'ಲಕ್ಷ್ಮೀ ಬಾರಮ್ಮ' ಧಾರಾವಾಹಿಯ ಕಲ್ಪನಾ ಪಾತ್ರದ ಮೂಲಕ ಜನಮನ ಗೆದ್ದಿರೋ ನಟಿ ಲಕ್ಷ್ಮೀ ಸಿದ್ದಯ್ಯ ಅವರ ಬದುಕು ನೋವಿನ ಕಥೆಯೇ. ಅಂದಿನ ದಿನಗಳ ಬಗ್ಗೆ ನಟಿ ಹೇಳಿದ್ದೇನು?
ಲಕ್ಷ್ಮೀ ಸಿದ್ದಯ್ಯ ಎಂದರೆ ಹಲವರಿಗೆ ತಿಳಿಯದೇ ಹೋಗಬಹುದು. ಆದರೆ, 'ಲಕ್ಷ್ಮೀ ಬಾರಮ್ಮ' ಧಾರಾವಾಹಿಯ ಕಲ್ಪನಾ ಅಥವಾ ಗೊಂಬೆ ತಾಯಿ ಎಂದಕೂಡಲೇ ನೆನಪಾಗುವವರು ಇದೇ ಲಕ್ಷ್ಮೀ. 30ಕ್ಕೂ ಹೆಚ್ಚು ಸೀರಿಯಲ್ಗಳಲ್ಲಿ ನಟಿಸಿರೋ ಲಕ್ಷ್ಮೀ ಅವರು, ಖಳನಟಿಯಾಗಿ ಗುರುತಿಸಿಕೊಂಡದ್ದೇ ಹೆಚ್ಚು. ಅದರಲ್ಲಿಯೇ ಅವರು ಮಿಂಚಿದ್ದಾರೆ. ಜೊತೆಗೆ ನಟಿಯಾಗಿ, ಪೋಷಕ ನಟಿಯಾಗಿಯೂ ಮನೆಮಾತಾದವರು. ಸಿನಿಮಾಗಳಲ್ಲಿಯೂ ಬಣ್ಣ ಹಚ್ಚಿರೋ ಲಕ್ಷ್ಮೀ ಸಿದ್ದಯ್ಯ ಜನಪ್ರಿಯ 'ಲಕ್ಷ್ಮಿ ಬಾರಮ್ಮ' ಧಾರಾವಾಹಿ ಮೂಲಕ ಪ್ರೇಕ್ಷಕರಿಗೆ ಹತ್ತಿರವಾದರು. ಆದರೆ ಬಣ್ಣದ ಲೋಕ ಅಂದುಕೊಂಡಷ್ಟು ಸುಂದರವಲ್ಲ. ಹಲವಾರು ನಟ-ನಟಿಯರು ಕೂಡ ಸಾಮಾನ್ಯ ಜನರಂತೆಯೇ ಸಾಕಷ್ಟು ತೊಂದರೆ ಅನುಭವಿಸಿದರೇ. ಅದೇ ರೀತಿ ಲಕ್ಷ್ಮೀ ಸಿದ್ದಯ್ಯ ಅವರು ತಾವು ಅನುಭವಿಸಿದ್ದ ನೋವಿನ ಕುರಿತು ನ್ಯೂಸೋ ನ್ಯೂಸ್ ಚಾನೆಲ್ಗೆ ನೀಡಿರುವ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ.
ನಾಯಕಿಯಾಗಿ ಪಾತ್ರ ಮಾಡುವಾಗಲೂ ತಮ್ಮ ಮನೆಯಲ್ಲಿ ತುಂಬಾ ಬಡತನವಿತ್ತು. ಟಿವಿ ಇರಲಿಲ್ಲ ಎಂದಿರೋ ಅವರು, ತಮ್ಮ ಅಮ್ಮ ನನ್ನದೇ ಸೀರಿಯಲ್ ನೋಡುವುದಕ್ಕಾಗಿ ಪಕ್ಕದ ಮನೆಗೆ ಹೋದಾಗ ಅವರು ಬಾಗಿಲು ಹಾಕಿದ್ದನ್ನು ನೆನಪಿಸಿಕೊಂಡರು. ಅಂದೇ ನಿಶ್ಚಯ ಮಾಡಿ ಇಎಂಐ ಮೂಲಕ ಮನೆಗೆ ಟಿವಿ ತಂದಿರುವ ಬಗ್ಗೆ ಹೇಳಿದ್ದಾರೆ. ಜೊತೆಗೆ, ಆ ದಿನಗಳಲ್ಲಿ ತಾವು ಲೀಡ್ ರೋಲ್ನಲ್ಲಿ ಇದ್ದರೂ ಮನೆಯಲ್ಲಿ ಹಾಸಿಗೆ, ಮಂಚ ಇರಲಿಲ್ಲ. ಚಾಪೆಯಲ್ಲಿಯೇ ಮಲಗುವ ಸ್ಥಿತಿ ಇತ್ತು ಎಂದು ಅಂದಿನ ದಿನಗಳನ್ನು ನಟಿ ನೆನಪಿಸಿಕೊಂಡಿದ್ದಾರೆ.
