ನಟ ದುನಿಯಾ ವಿಜಯ್ ಪುತ್ರನ, ಕಾರು ಓವರ್‌ಟೇಕ್ ಮಾಡಿದ ವಿಚಾರಕ್ಕೆ ಸಹಪಾಠಿಯನ್ನು ಅಪಹರಿಸಿ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಆರ್‌ವಿ ಯೂನಿವರ್ಸಿಟಿ ಬಳಿ ನಡೆದ ಈ ಘಟನೆ ಸಂಬಂಧ, ಹಲ್ಲೆಗೊಳಗಾದ ಮನೀಶ್ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ತನಿಖೆ ಪ್ರಗತಿಯಲ್ಲಿದೆ.
ವರದಿ: ಪ್ರಜ್ವಲ್ ನಿಟ್ಟೂರು
ಬೆಂಗಳೂರು:ಸ್ಯಾಂಡಲ್‌ವುಡ್‌ನ ಖ್ಯಾತ ನಟ 'ದುನಿಯಾ' ವಿಜಯ್ ಅವರ ಪುತ್ರನ ವಿರುದ್ಧ ಸಹಪಾಠಿಯೊಬ್ಬನನ್ನು ಕಾರಿನಲ್ಲಿ ಬಲವಂತವಾಗಿ ಕರೆದೊಯ್ದು ತೀವ್ರವಾಗಿ ಹಲ್ಲೆ ನಡೆಸಿರುವ ಗಂಭೀರ ಆರೋಪ ಕೇಳಿಬಂದಿದೆ. ಕಾರು ಓವರ್‌ಟೇಕ್ ಮಾಡಿದ ಸಣ್ಣ ವಿಚಾರಕ್ಕೆ ಆರಂಭವಾದ ಗಲಾಟೆ, ಕೊನೆಗೆ ಅಪಹರಣ ಹಾಗೂ ಹಲ್ಲೆ ಪ್ರಕರಣದಲ್ಲಿ ಅಂತ್ಯವಾಗಿದೆ.
ಓವರ್‌ಟೇಕ್ ವಿಚಾರಕ್ಕೆ ಶುರುವಾದ ವೈಷಮ್ಯ
ಮಾಹಿತಿಯ ಪ್ರಕಾರ, ನಿನ್ನೆ ಸಂಜೆ ರಾಜರಾಜೇಶ್ವರಿ ನಗರದಲ್ಲಿ (ಆರ್.ಆರ್. ನಗರ) ಸಾಮ್ರಾಟ್ ಮತ್ತು ಅವರ ಸ್ನೇಹಿತರು ಜಿಪ್ಸಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಹಲ್ಲೆಗೊಳಗಾದ ವಿದ್ಯಾರ್ಥಿ ಹಾಗೂ ಅವರ ಸ್ನೇಹಿತರು ಐ20 (i20) ಕಾರಿನಲ್ಲಿ ಬಂದು ದುನಿಯಾ ವಿಜಯ್ ಪುತ್ರನ ಕಾರನ್ನು ಓವರ್‌ಟೇಕ್ ಮಾಡಿದ್ದರೆನ್ನಲಾಗಿದೆ. ಈ ಸಣ್ಣ ವಿಚಾರ ಎರಡೂ ತಂಡದ ನಡುವೆ ಮಾತಿನ ಚಕಮಕಿಗೆ ಕಾರಣವಾಗಿತ್ತು.
