂಗ್ರೆಸ್ ಬೇರೆ, ಈಗಿನ ಕಾಂಗ್ರೆಸ್ ಬೇರೆ. ಅಂದು ದೇಶಭಕ್ತರು ಕಾಂಗ್ರೆಸ್‌ನಲ್ಲಿದ್ದರು. ಈಗಿನ ಕಾಂಗ್ರೆಸ್ ಕೇವಲ ವೋಟ್ ಬ್ಯಾಂಕ್‌ಗಾಗಿ, ಒಂದು ಕೋಮಿನ ಓಲೈಕೆಗೆ ಈ ರೀತಿ ವರ್ತಿಸುತ್ತಿದೆ ಎಂದು ಕಿಡಿಕಾರಿದರು.
ಶಿವರಾಜ ತಂಗಡಗಿ ಬಗ್ಗೆ ರೆಡ್ಡಿ ವ್ಯಂಗ್ಯ
ಶಿವರಾಜ ತಂಗಡಗಿ ಬಹಳ ಬ್ಯುಸಿ ಇರ್ತಾರೆ. ತುಂಗಭದ್ರಾ ನದಿಯಲ್ಲಿ ನೀರಿಲ್ಲ ಅಂದ್ರೂ ಇವರ ಸರ್ಕಾರದಲ್ಲಿ ದುಡ್ಡು ಹರಿದು ಬರ್ತಾಯಿದೆ. ಜಿಲ್ಲೆಯ ರಸ್ತೆಗಳನ್ನ ನೋಡಿದ್ರೆ ಗೊತ್ತಾಗುತ್ತೆ ಎಂದು ವ್ಯಂಗ್ಯವಾಡಿದರು.
ಬಿಕೆ ಹರಿಪ್ರಸಾದ್ ಒಬ್ಬ ಹುಚ್ಚ: ರೆಡ್ಡಿ ಏಕವಚನದಲ್ಲಿ ವಾಗ್ದಾಳಿ:
ನಮ್ಮ ಗಲ್ಲಿಗೆ ಬೇಕಾದ್ರೂ ಏರಿಸಲಿ ನಾವು ಹಾಡೋದು ಮಾತ್ರ ಎರಡೇ ಚರಣ ಎನ್ನುವ ಬಿಕೆ ಹರಿಪ್ರಸಾದ್ ಹುಚ್ಚ ಎಂದ ಜನಾರ್ದನ ರೆಡ್ಡಿ, ಯಾರೋ ಹುಚ್ಚರ ಮಾತಿಗೆ ತಲೆ ಕೆಡಿಸಿಕೊಳ್ಳಬಾರದು. ಎರಡು ಚರಣದ ನಂತರದ ಹಾಡು ಬಲಪಂಥೀಯರದ್ದು ಎಂದು ಹೇಳಿದ್ದಾರೆ. ಹರಿಪ್ರಸಾದ್‌ಗೆ ಹಾಗೇನಾದ್ರೂ ಕನಸು ಬಿದ್ದಿರಬೇಕು. ವಂದೇ ಮಾತರಂ ಗೀತೆ ಬಂಕೀಮ ಚಂದ್ರ ಚಟರ್ಜಿ ಅವರು ಬರೆದ ಹಾಡು. ಪೂರ್ತಿ ಪರೀಶಿಲನೆ ಮಾಡೋಕೆ ಹೇಳಿ. ಸು್ಮ್ಮನೆ ಬಾಯಿಗೆ ಬಂದಹಾಗೆ ಹುಚ್ಚರಂತೆ ಮಾತಾಡೋದಲ್ಲ ಎಂದು ಕಿಡಿಕಾರಿದರು.


