ಡಿಕೆಶಿಗೆ ಹಿನ್ನಡೆ, ಏಕಾಂಗಿಯಾದ ಎಚ್‌ಡಿಕೆ: ಇಲ್ಲಿವೆ ಆ. 29ರ ಟಾಪ್ ಸುದ್ದಿಗಳು
ಜಿಲ್ಲಾ ಮಟ್ಟದಿಂದ ಅಂತರಾಷ್ಟ್ರೀಯ ಮಟ್ಟದವರೆಗೆ ಹಲವರು ಸುದ್ದಿಗಳು ಗಮನಸೆಳೆದಿವೆ. ಒಂದೆಡೆ ಕಾಂಗ್ರೆಸ್ ಟ್ರಬಲ್ ಶೂಟರ್ ಡಿ. ಕೆ ಶಿವಕುಮಾರ್‌ಗೆ ಹೈಕೋರ್ಟ್‌ನಲ್ಲಿಹ್ನಿನಡೆಯಾಗಿದ್ದರೆ, ಅತ್ತ ಕುಮಾರಸ್ವಾಮಿ ಏಕಾಂಗಿಯಾಗಿದ್ದಾರೆ. ಇನ್ನು ಉಗ್ರ ದಾಳಿಯಾಗುವ ಮಾಹಿತಿ ಹಿನ್ನೆಲೆ ಗುಜರಾತ್ನಲ್ಲಿ ಹೈ ಅಲರ್ಟ್ ಘೋಷಿಸಿದ್ದರೆ, ಅತ್ತ ಪಾಕಿಸ್ತಾನ ತೀವ್ರ ಆರ್ಥಿಕ ಮುಗ್ಗಟ್ಟು ಅನುಭವಿಸುತ್ತಿದೆ. ಕ್ರೀಡಾ, ಸಿನಿಮಾ, ಉದ್ಯಮ, ತಂತ್ರಜ್ಞಾನ, ಉದ್ಯೋಗ, ಆಟೋಮೊಬೈಲ್ ವಲಯದಲ್ಲೂ ಹಲವಾರು ಬೆಳವಣಿಗೆಗಳಾಗಿವೆ. ಹೀಗಿರುವಾಗ ಆಗಸ್ಟ್ 29ರಂದು ಅತಿ ಹೆಚ್ಚು ಗಮನಸೆಳೆದ 10 ಸುದ್ದಿಗಳು ಇಲ್ಲಿವೆ
Top 10 Stories Of 29th August 2019
1. ಹೈಕೋರ್ಟ್ ಮಹತ್ವದ ತೀರ್ಪು: ED ಬಲೆಗೆ ಡಿಕೆ ಶಿವಕುಮಾರ್
ಮಾಜಿ ಜಲಸಂಪನ್ಮೂಲ ಸಚಿವ, ಹಾಲಿ ಕಾಂಗ್ರೆಸ್ ಶಾಸಕ ಡಿ.ಕೆ. ಶಿವಕುಮಾರ್ ಹೈಕೋರ್ಟ್‌ನಲ್ಲಿ ಹಿನ್ನೆಡೆಯಾಗಿದೆ. ಆದಾಯ ತೆರಿಗೆ ವಂಚನೆ ಪ್ರಕರಣ, ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಗೆ ತಡೆಕೋರಿ ಡಿಕೆ ಶಿವಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದೆ.
2. ಅತ್ತ ಅಧಿಕಾರ ಹೋಯ್ತು, ಇತ್ತ ಇಬ್ಬರು ಆಪ್ತರು ದೂರ ದೂರ! ಎಚ್‌ಡಿಕೆಗೆ ಈಗ ಏಕಾಂಗಿ?
ಅತ್ತ ಅಧಿಕಾರ ಕಳೆದುಕೊಂಡು ಮಾಜಿ ಸಿಎಂ ಆಗಿರುವ ಎಚ್.ಡಿ. ಕುಮಾರಸ್ವಾಮಿ ಈಗ ಏಕಾಂಗಿಯಾಗಿದ್ದಾರಾ? ಯಾವಾಗಲೂ ಅವರ ಜೊತೆ ಇರುತ್ತಿದ್ದ ಇಬ್ಬರು ಆಪ್ತ ರಾಜಕಾರಣಿಗಳು ಈಗ ಅಂತರ ಕಾಪಾಡುತ್ತಿದ್ದಾರೆ ಎಂದು ಹೇಳಲಾಗ್ತಿದೆ. ಹೌದು ಫೋನ್ ಕದ್ದಾಲಿಕೆ ವಿಚಾರದಿಂದ ಬೇಸತ್ತ ಸಿ. ಎಚ್. ಪುಟ್ಟರಾಜು ಹಾಗೂ ಜಿ. ಟಿ. ದೇವೇಗೌಡ , ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಇವರು ಬಿಜೆಪಿ ಸಂಪರ್ಕದಲ್ಲಿದ್ದಾರೆಮಬ ವದಂತಿಗಳೂ ಕೇಳಿ ಬಂದಿವೆ.
