"ಇದು ಕೇವಲ ಆಕ್ಷನ್ ಸಿನಿಮಾ ಅಲ್ಲ, ಇದರಲ್ಲಿ ಗೀತು ಮೋಹನ್ ದಾಸ್ ಅವರ ವಿಶಿಷ್ಟ ನಿರೂಪಣಾ ಶೈಲಿ ಮತ್ತು ಆಳವಾದ ಭಾವನೆಗಳಿವೆ. ನಾವೇ ಹೇಳಿದಂತೆ, ಇದು ದೊಡ್ಡವರಿಗಾಗಿಯೇ (ವಯಸ್ಕರು) ಮಾಡಿರುವ ಸಿನಿಮಾ.. ಬಹಳಷ್ಟು ಗುಟ್ಟು ಬಿಚ್ಚಿಟ್ಟಿದ್ದಾರೆ ಟಾಕ್ಸಿಕ್ ಸಿನಿಮಾ ನಿರ್ಮಾಪಕರು.

ರಾಕಿಂಗ್ ಸ್ಟಾರ್ ಯಶ್ (Yash) ಅಭಿನಯದ ಮತ್ತು ಗೀತು ಮೋಹನ್ ದಾಸ್ (Geetu Mohandas) ನಿರ್ದೇಶನದ ಬಹುನಿರೀಕ್ಷಿತ ಚಿತ್ರ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್ ಅಪ್ಸ್' ಬಗ್ಗೆ ಕೆವಿಎನ್ ಪ್ರೊಡಕ್ಷನ್ಸ್‌ (KVN Productions) ಮುಖ್ಯಸ್ಥ ವೆಂಕಟ್ ಕೆ. ನಾರಾಯಣ (Venkat K Narayan) ಅವರು ಹಂಚಿಕೊಂಡಿರುವ ವಿಚಾರಗಳು ಈಗ ಸ್ಯಾಂಡಲ್‌ವುಡ್‌ನಲ್ಲಿ ಸಂಚಲನ ಮೂಡಿಸಿವೆ.

ಇತ್ತೀಚಿನ ಸಂದರ್ಶನವೊಂದರಲ್ಲಿ ಚಿತ್ರದ ಬಗ್ಗೆ ಮಾತನಾಡಿದ ವೆಂಕಟ್ ಕೆ. ನಾರಾಯಣ, 'ಟಾಕ್ಸಿಕ್' ಚಿತ್ರವು ಕೇವಲ ಭಾರತಕ್ಕೆ ಸೀಮಿತವಾಗದೆ ಅಂತರಾಷ್ಟ್ರೀಯ ಮಟ್ಟದ ಗುಣಮಟ್ಟವನ್ನು ಹೊಂದಿರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್‌ ಪಾಲಿಗೆ ಇದು ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು, ಚಿತ್ರದ ಮೇಕಿಂಗ್ ಮತ್ತು ತಾಂತ್ರಿಕತೆ ಅದ್ಭುತವಾಗಿರಲಿದೆ ಎಂದು ಅವರು ಹೇಳಿದ್ದಾರೆ.

ಮುಖ್ಯವಾಗಿ, ಚಿತ್ರದ ಶೀರ್ಷಿಕೆಯಲ್ಲಿರುವ 'ಎ ಫೇರಿ ಟೇಲ್ ಫಾರ್ ಗ್ರೋನ್ ಅಪ್ಸ್' (ದೊಡ್ಡವರಿಗಾಗಿ ಒಂದು ಕಾಲ್ಪನಿಕ ಕಥೆ) ಎಂಬ ವಾಕ್ಯದ ಬಗ್ಗೆ ಮಾತನಾಡುತ್ತಾ, "ಇದು ಕೇವಲ ಆಕ್ಷನ್ ಸಿನಿಮಾ ಅಲ್ಲ, ಇದರಲ್ಲಿ ಗೀತು ಮೋಹನ್ ದಾಸ್ ಅವರ ವಿಶಿಷ್ಟ ನಿರೂಪಣಾ ಶೈಲಿ ಮತ್ತು ಆಳವಾದ ಭಾವನೆಗಳಿವೆ. ನಾವೇ ಹೇಳಿದಂತೆ, ಇದು ದೊಡ್ಡವರಿಗಾಗಿಯೇ (ವಯಸ್ಕರು) ಮಾಡಿರುವ ಸಿನಿಮಾ.. ಬಿಡುಗಡೆ ಬಳಿಕ, ದೊಡ್ಡ ಪರದೆ ಮೇಲೆ ಸಿನಿಮಾ ನೋಡುತ್ತಿದ್ದಂತೆ, 'ಇದು ಟಾಕ್ಸಿಕ್ ಕಥೆ, ಮಕ್ಕಳಿಗಾಗಿ ಅಲ್ಲ, ದೊಡ್ಡವರಿಗಾಗಿಯೇ ಮಾಡಿದ್ದು ಎಂಬುದು ಸಿನಿಪ್ರೇಕ್ಷಕರಿಗೆ ಅರ್ಥವಾಗಿಬಿಡುತ್ತದೆ. ಈ ಸಿನಿಮಾ ಮಾಮಾಲಿ ಅಲ್ಲ, ಇದರ ಸ್ಕೇಲ್ ಬೇರೆನೇ ಇದೆ, ಬಜೆಟ್ ಹಾಗೂ ಮೇಕಿಂಗ್ ಜೊತೆಗೆ ಸ್ಟೋರಿ ಟೆಲ್ಲಿಂಗ್ ಕೂಡ ತೀರಾ ವಿಭಿನ್ನವಾಗಿದೆ " ಎಂದು ತಿಳಿಸಿದ್ದಾರೆ ಟಾಕ್ಸಿಕ್ ಚಿತ್ರದ ನಿರ್ಮಾಪಕರಾದ ವೆಂಕಟ್ ಕೆ ನಾರಾಯಣ.

