ಮಲ್ಲಿ ಈಗ ಕೋಟ್ಯಧಿಪತಿಯಾಗಿದ್ದಾಳೆ. ಅವಳನ್ನು ದಯವಿಟ್ಟು ಭಾಗ್ಯಲಕ್ಷ್ಮಿಯ ಭಾಗ್ಯಳನ್ನಾಗಿ ಮಾಡಬೇಡ್ರಪ್ಪಾ ಎಂದು ನೆಟ್ಟಿಗರು ಹೇಳ್ತಿದ್ದಾರೆ. ಏನಿದು ವಿಷ್ಯ?
ಜೀ ಕನ್ನಡದ ಅಮೃತಧಾರೆ ಹಾಗೂ ಕಲರ್ಸ್ ಕನ್ನಡದ ಭಾಗ್ಯಲಕ್ಷ್ಮೀ ಸೀರಿಯಲ್ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಇದೀಗ ಹೋಲಿಕೆ ಶುರುವಾಗಿದೆ. ಎರಡೂ ಸೀರಿಯಲ್ನಲ್ಲಿ ಗಂಡ ಮತ್ತೊಂದು ಮದ್ವೆಯಾಗಿದ್ದಾನೆ. ಭಾಗ್ಯಲಕ್ಷ್ಮಿಯಲ್ಲಿ ನಾಯಕಿ ಭಾಗ್ಯಳ ಗಂಡ ತಾಂಡವ್ ಡಿವೋರ್ಸ್ ಕೊಡದೇ ಮತ್ತೊಂದು ಮದುವೆಯಾಗಿದ್ದರೆ, ಅಮೃತಧಾರೆಯಲ್ಲಿ ಮಲ್ಲಿಯ ಗಂಡ ಜೈದೇವ್ ಡಿವೋರ್ಸ್ ಕೊಡದೇ ಮದುವೆಯಾಗಿದ್ದಾನೆ. ಆದರೆ ಭಾಗ್ಯಲಕ್ಷ್ಮಿಯಲ್ಲಿ ಅತೀ ಎನ್ನಿಸುವಷ್ಟು ಒಳ್ಳೆಯತನವನ್ನು ನಾಯಕಿಯಲ್ಲಿ ತುಂಬಲಾಗಿದೆ. ಮೊದಲಿನಿಂಲೂ ಗಂಡ ಎಷ್ಟೇ ಹಿಂಸೆ ಕೊಟ್ಟರೂ ಆತನ ಪರವಾಗಿಯೇ ನಿಲ್ಲುವ ನಾಯಕಿ ಈಕೆ. ಅದು ಎಷ್ಟರಮಟ್ಟಿಗೆ ವೀಕ್ಷಕರಿಗೆ ಅಸಹ್ಯ ಹುಟ್ಟಿಸಿದೆ ಎಂದರೆ, ತಂಗಿ ಪೂಜಾಳ ಮದುವೆಯನ್ನು ನಿಲ್ಲಿಸಲು ಬಂದ ತಾಂಡವ್ನನ್ನು ಖುದ್ದು ಆತನ ಅಮ್ಮನೇ ಕಷ್ಟಪಟ್ಟು ಕಟ್ಟಿಹಾಕಿ ಕೂಡು ಹಾಕಿದ್ದರೆ, ಪತಿವ್ರತೆಯಾಗಿರೋ ಭಾಗ್ಯ ಆತನನ್ನು ಬಿಡಿಸಿದ್ದಾಳೆ. ಇದನ್ನು ನೋಡಿ ನೆಟ್ಟಿಗರು ನಾಯಕಿಯನ್ನು ವಾಚಾಮಗೋಚರವಾಗಿ ಬೈದಿದ್ದರು.
ರಿಯಲ್ ಲೈಫ್ನಲ್ಲಿ ಗಂಡ ಇಷ್ಟೆಲ್ಲಾ ಟಾರ್ಚರ್ ಕೊಟ್ಟಾಗ ಪತ್ನಿ ಆತನ ವಿರುದ್ಧ ಹೋದರೆ ಜನರು ಸಪೋರ್ಟ್ ಮಾಡುತ್ತಾರೋ ಇಲ್ಲವೋ ಗೊತ್ತಿಲ್ಲ, ಆದರೆ ಸೀರಿಯಲ್ ವಿಷ್ಯಕ್ಕೆ ಬಂದಾಗ ಮಾತ್ರ ಮುಗ್ಧ ಹೆಣ್ಣುಮಕ್ಕಳ ಪರವಾಗಿ ನಿಂತುಬಿಡುತ್ತಾರೆ. ಇದೇ ಕಾರಣಕ್ಕೆ ತಾಂಡವ್ಗೆ ಇನ್ನೂ ಸಹಾಯ ಮಾಡುವ ಭಾಗ್ಯಳ ವಿರುದ್ಧ ನೆಟ್ಟಿಗರು ಕಿಡಿ ಕಾರುತ್ತಿದ್ದಾರೆ. ಆದರೆ ಇದೀಗ ಜೀ ಕನ್ನಡದ ಅಮೃತಧಾರೆಯಲ್ಲಿ ಟ್ವಿಸ್ಟ್ ಸಿಕ್ಕಿದೆ. ಮಲ್ಲಿ ಕೋಟ್ಯಧೀಶ್ವರನ ಮಗಳಾಗಿ ಬದಲಾಗಿರೋ ಕಾರಣ, ಆಕೆಗೆ ಅಪ್ಪನ ಆಸ್ತಿಯೆಲ್ಲಾ ಸಿಕ್ಕಿದೆ. ಇದೇ ಕಾರಣಕ್ಕೆ ಅವಳು ರೆಸ್ಟೋರೆಂಟ್ ಒಂದರ ಮಾಲೀಕಳೂ ಆಗಿದ್ದಾಳೆ.
