ರಾಜೀನಾಮೆ ಅಂಗೀಕಾರವಾಗಿಲ್ಲ, ಕೂಡಲೇ ಕರ್ತವ್ಯಕ್ಕೆ ಹಾಜರಾಗಿ: IAS ಅಧಿಕಾರಿಗೆ ಆದೇಶ!
370ನೇ ವಿಧಿ ರದ್ದುಗೊಳಿಸಿದ ಬೆನ್ನಲ್ಲೇ ರಾಜೀನಾಮೆ ನೀಡಿದ್ದ IAS ಆಫೀಸರ್| ರಾಜೀನಾಮೆ ಅಂಗೀಕಾರವಾಗಿಲ್ಲ, ಕೂಡಲೇ ಕರ್ತವ್ಯಕ್ಕೆ ಹಾಜರಾಗುವಂತೆ ಸರ್ಕಾರ ಆದೇಶ| ಸರ್ಕಾರ ನೀಡಿರುವ ಆದೇಶದ ಬಗ್ಗೆ ಮಾಹಿತಿ ಇಲ್ಲ ಅಂದ್ರು ಆಫೀಸರ್ ಕನ್ನನ್ ಗೋಪಿನಾಥನ್
ನವದೆಹಲಿ[ಆ.29]: ಜಮ್ಮು ಕಾಶ್ಮೀರ ವಿಚಾರವಾಗಿ ಕಳೆದ ವಾರ ರಾಜೀನಾಮೆ ನೀಡಿದ್ದ IAS ಅಧಿಕಾರಿ ಕನ್ನನ್ ಗೋಪಿನಾಥನ್ ಗೆ 'ನಿಮ್ಮ ರಾಜೀನಾಮೆ ಇನ್ನೂ ಅಂಗೀಕಾರವಾಗಿಲ್ಲ. ಹೀಗಗಿ ಈ ಕೂಡಲೇ ನೀವು ಕರ್ತವ್ಯಕ್ಕೆ ಹಾಜರಾಗಬೇಕು' ಎಂದು ಸರ್ಕಾರ ಆದೇಶಿಸಿದೆ.
ಹೌದು ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ವಿಧಿ ರದ್ದುಗೊಳಿಸಿದ ಬೆನ್ನಲ್ಲೇ, ಕಣಿವೆ ರಾಜ್ಯದಲ್ಲಿ ನಿಷೇಧಾಜ್ಞೆ ಹೇರಲಾಗಿತ್ತು. ಅಲ್ಲದೇ ಸಂಪರ್ಕ ಮಾಧ್ಯಮಗಳಾದ ಫೋನ್ ಹಾಗೂ ಇಂಟರ್ನೆಟ್ ಸೇವೆಯನ್ನೂ ಸ್ಥಗಿತಗೊಳಿಸಲಾಗಿತ್ತು. ಹೀಗಾಗಿ ಅಲ್ಲೇನು ನಡೆಯುತ್ತಿದೆ ಎಂಬ ಮಾಹಿತಿ ಯಾರಿಗೂ ಇರಲಿಲ್ಲ. ಇದರ ಬೆನ್ನಲ್ಲೇ ಕನ್ನನ್ ತಮ್ಮ ಸೇವೆಗೆ ರಾಜೀನಾಮೆ ನೀಡಿದ್ದರು.
ನನ್ನ ಅಭಿವ್ಯಕ್ತಿ ಸ್ವಾತಂತ್ರ್ಯ ನನಗೆ ಬೇಕು: ರಾಜೀನಾಮೆ ನೀಡಿದ ಮತ್ತೊಬ್ಬ IAS ಅಧಿಕಾರಿ!
