ಚಿತ್ರದಲ್ಲಿ ಚಿಕ್ಕಣ್ಣ ಕೃಷ್ಣ ಎಂಬ ಹಳ್ಳಿ ಹುಡುಗನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹೇಗಾದರೂ ಮಾಡಿ ತಾನು ಇಷ್ಟಪಟ್ಟ ಹುಡುಗಿಯನ್ನೇ ಪ್ರೀತಿಸಿ ಮದುವೆಯಾಗಬೇಕು ಎಂಬುದು ಆತನ ಹಠ. ಮತ್ತೊಂದೆಡೆ, ತನ್ನ ಮಗ ಕಪ್ಪಾಗಿದ್ದರೂ ಆತನಿಗೆ ಮಾತ್ರ ಸುಂದರ ಹುಡುಗಿಯೇ ಸೊಸೆಯಾಗಿ ಬರಬೇಕು ಎಂದು ಕನಸು ಕಾಣುವ ತಾಯಿ. ಏನಾಗುತ್ತೆ ಮುಂದೆ?
ಚಿಕ್ಕಣ್ಣನ 'ಲಕ್ಷ್ಮೀಪುತ್ರ'ನಿಗೆ ಪ್ರೇಕ್ಷಕರ ಭರ್ಜರಿ ಸ್ವಾಗತ; ಕಾಮಿಡಿ, ಪ್ರೀತಿ, ಅಮ್ಮನ ಸೆಂಟಿಮೆಂಟ್ಗೆ ಫಿದಾ ಆದ ಫ್ಯಾನ್ಸ್!
'ಉಪಾಧ್ಯಕ್ಷ' ಸಿನಿಮಾದ ಮೂಲಕ ನಾಯಕನಾಗಿ ಕನ್ನಡ ಚಿತ್ರರಂಗದಲ್ಲಿ ಹೊಸ ಇನ್ನಿಂಗ್ಸ್ ಆರಂಭಿಸಿ ಯಶಸ್ಸು ಕಂಡ ನಟ ಚಿಕ್ಕಣ್ಣ (Actor Chikkanna) ಇದೀಗ 'ಲಕ್ಷ್ಮೀಪುತ್ರ'ನಾಗಿ (Lakshmiputra) ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಇಂದು ರಾಜ್ಯಾದ್ಯಂತ 180ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಿರುವ ಈ ಸಿನಿಮಾ, ಮೊದಲ ದಿನವೇ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಅದರಲ್ಲೂ ಮಂಡ್ಯ ಭಾಗದ ಗ್ರಾಮೀಣ ಸೊಗಡು, ನಗಿಸುವ ಸನ್ನಿವೇಶಗಳು ಮತ್ತು ತಾಯಿ-ಮಗನ ಭಾವನಾತ್ಮಕ ಸಂಬಂಧದ ಮೂಲಕ ಕುಟುಂಬ ಪ್ರೇಕ್ಷಕರನ್ನು ರಂಜಿಸುವ ಪ್ರಯತ್ನ ಮಾಡಿದೆ.
ಹೇಗಾದರೂ ಮಾಡಿ ಇಷ್ಟಪಟ್ಟ ಹುಡುಗಿಯನ್ನೇ ಪ್ರೀತಿಸಿ ಮದುವೆಯಾಗಬೇಕು ಎಂಬ ಹಠ
ಚಿತ್ರದಲ್ಲಿ ಚಿಕ್ಕಣ್ಣ ಕೃಷ್ಣ ಎಂಬ ಹಳ್ಳಿ ಹುಡುಗನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹೇಗಾದರೂ ಮಾಡಿ ತಾನು ಇಷ್ಟಪಟ್ಟ ಹುಡುಗಿಯನ್ನೇ ಪ್ರೀತಿಸಿ ಮದುವೆಯಾಗಬೇಕು ಎಂಬುದು ಆತನ ಹಠ. ಮತ್ತೊಂದೆಡೆ, ತನ್ನ ಮಗ ಕಪ್ಪಾಗಿದ್ದರೂ ಆತನಿಗೆ ಮಾತ್ರ ಸುಂದರ ಹುಡುಗಿಯೇ ಸೊಸೆಯಾಗಿ ಬರಬೇಕು ಎಂದು ಕನಸು ಕಾಣುವ ತಾಯಿ ಲಕ್ಷ್ಮಮ್ಮನ ಪಾತ್ರದಲ್ಲಿ ಹಿರಿಯ ನಟಿ ತಾರಾ ಅನುರಾಧಾ ಅಭಿನಯಿಸಿದ್ದಾರೆ. ತಾಯಿ ಮತ್ತು ಮಗನ ನಡುವಿನ ಈ ಮುದ್ದಾದ ಸಂಘರ್ಷವೇ ಚಿತ್ರದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ.
