ಶ್ರೀರಸ್ತು ಶುಭಮಸ್ತುನಲ್ಲಿ ರಾಧಾ ಎಂಟ್ರಿಯಾಗ್ತಿರುವಂತೆಯೇ ಅವಿವಾಹಿತ ವೀಕ್ಷಕರಿಗೆ ಮಾಧವ್​ ಮೇಲೆ ಹೊಟ್ಟೆ ಉರಿ ಶುರುವಾಗಿದೆ. ಅಷ್ಟಕ್ಕೂ ಕಮೆಂಟ್​ನಲ್ಲಿ ಹೇಳ್ತಿರೊದೇನು ನೋಡಿ... 

ಸದ್ಯ ಶ್ರೀರಸ್ತು ಶುಭಮಸ್ತು ಸೀರಿಯಲ್ ಇನ್ನೇನು ಮುಗಿದೇ ಬಿಡ್ತು ಎನ್ನುವಷ್ಟರಲ್ಲಿಯೇ ತಿರುವುಗಳ ಮೇಲೆ ತಿರುವು ಪಡೆದುಕೊಳ್ಳುತ್ತಲೇ ಇದೆ. ಶ್ರೀರಸ್ತು ಶುಭಮಸ್ತು ಸೀರಿಯಲ್‌ ಈಗ ಕುತೂಹಲದ ಘಟ್ಟ ತಲುಪಿದೆ. ಮನೆಯ ಒಳಿತಿಗಾಗಿ ಏನು ಬೇಕಾದರೂ ಮಾಡಲು ಸಿದ್ಧವಿರುವ ತುಳಸಿ ಹಾಗೂ ಎಲ್ಲರನ್ನೂ ಸರ್ವನಾಶ ಮಾಡಲು ಏನು ಬೇಕಾದರೂ ಮಾಡಲು ಪಣ ತೊಟ್ಟಿರುವ ಶಾರ್ವರಿ... ಈ ಇಬ್ಬರು ಸೊಸೆಯಂದಿರ ನಡುವಿನ ಕಥೆ ಭಿನ್ನ ಭಿನ್ನ ಸ್ವರೂಪ ಪಡೆದುಕೊಳ್ಳುತ್ತಲೇ ಸಾಗಿದೆ. ಕುಟುಂಬ, ಪತಿ, ಮಕ್ಕಳು ಎಂದು ಬಂದರೆ ಯಾವುದಕ್ಕೂ ಜಗ್ಗದೇ, ಕುಗ್ಗದೇ ಮುನ್ನುಗ್ಗುವವಳು ತುಳಸಿ. ಆದರೆ ಏನೇ ಆದರೂ ಸೈ. ಗಂಡನ ಇಡೀ ಕುಟುಂಬವನ್ನೇ ನಾಶ ಮಾಡಿ ನೆಮ್ಮದಿಯ ಉಸಿರು ಬಿಡುವ ತವಕದಲ್ಲಿದ್ದಾಳೆ ಶಾರ್ವರಿ. ಇದೀಗ ಪೊಲೀಸರ ಕೈಗೂ ಸಿಗದೇ ತಪ್ಪಿಸಿಕೊಂಡಿದ್ದಾಳೆ ಶಾರ್ವರಿ. ಇನ್ನೇನು ಸೀರಿಯಲ್​ ಮುಗಿದೇ ಹೋಯ್ತು ಎನ್ನುವಾಗಲೇ ರಾಧಾಳ ಪ್ರವೇಶವೂ ಆಗಿದೆ. ಸೀರಿಯಲ್​ ಇನ್ನೊಂದಿಷ್ಟು ದಿನ, ತಿಂಗಳು, ವರ್ಷ ಮುಂದಕ್ಕೆ ಹೋದರೂ ಅಚ್ಚರಿಯೇನಿಲ್ಲ.

ಅದರ ನಡುವೆಯೇ ಮಾಧವ ತನ್ನ ಮಾಜಿ ಪ್ರೇಮಿ ಎಂದು ಕಣ್ಣಿಗೆ ಗೊತ್ತಿಲ್ಲದಿದ್ದರೂ ರಾಧಾಳ ಕರುಳು ಅರಿಯುತ್ತಿವೆ. ಅದೇ ಕಾರಣಕ್ಕೆ ಮಾಧವನನ್ನು ಸ್ವಲ್ಪ ಹೆಚ್ಚಾಗಿಯೇ ಕಾಳಜಿ ತೋರುತ್ತಿದ್ದಾಳೆ. ಒಂದು ಹಂತದಲ್ಲಿ ರಾಧಾಳನ್ನು ನೋಡಿ ಮಾಧವ್​, ತುಳಸಿ ಹಾಗೂ ಮನೆಯವರೆಲ್ಲರಿಗೂ ಖುಷಿಯಾಗಿತ್ತು. ಆದರೆ ಈಗ ಮಾಧವ್​ ಮೇಲೆ ರಾಧಾ ತೋರಿಸುತ್ತಿರುವ ಬೇರೆಯದ್ದೇ ರೀತಿಯ ಪ್ರೀತಿ ಮಾತ್ರ ತುಳಸಿಗೆ ಸಹಿಸಲು ಆಗುತ್ತಿಲ್ಲ. ಮಾಧವ್​ ಹೊರಗಡೆ ಹೋಗುವಾಗ ತುಳಸಿ ಆತನಿಗೆ ಕುಂಕುಮ ಇಟ್ಟು ಶುಭ ಕೋರಬೇಕಿತ್ತು. ಆದರೆ ಅಷ್ಟರಲ್ಲಿಯೇ ರಾಧಾ ಆ ಕೆಲಸವನ್ನು ಮಾಡಿದ್ದಾಳೆ. ತುಳಸಿಗೆ ಯಾಕೋ ಸಂದೇಹ ಬಂದಿದ್ದರೆ ಇದು ಮಾಧವ್​ಗೂ ಇಷ್ಟವಾಗಲಿಲ್ಲ.