3. ರಾಜೀನಾಮೆ ಅಂಗೀಕಾರವಾಗಿಲ್ಲ, ಕೂಡಲೇ ಕರ್ತವ್ಯಕ್ಕೆ ಹಾಜರಾಗಿ: IAS ಅಧಿಕಾರಿಗೆ ಆದೇಶ!
'ನಾನು ನನ್ನ ಅಭಿವ್ಯಕ್ತಿ ಸ್ವಾತಂತ್ರ್ಯ ಕಳೆದುಕೊಂಡಿದ್ದೇನೆ' ಎಂದು ಕಳೆದ ವಾರ IAS ಅಧಿಕಾರಿ ಕನ್ನನ್ ಗೋಪಿನಾಥನ್ ರಾಜೀನಾಮೆ ನೀಡಿದ್ದರು. ಸದ್ಯ ಈ ರಾಜೀನಾಮೆ ಪತ್ರಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರ ಸರ್ಕಾರ 'ನಿಮ್ಮ ರಾಜೀನಾಮೆ ಇನ್ನೂ ಅಂಗೀಕಾರವಾಗಿಲ್ಲ. ಹೀಗಗಿ ಈ ಕೂಡಲೇ ನೀವು ಕರ್ತವ್ಯಕ್ಕೆ ಹಾಜರಾಗಬೇಕು' ಎಂದು ಸರ್ಕಾರ ಆದೇಶಿಸಿದೆ.
4. ಆಫೀಸ್ ಕರೆಂಟ್ ಬಿಲ್ಲೇ ಕಟ್ಟಿಲ್ಲ, ಯುದ್ಧ ಮಾಡುತ್ತಂತೆ ಪಾಕ್!
ಜಮ್ಮು ಕಾಶ್ಮೀರ ವಿಚಾರವಾಗಿ ಭಾರತದೊಂದಿಗೆ ಕಾಲು ಕೆರೆದು ಜಗಳಕ್ಕಿಳಿಯುವ ಪಾಕ್, ಕಾಶ್ಮೀರ ವಿಚಾರವಾಗಿ ಭಾರತ ತೆಗೆದುಕೊಂಡ ನಿರ್ಧಾರವನ್ನು ವಿರೋಧಿಸಿದೆ. ಅಲ್ಲದೇ ಹಲವಾರು ಬೆದರಿಕೆಗಳನ್ನು ಒಟ್ಟುತ್ತಿದೆ. ಹೀಗಿರುವಾಗ ಯುದ್ಧ ಮಾಡಲೂ ಸಿದ್ಧ ಎಂದಿದ್ದ ಪಾಕಿಸ್ತಾನ ಸದ್ಯ ಪ್ರಧಾನಿ ಸಚಿವಾಲಯದ ವಿದ್ಯುತ್ ಬಿಲ್ ಕಟ್ಟಲು ಹಣವಿಲ್ಲದೇ ಪರದಾಡುತ್ತಿದೆ ಎಂಬ ವಿಚಾರ ಬಯಲಾಗಿದೆ. ಹೀಗೆಂದು ಪಾಕಿಸ್ತಾನದ ಮಾಧ್ಯಮಗಳೇ ವರದಿ ಮಾಡಿದ್ದು, ಪ್ರಧಾನಿ ಇಮ್ರಾನ್ ಖಾನ್ ಸಚಿವಾಲಯದ ಬರೋಬ್ಬರಿ 41 ಲಕ್ಷ ರೂಪಾಯಿ ವಿದ್ಯುತ್ ಬಿಲ್ ಪಾವತಿಸಬೇಕು. ಈ ಬಿಲ್ ಕೂಡಲೇ ಪಾವತಿಸಿ ಎಂದು ಇಸ್ಲಮಾಬಾದ್ ಎಲೆಕ್ಟ್ರಿಸಿಟಿ ಸಪ್ಲೈ ಸಂಸ್ಥೆ ಪ್ರಧಾನಿಗೆ ನೋಟಿಸ್ ಜಾರಿ ಮಾಡಿದೆ ಎಂದು ತಿಳಿಸಿದೆ.
5. ಜಾರಕಿಹೊಳಿ ಕ್ಷೇತ್ರದಲ್ಲಿ ಭಿಕ್ಷೆ ಬೇಡುತ್ತಿದ್ದಾರೆ ಲಕ್ಷ್ಮಿ ಹೆಬ್ಬಾಳ್ಕರ್!
