ಅಮೃತಧಾರೆ ಸೀರಿಯಲ್ ಹೊಸ ಹೊಸ ತಿರುವು ಪಡೆದುಕೊಳ್ಳುತ್ತಿರುವ ನಡುವೆಯೇ ಭೂಮಿಕಾಳ ಬಗ್ಗೆ ಇನ್ನಿಲ್ಲದಂತೆ ನೆಟ್ಟಿಗರು ತಮಾಷೆ ಮಾಡುತ್ತಿದ್ದಾರೆ. ಏನೇನು ಹೇಳ್ತಿದ್ದಾರೆ ನೋಡಿ...
ಅಮೃತಧಾರೆಯಲ್ಲಿ ಸದ್ಯ ಸುಧಾಳ ವಿಷ್ಯ ನಡೆಯುತ್ತಿದೆ. ಒಂದೆಡೆ ಸುಧಾಳ ಬಾಳಲ್ಲಿ ಹೊಸ ಯುಗ ಆರಂಭವಾಗುವಷ್ಟರಲ್ಲಿಯೇ ಪತಿ ಎಂಟ್ರಿಕೊಟ್ಟಿದ್ದು, ಬಿರುಗಾಳಿ ಎಬ್ಬಿಸಿದ್ದಾನೆ. ಅದೇ ಇನ್ನೊಂದೆಡೆ, ಭೂಮಿಕಾಳ ಇನ್ನೊಂದು ಮಗು ಏನಾಯಿತು ಎಂದು ತಿಳಿಯಬೇಕಿದೆ. ಸದ್ಯ ಅವಳಿ ಮಕ್ಕಳಲ್ಲಿ ಒಂದು ಮಗು ಕಳೆದುಕೊಂಡಿರುವ ವಿಷಯ ಭೂಮಿಕಾಗೆ ಗೊತ್ತಿಲ್ಲ. ಇದನ್ನು ಆಕೆಗೆ ಹೇಗೆ ಹೇಳುವುದು ಎಂದು ತಿಳಿಯದೇ ಗೌತಮ್ ನೋವಿನಲ್ಲಿ ಇದ್ದಾನೆ. ಇರುವ ಒಂದು ಮಗುವನ್ನು ಶಕುಂತಲಾ ಇನ್ನೇನು ಮಾಡಿಬಿಟ್ಟಾಳೋ ಎನ್ನುವ ಭಯದಲ್ಲಿ ವೀಕ್ಷಕರು ಇದ್ದಾರೆ. ಇವೆಲ್ಲಾ ಸರಿ. ಆದರೆ ಇವೆಲ್ಲವನ್ನೂ ಮೀರಿ ಭೂಮಿಕಾಳ ಮೇಲೆ ನೆಟ್ಟಿಗರ ಕಣ್ಣು ನೆಟ್ಟಿದೆ. ಭೂಮಿಕಾಗೆ ದಿಢೀರ್ ಎಂದು ಹೊಟ್ಟೆ ಬಂದು ಏಕಾಏಕಿ 9 ತಿಂಗಳು ಆದಾಗಲೇ ನೆಟ್ಟಿಗರು ಇನ್ನಿಲ್ಲದಂತೆ ಕಮೆಂಟ್ ಹಾಕುತ್ತಿದ್ದರು. ಕೊನೆಗೆ ಭೂಮಿಕಾ ಹೋದಲ್ಲಿ, ಬಂದಲ್ಲಿ ಹೊಟ್ಟೆಯನ್ನು ಹಿಡಿದುಕೊಂಡೇ ತಿರುಗುವುದಕ್ಕೂ ಮಹಿಳೆಯರೂ ಸೇರಿ ಪುರುಷರಿಂದ ಟ್ರೋಲ್ಗಳ ಸುರಿಮಳೆಯೇ ಆಗಿತ್ತು.
