ಸೋಮರಡ್ಡಿ ಅಳವಂಡಿ

ಕೊಪ್ಪಳ[ಆ.29]: ಖಾಲಿ ಇಲ್ಲದ ಹುದ್ದೆಗಳಿಗೆ ಪೊಲೀಸ್ ಇಲಾಖೆ ನೇಮಕಾತಿ ಮಾಡಿಕೊಂಡಿದ್ದು, ಅಭ್ಯರ್ಥಿಗಳು 2017ರಿಂದ ಈ ವರೆಗೂ ನೇಮಕಾತಿ ಆದೇಶದ ಪ್ರತಿಗಾಗಿ ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಅಲೆಯುವಂತೆ ಆಗಿದೆ. ಇದರಲ್ಲಿ ನೇಮಕಾತಿ ಆದ ಕೆಲವರ ವಯೋಮಿತಿ ಮುಗಿದ್ದಿದ್ದರೆ, ಇನ್ನು ಕೆಲವರು ಇದ್ದ ನೌಕರಿಗೆ ರಾಜೀನಾಮೆ ಕೊಟ್ಟು ಪೊಲೀಸ್ ಹುದ್ದೆಗೆ ಸೇರಿದ್ದು ಆದೇಶ ಪ್ರತಿಯೂ ಸಿಗದೆ ಅಂತಂತ್ರ ಸ್ಥಿತಿಗೆ ಸಿಲುಕಿದ್ದಾರೆ.

ಏನಿದು ಅವಾಂತರ?:

ಪೊಲೀಸ್ ಇಲಾಖೆ ಯಲ್ಲಿ ಖಾಲಿ ಇರುವ ಹುದ್ದೆಗಳಿಗಾಗಿ ಸರ್ಕಾರ 2017ರ ಆ. 24ರಂದು ನೇಮಕಾತಿ ಆದೇಶ ಹೊರಡಿಸಿದ್ದು, ಕೊಪ್ಪಳ ಪೊಲೀಸ್ ಇಲಾಖೆಯಲ್ಲಿ ನೇಮಕಾತಿ ಪ್ರಕ್ರಿಯೆಯನ್ನು 2018ರ ಮೇ ೯ರಂದು ಪ್ರಾರಂಭಿಸಲಾಗಿದೆ. ಜಿಲ್ಲೆಯಲ್ಲಿ ಖಾಲಿ ಇದ್ದ ಸ್ಥಳೀಯ ವೃಂದದ 65 ಸಶಸ್ತ್ರ ಪೊಲೀಸ್ ಕಾನ್‌ಸ್ಟೇಬಲ್ ಮತ್ತು ಸ್ಥಳೀಯೇತರ ವೃಂದದಲ್ಲಿ 15 ಸಶಸ್ತ್ರ ಪೊಲೀಸ್ ಕಾನ್‌ಸ್ಟೇಬಲ್ ಸೇರಿ ಒಟ್ಟು ೮೦ ಹುದ್ದೆಗಳಿಗೆ ಉಲ್ಲೇಖಿತ ಅಧಿ ಸೂಚನೆಯಂತೆ ಗೆಜೆಟ್‌ನಲ್ಲಿ ಪ್ರಕಟಿಸಲಾಗಿದೆ. ನಿಯಮಾನುಸಾರ ಸಿಇಟಿ, ದೈಹಿಕ ಪರೀಕ್ಷೆ ನಡೆಸಿದ್ದು, ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ದಾಖಲಾತಿ ಪರಿಶೀಲನೆ, ಸಿಂಧುತ್ವ ಪ್ರಮಾಣ ಪತ್ರಗಳ ಸ್ವೀಕಾರ ಮಾಡಿದೆ. ಇದೀಗ ನೇಮಕಾತಿ ಆದೇಶ ಪ್ರತಿಯನ್ನು ಮಾತ್ರ ನೀಡಬೇಕಿದೆ.

