ನವದೆಹಲಿ(ಆ.07): ತೀವ್ರ ಹೃದಯಾಘಾತದ ಪರಿಣಾಮ ಮಾಜಿ ವಿದೇಶಾಂಗ ಸಚಿವೆ, ಬಿಜೆಪಿ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ವಿಧಿವಶರಾಗಿದ್ದಾರೆ.

ಪಕ್ಷದ ಪಾಲಿಗೆ ಹಿರಿಯಕ್ಕ ಎಂದೇ  ಪ್ರೀತಿಪಾತ್ರರಾಗಿದ್ದ ಸುಷ್ಮಾ ಅಕಾಲಿಕ ನಿಧನದಿಂದಾಗಿ ಬಿಜೆಪಿ ಆಘಾತ ಎದುರಿಸಿದೆ. ಸುಷ್ಮಾ ನಿಧನದಿಂದಾಗಿ ಪ್ರಧಾನಿ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಸೇರಿದಂತೆ ಇಡೀ ಬಿಜೆಪಿ ಘಟಕ ದಿಗ್ಭ್ರಮೆ ವ್ಯಕ್ತಪಡಿಸಿದೆ.

ಹಾಗೆ ನೋಡಿದರೆ 2018-19 ಬಿಜೆಪಿ ಪಾಲಿಗೆ ಅತ್ಯಂತ ದು:ಖದ, ಸಂಕಷ್ಟದ ಸಮಯ. ಈ ಅವಧಿಯಲ್ಲಿ ಬಿಜೆಪಿ ಅನೇಕ ಮಹನೀಯರನ್ನು ಕಳೆದಕೊಂಡಿದೆ. ಪಕ್ಷವನ್ನು ಕಟ್ಟಿದ ಮಹಾನ್ ನಾಯಕರಿಂದ ಹಿಡಿದು, ಪಕ್ಷವನ್ನು ಬೆಳೆಸಿದ  ಹಿರಿಯ ನಾಯಕರನ್ನು ಕಳೆದುಕೊಂಡು ಬಿಜೆಪಿ ಅಕ್ಷರಶಃ ಅನಾಥವಾಗಿದೆ.

ಅಟಲ್ ಬಿಹಾರಿ ವಾಜಪೇಯಿ:

ಬಿಜೆಪಿ ಸಂಸ್ಥಾಪಕರಲ್ಲಿ ಒಬ್ಬರಾದ, ದೇಶ ಕಂಡ ಮಹಾನ್ ನಾಯಕರಲ್ಲಿ ಒಬ್ಬರಾದ ಅಜಾತಶತ್ರು, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ 2018, ಆ.18ರಲ್ಲಿ ವಿಧಿವಶರಾದರು.

ತೀವ್ರ  ಅನಾರೋಗ್ಯದಿಂದ ಬಳಲುತ್ತಿದ್ದ ವಾಜಪೇಯಿ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಪಕ್ಷದ ಸಂಸ್ಥಾಪಕ ನಾಯಕನನ್ನು ಕಳೆದುಕೊಂಡ ಬಿಜೆಪಿ ನಿಜಕ್ಕೂ ಅನಾಥಪ್ರಜ್ಞೆ ಅನುಭವಿಸಿತ್ತು.

ಅನಂತ್ ಕುಮಾರ್:

ಬಿಜೆಪಿ ಭೀಷ್ಮ ಎಲ್.ಕೆ. ಅಡ್ವಾಣಿ ದತ್ತು ಪುತ್ರ ಎಂದೇ ಖ್ಯಾತಿ ಗಳಿಸಿದ್ದ, ಕರ್ನಾಟಕದಲ್ಲಿ ಬಿಜೆಪಿ ಬೆಳವಣಿಗೆಗೆ ಕಾರಣೀಭೂತರಲ್ಲಿ ಒಬ್ಬರಾದ ಅನಂತ್ ಕುಮಾರ್ 2018, ನವೆಂಬರ್ 12ರಂದು ಇಹಲೋಕ ತ್ಯಜಿಸಿದರು.

ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅನಂತ್ ಕುಮಾರ್ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸುವಲ್ಲಿ ಬಿಎಸ್. ಯಡಿಯೂರಪ್ಪ ಅವರಷ್ಟೇ ಪ್ರಮುಖ ಪಾತ್ರ ವಹಿಸಿದ್ದ ಅನಂತ್ ಕುಮಾರ್, ಕೇಂದ್ರದಲ್ಲೂ ಹಲವು ಪ್ರಮುಖ ಜವಾಬ್ದಾರಿಗಳನ್ನು ನಿಭಾಯಿಸುವ ಮೂಲಕ ಪಕ್ಷ ಮತ್ತು ದೇಶದ ಸೇವೆಗೈದವರು.

