ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ, ಪ್ರೇಯಸಿಯನ್ನು ನೋಡಲು ಬುರ್ಖಾ ಧರಿಸಿ ಬಂದ ಯುವಕನನ್ನು ಮಕ್ಕಳ ಕಳ್ಳನೆಂದು ತಪ್ಪಾಗಿ ಭಾವಿಸಿದ ಸ್ಥಳೀಯರು ಕಂಬಕ್ಕೆ ಕಟ್ಟಿ ಹಲ್ಲೆ ನಡೆಸಿದ್ದಾರೆ. ಪೊಲೀಸರ ವಿಚಾರಣೆಯ ನಂತರ, ಆತ ಪ್ರೇಯಸಿಯನ್ನು ಭೇಟಿಯಾಗಲು ಬಂದಿದ್ದನೆಂಬ ಸತ್ಯಾಂಶ ಬಯಲಾಗಿದೆ.

ಶಿವಮೊಗ್ಗ ಜಿಲ್ಲೆಯ ಸಾಗರ ಪಟ್ಟಣದಲ್ಲಿ ಪ್ರೇಯಸಿಯನ್ನು ನೋಡಲು ಬುರ್ಖಾ ಧರಿಸಿ ಬಂದ ಯುವಕನೊಬ್ಬನಿಗೆ ಧರ್ಮದೇಟು ನೀಡಿದ ಘಟನೆ ನಡೆದಿದೆ. ಸಾಗರ ಪಟ್ಟಣದ ಜನ್ನತ್ ನಗರದಲ್ಲಿ ಬುರ್ಖಾ ಧರಿಸಿ ತನ್ನ ಪ್ರೇಯಸಿಯನ್ನು ಭೇಟಿಗೆ ಬಂದಿದ್ದ ಯುವಕನನ್ನು, ಮಕ್ಕಳ ಕಳ್ಳನೆಂದು ತಪ್ಪಾಗಿ ಭಾವಿಸಿದ ಸ್ಥಳೀಯರು ಹಿಡಿದು ಕಂಬಕ್ಕೆ ಕಟ್ಟಿ ಹಲ್ಲೆ ನಡೆಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಘಟನೆಯ ಹಿನ್ನೆಲೆ

ಸಾಗರ ತಾಲೂಕಿನ ತ್ಯಾಗರ್ತಿ ಗ್ರಾಮದ ನಿವಾಸಿಯಾದ ಯುವಕನೊಬ್ಬ, ತನ್ನ ಪ್ರೇಯಸಿಯನ್ನು ಭೇಟಿಯಾಗುವ ಉದ್ದೇಶದಿಂದ ಗುರುತು ಸಿಗದಂತೆ ಇರಲು ಬುರ್ಖಾ ಧರಿಸಿಕೊಂಡು ಜನ್ನತ್ ನಗರಕ್ಕೆ ಬಂದಿದ್ದಾನೆ. ಆದರೆ ಆತನ ವೇಷಭೂಷಣ ಹಾಗೂ ಅಸಹಜ ನಡವಳಿಕೆ ಸ್ಥಳೀಯ ಮಕ್ಕಳ ಗಮನ ಸೆಳೆದಿದೆ. ಇತ್ತೀಚಿನ ದಿನಗಳಲ್ಲಿ ಮಕ್ಕಳ ಕಳ್ಳರ ಬಗ್ಗೆ ಹರಿದಾಡುತ್ತಿರುವ ವದಂತಿಗಳು ಮತ್ತು ಸುದ್ದಿಗಳಿಂದ ಈಗಾಗಲೇ ಆತಂಕದಲ್ಲಿದ್ದ ಮಕ್ಕಳು, ಈ ಯುವಕನನ್ನು ಮಕ್ಕಳ ಕಳ್ಳನೆಂದು ತಪ್ಪಾಗಿ ಭಾವಿಸಿದ್ದಾರೆ.

ಧರ್ಮದೇಟು, ಆತಂಕದ ವಾತಾವರಣ

ಮಕ್ಕಳ ಕೂಗಾಟ ಕೇಳಿದ ಸ್ಥಳೀಯರು ಕೂಡಲೇ ಸ್ಥಳಕ್ಕೆ ಧಾವಿಸಿ, ಯುವಕನನ್ನು ಹಿಡಿದು ಕಂಬಕ್ಕೆ ಕಟ್ಟಿ ಹಾಕಿ ಧರ್ಮದೇಟು ನೀಡಿದ್ದಾರೆ. ಈ ಘಟನೆ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಜನಸ್ತೋಮ ಕೂಡ ಸೇರಿತ್ತು. ಘಟನೆಯ ಮಾಹಿತಿ ತಿಳಿದ ತಕ್ಷಣ ಸಾಗರ ಟೌನ್ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ, ಯುವಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ವಿಚಾರಣೆಯ ವೇಳೆ, ಆತ ಮಕ್ಕಳ ಕಳ್ಳನಲ್ಲ; ತನ್ನ ಪ್ರೇಯಸಿಯನ್ನು ಭೇಟಿಯಾಗಲು ಬಂದಾಗ ಯಾರೂ ಗುರುತಿಸಬಾರದೆಂದು ಬುರ್ಖಾ ಧರಿಸಿ ಬಂದಿದ್ದನೆಂಬ ಸತ್ಯಾಂಶ ಬೆಳಕಿಗೆ ಬಂದಿದೆ.

ಎಚ್ಚರಿಕೆ ಮತ್ತು ಮನವಿ

ಪೊಲೀಸರು ಸಾರ್ವಜನಿಕರಿಗೆ ಮನವಿ ಮಾಡಿದ್ದು, ವದಂತಿಗಳು ಮತ್ತು ಅನುಮಾನಗಳ ಆಧಾರದಲ್ಲಿ ಕಾನೂನು ಕೈಗೆತ್ತಿಕೊಳ್ಳಬಾರದು. ಯಾವುದೇ ಸಂಶಯಾಸ್ಪದ ಪ್ರಕರಣ ಕಂಡುಬಂದರೆ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ತಿಳಿಸಿದ್ದಾರೆ. ತಪ್ಪು ಅನುಮಾನದಿಂದ ನಡೆದ ಈ ಘಟನೆಯಲ್ಲಿ ಪ್ರೇಯಸಿಯನ್ನು ನೋಡಲು ಬಂದ ಪ್ರೇಮಿಯನ್ನು ಊರವರು ಹಣ್ಣುಗಾಯಿ ನೀರುಗಾಯಿ ಮಾಡಿದ್ದಾರೆ.