'ಪ್ರೇಮದ ಊರಲಿ' ಸಿನಿಮಾ ನೋಡಿ ಕರ್ನಾಟಕವೇ ಮೆಚ್ಚಿಕೊಳ್ಳುವ ಮುನ್ನ, ಬಿಡುಗಡೆಯಾದ ಕೇವಲ 2 ದಿನದಲ್ಲಿ ಈ ಚಿತ್ರದ ಗೆಲುವಿನ ಸುಳಿವನ್ನು ಹಿರಿಯ ನಟ ರಂಗಾಯಣ ರಘು ಗ್ರಹಿಸಿದ್ದರು! ಅಷ್ಟಕ್ಕೂ ಅಂದು ರಂಗಾಯಣ ರಘು ಅವರಿಗೆ ಅನಿಸಿದ್ದೇನು? ನಿರ್ದೇಶಕ-ನಿರ್ಮಾಪಕರಿಗೆ ಅವರು ಹೇಳಿದ ಆ ಸೀಕ್ರೆಟ್ ಮಾತು ಏನು? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್.

ಕನ್ನಡ ಚಿತ್ರರಂಗದಲ್ಲಿ ಹೊಸಬರ ತಂಡವೊಂದು ಹೊಸ ಇತಿಹಾಸವನ್ನೇ ಸೃಷ್ಟಿಸಿದೆ. ಯಾವುದೇ ದೊಡ್ಡ ತಾರಾಗಣದ ಹಮ್ಮು-ಬಿಮ್ಮಿಲ್ಲದೆ, ಕೇವಲ ಕಥೆ ಮತ್ತು ಭಾವನೆಗಳ ತಾಕತ್ತಿನಿಂದ ಬಿಡುಗಡೆಯಾದ 'ಪ್ರೇಮದ ಊರಲಿ' (Premada Oorali) ಸಿನಿಮಾ ಇದೀಗ ಚಿತ್ರಮಂದಿರಗಳಲ್ಲಿ ಯಶಸ್ವಿ 50 ದಿನಗಳನ್ನು ಪೂರೈಸಿ, ಬರೋಬ್ಬರಿ ₹150 ಕೋಟಿಗೂ ಅಧಿಕ ಆದಾಯ ಬಾಚಿಕೊಂಡು ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದೆ!

ಆದರೆ, ಇಡೀ ಕರ್ನಾಟಕವೇ ಬೆರಗಾಗುವ ಮುನ್ನ, ಬಿಡುಗಡೆಯಾದ ಕೇವಲ ಎರಡೇ ದಿನದಲ್ಲಿ ಈ ಚಿತ್ರದ ಗೆಲುವಿನ ಸುಳಿವನ್ನು ಹಿರಿಯ ನಟ ರಂಗಾಯಣ ರಘು ಗ್ರಹಿಸಿದ್ದರು! ಅಷ್ಟಕ್ಕೂ ಅಂದು ರಂಗಾಯಣ ರಘು ಅವರಿಗೆ ಅನಿಸಿದ್ದೇನು? ನಿರ್ದೇಶಕ-ನಿರ್ಮಾಪಕರಿಗೆ ಅವರು ಹೇಳಿದ ಆ ಸೀಕ್ರೆಟ್ ಮಾತು ಏನು? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್.

ಎರಡೇ ದಿನಕ್ಕೆ ಸಿನಿಮಾ ಗೆಲುವಿನ ಭವಿಷ್ಯ ನುಡಿದಿದ್ದ ರಂಗಾಯಣ ರಘು!

ದೀಪಾವಳಿ ಹಬ್ಬದ ಪ್ರಯುಕ್ತ ಏಷ್ಯಾನೆಟ್ ಸುವರ್ಣ ನ್ಯೂಸ್ ನಡೆಸಿದ ವಿಶೇಷ ಸಂವಾದದಲ್ಲಿ ನಟ ಶ್ರೀರಾಮ್, ನಾಯಕಿ ತಪಸ್ವಿನಿ ಪೂಣಚ್ಚ, ನಿರ್ದೇಶಕ ಮನೋಜ್ ಕುಮಾರ್, ನಿರ್ಮಾಪಕ ದೇವೇಂದ್ರ ನಾಯ್ಡು ಹಾಗೂ ಹಿರಿಯ ನಟ ರಂಗಾಯಣ ರಘು ಪಾಲ್ಗೊಂಡು ಸಂಭ್ರಮ ಹಂಚಿಕೊಂಡರು.