ನಾನು ಮೂರು ಮಕ್ಕಳನ್ನು ಹೆತ್ತರೂ ಹೀಗೆ ಹೊಟ್ಟೆ ಮೇಲೆಯೇ 24 ಗಂಟೆ ಕೈಹೊತ್ತುಕೊಂಡು ತಿರುಗಿಯೂ ಇಲ್ಲ, ಯಾರೂ ಹಾಗೆ ತಿರುಗುವುದನ್ನು ನೋಡಿಯೂ ಇಲ್ಲ ಎಂದು ಮಹಿಳೆಯೊಬ್ಬರು ಕಮೆಂಟ್ ಹಾಕಿದ್ದರು. ಅದಕ್ಕೆ ಉತ್ತರವಾಗಿ ಹಲವಾರು ಮಂದಿ ಪ್ರತಿಕ್ರಿಯೆ ನೀಡಿ ಭೂಮಿಕಾಳನ್ನು ಗೇಲಿ ಮಾಡಿದ್ದರು. ಆದರೆ ಇದೀಗ ಹೊಟ್ಟೆ ಹೋಗಿ ಮಗು ಬಂದಿದೆ. ಆದರೆ ಭೂಮಿಕಾಳ ಮೇಲೆ ನೆಟ್ಟಿಗರ ಕಣ್ಣು ಮಾತ್ರ ನಿಂತಿಲ್ಲ. ಬಾಳಂತಿಯಾಗಿರುವ ಭೂಮಿಕಾ ಪದೇ ಪದೇ ಮನೆತುಂಬ ಓಡಾಡುವುದನ್ನು ನೋಡಿ ಯಾಕೆ ಪಾಪ ಬಾಳಂತಿಗೆ ಅಷ್ಟು ಕಷ್ಟ ಕೊಡುತ್ತಿದ್ದೀರಾ ಎಂದು ಪ್ರಶ್ನಿಸುತ್ತಿದ್ದಾರೆ.
ಬಾಳಂತಿಯಾದರೂ ದುಬಾರಿ ಸೀರೆಯುಟ್ಟು ಯಾರಾದರೂ ಮನೆಯಲ್ಲಿ ಇರ್ತಾರಾ ಎಂದು ಹಲವರು ಪ್ರಶ್ನಿಸುತ್ತಿದ್ದರೆ, ಹೂವು ಮುಡಿದುಕೊಂಡು ದಿನವೂ ಓಡಾಡುವ ಬಾಳಂತಿಯನ್ನು ನಾನು ಇದುವರೆಗೂ ನೋಡಿಯೇ ಇಲ್ಲ ಎಂದು ಮತ್ತೆ ಕೆಲವರು ಟ್ರೋಲ್ ಮಾಡುತ್ತಿದ್ದಾರೆ. ಇನ್ನು ಭೂಮಿಕಾಳ ಹೊಟ್ಟೆ ಹೋಗಿ ಶಾಲು ನೋಡುವ ಸ್ಥಿತಿ ಬಂದಿದೆ ಎಂದು ಮತ್ತಷ್ಟು ಕಮೆಂಟಿಗರು ಹೇಳುತ್ತಿದ್ದಾರೆ. ಒಟ್ಟಿನಲ್ಲಿ ಸೀರಿಯಲ್ಗಳಲ್ಲಿ ಯಾರು ಏನು ಮಾಡಿದರೂ ಅದಕ್ಕೆ ಕಮೆಂಟ್ ಹಾಕುವ ದೊಡ್ಡ ವರ್ಗವೇ ಇದೆ.
ಅದರಲ್ಲಿಯೂ ಅಮೃತಧಾರೆಯಲ್ಲಿ ಪುಟ್ಟ ಮಗು ಸಿಗದಿದ್ದ ಕಾರಣಕ್ಕೋ ಏನೋ, ಸ್ವಲ್ಪ ದೊಡ್ಡ ಮಗುವನ್ನು ಕರೆದುಕೊಂಡು ಬರಲಾಗಿದೆ. ಅದಕ್ಕೂ ನೆಟ್ಟಿಗರು ಮಾಡ್ತಿರೋ ತಮಾಷೆ ಅಷ್ಟಿಷ್ಟಲ್ಲ. ಮಗು ಹುಟ್ಟುತ್ತಲೇ ಒಂದು ವರ್ಷವಾಗಿಬಿಟ್ಟದೆ ಎಂದೂ ತಮಾಷೆ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಭೂಮಿಕಾಳ ಪ್ರತಿಯೊಂದು ಹೆಜ್ಜೆಯನ್ನೂ ನೆಟ್ಟಿಗರು ಚಾಚೂತಪ್ಪದೇ ನೋಡುತ್ತಿರುವುದು ಇದರಿಂದ ತಿಳಿಯುತ್ತದೆ. ಇನ್ನೇನು ಭೂಮಿಕಾಗೆ ಮಗು ಹುಟ್ಟಿತು. ಶಕುಂತಲಾ, ಜೈದೇವನ ಕುತಂತ್ರವೂ ಬಯಲಾಯ್ತು. ಸೀರಿಯಲ್ ಮುಗಿದೇ ಬಿಡ್ತು ಎನ್ನುವಾಗಲೇ ಏನೇನೋ ಟ್ವಿಸ್ಟ್ ತರಲಾಗಿದೆ. ಅಷ್ಟಕ್ಕೂ ಈ ಸೀರಿಯಲ್ಗೆ ಟಿಆರ್ಪಿ ಹೆಚ್ಚಿಗೆ ಇರುವ ಕಾರಣ, ಸೀರಿಯಲ್ ಎಳೆಯುವುದು ಕೂಡ ಅನಿವಾರ್ಯವೇ ಬಿಡಿ.