ಕೇಂದ್ರ ಸರ್ಕಾರದಿಂದ ಪ್ರವಾಹದ ಪರಿಹಾರವಾಗಿ ಒಂದು ರುಪಾಯಿ ಕೂಡ ಬಂದಿಲ್ಲ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಗರಂ ಆಗಿದ್ದಾರೆ. ಸರ್ಕಾರ ಸೇರಿದಂತೆ ಯಾವ ಜನಪ್ರತಿನಿಧಿಗಳಿಂದಲೂ ಜನರಿಗೆ ಸ್ಪಂದನೆ ವ್ಯಕ್ತವಾಗುತ್ತಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಸಾಹುಕಾರ್ ಕ್ಷೇತ್ರದಲ್ಲಿ ಪಾರುಪತ್ಯ ಸಾಧಿಸಲು ಮುಂದಾಗಿದ್ದಾರೆ ಎನ್ನಲಾಗಿದೆ. ಬರಗಾಲ ಇದೆ ಎಂದು ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದು, ಇದಕ್ಕೆ ಒಂದು ಸಾವಿರ ಬಿಡುಗಡೆಯಾಗಿದ್ದು, ಆ ಹಣದಲ್ಲಿ ನಿಮಗೆ ಹತ್ತು ಸಾವಿರ ಕೊಟ್ಟು ದಿಕ್ಕು ತಪ್ಪಿಸುತ್ತಿದ್ದಾರೆ. ಇದರ ಬಗ್ಗೆ ಪ್ರತಿಭಟನೆ ಮಾಡಿ ಬೆಂಗಳೂರಿನಲ್ಲಿ ಭಿಕ್ಷೆ ಎತ್ತುತ್ತೇನೆ ಎಂದು ಹೇಳಿದ್ದಾರೆ.
6. ಭಾರತ ಎ, ಅಂಡರ್-19 ಕೋಚ್ ಸ್ಥಾನಕ್ಕೆ ದ್ರಾವಿಡ್ ಗುಡ್‌ಬೈ; ಹೊಸಬರಿಗೆ ಮಣೆ!
ಭಾರತ ಎ ತಂಡ ಹಾಗೂ ಅಂಡರ್-19 ತಂಡದ ಕೋಚ್ ಜವಾಬ್ದಾರಿಗೆ ರಾಹುಲ್ ದ್ರಾವಿಡ್ ಗುಡ್ ಬೈ ಹೇಳಿದ್ದಾರೆ. ರಾಹುಲ್ ಮಾರ್ಗದರ್ಶನದಲ್ಲಿ ಕಿರಿಯರ ತಂಡ ಅತ್ಯುತ್ತಮ ಪ್ರದರ್ಶನ ನೀಡಿದೆ. ಇಷ್ಟೇ ಅಲ್ಲ ಹಲವು ಕ್ರಿಕೆಟಿಗರು ಟೀಂ ಇಂಡಿಯಾ ಪ್ರತಿನಿದಿಸಿದ್ದಾರೆ. ಇದೀಗ ರಾಹುಲ್ ದ್ರಾವಿಡ್ ಬದಲು ಭಾರತ ಎ ತಂಡಕ್ಕೆ ಸಿತಾಂಶು ಕೋಟಕ್ ಹಾಗೂ ಅಂಡರ್ 19 ತಂಡಕ್ಕೆ ಪರಾಸ್ ಮಂಬ್ರೆ ಮುಖ್ಯ ಕೋಚ್ ಆಗಿ ಆಯ್ಕೆಯಾಗಿದ್ದಾರೆ.
7. ‘ಪರಿಮಳ ಲಾಡ್ಜ್’ ಸಲಿಂಗಕಾಮಿಗಳೊಂದಿಗೆ ಕೈ ಜೋಡಿಸಿದ ದರ್ಶನ್!
ಕನ್ನಡ ಚಿತ್ರರಂಗದ ಸಾರಥಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ‘ಪರಿಮಳ ಲಾಡ್ಜ್’ ಚಿತ್ರದ ಟೀಸರ್ ಲಾಂಚ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ನಟ ಲೂಸ್ ಮಾದ ಯೋಗಿ ಡಿ ಬಾಸ್ ಬಗ್ಗೆ ಮನದಾಳದ ಮಾತುಗಳನ್ನಾಡಿದ್ದಾರೆ. ‘ನಾನು ಯಾವಾಗಲೂ ಅಣ್ಣಂಗೆ ಹೇಳುತ್ತಾ ಇರ್ತಿನಿ, ನಿಮ್ಮ ಜೊತೆ ಸಿನಿಮಾ ಮಾಡಬೇಕೆಂದು. ಸಿಕ್ಕಾಗ ಅವರು ಕೇಳುತ್ತಾರೆ ಏನೋ ನೀನು ಬರಿ ಹೇಳ್ತಿಯಾ ಮಾಡೋದೆ ಇಲ್ಲ ಅಂತ ರೇಗಿಸುತ್ತಾರೆ. ನನ್ನ ಕುಟುಂಬದವರಿಗೂ ಹಾಗೂ ನನಗೆ ಅಣ್ಣನ ಕಂಡರೆ ಅಪಾರ ಗೌರವ’ ಎಂದಿದ್ದಾರೆ.