ಕೃಷ್ಣನ ಗೆಳೆಯರಾಗಿ ಕಾಣಿಸಿಕೊಂಡಿರುವ ಧರ್ಮಣ್ಣ ಕಡೂರು ಮತ್ತು ಕುಳ್ಳ ಅನಂತ್ ತಮ್ಮ ಕಾಮಿಡಿ ಟೈಮಿಂಗ್ ಮೂಲಕ ಪ್ರೇಕ್ಷಕರನ್ನು ನಗಿಸುತ್ತಾರೆ. ಮೊದಲಾರ್ಧದಲ್ಲಿ ಹುಡುಗಿ ಹುಡುಕಾಟ, ಪ್ರೀತಿ, ಹಾಸ್ಯಮಯ ಸನ್ನಿವೇಶಗಳು ಹಾಗೂ ಮಾಸ್ ಶೈಲಿಯ ಸಾಹಸ ದೃಶ್ಯಗಳು ಕಥೆಗೆ ವೇಗ ನೀಡುತ್ತವೆ. ಕಥೆಯ ಮುಂದಿನ ಹಂತವನ್ನು ಪ್ರೇಕ್ಷಕರು ಒಂದಷ್ಟು ಊಹಿಸಬಹುದಾದರೂ, ನಿರ್ದೇಶಕ ವಿಜಯ್ ಎಸ್. ಸ್ವಾಮಿ ಅವರ ವೇಗದ ನಿರೂಪಣೆ ಮತ್ತು ಮನರಂಜನಾತ್ಮಕ ಚಿತ್ರಕಥೆ ನೋಡುಗರನ್ನು ಸೆಳೆಯುತ್ತದೆ.
ದ್ವಿತೀಯಾರ್ಧದಲ್ಲಿ ಕಥೆಗೆ ಭಾವನಾತ್ಮಕ ತಿರುವು
ದ್ವಿತೀಯಾರ್ಧದಲ್ಲಿ ಕಥೆ ಭಾವನಾತ್ಮಕ ತಿರುವುಗಳನ್ನು ಪಡೆದುಕೊಳ್ಳುತ್ತದೆ. ನಗುವಿನ ಜೊತೆಗೆ ತಾಯಿ-ಮಗನ ಬಾಂಧವ್ಯ ಮತ್ತು ಕುಟುಂಬದ ಮೌಲ್ಯಗಳು ಹೆಚ್ಚು ಪ್ರಾಮುಖ್ಯತೆ ಪಡೆಯುತ್ತವೆ. ವಿಶೇಷವಾಗಿ ಲಕ್ಷ್ಮಮ್ಮನ ಪಾತ್ರದಲ್ಲಿ ತಾರಾ ಅನುರಾಧಾ ಅಭಿನಯ ಪ್ರೇಕ್ಷಕರ ಮನಸ್ಸಿಗೆ ಹತ್ತಿರವಾಗುತ್ತದೆ. ಪ್ರತಿಯೊಂದು ದೃಶ್ಯದಲ್ಲೂ ತಾಯಿಯ ಮಮತೆ, ಕಾಳಜಿ ಮತ್ತು ಭಾವನೆಗಳನ್ನು ಸಹಜವಾಗಿ ಕಟ್ಟಿಕೊಟ್ಟಿರುವ ಅವರ ನಟನೆ ಚಿತ್ರದ ಪ್ರಮುಖ ಪ್ಲಸ್ ಪಾಯಿಂಟ್ ಎನ್ನಬಹುದು.
ನಾಯಕಿಯಾಗಿ ಕಾಣಿಸಿಕೊಂಡಿರುವ ವಂದಿತಾ ಗೌಡ ಕೂಡ ಚಿಕ್ಕಣ್ಣನಿಗೆ ಸೂಕ್ತ ಜೋಡಿಯಾಗಿ ಗಮನ ಸೆಳೆದಿದ್ದಾರೆ. ಮೊದಲ ಪ್ರಯತ್ನದಲ್ಲೇ ಸಹಜ ಅಭಿನಯದ ಮೂಲಕ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಇನ್ನು ನಟ ಮಿತ್ರ, ಶಿವರಾಜ್ ಕೆ.ಆರ್. ಪೇಟೆ, ಕುರಿ ಪ್ರತಾಪ್, ಗಿರೀಶ್ ಶಿವಣ್ಣ ಮತ್ತು ಮನೋಹರ್ ಗೌಡ ತಮ್ಮ ತಮ್ಮ ಪಾತ್ರಗಳಲ್ಲಿ ಉತ್ತಮವಾಗಿ ಕಾಣಿಸಿಕೊಂಡಿದ್ದಾರೆ.
