ಪ್ರೇಮದ ಊರಲಿ ಸಿನಿಮಾದ ನಾಯಕ ನಟ ಶ್ರೀರಾಮ್ ತಮ್ಮನ್ನು ಪ್ರಭಾಸ್ ಮತ್ತು ಶಂಕರ್ ನಾಗ್ ಅವರಿಗೆ ಹೋಲಿಸುತ್ತಿರುವ ಬಗ್ಗೆ ಮಾತನಾಡಿದ್ದಾರೆ. ಈ ಹೋಲಿಕೆಯು ಖುಷಿಯ ಜೊತೆಗೆ ತುಂಬಾ ಭಯವನ್ನೂ ಹುಟ್ಟಿಸುತ್ತಿದೆ ಎಂದು ಅವರು ವಿನಯದಿಂದ ಹೇಳಿಕೊಂಡಿದ್ದಾರೆ.

ಬೆಂಗಳೂರು (ನ.12): ಸ್ಯಾಂಡಲ್‌ವುಡ್‌ನಲ್ಲಿ ಹೊಸ ದಾಖಲೆ ಬರೆಯುತ್ತಿರುವ 'ಪ್ರೇಮದ ಊರಲಿ' (Premada Oorali) ಸಿನಿಮಾದ ನಾಯಕ ನಟ ಶ್ರೀರಾಮ್, ತಮ್ಮನ್ನು ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಮತ್ತು ಕನ್ನಡಿಗರ ಕಣ್ಮಣಿ ಶಂಕರ್ ನಾಗ್ ಅವರಿಗೆ ಹೋಲಿಸುತ್ತಿರುವ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. "ಅಂತಹ ದೊಡ್ಡ ದಿಗ್ಗಜರಿಗೆ ನನ್ನನ್ನು ಹೋಲಿಸಿದಾಗ ಒಂದೆಡೆ ಖುಷಿಯಾದರೂ, ಒಳಗೊಳಗೆ ತುಂಬಾ ಭಯವಾಗುತ್ತದೆ" ಎಂದು ಶ್ರೀರಾಮ್ ತಮ್ಮ ಮನದಾಳದ ಭಾವನೆಯನ್ನು ಹಂಚಿಕೊಂಡಿದ್ದಾರೆ.

ಇತ್ತೀಚೆಗೆ ನಡೆದ ದೀಪಾವಳಿ ವಿಶೇಷ ಸಂದರ್ಶನವೊಂದರಲ್ಲಿ 'ಪ್ರೇಮದ ಊರಲಿ' ಚಿತ್ರತಂಡ ಭಾಗವಹಿಸಿತ್ತು. ಈ ವೇಳೆ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಫೋಟೋ ಮತ್ತು ವಿಡಿಯೋಗಳು ವೈರಲ್ ಆಗುತ್ತಿರುವ ಕುರಿತು ಕೇಳಲಾದ ಪ್ರಶ್ನೆಗೆ ನಟ ಶ್ರೀರಾಮ್ ಅತ್ಯಂತ ವಿನಯದಿಂದ ಉತ್ತರಿಸಿದ್ದಾರೆ.

ಕ್ಯಾಮೆರಾಮ್ಯಾನ್ ಬಳಿಯೇ ಪ್ರಶ್ನಿಸಿದ್ದ ಶ್ರೀರಾಮ್!

'ಸಾಮಾಜಿಕ ಜಾಲತಾಣಗಳಾದ ಇನ್‌ಸ್ಟಾಗ್ರಾಮ್ ಮತ್ತು ವಾಟ್ಸಾಪ್‌ಗಳಲ್ಲಿ ಅಭಿಮಾನಿಗಳು ನನ್ನ ಫೋಟೋಗಳನ್ನು ಪ್ರಭಾಸ್ ಹಾಗೂ ಶಂಕರ್ ನಾಗ್ ಅವರ ಫೋಟೋಗಳೊಂದಿಗೆ ಹೋಲಿಸಿ ಶೇರ್ ಮಾಡುತ್ತಿದ್ದಾರೆ. ಜನರು ಆ ರೀತಿ ಹೋಲಿಸಿ ಮೆಚ್ಚುಗೆ ಸೂಚಿಸುವುದೇ ನನಗೆ ದೊಡ್ಡ ಕಾಂಪ್ಲಿಮೆಂಟ್. ಆದರೆ, ನಾನು ಹಲವು ಬಾರಿ ನನ್ನ ಕ್ಯಾಮೆರಾಮ್ಯಾನ್ ಬಳಿಯೇ 'ಇದು ನೀವು ತೆರೆಯ ಮೇಲೆ ತೋರಿಸಿರುವ ಮ್ಯಾಜಿಕ್ಕೋ ಅಥವಾ ನಾನು ನಿಜವಾಗಲೂ ಹಾಗೆ ಕಾಣಿಸುತ್ತಿದ್ದೇನೆಯೋ?' ಎಂದು ಕೇಳಿದ್ದೇನೆ' ಎಂದು ಶ್ರೀರಾಮ್ ಹೇಳಿದ್ದಾರೆ.

