ಬೆಂಗಳೂರಲ್ಲಿ ಅದ್ಧೂರಿಯಾಗಿ ಟೆಕ್ ಮಹೀಂದ್ರ ಗ್ಲೋಬಲ್ ಟೆಸ್ ಲೀಗ್ ಉದ್ಘಾಟನೆಗೊಂಡಿದೆ. ವಿಶ್ವದ ನಂಬರ್ ಒನ್ ಆಟಗಾರ ಮ್ಯಾಗ್ನಸ್ ಕಾರ್ಲ್ಸನ್, ಗ್ರ್ಯಾಂಡ್ ಮಾಸ್ಟರ್ ವಿಶ್ವನಾಥನ್ ಆನಂದ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಬೆಂಗಳೂರು (ಸೆ.04): ಟೆಕ್ ಮಹೀಂದ್ರಾ ಮತ್ತು ಫಿಡೆ ಜಂಟಿಯಾಗಿ ಆಯೋಜಿಸುತ್ತಿರುವ ಗ್ಲೋಬಲ್ ಚೆಸ್ ಲೀಗ್‌ನ ನಾಲ್ಕನೇ ಆವೃತ್ತಿ ಬೆಂಗಳೂರಿನಲ್ಲಿ ಉದ್ಘಾಟನೆಗೊಂಡಿದೆ. ವಿಶ್ವದ ನಂಬರ್ ಒನ್ ಆಟಗಾರ ಮ್ಯಾಗ್ನಸ್ ಕಾರ್ಲ್ಸನ್, ಭಾರತದ ದಿಗ್ಗಜ ಚೆಸ್ ಪಟು ವಿಶ್ವನಾಥನ್ ಆನಂದ್ ಸೇರಿದಂತೆ ಪ್ರಮುಖ ಚೆಸ್ ಪಟುಗಳು ಪಾಲ್ಗೊಂಡಿದ್ದರು. ಒಂಬತ್ತು ದಿನಗಳ ಕಾಲ ನಡೆಯುವ ಈ ಪಂದ್ಯಾವಳಿಯಲ್ಲಿ ವಿಶ್ವದ ಅಗ್ರ ಚೆಸ್ ತಾರೆಗಳು ಭಾಗವಹಿಸಲಿದ್ದಾರೆ.
ಚೆಸ್ ಲೀಗ್ ಹಬ್ಬ ಆರಂಭ
ವಿಶ್ವದ ನಂಬರ್ ಒನ್ ಆಟಗಾರ ಮ್ಯಾಗ್ನಸ್ ಕಾರ್ಲ್ಸನ್ ಒಂದು ವರ್ಷದ ವಿರಾಮದ ಬಳಿಕ ಮರಳಿದ್ದು, ಹಾಲಿ ಚಾಂಪಿಯನ್ ಅಲ್ಪೈನ್ ಎಪಿಎಲ್ ಪೈಪರ್ಸ್ ತಂಡವನ್ನು ಸೇರಿದ್ದಾರೆ. ಎರಡು ಬಾರಿ ಚಾಂಪಿಯನ್ ತ್ರಿವೇಣಿ ಕಾಂಟಿನೆಂಟಲ್ ಕಿಂಗ್ಸ್ ತಂಡವು ತನ್ನ ಪ್ರಮುಖ ಆಟಗಾರರನ್ನು ಉಳಿಸಿಕೊಂಡು ಮೂರನೇ ಪ್ರಶಸ್ತಿ ಗೆಲ್ಲುವ ಗುರಿ ಹೊಂದಿದೆ. ಉದ್ಘಾಟನಾ ಪಂದ್ಯದಲ್ಲಿ ಪಿಬಿಜಿ ಅಲಾಸ್ಕನ್ ನೈಟ್ಸ್ ಮತ್ತು ಫೈಯರ್ಸ್ ಅಮೆರಿಕನ್ ಗ್ಯಾಂಬಿಟ್ಸ್ ತಂಡಗಳು ಮುಖಾಮುಖಿಯಾಗಲಿವೆ. ಒಟ್ಟು 32 ಪಂದ್ಯಗಳು ನಡೆಯಲಿದ್ದು, ಅಗ್ರ ಎರಡು ತಂಡಗಳು ಸೆಪ್ಟೆಂಬರ್ 13ರಂದು ನಡೆಯುವ ಗ್ರ್ಯಾಂಡ್ ಫಿನಾಲೆಗೆ ಅರ್ಹತೆ ಪಡೆಯಲಿವೆ.