ಸಿನಿಮಾದ ಆರಂಭಿಕ ದಿನಗಳ ಬಗ್ಗೆ ಮಾತನಾಡಿದ ರಂಗಾಯಣ ರಘು, 'ನಮ್ಮ ಸಿನಿಮಾ ಸೆಪ್ಟೆಂಬರ್ 25ರಂದು ರಿಲೀಸ್ ಆಯ್ತು. ಎಲ್ಲರೂ ಹೊಸಬರೇ ಸೇರಿ ಕಟ್ಟಿದ ಚಿತ್ರವಿದು. ಮೊದಲ ದಿನ ಏನೂ ಹೇಳೋಕೆ ಆಗಲಿಲ್ಲ. ಮರುದಿನ ಅಂದರೆ ಸೆಪ್ಟೆಂಬರ್ 26ರ ಬೆಳಗ್ಗೆಯೂ ಏನಾದರೂ ಹೇಳಲು ಧೈರ್ಯವಿರಲಿಲ್ಲ. ಮಧ್ಯಾಹ್ನದ ಶೋ ನೋಡಿದ ಮೇಲೆ ತಂಡಕ್ಕೆ ಭರವಸೆ ಕೊಡೋಣ ಅಂದುಕೊಂಡೆ, ಆದರೆ ನಾನೊಂದು ಹೇಳಿ ಇನ್ಯಾವುದೋ ಆದರೆ ಕಷ್ಟ ಅಂತ ಸುಮ್ಮನಿದ್ದೆ,' ಎಂದರು.

ಮುಂದುವರಿದು ಮಾತನಾಡಿದ ಅವರು, 'ಆದರೆ ಸೆಪ್ಟೆಂಬರ್ 26ರ ಸಂಜೆ ನನಗೆ ಪಕ್ಕಾ ಧೈರ್ಯ ಬಂತು. ಚಿತ್ರಮಂದಿರಗಳಲ್ಲಿ ವಾತಾವರಣ ಬದಲಾಗುತ್ತಿತ್ತು. ಇದು ಬೇರೆ ತರಹದ ಸಿನಿಮಾ ಆಗ್ತಿದೆ ಅಂತ ಗೊತ್ತಾಗುತ್ತಿದ್ದಂತೆ ಡೈರೆಕ್ಟರ್ ಮನೋಜ್ ಮತ್ತು ನಿರ್ಮಾಪಕರ ಬಳಿ ಹೋಗಿ, 'ಅಪ್ಪ ಗೆಲ್ತಿದೆ ನೋಡಿ ಮನೋಜ್' ಎಂದು ಹೇಳಿದೆ,' ಎಂದು ಆರಂಭಿಕ ಕ್ಷಣಗಳ ನೆನಪನ್ನು ಬಿಚ್ಚಿಟ್ಟರು.

ನಿರ್ಮಾಪಕರಿಗೆ ರಂಗಾಯಣ ರಘು ಕೊಟ್ಟ ಆ ಒಂದು ಕಿವಿಮಾತು!

ಕೇವಲ ಗೆಲುವಿನ ಮಾತು ಮಾತ್ರವಲ್ಲದೆ, ಇಡೀ ತಂಡಕ್ಕೆ ರಂಗಾಯಣ ರಘು ಅತ್ಯಮೂಲ್ಯವಾದ ಸಲಹೆಯನ್ನೂ ನೀಡಿದ್ದರು. "ಚಿತ್ರ ಗೆಲ್ಲುತ್ತಿದೆ ಎಂದಾಗ ನಾನು ನಿರ್ಮಾಪಕರಿಗೆ ಹೇಳಿದ್ದು ಒಂದೇ ಮಾತು: 'ನಿರ್ಮಾಪಕರೇ, ನಿಮ್ಮೊಳಗಿನ ಒಗ್ಗಟ್ಟು ಯಾವತ್ತೂ ಒಡೆಯಬಾರದು, ಹಿಂಗೇ ಒಟ್ಟಾಗಿರಿ. ಈ ಗೆಲುವಿನ ಶ್ರೇಯಸ್ಸು, ಇದರ ಸಾರ್ಥಕತೆ, ಇದರ ಶ್ರಮ ಎಲ್ಲವೂ ನಿಮ್ಮದೇ. ಮುಂದಿನ ಸಿನಿಮಾವನ್ನೂ ನೀವೇ ಒಟ್ಟಾಗಿ ಮಾಡಿ, ಆ ಯಶಸ್ಸನ್ನೂ ನೀವೇ ತಗೊಳ್ಳಿ' ಎಂದು ಧೈರ್ಯ ತುಂಬಿದ್ದೆ" ಎಂದು ರಘು ತಿಳಿಸಿದರು.

