ನವದೆಹಲಿ[ಏ.07]: ಸುಷ್ಮಾ ಸ್ವರಾಜ್‌ ಅವರು ಮೂತ್ರಪಿಂಡ ವೈಫಲ್ಯಕ್ಕೆ ಒಳಗಾಗಿದ್ದರು. 2016ರ ಡಿ.10ರಂದು ಅವರು ಕಿಡ್ನಿ ಕಸಿ ಚಿಕಿತ್ಸೆ ಮಾಡಿಕೊಂಡಿದ್ದರು. ಆನಂತರ ಅವರ ಆರೋಗ್ಯ ಮೊದಲಿನಂತೆ ಆಗಲಿಲ್ಲ. ಆದರೂ ಅವರು ಉತ್ಸಾಹದಿಂದಲೇ ಕೇಂದ್ರ ಸರ್ಕಾರದ ಕೆಲಸಗಳಲ್ಲಿ ಸಕ್ರಿಯರಾಗಿ ತೊಡಗಿಸಿಕೊಳ್ಳುತ್ತಿದ್ದರು. 

ಮೂತ್ರಪಿಂಡ ಕಸಿಗೆ ಒಳಗಾಗಿರುವ ಹಿನ್ನೆಲೆಯಲ್ಲಿ ಸಾಧ್ಯವಾದಷ್ಟು ಧೂಳಿನಿಂದ ದೂರವಿರುವಂತೆ ವೈದ್ಯರು ಸಲಹೆ ಮಾಡಿದ್ದರು. ಹೀಗಾಗಿ ಸುಷ್ಮಾ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸುವಂತಾಯಿತು. ವಿದೇಶಗಳಿಗೆ ಹೋಗುತ್ತಿದ್ದರಾದರೂ ಸ್ವಕ್ಷೇತ್ರದ ಭೇಟಿ ವಿರಳವಾಯಿತು. ಹೀಗಾಗಿಯೇ ಅವರು 2019ರ ಲೋಕಸಭೆ ಚುನಾವಣೆಯಲ್ಲಿ ಮಧ್ಯಪ್ರದೇಶದ ವಿದಿಶಾ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ ಎಂದು ಪಕ್ಷದ ವರಿಷ್ಠರಿಗೆ ತಿಳಿಸಿದರು. ಸುಷ್ಮಾ ಅವರ ಸಮಸ್ಯೆ ಗೊತ್ತಿಲ್ಲದ ಹಿನ್ನೆಲೆಯಲ್ಲಿ ವರಿಷ್ಠರೂ ಒಪ್ಪಿಗೆ ಸೂಚಿಸಿದರು.

ಮರೆಯಾದ ಮಾತೃ ಹೃದಯಿ ಸುಷ್ಮಾ ಸ್ವರಾಜ್: ಸಂಬಂಧಿತ ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಅನಾರೋಗ್ಯ ಪೀಡಿತರಾದ ಬಳಿಕ ವಿದಿಶಾದಲ್ಲಿ ‘ಸಂಸದರು ನಾಪತ್ತೆಯಾಗಿದ್ದಾರೆ’ ಎಂಬ ಪೋಸ್ಟರ್‌ಗಳು ಪ್ರತ್ಯಕ್ಷವಾಗಿದ್ದವು. ಇದಕ್ಕೆ ಸೂಕ್ತ ಉತ್ತರವನ್ನೂ ಸುಷ್ಮಾ ನೀಡಿದ್ದರು. ‘ಎರಡು ಬಾರಿ ವಿದಿಶಾದಿಂದ ಗೆದ್ದಿದ್ದೇನೆ. 8 ವರ್ಷಗಳ ಕಾಲ ಅಲ್ಲಿ ಸಕ್ರಿಯವಾಗಿ ಕ್ಷೇತ್ರಕ್ಕೆ ಭೇಟಿ ನೀಡಿದ್ದೇನೆ. ಪ್ರತಿ ತಿಂಗಳೂ ಎಲ್ಲ 8 ವಿಧಾನಸಭಾ ಕ್ಷೇತ್ರಗಳಿಗೆ ತೆರಳಿದ್ದೇನೆ. ಹೀಗಾಗಿಯೇ ನನ್ನನ್ನು ಸಕ್ರಿಯ ಸಂಸದರು ಎನ್ನುತ್ತಾರೆ. ಆದರೆ ಮೂತ್ರಪಿಂಡ ಕಸಿ ಬಳಿಕ ಕ್ಷೇತ್ರಕ್ಕೆ ಭೇಟಿ ನೀಡಲು ಆಗಲಿಲ್ಲ. ಆದಾಗ್ಯೂ ಕೊಟ್ಟಿದ್ದ ಎಲ್ಲ ಭರವಸೆ ಈಡೇರಿಸಿದ್ದೇನೆ’ ಎಂದು ಹೇಳಿದ್ದರು. 

ಹಾಗಂತ ಸುಷ್ಮಾ ವಿರುದ್ಧ ಆಡಳಿತ ವಿರೋಧಿ ಅಲೆ ಏನೂ ಇರಲಿಲ್ಲ. ಸುಷ್ಮಾ ಬದಲಿಗೆ ಅಲ್ಲಿ 2019ರಲ್ಲಿ ಸ್ಪರ್ಧಿಸಿದ ಬಿಜೆಪಿ ಅಭ್ಯರ್ಥಿ ರಮಾಕಾಂತ ಭಾರ್ಗವ 5 ಲಕ್ಷ ಮತಗಳ ಅಂತರದಿಂದ ಜಯಭೇರಿ ಬಾರಿಸಿದ್ದೇ ಇದಕ್ಕೆ ನಿದರ್ಶನ.