ಇದು ಸೀರಿಯಲ್​ ಕಥೆಯಾದ್ರೆ, ಇದರ ಪ್ರೊಮೋ ಬಿಡುಗಡೆಯಾಗುತ್ತಿದ್ದಂತೆಯೇ ಸಾಕಷ್ಟು ಅವಿವಾಹಿತರು ಹೊಟ್ಟೆ ಉರಿದುಕೊಳ್ಳುತ್ತಿದ್ದಾರೆ. ಅದಕ್ಕೆ ಕಾರಣ, ದೊಡ್ಡ ದೊಡ್ಡ ಮಕ್ಕಳಿದ್ದರೂ ಮಾಧವ್​ಗೆ ಇದಾಗಲೇ ತುಳಸಿ ಸಿಕ್ಕಳು, ಈಗ ರಾಧಾನೂ ಸಿಗುತ್ತಿದ್ದಾಳೆ. ರಾಧಾಗೂ ಮಾಧವ್​ ಮೇಲೆ ಲವ್​ ಶುರುವಾಗಿದೆ. ಈ ವಯಸ್ಸಿನಲ್ಲಿ ಇಬ್ಬರಿಬ್ಬರು ಲವ್​ ಮಾಡ್ತಿದ್ರೆ ನಮಗೆ ಮಾತ್ರ ಒಬ್ಬಳೂ ಸಿಗ್ತಿಲ್ವಲ್ಲಾ ಎಂದು ಹಲವರು ಕಮೆಂಟ್​ ಹಾಕಿದ್ದಾರೆ. ಮಾಧವ್​ಗೆ ಡಬಲ್​ ಢಮಾಕಾ ಆಗಿದೆ. ಈಗ ಅವನಿಗೂ ರಾಧಾಳ ಮೇಲೆ ಲವ್​ ಶುರುವಾದ್ರೆ ಇನ್ನೊಂದೆರಡು ವರ್ಷ ಸೀರಿಯಲ್​ ಎಳೆಯುವುದರಲ್ಲಿ ಸಂದೇಹವಿಲ್ಲ ಎನ್ನುತ್ತಿದ್ದಾರೆ ಮತ್ತೆ ಕೆಲವರು.

ಇದಾಗಲೇ ಮಗುವನ್ನು ಕಿಡ್ನಾಪ್​ ಮಾಡಲು ಬಂದಿದ್ದ ಶಾರ್ವರಿ ಕೈಯಿಂದ ಮಗುವನ್ನು ಬಚಾವು ಮಾಡಿದ್ದಾಳೆ ರಾಧಾ. ಈ ಮೂಲಕ ಮನೆಮಂದಿಗೆಲ್ಲಾ ಅಚ್ಚುಮೆಚ್ಚು ಆಗಿದ್ದಾಳೆ. ತನ್ನ ಅಕ್ಕ ಸತ್ತಿದ್ದಾಳೆ ಎನ್ನುವ ಕಾರಣಕ್ಕೆ, ಅದೇ ದ್ವೇಷದಿಂದಲೇ ಶಾರ್ವರಿಮನೆಯವರನ್ನು ಮುಗಿಸುವ ಪ್ರಯತ್ನ ಮಾಡುತ್ತಿದ್ದಾಳೆ. ಆದರೆ ಅದೇ ಅಕ್ಕನೇ ತನ್ನನ್ನು ರೆಡ್​​ಹ್ಯಾಂಡ್​ ಆಗಿ ಹಿಡಿದಿರುವ ವಿಷಯ ಅವಳಿಗೆ ಗೊತ್ತಿಲ್ಲ. ಆ ಹೆಂಗಸು ಯಾರು ಎಂದು ಈಗ ತನಿಖೆ ಮಾಡುತ್ತಿದ್ದಾಳೆ. ಅವಳು ತನ್ನ ಅಕ್ಕನೇ, ಆಕೆ ಬದುಕಿದ್ದಾಳೆ ಎಂದು ತಿಳಿದರೆ ಅಲ್ಲಿಗೆ ಶಾರ್ವರಿಯ ಕೋಪ ತಣ್ಣಗಾಗುತ್ತಾ, ಅಥವಾ ತುಳಸಿಯನ್ನು ಸಾಯಿಸಿ ರಾಧಾ ಮತ್ತು ಮಾಧವ್​ ಮದ್ವೆಯಾಗುವ ಪ್ಲ್ಯಾನ್ ಮಾಡುತ್ತಲೇ ಮತ್ತೊಂದಿಷ್ಟು ವರ್ಷ ಸೀರಿಯಲ್​ ಮುಂದಕ್ಕೆ ಹೋಗುತ್ತಾ ನೋಡಬೇಕಿದೆ.

View post on Instagram