ಆದರೆ ಈವರೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಆದೇಶ ಪ್ರತಿ ಸಿಗದೇ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಆದೇಶ ಪ್ರತಿ ಇಂದು ಸಿಗುತ್ತೆ, ನಾಳೆ ಸಿಗುತ್ತೆ ಎಂದು ಅಭ್ಯರ್ಥಿಗಳು ನಿತ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ಅಲೆಯುವಂತಾಗಿದೆ. ಆದೇಶ ಪ್ರತಿ ನೀಡು ವಂತೆ ಸೂಚಿಸಬೇಕೆಂದು ಅಭ್ಯರ್ಥಿಗಳು ಐಜಿಪಿ, ಡಿಜಿಪಿ ಅವರನ್ನು ಭೇಟಿಯಾಗಿದ್ದಾರೆ. ಜತೆಗೆ ಹಿಂದಿನ ಸಮ್ಮಿಶ್ರ ಸರ್ಕಾರದ ಮುಖ್ಯ ಮಂತ್ರಿ, ಗೃಹ ಸಚಿವರನ್ನು ಭೇಟಿಯಾದರೂ ಪ್ರಯೋಜನವಾಗಿಲ್ಲ. ಇದ್ದ ಉದ್ಯೋಗ ಬಿಟ್ಟು ಪೊಲೀಸ್ ಇಲಾಖೆ ಸೇರಬೇಕೆಂದು ಬಂದ ಅಭ್ಯರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಖಾಲಿ ಇಲ್ಲದ ಹುದ್ದೆಗೆ ನೇಮಕ:

ಕೇವಲ 37 ಹುದ್ದೆಗಳು ಖಾಲಿ ಇದ್ದರೂ ೮೦ ಹುದ್ದೆಗಳು ಖಾಲಿ ಇವೆ ಎಂದು ಇಲಾಖೆ ಸಲ್ಲಿಸಿದ ವರದಿ ಆಧಾರದ ಮೇಲೆ ನೇಮಕಾತಿ ಪ್ರಕ್ರಿಯೇ ನಡೆದಿದೆ ಎನ್ನಲಾಗಿದೆ. ಬಳಿಕ ಖಾಲಿ ಹುದ್ದೆಗಳು ಇಲ್ಲ ಎಂಬ ಸತ್ಯಾಂಶ ತಿಳಿದಿದೆ. ವರದಿ ನೀಡು ವಲ್ಲಿ ತಪ್ಪೆಸಗಿದವರಿಗೆ ಈಗಾಗಲೇ ಇಲಾಖೆ ಯಲ್ಲಿಯೇ ಆಂತರಿಕ ಶಿಕ್ಷೆ ನೀಡಲಾಗಿದೆ. ಆದರೆ, ನೇಮಕವಾದ ಅಭ್ಯರ್ಥಿಗಳಿಗೆ ಆದೇಶ ಪ್ರತಿ ನೀಡುವುದಾರರೂ ಹೇಗೆ ಎನ್ನುವುದು ಯಕ್ಷಪ್ರಶ್ನೆಯಾಗಿದೆ ಎನ್ನುತ್ತಾರೆ ಪೊಲೀಸ್ ಅಧಿಕಾರಿಯೊಬ್ಬರು. ಖಾಲಿ ಇಲ್ಲದ ಹುದ್ದೆಗಳಿಗೆ ಭರ್ತಿ ಮಾಡಿಕೊಂಡಿದ್ದೆ ದೊಡ್ಡ ಸಮಸ್ಯೆಗೆ ಕಾರಣವಾಗಿದೆ. ಸರ್ಕಾರಕ್ಕೆ ಏಕೆ ತಪ್ಪು ವರದಿ ನೀಡಲಾಗಿದೆ ಎಂಬುದು ತನಿಖೆಯಿಂದ ಮಾತ್ರ ತಿಳಿದು ಬರಬೇಕಿದೆ.