ಇರಾನ್‌ನ ದಿವಂಗತ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಪತ್ನಿ ಮನ್ಸೌರೆ ಖೋಜಾಸ್ತೆ ಬಾಗರ್ಜಾಡೆ ನಿಧನರಾಗಿದ್ದಾರೆ. ಟೆಹ್ರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ವೈಮಾನಿಕ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ನವದೆಹಲಿ (ಮಾ.2): ಇರಾನ್‌ನ ದಿವಂಗತ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಪತ್ನಿ ಮನ್ಸೌರೆ ಖೋಜಾಸ್ತೆ ಬಾಗರ್ಜಾಡೆ (Mansoureh Khojasteh Bagherzadeh) ಅವರು ಸೋಮವಾರ ನಿಧನರಾಗಿದ್ದಾರೆ. ಟೆಹ್ರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ವೈಮಾನಿಕ ದಾಳಿಯಲ್ಲಿ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿವೆ. ಇರಾನ್‌ನ ಮಶಾದ್‌ನಲ್ಲಿ ಜನಿಸಿದ ಮತ್ತು ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ಬ್ರಾಡ್‌ಕಾಸ್ಟಿಂಗ್ (ಐಆರ್‌ಐಬಿ)ನ ಮಾಜಿ ಉಪ ನಿರ್ದೇಶಕ ಹಸನ್ ಖೋಜಸ್ತೆ ಬಘರ್ಜಾದೆ ಅವರ ಸಹೋದರಿಯಾಗಿದ್ದ 79 ವರ್ಷದ ಅವರು, ಅಮೆರಿಕ ಮತ್ತು ಇಸ್ರೇಲ್ ನಡೆಸಿದ ದಾಳಿಯ ಸಮಯದಲ್ಲಿ ಖಮೇನಿ ಅವರೊಂದಿಗೆ ಟೆಹ್ರಾನ್‌ನಲ್ಲಿರುವ ಅವರ ಕಾಂಪೌಂಡ್‌ನಲ್ಲಿದ್ದರು ಎನ್ನಲಾಗಿತ್ತು.
ಅಯತೊಲ್ಲಾ ಅಲಿ ಖಮೇನಿ ಹಾಗೂ ಅವರ ಪತ್ನಿ ಮನ್ಸೌರೆ ಖೋಜಾಸ್ತೆ ಬಾಗರ್ಜಾಡೆ, ಆರು ಮಂದಿ ಮಕ್ಕಳನ್ನು ಅಗಲಿದ್ದಾರೆ. ನಾಲ್ಕು ಗಂಡು ಮಕ್ಕಳು (ಮೊಸ್ತಫಾ, ಮೊಜ್ತಾಬಾ, ಮಸೌದ್ ಮತ್ತು ಮೇಸಮ್) ಮತ್ತು ಇಬ್ಬರು ಹೆಣ್ಣು ಮಕ್ಕಳು (ಹೋಡಾ ಮತ್ತು ಬೋಶ್ರಾ) ಇವರಿಗಿದ್ದರು. ಇವರ ಕೆಲವು ದೂರದ ಸಂಬಂಧಿಕರು ವಿದೇಶಗಳಲ್ಲಿ (ವರದಿಗಳ ಪ್ರಕಾರ ಪ್ಯಾರಿಸ್‌ನಲ್ಲಿ ಮೊಮ್ಮಕ್ಕಳು ಮತ್ತು ಸೋದರಳಿಯಂದಿರು) ನೆಲೆಸಿದ್ದಾರೆ ಎನ್ನಲಾಗಿದ್ದರೂ, ಇವರ ಹತ್ತಿರದ ಕುಟುಂಬ ಮಾತ್ರ ಇರಾನ್‌ನಲ್ಲಿಯೇ ನೆಲೆಸಿದೆ.