ಕಾಲೇಜು ಆವರಣದಿಂದಲೇ ಎಳೆದೊಯ್ದು ಹಲ್ಲೆ
ನಿನ್ನೆ ಸಂಜೆಯ ಗಲಾಟೆಯ ಹಿನ್ನೆಲೆಯಲ್ಲಿ, ಇಂದು ಮಧ್ಯಾಹ್ನ ಮೈಸೂರು ರಸ್ತೆಯಲ್ಲಿರುವ ಆರ್‌ವಿ ಯೂನಿವರ್ಸಿಟಿ (RV University) ಆವರಣದ ಹೊರಗಡೆ ಸಹಪಾಠಿ ವಿದ್ಯಾರ್ಥಿ ನಿಂತಿದ್ದಾಗ, ದುನಿಯಾ ವಿಜಯ್ ಪುತ್ರ ಹಾಗೂ ಆತನ ಬೆಂಬಲಿಗರು ವಿದ್ಯಾರ್ಥಿಯನ್ನು ಬಲವಂತವಾಗಿ ತಮ್ಮ ಕಾರಿನಲ್ಲಿ ಎಳೆದೊಯ್ದಿದ್ದಾರೆ. ಚಲಿಸುವ ಕಾರಿನಲ್ಲಿಯೇ ಆತನ ಮೇಲೆ ವಿಜಯ್ ಪುತ್ರ ಮತ್ತು ಆತನ ಸ್ನೇಹಿತರು ತೀವ್ರವಾಗಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಪೊಲೀಸ್ ಠಾಣೆಗೆ ದೂರು ಸಲ್ಲಿಕೆ:
ಹಲ್ಲೆಗೊಳಗಾದ ದಹಪಾಠಿ ಹಾಗೂ ಆರೋಪ ಎದುರಿಸುತ್ತಿರುವ ವಿಜಯ್ ಪುತ್ರ ಇಬ್ಬರೂ ಆರ್‌ವಿ ಯೂನಿವರ್ಸಿಟಿಯ ಸಹಪಾಠಿಗಳಾಗಿದ್ದಾರೆ . ಹಲ್ಲೆಯಿಂದ ಗಾಯಗೊಂಡಿರುವ ವಿದ್ಯಾರ್ಥಿ ಅವರನ್ನು ತಕ್ಷಣವೇ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಗೆ ಸಂಬಂಧಿಸಿದಂತೆ ಗಾಯಾಳು ವಿದ್ಯಾರ್ಥಿ ಕೆಂಗೇರಿ ಪೊಲೀಸ್ ಠಾಣೆಗೆ ತೆರಳಿ ದುನಿಯಾ ವಿಜಯ್ ಪುತ್ರ ಹಾಗೂ ಆತನ ಗೆಳೆಯರ ವಿರುದ್ಧ ಅಧಿಕೃತ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಕೆಂಗೇರಿ ಠಾಣೆ ಪೊಲೀಸರು ಸದ್ಯ ತನಿಖೆ ಆರಂಭಿಸಿದ್ದಾರೆ.
ನಟ, ನಿರ್ದೇಶಕ ದುನಿಯಾ ವಿಜಯ್ ಅವರು ತಮ್ಮ ಮಗನ ಹುಟ್ಟುಹಬ್ಬವನ್ನ ಕಳೆದ ಜೂನ್ ತಿಂಗಳಲ್ಲಿ ಅದ್ಧೂರಿಯಾಗಿ ಆಚರಿಸಿದ್ದರು. ಮಗನನ್ನ ನೋಡ್ತಿದ್ದಂತೆ ತಬ್ಬಿಕೊಂಡು, ಎಮೋಷನಲ್ ಆಗಿದ್ದರು. ಈ ಸಂಬಂಧ ವಿಡಿಯೋವನ್ನು ಹಂಚಿಕೊಂಡಿದ್ದರು. ದುನಿಯಾ ವಿಜಯ್ ಅವರಿಗೆ ಮೂವರು ಮಕ್ಕಳು. ಈಗಾಗಲೇ ಅವರ ಪುತ್ರಿಯರಾದ, ರಿತನ್ಯಾ, ಮೋನಿಕಾ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಮಗನನ್ನು ಕೂಡ ಸಿನಿಮಾಗೆ ಕರೆತರುವ ಪ್ಲ್ಯಾನ್‌ನಲ್ಲಿದ್ದಾರೆ ದುನಿಯಾ ವಿಜಯ್.



