ನವದೆಹಲಿ[ಆ.07]: ಸೋನಿಯಾ ಗಾಂಧಿ ಅವರ ವಿದೇಶಿ ಮೂಲವನ್ನು ಸುಷ್ಮಾ ಅವರಷ್ಟುವಿರೋಧಿಸಿದ ಮತ್ತೊಬ್ಬ ಮಹಿಳಾ ನಾಯಕಿ ದೇಶದಲ್ಲಿಲ್ಲ. ಏಕೆಂದರೆ ಅದನ್ನು ಸುಷ್ಮಾ ಅವರು ತೀರಾ ಭಾವೋದ್ವೇಗದಿಂದ ತೆಗೆದುಕೊಂಡಿದ್ದರು.

2004ರಲ್ಲಿ ಕಾಂಗ್ರೆಸ್‌ ಪಕ್ಷ ಯುಪಿಎ ಎಂಬ ಮಿತ್ರಕೂಟ ಮಾಡಿಕೊಂಡು ಸರ್ಕಾರ ರಚನೆ ಮಾಡಲು ಸಿದ್ಧತೆ ನಡೆಸಿತ್ತು. ಸೋನಿಯಾ ಗಾಂಧಿಯವರೇ ಪ್ರಧಾನಿಯಾಗುತ್ತಾರೆ ಎಂಬ ವರದಿಗಳು ಹರಿದಾಡುತ್ತಿದ್ದವು. ಆ ಸಂದರ್ಭದಲ್ಲಿ ಸುಷ್ಮಾ ಅವರು ಒಡ್ಡಿದ ಒಂದು ಚಾಲೆಂಜ್‌ ದೇಶಾದ್ಯಂತ ಭಾರಿ ಸಂಚಲನಕ್ಕೆ ಕಾರಣವಾಗಿತ್ತು.

ಮರೆಯಾದ ಮಾತೃ ಹೃದಯಿ ಸುಷ್ಮಾ ಸ್ವರಾಜ್: ಸಂಬಂಧಿತ ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇಟಲಿ ಮೂಲದ ಸೋನಿಯಾ ಏನಾದರೂ ದೇಶದ ಪ್ರಧಾನಿಯಾದರೆ ತಲೆ ಬೋಳಿಸಿಕೊಂಡು, ಬಿಳಿ ಸೀರೆ ಉಟ್ಟು, ಧಾನ್ಯಗಳನ್ನು ತಿಂದು ಜೀವನ ನಡೆಸುತ್ತೇನೆ ಎಂದು ಸುಷ್ಮಾ ಅವರು ಬಹಿರಂಗವಾಗಿ ಹೇಳಿಕೊಂಡಿದ್ದರು.

ಹಣೆ ತುಂಬಾ ಸಿಂಧೂರ, ಬಣ್ಣಬಣ್ಣದ ಸೀರೆ ಧರಿಸಿ ಲಕ್ಷಣವಾಗಿ ಕಾಣುತ್ತಿದ್ದ ಸುಷ್ಮಾ ಅವರ ಈ ಸವಾಲು ಭಾರಿ ಚರ್ಚೆಗೆ ಕಾರಣವಾಯಿತು. ವಿಶೇಷ ಎಂದರೆ, ಸುಷ್ಮಾ ಅವರು ಆ ಸವಾಲು ಒಡ್ಡಿದ ಬಳಿಕ ಸೋನಿಯಾ ಕೂಡ ಪ್ರಧಾನಿಯಾಗಲಿಲ್ಲ. ಇಷ್ಟೆಲ್ಲಾ ರಾದ್ಧಾಂತದ ಬಳಿಕವೂ ಸೋನಿಯಾ ಹಾಗೂ ಸುಷ್ಮಾ ಆತ್ಮೀಯರಾಗಿಬಿಟ್ಟರು.