ಆದರೀಗ ಇವರ ರಾಜೀನಾಮೆ ಪ್ರತಿಕ್ರಿಯಿಸಿರುವ ಸರ್ಕಾರ ರಾಜೀನಾಮೆ ಇನ್ನೂ ಅಂಗೀಕಾರವಾಗಿಲ್ಲ. ಹೀಗಾಗಿ ನೀವು ಕೂಡಲೇ ನಿಮ್ಮ ಕರ್ತವ್ಯಕ್ಕೆ ಹಾಜರಾಗಬೇಕು ಎಂದಿದೆ. ಕೇಂದ್ರಾಡಳಿತ ಪ್ರದೇಶವಾಗಿರುವ ದಾದರ್ ಮತ್ತು ನಗರ ಹವೇಲಿಯ ಡಿಸಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಆದರೆ ರಾಜೀನಾಮೆ ಬಳಿಕ ಸರ್ಕಾರಿ ಬಂಗಲೆಯನ್ನು ತೊರೆದಿದ್ದಾರೆ. ಹೀಗಾಗಿ ಸದ್ಯ ಸರ್ಕಾರದ ಆದೇಶವನ್ನು ಅವರಿಗೆ ನೀಡಲಾಗಿದ್ದ ಸರ್ಕಾರಿ ಬಂಗಲೆಯ ಬಾಗಿಲಿಗೆ ಅಂಟಿಸಲಾಗಿದೆ. ಈ ಕುರಿತಾಗಿ ಕನ್ನನ್ ರನ್ನು ಸಂಪರ್ಕಿಸಿದಾಗ 'ಈ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ' ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ರಾಜೀನಾಮೆ ಬಳಿಕ ಕನ್ನನ್ ಹೇಳಿದ್ದೇನು?
ತಮ್ಮ ರಾಜೀನಾಮೆ ಬಳಿಕ ಮಾತನಾಡಿದ್ದ ಕನ್ನನ್ 'ನನಗೆ ನನ್ನ ಅಭಿವ್ಯಕ್ತಿ ಸ್ವಾತಂತ್ರ್ಯ ಬೇಕು. ನಾನು ಇತರರ ಧ್ವನಿಯಾಬಹುದೆಂಬ ನಂಬಿಕೆಯಿಂದ ನಾಗರೀಕ ಸೇವೆಗೆ ಸೇರ್ಪಡೆಯಾದೆ. ಆದರೀಗ ಇಲ್ಲಿ ನನ್ನ ಧ್ವನಿಯೇ ಹುದುಗಿ ಹೋಗಿದೆ. ನನ್ನ ರಾಜೀನಾಮೆ ನಾನು ಕಳೆದುಕೊಂಡ ನನ್ನ ಅಭಿವ್ಯಕ್ತಿ ಸ್ವಾತಂತ್ರ್ಯ ಮರಳಿಸಲಿದೆ' ಎಂದಿದ್ದರು. ಜಮ್ಮು ಕಾಶ್ಮೀರ ವಿಚಾರವಾಗಿ ಅವರು ತಮ್ಮ ರಾಜೀನಾಮೆ ನೀಡಿದ್ದರು ಎಂದೂ ಹೇಳಲಾಗಿತ್ತು.
2018ರ ಕೇರಳ ಪ್ರವಾಹದ ವೇಳೆ ಸುದ್ದಿಯಾಗಿದ್ದ ಕನ್ನನ್
AGMUT ಕೇಡರ್ ನ 2012ನೇ ಸಾಲಿನ IAS ಅಧಿಕಾರಿ ಕನ್ನನ್ ಗೋಪಿನಾಥನ್ ಕೇರಳದಲ್ಲುಂಟಾದ ಪ್ರವಾಹದ ವೇಳೆ ಕೇಂದ್ರಾಡಳಿತ ಪ್ರದೇಶ ದಾದ್ರಾ ಹಾಗೂ ನಗರ ಹವೇಲಿಯಲ್ಲಿ ಡಿಸಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಆದರೆ ಕೇರಳದ ಪರಿಸ್ಥಿತಿ ಗಮನಿಸಿದ ಅವರು ಸಂತ್ರಸ್ತರ ರಕ್ಷಣೆಗಾಗಿ ಧಾವಿಸಿದ್ದರು. ತಾವೊಬ್ಬ ಜಿಲ್ಲಾಧಿಕಾರಿ ಎಂದು ತಿಳಿಸದೆ ಸಾಮಾನ್ಯರಂತೆ ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ಗೋಪಿನಾಥನ್ ರನ್ನು ಮತ್ತೊಬ್ಬ ಅಧಿಕಾರಿ ಗುರುತಿಸಿದ್ದರು. ಬಳಿಕವಷ್ಟೇ ಅವರೊಬ್ಬ IAS ಅಧಿಕಾರಿ ಎಂಬ ವಿಚಾರ ಬಯಲಾಗಿತ್ತು.