ಸಂಗೀತದ ವಿಚಾರದಲ್ಲೂ 'ಲಕ್ಷ್ಮೀಪುತ್ರ' ಗಮನ ಸೆಳೆಯುತ್ತದೆ. ಅರ್ಜುನ್ ಜನ್ಯ ಅವರ ಸಂಗೀತ ಸಂಯೋಜನೆ ಹಾಗೂ ಎ.ಪಿ. ಅರ್ಜುನ್ ಅವರ ಸಾಹಿತ್ಯದಲ್ಲಿ ಮೂಡಿಬಂದಿರುವ 'ಇನ್ಮೇಲೆ ಇನ್ಮೇಲೆ', 'ಐ ಲವ್ ಯೂ ಪರಿಮಳ' ಮತ್ತು ಅಮ್ಮನ ಹಾಡು ಕಥೆಯ ಭಾವನೆಗಳಿಗೆ ಪೂರಕವಾಗಿವೆ. ಗಿರೀಶ್ ಆರ್. ಗೌಡ ಅವರ ಛಾಯಾಗ್ರಹಣ ಮತ್ತು ದೀಪು ಎಸ್. ಕುಮಾರ್ ಅವರ ಸಂಕಲನ ಚಿತ್ರಕ್ಕೆ ಅಂದ ಹೆಚ್ಚಿಸಿವೆ. ಎ.ಪಿ. ಅರ್ಜುನ್ ಅವರ ಕಥೆ ಹಾಗೂ ಸಾಹಿತ್ಯ ಚಿತ್ರದ ಮತ್ತೊಂದು ವಿಶೇಷ.
ನಿರ್ದೇಶಕ ವಿಜಯ್ ಎಸ್. ಸ್ವಾಮಿ ಅವರು ಎ.ಪಿ. ಅರ್ಜುನ್ ಅವರ ಕಥೆಯನ್ನು ಅಚ್ಚುಕಟ್ಟಾಗಿ ತೆರೆಗೆ ತಂದಿದ್ದಾರೆ. ಎ.ಪಿ ಅರ್ಜುನ್ ಪತ್ನಿ, ನಿರ್ಮಾಪಕಿ ಅನ್ನಪೂರ್ಣ ಅವರಿಗೂ ಒಂದು ಉತ್ತಮ ಕೌಟುಂಬಿಕ ಸಿನಿಮಾ ನಿರ್ಮಿಸಿದ ತೃಪ್ತಿ ಸಿಗಲಿದೆ ಎನ್ನಬಹುದು. ಸಿನಿಮಾ ಬಿಡುಗಡೆಯ ಸಂಭ್ರಮದಲ್ಲಿ ನಾಯಕ ಚಿಕ್ಕಣ್ಣ, ವಂದಿತಾ ಗೌಡ, ತಾರಾ ಅನುರಾಧಾ, ನಿರ್ದೇಶಕ ವಿಜಯ್ ಎಸ್. ಸ್ವಾಮಿ, ನಿರ್ಮಾಪಕ ಎ.ಪಿ. ಅರ್ಜುನ್ ಮತ್ತು ಅನ್ನಪೂರ್ಣ ಸೇರಿದಂತೆ ಚಿತ್ರತಂಡದ ಸದಸ್ಯರು ಬೆಂಗಳೂರಿನ ಕೆ.ಜಿ. ರಸ್ತೆಯ ನರ್ತಕಿ ಚಿತ್ರಮಂದಿರದಲ್ಲಿ ಸಿನಿಮಾ ವೀಕ್ಷಿಸಿ ಸಂಭ್ರಮಿಸಿದರು.
ಒಟ್ಟಿನಲ್ಲಿ ಕಾಮಿಡಿ, ಪ್ರೀತಿ, ಗ್ರಾಮೀಣ ಬದುಕಿನ ಸೊಗಡು ಮತ್ತು ಅಮ್ಮನ ಸೆಂಟಿಮೆಂಟ್ ಅನ್ನು ಒಟ್ಟಿಗೆ ಬೆರೆಸಿರುವ 'ಲಕ್ಷ್ಮೀಪುತ್ರ' ಕುಟುಂಬ ಸಮೇತ ನೋಡಬಹುದಾದ ಮನರಂಜನಾತ್ಮಕ ಚಿತ್ರವಾಗಿ ಪ್ರೇಕ್ಷಕರ ಮುಂದೆ ಬಂದಿದೆ. ಚಿಕ್ಕಣ್ಣನ ಕಾಮಿಡಿ ಅಭಿಮಾನಿಗಳಿಗೆ ಮಾತ್ರವಲ್ಲ, ಭಾವನಾತ್ಮಕ ಕೌಟುಂಬಿಕ ಕಥೆಗಳನ್ನು ಇಷ್ಟಪಡುವವರಿಗೂ ಈ ಸಿನಿಮಾ ಇಷ್ಟವಾಗಬಹುದು ಎಂಬ ಅಭಿಪ್ರಾಯ ಮೊದಲ ದಿನದ ಪ್ರೇಕ್ಷಕರಿಂದ ವ್ಯಕ್ತವಾಗಿದೆ.