ಇದೇ ಚಾನೆಲ್ಗೆ ನೀಡಿರುವ ಸಂದರ್ಶನದಲ್ಲಿ ಲಕ್ಷ್ಮೀ ಸಿದ್ದಯ್ಯ ಅವರು, 'ಚಿಕ್ಕ ವಯಸ್ಸಿನಲ್ಲೇ ಧಾರಾವಾಹಿಗಳಲ್ಲಿ ನಟಿಸುವ ಅವಕಾಶ ಸಿಕ್ಕಿತು. ನಮ್ಮ ತಾಯಿಯನ್ನ ತಂದೆ ಹೊರಕ್ಕೆ ಹಾಕಿದ್ದರು. ಆದ್ದರಿಂದ ನಾನು ಬದುಕಿ ತೋರಿಸ್ತೀನಿ ಅಂತ ನಮ್ಮ ತಂದೆ ಮೇಲೆ ಚಾಲೆಂಜ್ ಹಾಕಿದ್ದೆ. ಅಂದಿನಿಂದ ನಾನೇ ಆಧಾರವಾಗಿದ್ದೇನೆ ಎಂದಿದ್ದಾರೆ. ಇನ್ನು ನಟಿಯ ಕುರಿತು ಹೇಳುವುದಾದರೆ, ಇವರು, 'ರಾಧಾ' ಧಾರಾವಾಹಿಯಲ್ಲಿ ಇವರು ಲೀಡ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. 'ಬಿದಿಗೆ ಚಂದ್ರಮ', 'ಮಾಂಗಲ್ಯ', 'ಕದನ', 'ಸಂಬಂಧ' ಮುಂತಾದ ಧಾರಾವಾಹಿಗಳಲ್ಲಿ ಲಕ್ಷ್ಮೀ ನಟಿಸಿದ್ದರು. ಅಷ್ಟೇ ಅಲ್ಲದೆ ಇವರು 20ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಾರೆ. ಇವರು ನಟನೆ ಕ್ಷೇತ್ರಕ್ಕೆ ಬಂದು 17 ವರ್ಷಗಳಾಯ್ತು. ಕೆಲ ವರ್ಷಗಳಿಂದ ಅವರು ಮೇಲಿಂದ ಮೇಲೆ ಧಾರಾವಾಹಿಗಳಲ್ಲಿ ತಾಯಿ ಪಾತ್ರದಲ್ಲಿಯೇ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ಹೀರೋ, ಹೀರೋಯಿನ್ ಅಕ್ಕನ ರೀತಿಯಲ್ಲಿ ಲಕ್ಷ್ಮೀ ಕಾಣಿಸುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯವೇ.
ಲಕ್ಷ್ಮೀ ಅವರ ಮಗನಿಗೆ ಈಗ 18 ವರ್ಷ. 'ಅಣ್ಣ ತಂಗಿ' ಧಾರಾವಾಹಿಯಲ್ಲಿ ಲಕ್ಷ್ಮೀ, ತಾಯಿ ಪಾತ್ರ ಮಾಡಿದ್ದರು. ಆಮೇಲೆ ಈ ಸೀರಿಯಲ್ ಕಥೆ ಸಾಗುತ್ತ, ಸಾಗುತ್ತ ಮಕ್ಕಳು ದೊಡ್ಡವರಾದರು. ಆಗ ಲಕ್ಷ್ಮೀ ಮಗನ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ವ್ಯಕ್ತಿ ವಯಸ್ಸು ಲಕ್ಷ್ಮೀಗಿಂತ ಹೆಚ್ಚಾಗಿತ್ತು ಎನ್ನೋದೇ ವಿಪರ್ಯಾಸ. 'ಲಕ್ಷ್ಮೀ ಬಾರಮ್ಮ' ಧಾರಾವಾಹಿಯಲ್ಲಿ ಲಕ್ಷ್ಮೀ 'ಕಲ್ಪನಾ' ಎಂಬ ತಾಯಿ ಪಾತ್ರ ಮಾಡಿದ್ದರೂ ಕೂಡ ಇಲ್ಲಿ ಸ್ವಲ್ಪ ನೆಗೆಟಿವ್ ಶೇಡ್ ಇತ್ತು. ತಾಯಿ ಪಾತ್ರವಾದರೂ ಸ್ವಲ್ಪ ಡಿಫರೆಂಟ್ ಆಗಿತ್ತು. ಹೀಗಾಗಿ ಈ ಪಾತ್ರ ಮಾಡಲು ಲಕ್ಷ್ಮೀ ಒಪ್ಪಿಕೊಂಡಿದ್ದರಂತೆ. ಯೋಗ ಪ್ರವೀಣೆಯಾಗಿದ್ದ ಲಕ್ಷ್ಮೀಗೆ ಕ್ರೀಡೆಯಲ್ಲಿ ಏನಾದರೂ ಮಾಡುವ ಆಸೆಯಿತ್ತು. ಆದರೆ ಅವರು ಕಾಲಿಟ್ಟಿದ್ದು ಮಾತ್ರ ನಟನಾ ಕ್ಷೇತ್ರಕ್ಕೆ. ಲಕ್ಷ್ಮೀ ಗಂಡ ಸಿದ್ದಯ್ಯ ಅನೇಕ ಸಿನಿಮಾಗಳಲ್ಲಿ ಖಳನಟರಾಗಿ ಕಾಣಿಸಿಕೊಂಡಿದ್ದಾರೆ.