ಖುಷಿಗಿಂತ ಭಯವೇ ಹೆಚ್ಚು ಎಂದ ನಟ:

ತಮ್ಮ ಮಾತನ್ನು ಮುಂದುವರಿಸಿದ ಅವರು, "ಜನರು ನನ್ನನ್ನು ಯಾವ ದೃಷ್ಟಿಯಲ್ಲಿ ನೋಡುತ್ತಿದ್ದಾರೆ ಎಂಬುದು ನನಗೂ ಅರ್ಥವಾಗುತ್ತಿಲ್ಲ. ಪ್ರಭಾಸ್ ಮತ್ತು ಶಂಕರ್ ನಾಗ್ ಅಂತಹ ಮಹಾನ್ ಕಲಾವಿದರ ಜೊತೆ ನನ್ನನ್ನು ಹೋಲಿಸುವುದು ಎಷ್ಟು ಖುಷಿ ಕೊಡುತ್ತದೆಯೋ, ಅಷ್ಟೇ ಭಯವನ್ನೂ ಹುಟ್ಟಿಸುತ್ತದೆ. ಏಕೆಂದರೆ ಅದು ಬಹಳ ದೊಡ್ಡ ಮಟ್ಟದ ಹೋಲಿಕೆ ಮತ್ತು ಜವಾಬ್ದಾರಿ" ಎಂದು ನಟ ಶ್ರೀರಾಮ್ ತಿಳಿಸಿದ್ದಾರೆ.

150 ಕೋಟಿ ಕ್ಲಬ್ ಸೇರಿ 50ನೇ ದಿನದತ್ತ 'ಪ್ರೇಮದ ಊರಲಿ'!ಮನೋಜ್ ಕುಮಾರ್ ನಿರ್ದೇಶನದಲ್ಲಿ ಮೂಡಿಬಂದಿರುವ 'ಪ್ರೇಮದ ಊರಲಿ' ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಹೊಸ ಸಂಚಲನ ಮೂಡಿಸಿದೆ. ಈಗಾಗಲೇ ಬಾಕ್ಸ್ ಆಫೀಸ್‌ನಲ್ಲಿ 150 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿರುವ ಈ ಚಿತ್ರವು, ನಾಳೆಗೆ ಯಶಸ್ವಿ 50 ದಿನಗಳ ಪ್ರದರ್ಶನವನ್ನು ಪೂರೈಸಿ ಸಂಭ್ರಮಾಚರಣೆ ಮಾಡಿಕೊಳ್ಳುತ್ತಿದೆ.

ದೀಪಾವಳಿ ಹಬ್ಬದ ವಿಶೇಷ ಕಾರ್ಯಕ್ರಮದಲ್ಲಿ ನಾಯಕ ಶ್ರೀರಾಮ್ ಅವರೊಂದಿಗೆ ನಾಯಕಿಯರಾದ ರಮಿಕಾ ಶಿವು, ತಪಸ್ವಿನಿ ಪೂಣಚ್ಚ, ಹಿರಿಯ ನಟ ರಂಗಾಯಣ ರಘು ಹಾಗೂ ನಿರ್ದೇಶಕ ಮನೋಜ್ ಕುಮಾರ್ ಭಾಗವಹಿಸಿ, ಸಿನಿಮಾದ ಯಶಸ್ಸಿನ ಸಂಭ್ರಮದ ಜೊತೆಗೆ ತಮ್ಮ ಬಾಲ್ಯದ ದೀಪಾವಳಿ ನೆನಪುಗಳನ್ನು ಮೆಲುಕು ಹಾಕಿ ಸಮಸ್ತ ಕನ್ನಡಿಗರಿಗೆ ಹಬ್ಬದ ಶುಭಾಶಯ ಕೋರಿದ್ದಾರೆ.