8. ಪೊಲೀಸ್ ಇಲಾಖೆಯಲ್ಲೊಂದು ಎಡವಟ್ಟು: ಖಾಲಿ ಇಲ್ಲದ ಹುದ್ದೆಗಳಿಗೆ ಸರ್ಕಾರದಿಂದಲೇ ನೇಮಕ!
ಖಾಲಿ ಇಲ್ಲದ ಹುದ್ದೆಗಳಿಗೆ ಪೊಲೀಸ್ ಇಲಾಖೆ ನೇಮಕಾತಿ ಮಾಡಿಕೊಂಡಿದ್ದು, ಅಭ್ಯರ್ಥಿಗಳು 2017ರಿಂದ ಈ ವರೆಗೂ ನೇಮಕಾತಿ ಆದೇಶದ ಪ್ರತಿಗಾಗಿ ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಅಲೆಯುವಂತೆ ಆಗಿದೆ. ಇದರಲ್ಲಿ ನೇಮಕಾತಿ ಆದ ಕೆಲವರ ವಯೋಮಿತಿ ಮುಗಿದ್ದಿದ್ದರೆ, ಇನ್ನು ಕೆಲವರು ಇದ್ದ ನೌಕರಿಗೆ ರಾಜೀನಾಮೆ ಕೊಟ್ಟು ಪೊಲೀಸ್ ಹುದ್ದೆಗೆ ಸೇರಿದ್ದು ಆದೇಶ ಪ್ರತಿಯೂ ಸಿಗದೆ ಅಂತಂತ್ರ ಸ್ಥಿತಿಗೆ ಸಿಲುಕಿದ್ದಾರೆ.
9. ಆರ್ಥಿಕ ಹಿಂಜರಿತ: ಮಾರುತಿ ಕಂಪೆನಿಯ 3000 ಸಿಬ್ಬಂದಿ ಮನೆಗೆ!
ದೇಶದ ಆಟೋಮೊಬೈಲ್ ವಲಯದ ಬೆಳವಣಿಗೆ ಕಳೆದ 19 ವರ್ಷಗಳಲ್ಲೇ ಅತ್ಯಂತ ಕನಿಷ್ಠ ಮಟ್ಟಕ್ಕೆ ತಲುಪಿದ ವರದಿಗಳ ಬೆನ್ನಲ್ಲೇ, ಇದೀಗ ಅತಿದೊಡ್ಡ ಕಾರು ಉತ್ಪಾದನಾ ಸಂಸ್ಥೆಯಾದ ಮಾರುತಿ ಸುಝುಕಿ, 3000 ಹಂಗಾಮಿ ನೌಕರರನ್ನು ಕೆಲಸದಿಂದ ತೆಗೆದು ಹಾಕಿದೆ.
10. ಮೊದಲ ಗಗನಯಾನದಲ್ಲಿ ಮಹಿಳೆಯರಿಲ್ಲ!
2022 ರಲ್ಲಿ ಭಾರತ ಕೈಗೊಳ್ಳಲಿರುವ ಬಹು ನಿರೀಕ್ಷಿತ ಮಾನವ ಸಹಿತ ಗಗನಯಾನದಲ್ಲಿ ಮಹಿಳಾ ಯಾನಿ ಇರುವುದು ಅನುಮಾನ ಎನ್ನಲಾಗಿದೆ. ಸೇನಾ ಪಡೆಗಳಲ್ಲಿ ತರಬೇತಿಯಲ್ಲಿರುವ ಪೈಲಟ್‌ಗಳನ್ನು ಇಸ್ರೋ ಗಗನಯಾನಕ್ಕೆ ಕಳುಹಿಸಲು ಉದ್ದೇಶಿಸಿದ್ದು, ಸದ್ಯ ಅಂಥ ಯಾವುದೇ ಮಹಿಳಾ ಅಭ್ಯರ್ಥಿಗಳು ಲಭ್ಯ ಇರದಿರುವುದರಿಂದ ಮೊದಲ ಗಗನ ಯಾನದಲ್ಲಿ ಮಹಿಳಾ ಯಾನಿಗಳು ಇರುವುದು ಅನುಮಾನ ಎನ್ನಲಾಗಿದೆ.