ಖಮೇನಿ ಪತ್ನಿ ಮನ್ಸೌರೆ ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು ತೀರಾ ವಿರಳವಾಗಿದ್ದವು. ಪತಿಯ ದಶಕಗಳ ಆಡಳಿತಾವಧಿಯುದ್ದಕ್ಕೂ ಅವರು ಬಹಳ ಲೋ-ಪ್ರೊಫೈಲ್ ಕಾಯ್ದುಕೊಂಡಿದ್ದರು. ಆದರೆ, ಅವರ ಕುಟುಂಬವು ಪ್ರಭಾವಿ ಸ್ಥಾನಗಳನ್ನು ಹೊಂದಿತ್ತು. ಮನ್ಸೌರೆ ಅವರ ತಂದೆ ಮೊಹಮ್ಮದ್ ಇಸ್ಮಾಯಿಲ್ ಖೋಜಾಸ್ತೆ ಬಾಗರ್ಜಾಡೆ ಅವರು ಮಶಾದ್‌ನಲ್ಲಿ ಪ್ರಖ್ಯಾತ ಉದ್ಯಮಿಯಾಗಿದ್ದರು. ಇವರ ಸಹೋದರ ಹಸನ್ ಅವರು ಇರಾನ್‌ನ ಸರ್ಕಾರಿ ಪ್ರಸಾರ ಸಂಸ್ಥೆಯಾದ 'ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ಬ್ರಾಡ್‌ಕಾಸ್ಟಿಂಗ್' (IRIB) ನ ಉಪ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ.
ಖಮೇನಿ ಅವರ ಪುತ್ರಿಯರಾದ ಬೋಶ್ರಾಮತ್ತು ಹೋಡಾ ಅವರು ವಿವಾಹಿತರಾಗಿದ್ದಾರೆ. ಖಮೇನಿ ಅವರಿಗೆ ಹಲವಾರು ಮೊಮ್ಮಕ್ಕಳಿದ್ದರೂ, ಅವರ ಗುರುತನ್ನು ಎಂದಿಗೂ ಬಹಿರಂಗಪಡಿಸಲಾಗಿಲ್ಲ. ಸಾರ್ವಜನಿಕವಾಗಿ ಅತ್ಯಂತ ಶಕ್ತಿಶಾಲಿ ವ್ಯಕ್ತಿಯಾಗಿ ಕಾಣಿಸಿಕೊಳ್ಳುತ್ತಿದ್ದ ಖಮೇನಿ, ತಮ್ಮ ಕೌಟುಂಬಿಕ ಜೀವನವನ್ನು ಮಾತ್ರ ಯಾವುದೇ ಬಾಹ್ಯ ತನಿಖೆ ಅಥವಾ ಪ್ರಚಾರಕ್ಕೆ ಸಿಗದಂತೆ ಬಹಳ ಜಾಗರೂಕತೆಯಿಂದ ರಹಸ್ಯವಾಗಿಟ್ಟಿದ್ದರು.
ಖಮೇನಿ ಸಾವು ಘೋಷಿಸಿದ್ದ ಅಮೆರಿಕ-ಇಸ್ರೇಲ್
ಇರಾನ್‌ನ ಟಾರ್ಗೆಟ್‌ಗಳ ಮೇಲೆ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ದಾಳಿಗಳ ನಂತರ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಕೊಲ್ಲಲ್ಪಟ್ಟಿದ್ದಾರೆ ಎಂದು ರಾಜ್ಯ ಮಾಧ್ಯಮಗಳು ತಿಳಿಸಿದ್ದವು. ಟೆಹ್ರಾನ್ ಮೇಲೆ ನಡೆದ ಜಂಟಿ ದಾಳಿಯಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ವಾಷಿಂಗ್ಟನ್ ಮತ್ತು ಟೆಲ್ ಅವೀವ್ ಹೇಳಿದ ನಂತರ ಈ ದೃಢೀಕರಣ ಬಂದಿದೆ. "ಇರಾನ್‌ನ ಸರ್ವೋಚ್ಚ ನಾಯಕ ಹುತಾತ್ಮರಾಗಿದ್ದಾರೆ" ಎಂದು ರಾಜ್ಯ ಪ್ರಸಾರಕ ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ಬ್ರಾಡ್‌ಕಾಸ್ಟಿಂಗ್ ಮಾರ್ಚ್ 1 ರಂದು ವರದಿ ಮಾಡಿತ್ತು.