ಪೇಪರ್ ವರ್ಕ್‌ಗೆ ಧೈರ್ಯ ತುಂಬಿದ್ದೇ ರಘು ಸರ್:

ಚಿತ್ರದ ಯಶಸ್ಸಿನ ಹಿಂದಿನ ಸಿದ್ಧತೆ ಕುರಿತು ಮಾತನಾಡಿದ ನಿರ್ದೇಶಕ ಮನೋಜ್ ಕುಮಾರ್, "ನಾವು ಚಿತ್ರೀಕರಣಕ್ಕೆ ಹೋಗುವ ಮುನ್ನ ಕಾಗದದ ಮೇಲೆ ಎಷ್ಟೇ ವರ್ಕ್ ಮಾಡಿದರೂ ಎಲ್ಲೋ ಒಂದು ಕಡೆ ಸಿದ್ಧತೆ ಸಾಲದೇನೋ ಅನ್ನೋ ಭಯವಿತ್ತು. ಆದರೆ ಆ ಕಥೆ ಮತ್ತು ಸಿದ್ಧತೆಯ ಮೇಲೆ ನಮಗಿದ್ದ ನಂಬಿಕೆಯನ್ನು ನೂರರಷ್ಟು ಹೆಚ್ಚು ಮಾಡಿದ್ದು ರಂಗಾಯಣ ರಘು ಸರ್," ಎಂದು ಕೃತಜ್ಞತೆ ವ್ಯಕ್ತಪಡಿಸಿದರು.

ಗಾಂಧಿನಗರವೇ ತಿರುಗಿ ನೋಡುವಂತೆ ಮಾಡಿದ 'ಪ್ರೇಮದ ಊರಲಿ'

ಕಡಿಮೆ ಬಜೆಟ್‌ನಲ್ಲಿ, ಕಂಟೆಂಟ್ ನಂಬಿ ಬಂದ 'ಪ್ರೇಮದ ಊರಲಿ' ಸಿನಿಮಾ ಪ್ರೇಕ್ಷಕರ ಬಾಯ್ಮಾತಿನ ಪ್ರಚಾರದಿಂದಲೇ (Word of Mouth) ದಿನದಿಂದ ದಿನಕ್ಕೆ ಹೌಸ್‌ಫುಲ್ ಪ್ರದರ್ಶನ ಕಂಡಿತು. ಕಥೆಯ ನಿರೂಪಣೆ, ಸುನಾದ್ ಗೌತಮ್ ಸಂಗೀತ, ಯುವ ನಟ ಶ್ರೀರಾಮ್, ರಮಿಕಾ ಶಿವು, ತಪಸ್ವಿನಿ ಪೂಣಚ್ಚ ಅಭಿನಯ ಮತ್ತು ರಂಗಾಯಣ ರಘು ಅವರ ಭಾವನಾತ್ಮಕ ಪಾತ್ರ ಪ್ರೇಕ್ಷಕರ ಕಣ್ಣಂಚಲಿ ನೀರು ತರಿಸಿತ್ತು. ಕನ್ನಡದಲ್ಲಿ ಕಂಟೆಂಟ್ ಗಟ್ಟಿಯಾಗಿದ್ದರೆ ಪ್ರೇಕ್ಷಕರು ₹150 ಕೋಟಿ ಅಲ್ಲ, ಅದಕ್ಕಿಂತ ಹೆಚ್ಚು ಪ್ರೀತಿ ನೀಡುತ್ತಾರೆ ಎಂಬುದನ್ನು ಈ ಚಿತ್ರ ಮತ್ತೊಮ್ಮೆ ಸಾಬೀತುಪಡಿಸಿದೆ.