ಜವೋಖಿರ್ ಸಿಂದರೋವ್, ಅಲಿರೆಜಾ ಫಿರೋಜಾ, ಮ್ಯಾಕ್ಸಿಮ್ ವಾಶಿಯೆರ್-ಲಾಗ್ರಾವ್, ವಿಶ್ವನಾಥನ್ ಆನಂದ್ ಮತ್ತು ಇಯಾನ್ ನೆಪೊಮ್ನಿಯಾಶ್ಚಿ ಅವರು ತಮ್ಮ ತಂಡಗಳನ್ನು ಐಕಾನ್ ಆಟಗಾರರಾಗಿ ಮುನ್ನಡೆಸಲಿದ್ದಾರೆ. 15 ವರ್ಷದ ಟರ್ಕಿಶ್ ಗ್ರ್ಯಾಂಡ್ ಮಾಸ್ಟರ್ ಯಾಗಿಜ್ ಕಾನ್ ಎರ್ಡೋಗ್ಮುಶ್ ಅಲಾಸ್ಕನ್ ನೈಟ್ಸ್ ತಂಡದ ಪರ ಪದಾರ್ಪಣೆ ಮಾಡಲಿದ್ದಾರೆ. ದುಬೈ ಮತ್ತು ಲಂಡನ್‌ನಲ್ಲಿನಡೆದ ಮೊದಲ ಎರಡು ಋುತುಗಳಲ್ಲಿಕಾರ್ಲ್‌ಸನ್ ಪೈಪರ್ಸ್ ತಂಡದ ಪರ ಆಡಿದ್ದರು. ಆದರೆ ಮುಂಬೈನಲ್ಲಿನಡೆದ ಕಳೆದ ಸೀಸನ್‌ನಿಂದ ಅವರು ಹಿಂದೆ ಸರಿದಿದ್ದರು. ಆ ಸೀಸನ್‌ನಲ್ಲಿಪೈಪರ್ಸ್ ತಂಡವು ತ್ರಿವೇಣಿ ಕಾಂಟಿನೆಂಟಲ್ ಕಿಂಗ್ಸ್ ತಂಡಕ್ಕೆ ಸತತ ಮೂರನೇ ಪ್ರಶಸ್ತಿ ಗೆಲ್ಲುವ ಅವಕಾಶವನ್ನು ನಿರಾಕರಿಸಿತ್ತು.
ಈ ಬಾರಿ ಹೊಸ ಆವಿಷ್ಕಾರಗಳನ್ನು ಪರಿಚಯಿಸಲಾಗಿದ್ದು, ಪ್ರೇಕ್ಷಕರು ವೈಯಕ್ತಿಕ ಹೆಡ್‌ಸೆಟ್‌ಗಳ ಮೂಲಕ ಕಾಮೆಂಟರಿ ಕೇಳಬಹುದು. ಪಂದ್ಯಗಳ ವೇಳೆ ತಂಡದ ಕೋಚ್‌ಗಳು ಮತ್ತು ನಾಯಕರ ಹೃದಯ ಬಡಿತವನ್ನು ಮಾನಿಟರ್ ಮಾಡಲಾಗುತ್ತದೆ. ಭಾರತೀಯ ಪ್ರೇಕ್ಷಕರಿಗಾಗಿ ಮೊದಲ ಬಾರಿಗೆ ಹಿಂದಿ ಭಾಷೆಯ ಕಾಮೆಂಟರಿ ಲಭ್ಯವಿರಲಿದೆ.