ಇದೇ ರೆಸ್ಟೋರೆಂಟ್ಗೆ ಅರಿವಿಲ್ಲದೇ ಜೈದೇವ ಮತ್ತು ದಿಯಾ ಬಂದಿದ್ದಾರೆ. ಆಗ ಕೆಲಸಗಾರರು, ದಿಯಾ ಮತ್ತು ತಾಂಡವ್ನನ್ನು ಪಕ್ಕಕ್ಕೆ ಸರಿಸಿ ಓನರ್ ಬರುತ್ತಿದ್ದಾರೆ, ಸೈಡ್ಗೆ ನಿಲ್ಲಿ ಎಂದಿದ್ದಾರೆ. ಕಾರಿನಿಂದ ಮಲ್ಲಿ ಇಳಿದಿದ್ದಾಳೆ. ಇದನ್ನು ನೋಡಿ ಇಬ್ಬರೂ ಶಾಕ್ ಆಗಿದ್ದಾರೆ. ಆದರೆ ಮಲ್ಲಿ ಭಾಗ್ಯಳ ರೀತಿ ಗಂಡನ ಮೇಲೆ ಪ್ರೀತಿಯ ಧಾರೆ ಹರಿಸದೇ ರೆಬಲ್ ಪತ್ನಿಯಾಗಿ ಅವರನ್ನು ಹಂಗಿಸುವಂತೆ ನೋಡಿ ಮುಂದೆ ಸಾಗಿದ್ದಾಳೆ. ಅವಳಿಗೆ ಇನ್ನಷ್ಟು ಹೊಟ್ಟೆಕಿಚ್ಚು ಬರಲಿ ಎನ್ನುವ ಕಾರಣಕ್ಕೆ ದಿಯಾ ಮತ್ತು ಜೈದೇವ್ ಹೋಟೆಲ್ ಒಳಗೆ ಹೋಗಿ, ತಮ್ಮ ಪ್ರೀತಿಯನ್ನು ಅವಳ ಮುಂದೆ ತೋರಿಸಿಕೊಳ್ಳುವವರು ಇದ್ದಾರೆ.
ಇದರ ಪ್ರೊಮೋ ಬಿಡುಗಡೆಯಾಗುತ್ತಿದ್ದಂತೆಯೇ, ನೆಟ್ಟಿಗರು ಭಾಗ್ಯಲಕ್ಷ್ಮಿ ಭಾಗ್ಯ ಮತ್ತು ಅಮೃತಧಾರೆಯ ಮಲ್ಲಿಯನ್ನು ಕಂಪೇರ್ ಮಾಡುತ್ತಿದ್ದಾರೆ. ಭಾಗ್ಯಳ ರೀತಿಯಲ್ಲಿ ಮಲ್ಲಿಯನ್ನು ಅತೀ ಒಳ್ಳೆಯವಳ ರೀತಿ ತೋರಿಸದೇ ಇರುವುದಕ್ಕೆ ನಿರ್ದೇಶಕರಿಗೆ ಧನ್ಯವಾದ ಸಲ್ಲಿಸಿದ್ದಾರೆ. ಮುಂದೆಯೂ ಮಲ್ಲಿಯನ್ನು ಭಾಗ್ಯ ಮಾಡಬೇಡ ತಾಯೇ, ನಿನಗೆ ಕಾಯಿ ಒಡೆಸುತ್ತೇನೆ ಎಂದು ಕಮೆಂಟಿಗರೊಬ್ಬರು ಕಮೆಂಟ್ ಮಾಡಿದ್ದು, ಅದಕ್ಕೆ ಸಕತ್ ಪ್ರತಿಕ್ರಿಯೆಯೂ ಬಂದಿದೆ. ಅತೀ ಎನ್ನಿಸುವಷ್ಟು ಮುಗ್ಧತೆ ತೋರಿರುವ ಭಾಗ್ಯಳಂತೆ ಮಲ್ಲಿಯನ್ನು ಮಾಡದೇ ಅವಳು ಜೈದೇವ ಮುಟ್ಟಿನೋಡಿಕೊಳ್ಳುವಂತೆ ಮಾಡಿ ಎಂದು ಹೇಳುತ್ತಿದ್ದಾರೆ. ಒಟ್ಟಿನಲ್ಲಿ ಸೀರಿಯಲ್ ಪ್ರಿಯರು, ಧಾರಾವಾಹಿಗಳನ್ನು ಕಂಪೇರ್ ಮಾಡಿ ಕಮೆಂಟ್ ಹಾಕುತ್ತಿದ್ದಾರೆ.
