ಯುಎಸ್‌ ಓಪನ್‌ ಗ್ರ್ಯಾನ್‌ಸ್ಲಾಂ ಟೆನಿಸ್‌ ಟೂರ್ನಿಯಲ್ಲಿ, ಗಾಯದಿಂದ ಚೇತರಿಸಿಕೊಂಡ ಕಾರ್ಲೋಸ್‌ ಆಲ್ಕರಜ್‌ ಶುಭಾರಂಭ ಮಾಡಿದ್ದಾರೆ. ಮತ್ತೊಂದೆಡೆ, 2016ರ ಚಾಂಪಿಯನ್‌ ಸ್ಟ್ಯಾನ್‌ ವಾಂವ್ರಿಕಾ ಸೋತು ಗ್ರ್ಯಾನ್‌ಸ್ಲಾಂ ವೃತ್ತಿಬದುಕಿಗೆ ವಿದಾಯ ಹೇಳಿದ್ದಾರೆ. ಮಹಿಳಾ ಸಿಂಗಲ್ಸ್‌ನಲ್ಲಿ ಅರೈನಾ ಸಬಲೆಂಕಾ, ಇಗಾ ಸ್ವಿಯಾಟೆಕ್‌ ಮತ್ತು ನವೊಮಿ ಒಸಾಕಾ ಕೂಡ ಮೊದಲ ಸುತ್ತಿನಲ್ಲಿ ಗೆಲುವು ಸಾಧಿಸಿದ್ದಾರೆ.

ನ್ಯೂಯಾರ್ಕ್‌: ಕಳೆದ ಏಪ್ರಿಲ್‌ನಿಂದ ಗಾಯದ ಸಮಸ್ಯೆ ಎದುರಿಸುತ್ತಿದ್ದ ಸ್ಪೇನ್‌ ಯುವ ಸೂಪರ್‌ಸ್ಟಾರ್‌ ಕಾರ್ಲೋಸ್‌ ಆಲ್ಕರಜ್‌ ಅವರು ಈ ಬಾರಿ ಯುಎಸ್‌ ಓಪನ್‌ ಗ್ರ್ಯಾನ್‌ಸ್ಲಾಂ ಟೆನಿಸ್‌ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದಾರೆ.

2022, 2025ರ ಯುಎಸ್‌ ಓಪನ್‌ ಸೇರಿ ಒಟ್ಟು 7 ಗ್ರ್ಯಾನ್‌ಸ್ಲಾಂ ಟ್ರೋಫಿ ಗೆದ್ದಿರುವ 23 ವರ್ಷದ ಆಲ್ಕರಜ್‌ ಅವರು ಪುರುಷರ ಸಿಂಗಲ್ಸ್‌ ಮೊದಲ ಸುತ್ತಿನಲ್ಲಿ ರಷ್ಯಾದ ರೋಮನ್ ಸಫಿಯುಲ್ಲಿನ್ ವಿರುದ್ಧ 6-4, 6-4, 6-4 ಸೆಟ್‌ಗಳಲ್ಲಿ ಜಯಭೇರಿ ಬಾರಿಸಿದರು. ಆದರೆ 2016ರ ಚಾಂಪಿಯನ್‌, ಸ್ವಿಜರ್‌ಲೆಂಡ್‌ನ ಸ್ಟ್ಯಾನ್‌ ವಾಂವ್ರಿಕಾ ಅವರು ಇಟಲಿಯ ಬೆರೆಟಿನಿ ವಿರುದ್ಧ ಸೋತು, ಗ್ರ್ಯಾನ್‌ಸ್ಲಾಂ ವೃತ್ತಿಬದುಕಿಗೆ ವಿದಾಯ ಹೇಳಿದರು.

ಬೆಲಾರಸ್‌ನ ಅರೈನಾ ಸಬಲೆಂಕಾ ಶುಭಾರಂಭ

ಇದೇ ವೇಳೆ ಮಹಿಳಾ ಸಿಂಗಲ್ಸ್‌ನ ವಿಶ್ವ ನಂ.1, ಕಳೆದೆರಡು ಬಾರಿ ಯುಎಸ್‌ ಓಪನ್‌ ಗೆದ್ದಿರುವ ಬೆಲಾರಸ್‌ನ ಅರೈನಾ ಸಬಲೆಂಕಾ ಅವರು ಮೊದಲ ಸುತ್ತಿನಲ್ಲಿ ಕೊಲಂಬಿಯಾದ ಕ್ಯಾಮಿಲಾ ಒಸೋರಿಯೋ ವಿರುದ್ಧ 6-4, 6-4 ನೇರ ಸೆಟ್‌ಗಳಲ್ಲಿ ಗೆದ್ದರು. 2022ರ ಟ್ರೋಫಿ ವಿಜೇತೆ, ಪೋಲೆಂಡ್‌ನ ಇಗಾ ಸ್ವಿಯಾಟೆಕ್‌ಗೆ ಮೊದಲ ಸುತ್ತಿನಲ್ಲಿ ಚೀನಾದ ವಾಂಗ್‌ ಕ್ಷಿಯು ವಿರುದ್ಧ 6-2, 6-3 ಸೆಟ್‌ಗಳಲ್ಲಿ ಗೆಲುವು ಲಭಿಸಿತು. 2018, 2020ರ ಚಾಂಪಿಯನ್‌, ಮಾಜಿ ವಿಶ್ವ ನಂ.1, ಜಪಾನ್‌ನ ನವೊಮಿ ಒಸಾಕಾ ಕೂಡಾ ಶುಭಾರಂಭ ಮಾಡಿದರು.

ಜೂ. ಟೆನಿಸ್: ಶ್ರೀನಿತಿ ಪ್ರಿಕ್ವಾರ್ಟರ್‌ಗೆ

ಬೆಂಗಳೂರು: ಕರ್ನಾಟಕದ 15 ವರ್ಷದ ಶ್ರೀನಿತಿ ಚೌಧರಿ ಅವರು ಕೆಎಸ್‌ಎಲ್‌ಟಿಎ ವಿಶ್ವ ಟೆನಿಸ್‌ ಟೂರ್‌ ಜೂನಿಯರ್‌ ಜೆ30 ಟೂರ್ನಿಯಲ್ಲಿ ಪ್ರಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. ಅವರು ಮೊದಲ ಸುತ್ತಿನಲ್ಲಿ ಅನಿಹಾ ರೆಡ್ಡಿ ವಿರುದ್ಧ ಗೆದ್ದರು.

ಬಾಲಕರ ವಿಭಾಗದಲ್ಲಿ ತೇಜಸ್‌ ರವಿ ಕರ್ನಾಟಕದವರೇ ಆದ ಶ್ರೇಯಾಂತ್‌ ಮಹಾಂತೇಶ ವಿರುದ್ಧ ಗೆದ್ದರೆ, ಇಶಾನ್‌ ಅವರು ಅಥರ್ವ ವಿರುದ್ಧ ಜಯಗಳಿಸಿದರು. 2ನೇ ಶ್ರೇಯಾಂಕಿತ ಅಹಾನ್‌ ಶೆಟ್ಟಿ, 7ನೇ ಶ್ರೇಯಾಂಕಿತ ಅಯಾನ್‌ ಶೆಟ್ಟಿ ಕೂಡಾ ಮುಂದಿನ ಸುತ್ತಿಗೇರಿದರು.