ಮನೋಹರ್ ಪರಿಕ್ಕರ್:

ಗೋವಾ ಮಾಜಿ ಸಿಎಂ, ಮಾಜಿ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ 2019, ಮಾರ್ಚ್ 17ರಂದು ಇಹಲೋಕದ ಯಾತ್ರೆ ಮುಗಿಸಿದರು. ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ಪರಿಕ್ಕರ್ ಗೋವಾ ರಾಜಧಾನಿ ಪಣಜಿಯಲ್ಲಿ ಕೊನೆಯುಸಿರೆಳೆದರು.

ಸುಷ್ಮಾ ಸ್ವರಾಜ್:
 
ತೀವ್ರ ಹೃದಯಾಘಾತದ ಪರಿಣಾಮ ಮಾಜಿ ವಿದೇಶಾಂಗ ಸಚಿವೆ, ಬಿಜೆಪಿ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ 2019, ಆ.06ರಂದು ನಿಧನ ಹೊಂದಿದರು.

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಸಂಪುಟದಲ್ಲಿ ಸಚಿವರಾಗಿ ಹಲವು ಇಲಾಖೆಗಳನ್ನು ನಿಭಾಯಿಸಿದ್ದ ಸುಷ್ಮಾ, ಪ್ರಧಾನಿ ಮೋದಿ ಅವರ ಸಂಪುಟದಲ್ಲಿ ವಿದೇಶಾಂಗ ಇಲಾಖೆಯಂತ ಮಹತ್ವದ ಇಲಾಖೆಯನ್ನು ಸಮರ್ಥವಾಗಿ ನಿಭಾಯಿಸಿದ್ದರು. ಸುಷ್ಮಾ ಕಾರ್ಯವೈಖರಿಗೆ ಇಡೀ ವಿಶ್ವ ತಲೆದೂಗಿತ್ತು.

1998ರಲ್ಲಿ ದೆಹಲಿಯ ಮುಖ್ಯಮಂತ್ರಿಯಾಗಿಯೂ ಸುಷ್ಮಾ ಸ್ವರಾಜ್ ಸೇವೆ ಸಲ್ಲಸಿದ್ದು, ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ ಹಲವು ಹುದ್ದೆಗಳನ್ನು ಅಲಂಕರಿಸುವ ಮೂಲಕ ದೇಶದ ಪ್ರಮುಖ ರಾಜಕಾರಣಿಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದರು.

ಒಂದೇ ವರ್ಷದಲ್ಲಿ ವಿಧಿವಶರಾದ ಮೂವರು ದೆಹಲಿ ಮಾಜಿ ಮುಖ್ಯಮಂತ್ರಿಗಳು:

ಇನ್ನು ಸುಷ್ಮಾ ಸ್ವರಾಜ್ ನಿಧನದ ಮೂಲಕ ರಾಷ್ಟ್ರ ರಾಜಧಾನಿ ದೆಹಲಿ ಒಂದೇ ವರ್ಷದಲ್ಲಿ ತನ್ನ 3 ಮಾಜಿ ಮುಖ್ಯಮಂತ್ರಿಗಳನ್ನು ಕಳೆದುಕೊಂಡಿದೆ. 

ಮದನ್ ಲಾಲ್ ಖುರಾನಾ:

1993ರಿಂದ 1996ರ ವೆರೆಗೆ ದೆಹಲಿ ಸಿಎಂ ಆಗಿದ್ದ ಮದನ್ ಲಾಲ್ ಖುರಾನಾ 2018, ಅಕ್ಟೋಬರ್ 2018ರಂದು ತಮ್ಮ 82ನೇ ವಯಸ್ಸಿನಲ್ಲಿ ಕೊನೆಯುಸಿರೆಳದರು.

RSS ಮತ್ತು ಬಿಜೆಪಿಯ ಹಿರಿಯ ತಲೆಗಳಲ್ಲಿ ಒಂದಾಗಿದ್ದ ಖುರಾನಾ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಸಂಪುಟದಲ್ಲಿ ಸಚಿವರಾಗಿಯೂ, ತದನಂತರ ರಾಜಸ್ಥಾನದ ರಾಜ್ಯಪಾಲರಾಗಿಯೂ ಸೇವೆ ಸಲ್ಲಿಸಿದ್ದರು.

ಶೀಲಾ ದಿಕ್ಷೀತ್:

ಕಾಂಗ್ರೆಸ್ ಪಕ್ಷದ ಹಿರಿಯ ನಾಯಕಿ ಶೀಲಾ ದಿಕ್ಷೀತ್ 1998ರಿಂದ 2003ರವೆರೆಗೆ ದೆಹಲಿಯ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. ತೀವ್ರ ಅನಾರೋಗ್ಯದ ಪರಿಣಾಮ 2019, ಜುಲೈ 20ರಂದು ದೆಹಲಿಯ ಖಾಸಗಿ ಆಸ್ಪತ್ರೆಯಲ್ಲಿ ಶೀಲಾ ಕೊನೆಯುಸಿರೆಳೆದರು