ತೀರ್ಪು ಪ್ರಕಟಿಸಿದ ಹೈಕೋರ್ಟ್: ED ಬಲೆಗೆ ಡಿಕೆ ಶಿವಕುಮಾರ್
ಡಿ.ಕೆ.ಶಿವಕುಮಾರ್ ಅರ್ಜಿ ವಜಾ| ಇಡಿ ಸಮನ್ಸ್ ಗೆ ತಡೆ ನೀಡಲು ಹೈಕೋರ್ಟ್ ನಕಾರ| ED ಬಲೆಯಲ್ಲಿ ಸಿಕ್ಕಿಬಿದ್ದ ಡಿ.ಕೆ.ಶಿವಕುಮಾರ್
ಬೆಂಗಳೂರು, (ಆ.29): ಜಲಸಂಪನ್ಮೂಲ ಮಾಜಿ ಸಚಿವ, ಹಾಲಿ ಕಾಂಗ್ರೆಸ್ ಶಾಸಕ ಡಿ.ಕೆ. ಶಿವಕುಮಾರ್‌ಗೆ ಹೈಕೋರ್ಟ್‌ನಲ್ಲಿ ಹಿನ್ನೆಡೆಯಾಗಿದೆ.
ಆದಾಯ ತೆರಿಗೆ ವಂಚನೆ ಪ್ರಕರಣ, ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಗೆ ತಡೆಕೋರಿ ಡಿಕೆ ಶಿವಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾ ಮಾಡಿದೆ.
ನವದೆಹಲಿಯ ಮನೆಗಳಲ್ಲಿ ದೊರೆತ 8.60 ಕೋಟಿ ರೂಪಾಯಿಗಳಷ್ಟು ನಗದು ಪತ್ತೆ ಪ್ರಕರಣದ ಸಂಬಂಧ ಶಾಸಕ ಡಿ.ಕೆ.ಶಿವಕುಮಾರ್ ಮತ್ತಿತರರ ವಿರುದ್ಧ ಜಾರಿ ನಿರ್ದೇಶನಾಲಯ ಸಮನ್ಸ್ ನೀಡಿತ್ತು. ಆದ್ರೆ ಇದನ್ನು ಪ್ರಶ್ನಿಸಿ ಡಿಕೆಶಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿಯನ್ನುಇಂದು (ಗುರುವಾರ) ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಅರವಿಂದ ಕುಮಾರ್ ಅವರಿದ್ದ ನ್ಯಾಯಪೀಠ, ಡಿಕೆಶಿ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿ ಜಾರಿ ನಿರ್ದೇಶನಾಲಯದ ವಿಚಾರಣೆಗೆ ಗ್ರೀನ್ ಸಿಗ್ನಲ್ ನೀಡಿ ಆದೇಶ ನೀಡಿದ್ದಾರೆ.
ಹೈಕೋರ್ಟ್ ತೀರ್ಪಿನಲ್ಲೇನಿದೆ?
ತೀರ್ಪು 1- ಡಿಕೆಶಿ ವಿರುದ್ಧದ ಈ ಪ್ರಕರಣ ವಿಚಾರಣೆಗೆ ಯೋಗ್ಯ.
ತೀರ್ಪು 2- ಡಿಕೆಶಿ ಫ್ಲಾಟ್ ನಲ್ಲಿ ಹಣ ಸಿಕ್ಕಿರುವುದು ಶಿಕ್ಷಾರ್ಹ.
ತೀರ್ಪು 3- ಇಂತಹ ಹಣವನ್ನು ಆರ್ಥಿಕತೆಯಲ್ಲಿ ತೊಡಗಿಸಿಕೊಳ್ಳುವುದೂ ಶಿಕ್ಷಾರ್ಹ.
ತೀರ್ಪು 4- ಡಿಕೆಶಿ ಫ್ಲಾಟ್ ನಲ್ಲಿ ಸಿಕ್ಕ ಅಕ್ರಮ ಹಣದ ಅಂಶ ಪ್ರಕರಣದಲ್ಲಿ ದಾಖಲಾಗಿದೆ.
ತೀರ್ಪು 5- ಅಪರಾಧದಿಂದ ಬಂದ ಹಣದ ಬಗ್ಗೆಯೂ ಇಡಿ ವಿಚಾರಣೆ ನಡೆಸಬಹುದು.
ತೀರ್ಪು 6- ವಿಚಾರಣೆಗೆ ಹಾಜರಾಗುವಂತೆ ಡಿಕೆಶಿಗೆ ಇಡಿ ಸಮನ್ಸ್ ನೀಡಿರುವುದು ಸರಿಯಾಗಿದೆ.
ಈ ತೀರ್ಪಿನಿಂದ ಜಾರಿ ನಿರ್ದೇಶನಾಲಯ ಯಾವುದೇ ಸಮಯದಲ್ಲಿ ಡಿಕೆ ಶಿವಕುಮಾರ್ ಅವರನ್ನು ವಶಕ್ಕೆ ಪಡೆದುಕೊಳ್ಳಬಹುದು. ಇದರಿಂದ ಟ್ರಬಲ್ ಶೂಟರ್‌ಗೆ ಬಿಗ್ ಟ್ರಬಲ್ ಎದುರಾಗಿದೆ.
ಡಿಕೆಶಿ ಮುಂದಿರುವ ಆಯ್ಕೆ ಅಂದ್ರೆ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೊರೆ ಹೋಗಬಹುದು ಅಷ್ಟೇ.