'ರಾಕಿಂಗ್ ಸ್ಟಾರ್ ಯಶ್ ಅವರು ಈ ಚಿತ್ರಕ್ಕಾಗಿ ಸಾಕಷ್ಟು ತಯಾರಿ ನಡೆಸುತ್ತಿದ್ದು, ಅವರ ಪಾತ್ರವು ಅಭಿಮಾನಿಗಳಿಗೆ ದೊಡ್ಡ ಸರ್ಪ್ರೈಸ್ ನೀಡಲಿದೆ. ಜೊತೆಗೆ, ನಿರ್ದೇಶಕಿ ಗೀತೂ ಮೋಹನ್‌ ದಾಸ್ ಅವರು ಈ ಸಿನಿಮಾವನ್ನು ತೀರಾ ವಿಭಿನ್ನವಾಗಿ ಕಟ್ಟಿಕೊಟ್ಟಿದ್ದು, ನೋಡುಗರಿಗೆ ರೋಮಾಂಚನ ಆಗಲಿದೆ' ಎಂದಿದ್ದಾರೆ ವೆಂಕಟ್ ಕೆ ನಾರಾಯಣ.

ಚಿತ್ರದ ಚಿತ್ರೀಕರಣಕ್ಕೆ ಲಂಡನ್ ಸೇರಿದಂತೆ ವಿವಿಧ ಅಂತರಾಷ್ಟ್ರೀಯ ಸ್ಥಳಗಳನ್ನು ಬಳಸಿಕೊಳ್ಳಲಾಗುತ್ತಿದೆ. ಹಾಲಿವುಡ್ ಮಟ್ಟದ ತಂತ್ರಜ್ಞರು ಈ ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದು, ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ 'ಟಾಕ್ಸಿಕ್' ಒಂದು ಹೊಸ ಮೈಲಿಗಲ್ಲಾಗಲಿದೆ ಎಂದು ವೆಂಕಟ್ ಕೆ. ನಾರಾಯಣ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ವೆಂಕಟ್ ಅವರ ಈ ಮಾತುಗಳು ಯಶ್ ಅಭಿಮಾನಿಗಳಲ್ಲಿ ಸಿನಿಮಾದ ಮೇಲಿನ ನಿರೀಕ್ಷೆಯನ್ನು ಆಕಾಶಕ್ಕೆ ಏರಿಸಿವೆ.

ಟಾಕ್ಸಿಕ್ ಚಿತ್ರದ ಒಂದೊಂದೇ ಹಾಡು ಹೊರಬರುತ್ತಿದ್ದು, ಪ್ರತಿ ಹಾಡಿನ ಮೂಲಕವೂ ಹೊಸತನ ಹಾಗೂ ಅದ್ದೂರಿ ಮೇಕಿಂಗ್ ಎದ್ದುಕಾಣುತ್ತಿದ್ದು, ಇಡೀ ಜಗತ್ತಿನ ಸಿನಿಪ್ರೇಕ್ಷಕರ ವಲಯದಲ್ಲಿ ಭಾರೀ ನಿರೀಕ್ಷೆ ಮನೆಮಾಡಿದೆ. ಕನ್ನಡ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಶೂಟ್ ಆಗಿರುವ ಈ ಟಾಕ್ಸಿಕ್ ಸಿನಿಮಾ, ಹಿಂದಿ, ತೆಲುಗು, ತಮಿಳು, ಮಲಯಾಳಂ ಸೇರಿದಂತೆ ಭಾರತದ ಮತ್ತು ಅಂತಾರಾಷ್ಟ್ರೀಯ ಹಲವಾರು ಭಾಷೆಗಳಿಗೆ ಡಬ್‌ ಆಗಲಿದೆ. 26 ಆಗಸ್ಟ್ 2026ರಂದು ಯಶ್ ನಟನೆಯ ಟಾಕ್ಸಿಕ್ ಸಿನಿಮಾ ಪ್ರಪಛದಾದ್ಯಂತ ಬಿಡುಗಡೆ ಆಗಲಿದೆ.

ಅಂದಹಾಗೆ, ಟಾಕ್ಸಿಕ್ ಸಿನಿಮಾದಲ್ಲಿ ನಾಯಕ ನಟ ಯಶ್ ಜೊತೆಗೆ ಐವರು ನಾಯಕಿಯರು ನಟಿಸಿದ್ದಾರೆ. ನಯನತಾರಾ, ಹುಮಾ ಖುರೇಶಿ, ತಾರಾ ಸುತಾರಿಯಾ, ಕಿಯಾರಾ ಅದ್ವಾನಿ ಹಾಗೂ ನಮ್ಮ ಕನ್ನಡದ ರುಕ್ಮಿಣಿ ವಸಂತ್. ‘ಲೇಡಿಸ್ ಸ್ಪೆಷಲ್’ ಹೆಸರಿನ ಟೀಸರ್ ಈಗಾಗಲೇ ರಿಲೀಸ್ ಆಗಿ ಪ್ರಪಂಚದ ತುಂಬಾ ವೈರಲ್ ಆಗಿದೆ. ‘ತಬಾಹಿ..’ ಹಾಡು ಕೂಡ ಸೂಪರ್ ಹಿಟ್ ದಾಖಲಿಸಿದೆ. ಇನ್ನೇನು ಸಿನಿಮಾ ಮುಂದಿನ ತಿಂಗಳು ತೆರೆಗೆ ಬರಲಿದೆ.